ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು: ಸೈಬರ್ ಕ್ರೈಂ ತನಿಖೆ
ಬೆಂಗಳೂರು:
ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಯುವತಿಗೆ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಪ್ರಕರಣದಲ್ಲಿ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸಂಸ್ಥೆಯಾದ ಮೆಟಾಕ್ಕೆ ಪೊಲೀಸರು ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ಶಾಸಕ ರಾಮಮೂರ್ತಿ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನ ಎರಡು ನಕಲಿ ಐಡಿಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಒದಗಿಸುವಂತೆ ಮೆಟಾಗೆ ಮನವಿ ಮಾಡಲಾಗಿದೆ.
ಬಹುತೇಕ ನಾಳೆಯೊಳಗೆ ಮೆಟಾ ಸಂಸ್ಥೆಯಿಂದ ಸಂದೇಶ ಕಳುಹಿಸಿದ ಅಕೌಂಟ್‌ಗಳ ವಿವರಗಳು ಪೊಲೀಸರ ಕೈ ಸೇರಲಿದ್ದು, ಮಾಹಿತಿ ಲಭ್ಯವಾದ ತಕ್ಷಣ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಲಿದ್ದಾರೆ.
ಶಾಸಕರ ಹೆಸರಿನಲ್ಲಿ ಯುವತಿಗೆ ಸಂದೇಶ ಕಳುಹಿಸಿದವರು ಯಾರು?
ಶಾಸಕರ ಹೆಸರನ್ನು ಬಳಸಿ ಹಣಕ್ಕೆ ರಿಕ್ವೆಸ್ಟ್ ಕಳಿಸಿದವರು ಯಾರು?
ಎಂಬುದನ್ನು ಪತ್ತೆ ಹಚ್ಚಲು ಸೈಬರ್ ಕ್ರೈಂ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಈ ಬಗ್ಗೆ ಸ್ವತಃ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಅವರು ದಕ್ಷಿಣ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಅಕೌಂಟ್‌ಗಳನ್ನು ತೆರೆಯಲಾಗಿದ್ದು, ಶಾಸಕ ಎಂಬ ಹೆಸರು ಹಾಗೂ ಹುದ್ದೆಯನ್ನು ಬಳಸಿಕೊಂಡು ಸಾರ್ವಜನಿಕರಿಗೆ ತಪ್ಪು ಸಂದೇಶಗಳನ್ನು ಕಳುಹಿಸಿ ಹಣ ನೀಡುವಂತೆ ಮನವಿ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದರಿಂದ ತಮ್ಮ ಗೌರವಕ್ಕೆ ಧಕ್ಕೆಯಾಗಿದ್ದು, ಸಾರ್ವಜನಿಕರ ವಿಶ್ವಾಸಕ್ಕೂ ಗಂಭೀರ ಹಾನಿಯಾಗಿದೆ ಎಂದು ಶಾಸಕ ದೂರಿದ್ದಾರೆ.
ನಕಲಿ CK Ramamurthy ಎಂಬ ಫೇಸ್‌ಬುಕ್ ಐಡಿ ಹಾಗೂ ck-ramamurthy ಎಂಬ ಇನ್‌ಸ್ಟಾಗ್ರಾಂ ಐಡಿ ವಿವರಗಳೊಂದಿಗೆ ದಕ್ಷಿಣ ಸೈಬರ್ ಕ್ರೈಂ ಠಾಣೆಗೆ ದೂರು ನೀಡಲಾಗಿದೆ.
ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು: ಸೈಬರ್ ಕ್ರೈಂ ತನಿಖೆ
Date:






