ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಟ್ರಯಲ್ ಇಂದಿನಿಂದ ಆರಂಭ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆಯು ಇಂದು ಪ್ರಾರಂಭವಾಗುತ್ತಿದೆ. ಪ್ರಕರಣದ ಮೊದಲ ಹಂತದಲ್ಲಿ ಇಂದು ರೇಣುಕಾಸ್ವಾಮಿ ಅವರ ತಂದೆ ಕಾಶಿನಾಥಯ್ಯ ಹಾಗೂ ತಾಯಿ ರತ್ನಪ್ರಭಾ ಅವರು ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯಲಿದ್ದಾರೆ.
ಪ್ರಾಸಿಕ್ಯೂಷನ್ ಮನವಿಯ ಮೇರೆಗೆ ಇಬ್ಬರು ಸಾಕ್ಷಿಗಳಿಗೆ ಈಗಾಗಲೇ ಸಮನ್ಸ್ ಜಾರಿಗೊಳಿಸಲಾಗಿದ್ದು, ಇಂದು ನ್ಯಾಯಾಧೀಶರ ಎದುರು ಹಾಜರಾಗಿ ಘಟನೆಗೆ ಸಂಬಂಧಿಸಿದ ವಿವರಗಳನ್ನು ನೀಡಲಿದ್ದಾರೆ. ರೇಣುಕಾಸ್ವಾಮಿ ಮನೆಯಿಂದ ಹೊರಟ ಸಮಯ, ಮಧ್ಯಾಹ್ನ ಊಟಕ್ಕೆ ಮನೆಗೆ ಬಾರದೆ ಇರುವ ಕುರಿತು ತಿಳಿಸಿದ ಮಾಹಿತಿ, ನಂತರ ಅವರ ಸಾವಿನ ವಿಷಯ ತಿಳಿದುಬಂದ ಸಂದರ್ಭ ಸೇರಿದಂತೆ ಸಂಪೂರ್ಣ ಘಟನಾಕ್ರಮವನ್ನು ನ್ಯಾಯಾಲಯದ ಮುಂದೆ ವಿವರಿಸಲಿದ್ದಾರೆ.
ಇನ್ನೊಂದೆಡೆ, ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್ ಅವರು ಕೊಲೆ ನಡೆದ ಸ್ಥಳ ಸೇರಿದಂತೆ ಸಂಬಂಧಿತ ಪ್ರದೇಶಗಳಿಗೆ ಭೇಟಿ ನೀಡಿ ಪ್ರಕರಣದ ಕುರಿತು ಮತ್ತೊಮ್ಮೆ ಸವಿವರ ಮಾಹಿತಿಯನ್ನು ಸಂಗ್ರಹಿಸಿದ್ದು, ವಿಚಾರಣೆ ಕುರಿತಂತೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.






