‘ಗೋ ಬ್ಯಾಕ್ ಗವರ್ನರ್’ ರಾಜಕೀಯ ನಾಟಕ: ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
ಮಂಡ್ಯ: ರಾಜ್ಯಪಾಲರ ವಿರುದ್ಧ ‘ಗೋ ಬ್ಯಾಕ್ ಗವರ್ನರ್’ ಎಂದು ಘೋಷಣೆ ಕೂಗುತ್ತಿರುವ ರಾಜ್ಯ ಕಾಂಗ್ರೆಸ್ ಯಾವುದೇ ಸಾಧನೆ ಮಾಡುವುದಿಲ್ಲ. ಇದು ಕೇವಲ ರಾಜಕೀಯ ನಾಟಕ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ಎರಡೂ ಮುಕ್ಕಾಲು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ನಡೆಸಿರುವ ಅನ್ಯಾಯ ಹಾಗೂ ಅಕ್ರಮಗಳನ್ನು ಮರೆಮಾಚಲು ‘ವಿಬಿ ಜಿ ರಾಮ್ ಜಿ’ ಯೋಜನೆ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ದೂರಿದರು. ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಮಾರಮ್ಮ ದೇವಿ ದೇವಸ್ಥಾನದ ಉದ್ಘಾಟನೆಯ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರಗಳು ರಾಜ್ಯಪಾಲರ ವಿಷಯದಲ್ಲಿ ಹೇಗೆ ವರ್ತಿಸಿವೆ ಎಂಬುದನ್ನು ನೆನಪಿಸಿಕೊಂಡರೆ ಅವರ ನಿಜ ಬಣ್ಣ ಗೊತ್ತಾಗುತ್ತದೆ ಎಂದು ಹೇಳಿದ ಕುಮಾರಸ್ವಾಮಿ, ವಿಶೇಷ ಅಧಿವೇಶನ ಕರೆದು ಸಮಯ ವ್ಯರ್ಥ ಮಾಡಲಾಗುತ್ತಿದೆ. ರಾಜ್ಯಪಾಲರು ಭಾಷಣ ಓದದೇ ಅಥವಾ ಮೊಟಕುಗೊಳಿಸಿರುವ ಘಟನೆ ಇದೇ ಮೊದಲ ಬಾರಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಜೆ.ಹೆಚ್. ಪಟೇಲ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಆ ಘಟನೆಗಳನ್ನು ನೆನಪು ಮಾಡಿಕೊಳ್ಳಬೇಕು ಎಂದು ಹೇಳಿದರು. ಈಗ ಅನಗತ್ಯವಾಗಿ ವಿಧಾನಸಭೆಯಲ್ಲಿ ಸಂಘರ್ಷ ನಡೆಯುತ್ತಿದೆ. ಈ ಸಂಘರ್ಷಗಳಿಂದ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯೇ ಎಂದು ಪ್ರಶ್ನಿಸಿದರು.
‘ಗೋ ಬ್ಯಾಕ್ ಗವರ್ನರ್’ ಎಂಬುದು ಸಂಪೂರ್ಣ ರಾಜಕೀಯ ನಾಟಕ ಮಾತ್ರ ಎಂದು ಪುನರುಚ್ಚರಿಸಿದ ಅವರು, ಮನರೇಗಾ ವಿಷಯವನ್ನು ಮುಂದಿಟ್ಟು ಕೇಂದ್ರ ಸರ್ಕಾರವನ್ನು ನಿಂದಿಸುವುದೇ ರಾಜ್ಯ ಸರ್ಕಾರದ ಉದ್ದೇಶ. ಅದಕ್ಕಾಗಿ ವಿಶೇಷ ಅಧಿವೇಶನ ಕರೆಸಲಾಗಿದೆ ಎಂದು ಆರೋಪಿಸಿದರು.






