ಯಾವ ಪುರುಷಾರ್ಥಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನ: ವಿಜಯೇಂದ್ರ ಪ್ರಶ್ನೆ
ಬೆಳಗಾವಿ: ಮಾನ್ಯ ಮುಖ್ಯಮಂತ್ರಿಗಳೇ, ನೀವು ಯಾವ ಪುರುಷಾರ್ಥಕ್ಕೆ ಬೆಳಗಾವಿಯ ಚಳಿಗಾಲದ ಅಧಿವೇಶನವನ್ನು ಕರೆದಿದ್ದೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.
ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ಮಾತನ್ನು ಅಧಿವೇಶನ ಕರೆದಾಗಲೇ ತಿಳಿಸಿದ್ದೇವೆ. ಮುಖ್ಯಮಂತ್ರಿ ಕುರ್ಚಿ ಕುರಿತ ಸಮಸ್ಯೆ ಪರಿಹರಿಸಿಕೊಂಡು ಬನ್ನಿ ಎಂದು ಆಗ್ರಹ ಮಾಡಿದ್ದೆವು ಎಂದು ಅವರು ನುಡಿದರು. ಕಾಂಗ್ರೆಸ್ ಪಕ್ಷದವರು ಇದು ನಮ್ಮ ಆಂತರಿಕ ವಿಚಾರ ಎಂದಿದ್ದರು. ಆದರೆ, ಮುಖ್ಯಮಂತ್ರಿ ವಿಚಾರ ರಾಜ್ಯಕ್ಕೆ ಸಂಬಂಧಿಸಿದ್ದು ಎಂದು ಗಮನ ಸೆಳೆದರು.
ರಾಜ್ಯದ ಜನರು ಕಳೆದ ಐದಾರು ತಿಂಗಳುಗಳಿಂದ ಬೇಸತ್ತಿದ್ದಾರೆ. ಮುಖ್ಯಮಂತ್ರಿ ಇವತ್ತು ಇಳೀತಾರೆ; ನಾಳೆ ಇಳಿಯುತ್ತಾರೆ. ಇವರಾಗುತ್ತಾರೆ; ಅವರಾಗುತ್ತಾರೆ ಎಂದು ಕಾದು ನೋಡಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸರಕಾರದ ಲಜ್ಜೆಗೆಟ್ಟ ವರ್ತನೆಯಿಂದ ರೈತರು ಬೀದಿಗೆ ಬಂದಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಇನ್ನೂ ಇತ್ಯರ್ಥ ಆಗಿಲ್ಲ ಎಂದು ಟೀಕಿಸಿದರು. ನಿಮ್ಮ ಆಂತರಿಕ ಕಚ್ಚಾಟದಿಂದ ಆಡಳಿತ ಸಂಪೂರ್ಣ ಸ್ಥಗಿತವಾಗಿದೆ. ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಸಕಾಲದಲ್ಲಿ ತೆರೆದಿಲ್ಲ ಎಂದು ದೂರಿದರು. ಬೆಳಗಾವಿಯಲ್ಲೂ ಡಿನ್ನರ್ ರಾಜಕೀಯ ಮುಂದುವರೆಸಿದ್ದು, ಇದು ಲಜ್ಜೆಗೆಟ್ಟ ಕಾಂಗ್ರೆಸ್ ಸರಕಾರ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳು ಈಡೇರಿಲ್ಲ; ನಾಡಿನ ಜನರು ಸರಕಾರದ ಬಗ್ಗೆ ಬೇಸತ್ತಿದ್ದಾರೆ; ಮಾತ್ರವಲ್ಲದೇ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.






