ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ!
ಮಂಡ್ಯ: ಮಾಂತ್ರಿಕ ಶಕ್ತಿಯುಳ್ಳ ರಾಮ-ಲಕ್ಷ್ಮಣ ನಾಣ್ಯ ಎಂದು ನಂಬಿಸಿ ಜನರನ್ನು ಯಾಮಾರಿಸಲು ಯತ್ನಿಸಿದ ವಂಚಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ತಾಮ್ರದ ನಾಣ್ಯವನ್ನು ತೋರಿಸಿ ವಂಚಿಸಿ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ಆತನನ್ನು ಹಿಡಿದು ಜನ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮೌಢ್ಯದ ಹೆಸರಿನಲ್ಲಿ ಮೋಸ ಮಾಡಲು ಬಂದವನಿಗೆ ನಾಗರಿಕರು ತಕ್ಕ ಪಾಠ ಕಲಿಸಿದ್ದು, ವಿಡಿಯೋ ವೈರಲ್ ಆಗಿದೆ.
ಹೌದು ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದ ಯಶ್ವಂತ್ ರಾವ್ ಹಾಗೂ ಸುಧೀರ್ ಎಂಬುವವರೇ ಸಾರ್ವಜನಿಕರಿಂದ ಗೂಸಾ ತಿಂದ ಆರೋಪಿಗಳು. ಈ ಮೂವರು ಯುವಕರ ತಂಡವು ಅಮಾಯಕರಿಗೆ ಇದೊಂದು ಅದೃಷ್ಟ ತರುವ ಮಾಂತ್ರಿಕ ನಾಣ್ಯ ಎಂದು ನಂಬಿಸಿ ವಂಚಿಸುತ್ತಿದ್ದರು.
ಇತ್ತೀಚೆಗೆ ಬೆಂಗಳೂರಿನ ವ್ಯಕ್ತಿಯೊಬ್ಬರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿದ್ದ ವಂಚಕರು, ಒಂದು ಲಕ್ಷ ರೂಪಾಯಿಗೆ ನಾಣ್ಯ ಮಾರಾಟ ಮಾಡುವ ಒಪ್ಪಂದ ಮಾಡಿಕೊಂಡಿದ್ದರು. ಬಳಿಕ ನಾಣ್ಯ ಬೇಕು ಎಂದರೆ ನೀವು ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ KSRTC ಬಸ್ ನಿಲ್ದಾಣದ ಬಳಿ ಬರಬೇಕು ಎಂದಿದ್ದಾರೆ. ಅಲ್ಲಿಗೆ ಮೋಸಹೋದ ವ್ಯಕ್ತಿ ಬಂದಿದ್ದರು. ರಾಮ, ಲಕ್ಷ್ಮಣ ನಾಣ್ಯ ಎಂದು ತಾಮ್ರದ ನಾಣ್ಯಗಳನ್ನು ಕೈಗಿಟ್ಟಿದ್ದಾರೆ.
ಆಗ ಅವರಿಗೆ ತಾವು ಮೋಸ ಹೋಗಿರೋದು ಅರಿವಿಗೆ ಬಂದಿದೆ. ಕಳ್ಳ ಕಳ್ಳ ಎಂದು ಜೋರಾಗಿ ಕಿರುಚಾಡಿದ್ದಾರೆ. ಆಗ ಅಲ್ಲಿದ್ದ ಸ್ಥಳೀಯರು ಗಾಬರಿಯಿಂದ ಓಡಿ ಬಂದಿದ್ದಾರೆ. ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರು ವಂಚಕರನ್ನು ಹಿಡಿದು ಥಳಿಸಿದ್ದಾರೆ.
ಚೆನ್ನಾಗಿ ಥಳಿಸಿದ ಬಳಿಕ ಸಾರ್ವಜನಿಕರು, ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಾಗಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದ ಯಶ್ವಂತ್ ರಾವ್, ಸುಧೀರ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.






