ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರು
ಬೆಂಗಳೂರು:
ಸೈಬರ್ ವಂಚಕರ ಕೈಗೆ ಹೋಗುತ್ತಿದ್ದ 2.16 ಕೋಟಿ ರೂಪಾಯಿ ಹಣವನ್ನು ಗೋಲ್ಡನ್ ಅವರ್‌ನಲ್ಲೇ ಫ್ರೀಜ್ ಮಾಡುವ ಮೂಲಕ ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು ಮಹತ್ವದ ಸಾಧನೆ ಮಾಡಿದ್ದಾರೆ.
ಗುಜರಾತ್ ಮೂಲದ ಗ್ರೂಪ್ ಫಾರ್ಮ್ ಕಂಪನಿ ಮತ್ತು ರೆಡ್ಡೀಸ್ ಲ್ಯಾಬೋರೇಟರೀಸ್ ನಡುವೆ ವ್ಯವಹಾರ ಸಂಬಂಧ ಇತ್ತು. ಈ ಸಂದರ್ಭ ಗ್ರೂಪ್ ಫಾರ್ಮ್ ಕಂಪನಿಯ ಅಕೌಂಟೆಂಟ್ ಕೇಶವ ಅವರ ಹೆಸರಿನಲ್ಲಿ ನಕಲಿ ಇಮೇಲ್ ಐಡಿ ಕ್ರಿಯೇಟ್ ಮಾಡಿದ್ದ ಸೈಬರ್ ವಂಚಕರು, ಅದೇ ಇಮೇಲ್ ಮೂಲಕ ರೆಡ್ಡೀಸ್ ಲ್ಯಾಬೋರೇಟರೀಸ್‌ಗೆ ಪೇಮೆಂಟ್ ಕುರಿತಾಗಿ ಸಂದೇಶ ಕಳುಹಿಸಿದ್ದಾರೆ.
ನಕಲಿ ಇಮೇಲ್‌ನ್ನು ನಂಬಿದ ರೆಡ್ಡೀಸ್ ಲ್ಯಾಬೋರೇಟರೀಸ್ 2.16 ಕೋಟಿ ರೂಪಾಯಿ ಹಣವನ್ನು ಪಾವತಿಸಿದೆ. ಆದರೆ ಈ ಹಣ ನೈಜ ಖಾತೆಗೆ ಜಮೆಯಾಗದೆ, ಗುಜರಾತ್ ಮೂಲದ ಪಟೇಲ್ ದಕ್ಷ್ಯಾ ಬೆನ್ ಹೆಸರಿನ ನಕಲಿ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದೆ.
ಪೇಮೆಂಟ್ ಆದ ವಿಷಯ ತಿಳಿದುಕೊಂಡ ಗ್ರೂಪ್ ಫಾರ್ಮ್ ಕಂಪನಿಯ ಅಕೌಂಟೆಂಟ್ ಕೇಶವ ತಕ್ಷಣವೇ ಸಿಸಿಬಿ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಒಂದೇ ಗಂಟೆಯೊಳಗೆ ಸಂಬಂಧಿತ ಬ್ಯಾಂಕ್ ಖಾತೆಯನ್ನು ಜಾಲಾಡಿ ಹಣ ಮುಂದಕ್ಕೆ ವರ್ಗಾವಣೆಯಾಗದಂತೆ ಫ್ರೀಜ್ ಮಾಡಿದ್ದಾರೆ.
ನಂತರ ನ್ಯಾಯಾಲಯದ ಮೂಲಕ 2.16 ಕೋಟಿ ರೂಪಾಯಿ ಹಣ ಬಿಡುಗಡೆಗೆ ಆದೇಶ ಪಡೆಯಲಾಗಿದೆ. ತನಿಖೆ ವೇಳೆ ಈ ಸೈಬರ್ ವಂಚನೆ ನೈಜೀರಿಯಾದಲ್ಲಿ ಕುಳಿತು ನಡೆಸಲಾಗಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರು
Date:






