ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ರಾಹುಲ್ ಗಾಂಧಿ ಅವರು ಕೇಂದ್ರದ ವಿಪಕ್ಷ ನಾಯಕರು. ಅವರನ್ನು ಭೇಟಿ ಮಾಡಿ ಮಾತನಾಡುವುದು, ಶಿಷ್ಟಾಚಾರದಂತೆ ಸ್ವಾಗತಿಸಿ ಗೌರವ ನೀಡುವುದು ಸಹಜ ಪ್ರಕ್ರಿಯೆ. ಆದರೆ ಇದನ್ನು ಮಾಧ್ಯಮಗಳಲ್ಲಿ ಬೇರೆ ರೀತಿ ಚರ್ಚಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದ ರನ್‌ವೇ ಬಳಿ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಡೆಸಿದ್ದ ಪ್ರತ್ಯೇಕ ಮಾತುಕತೆ ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಅಧಿಕಾರ ಹಸ್ತಾಂತರ ಅಥವಾ ಸಚಿವ ಸಂಪುಟ ಪುನರ್‌ರಚನೆ ಕುರಿತು ಗುಪ್ತ ಚರ್ಚೆ ನಡೆದಿದೆ ಎಂಬ ಮಾತುಗಳು ಹರಡಿದ್ದವು.
ಈ ಕುರಿತಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಅವರ ಭೇಟಿ ವೇಳೆ ಯಾವುದೇ ವಿಶೇಷ ಸಂದೇಶ ನೀಡಿಲ್ಲ. ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗುವಂತೆ ಮಾತ್ರ ಹೇಳಿದ್ದಾರೆ. ಅವರ ಸೂಚನೆಯಂತೆ ನಾವು ಕೆಲಸ ಮುಂದುವರಿಸುತ್ತೇವೆ ಎಂದರು.
ರಾಜ್ಯದಲ್ಲಿ ಕೈಗೊಳ್ಳಲಿರುವ ಮನರೇಗಾ ಹೋರಾಟ ಹಾಗೂ ರಾಜ್ಯ ಬಿಜೆಪಿ ರಾಜಕಾರಣದ ಬಗ್ಗೆ ಚರ್ಚೆ ನಡೆದಿದ್ದು, ಇದರಲ್ಲಿ ಯಾವುದೇ ಒಳಗಟ್ಟಿನ ರಾಜಕೀಯ ಅರ್ಥವಿಲ್ಲ ಎಂದು ಸ್ಪಷ್ಟಪಡಿಸಿದರು.






