ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು
ಬೆಂಗಳೂರು: ವಾಲ್ಮೀಕಿ ಹಗರಣ (Valmiki Scam) ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರಗೆ (B. Nagendra) ದೊಡ್ಡ ರಿಲೀಫ್ ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿ, ಆದೇಶ ಹೊರಡಿಸಿದೆ.
ಮಹರ್ಷಿ ವಾಲ್ಮೀಕಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ನಂತರ, ಬಂಧನ ಭೀತಿ ಎದುರಾಗಿದ್ದ ನಾಗೇಂದ್ರ ಅವರು ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮಂಗಳವಾರ (ಜ.13) ವಿಚಾರಣೆ ನಡೆದಿದ್ದು, ಬುಧವಾರ (ಜ.14) ಆದೇಶ ನೀಡುವಂತೆ ಕೋರ್ಟ್ ಕಾಯ್ದಿರಿಸಿದ್ದರು. ನ್ಯಾಯಾಲಯ ಇದೀಗ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ವಿಚಾರಣೆ ವೇಳೆ, ಪ್ರಕರಣದ ತನಿಖಾಧಿಕಾರಿಯೇ ಕೋರ್ಟ್ನಲ್ಲಿ ವಾದ ಮಂಡನೆ ಮಾಡಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ಹಣ ಪಡೆದವರನ್ನು ಸಿಬಿಐ, ಇಡಿ ತನಿಖೆ ನಡೆಸಿವೆ. ತನಿಖೆಯ ಪ್ರಾಥಮಿಕ ಹಂತದಲ್ಲಿ ಫಲಾನುಭವಿಗಳು ಯಾರು ಎಂಬುದನ್ನು ಪತ್ತೆಹಚ್ಚಲು ಇನ್ನೂ ಕೆಲಸ ನಡೆಯುತ್ತಿದೆ. ಮುಂಬೈನಲ್ಲಿ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಹಗರಣದ ಹಣ ಚಿನ್ನ ಮತ್ತು ಬುಲಿಯನ್ ರೂಪದಲ್ಲಿ ಪರಿವರ್ತಿಸಲಾಗಿದೆ. ನಾಗೇಂದ್ರ ಮತ್ತು ಅವರ ಸಹಚರರು, ಜೊತೆಗೆ ಕೆಲ ಬೋಗಸ್ ಕಂಪನಿಗಳು ಈ ಹಣಕಾಸು ವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ತನಿಖೆಯಲ್ಲಿ ದಾಖಲಾಗಿದೆ.
ನಾಗೇಂದ್ರ ಪರ ವಕೀಲರು ವಾದ ಮಾಡಿ, ನಾಗೇಂದ್ರ ಮತ್ತು ನೆಕ್ಕಂಟಿ ನಾಗರಾಜ್ ನಡುವಿನ ವ್ಯವಹಾರ ವೈಯಕ್ತಿಕವಾಗಿದ್ದು, ಸಿಬಿಐ ಹೇಳುತ್ತಿರುವ ಟೆಂಡರ್ ಹಾಗೂ ಈ ವ್ಯವಹಾರಗಳ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ತೋರಿಸಿದ್ದಾರೆ.






