ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ!
ಕಲಬುರಗಿ: ಜಿಲ್ಲೆಯ ಕಮಲಾಪುರ ತಹಶಿಲ್ದಾರ್ ಕಚೇರಿಯ ಎಫ್ಡಿಎ ಶಶಿಕುಮಾರ್ ಅವರು ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಜಮೀನು ಸಂಬಂಧಿಸಿದ ದಾಖಲೆಗಳನ್ನು ನೀಡುವ ವಿಚಾರದಲ್ಲಿ ಎಫ್ಡಿಎ ಶಶಿಕುಮಾರ್ ಅವರು ಕಿಶನ್ ರಾಠೋಡ್ ಎಂಬುವರಿಂದ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು.
ದೂರು ಆಧರಿಸಿ ಲೋಕಾಯುಕ್ತ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಮುರಗುಂಡಿ ಅವರ ನೇತೃತ್ವದ ತಂಡವು ಕಮಲಾಪುರ ತಹಶಿಲ್ದಾರ್ ಕಚೇರಿಯಲ್ಲಿ ದಾಳಿ ನಡೆಸಿತು. ಕಚೇರಿಯಲ್ಲಿಯೇ ಕಿಶನ್ ರಾಠೋಡ್ ಅವರಿಂದ ಹಣ ಪಡೆಯುತ್ತಿದ್ದ ವೇಳೆ ಶಶಿಕುಮಾರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಸಂಬಂಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಘಟನೆ ಕಮಲಾಪುರ ತಹಶಿಲ್ದಾರ್ ಕಚೇರಿಯಲ್ಲಿ ಚರ್ಚೆಗೆ ಕಾರಣವಾಗಿದೆ.






