ಅಜಿತ್ ಪವಾರ್ ಜನಸೇವೆಗೆ ಸದಾ ಮುಂಚೂಣಿಯಲ್ಲಿದ್ದರು: ಪ್ರಧಾನಿ ಮೋದಿ ಸಂತಾಪ
ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ಪತನದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಅಜಿತ್ ಪವಾರ್ ಅವರ ನಿಧನಕ್ಕೆ ಆಳವಾದ ಬೇಸರ ವ್ಯಕ್ತಪಡಿಸಿದ್ದು, ಅವರು ಮಹಾರಾಷ್ಟ್ರದ ಜನಸೇವೆಗೆ ಸದಾ ಮುಂಚೂಣಿಯಲ್ಲಿದ್ದ ಜನನಾಯಕ ಎಂದು ಪ್ರಶಂಸಿಸಿದ್ದಾರೆ.
“ಅಜಿತ್ ಪವಾರ್ ಒಬ್ಬ ಜನನಾಯಕರು. ತಳಮಟ್ಟದ ಜನರೊಂದಿಗೆ ಆಪ್ತ ಸಂಪರ್ಕ ಹೊಂದಿದ್ದವರು. ಅವರದ್ದು ಕಠಿಣ ಪರಿಶ್ರಮದ ವ್ಯಕ್ತಿತ್ವ. ಆಡಳಿತಾತ್ಮಕ ವಿಷಯಗಳಲ್ಲಿ ಅವರಿಗೆ ಅಪಾರ ತಿಳುವಳಿಕೆ ಇತ್ತು. ಬಡವರು ಹಾಗೂ ದೀನದಲಿತರ ಸಬಲೀಕರಣದ ಬಗ್ಗೆ ಅವರಿಗಿದ್ದ ಉತ್ಸಾಹ ಅತ್ಯಂತ ಗಮನಾರ್ಹವಾಗಿತ್ತು. ಅವರ ಅಕಾಲಿಕ ನಿಧನ ಆಘಾತಕಾರಿ ಮತ್ತು ಅತ್ಯಂತ ದುಃಖಕರ ಸಂಗತಿ,” ಎಂದು ಪ್ರಧಾನಿ ಮೋದಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇದಲ್ಲದೆ, ಅಜಿತ್ ಪವಾರ್ ಅವರ ಕುಟುಂಬದ ಸದಸ್ಯರು ಹಾಗೂ ಅಸಂಖ್ಯಾತ ಅಭಿಮಾನಿಗಳಿಗೆ ತಮ್ಮ ಹೃತ್ಪೂರ್ವಕ ಸಂತಾಪವನ್ನು ಪ್ರಧಾನಿ ಮೋದಿ ಸೂಚಿಸಿದ್ದಾರೆ.






