ಈ ಮರವನ್ನು ನೋಡಲಿಕ್ಕೇನೋ ಅತ್ಯಂತ ಆಕರ್ಷಕವಾಗಿ ಹಿತಕಾರಿಯಾಗೇ ಇದೆ. ಆದರೆ ಇದು ಅಂತಿಥ ಮರವಲ್ಲ. ಮರದ ಸೌಂದರ್ಯಕ್ಕೆ ಮಾರುಹೋಗಿ ಮರವನ್ನ ಮುಟ್ಟಲು ಹೋದರೆ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತೆ. ಹೌದು ಇದು ವಿಶ್ವದ ಅತ್ಯಂತ ಅಪಾಯಕಾರಿ ಮರ. ಮಾರಣಾಂತಿಕ ವಿಷಕಾರಿ ಆಗಿರುವ ಈ ಮರದ ಹೆಸರು ಮ್ಯಾಂಚಿನೀಲ್. ಈ ಮರವನ್ನು ಕ್ಯಾರಿಬಿಯನ್ ದೇಶದಲ್ಲಿ, ಫ್ಲೋರಿಡಾ, ಬಹಾಮಾಸ್, ಮೆಕ್ಸಿಕೋ ಮತ್ತು ಮಧ್ಯ ಹಾಗೂ ದಕ್ಷಿಣ ಅಮೆರಿಕದಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ.
ಈ ಮರ ಸಾಮಾನ್ಯವಾಗಿ ಸಮುದ್ರ ತೀರದಲ್ಲಿ , ಹಿನ್ನೀರ ಪ್ರದೇಶದಲ್ಲಿ ಕಾಣ ಸಿಗುತ್ತದೆ. ಇದು ನೋಡಲು ಆ್ಯಪಲ್ ಮರದಂತೆ ಇದೆ. ಆ್ಯಪಲ್ ಗಾತ್ರದ ಫಲವನ್ನೂ ಈ ಮರ ನೀಡುತ್ತದೆ. ಆದರೆ ಗ್ರೀನ್ ಆಪಲ್ ತರ ಇದೆ ಅಂತ ಇದನ್ನು ತಿಂದರೆ ಜೀವವೇ ಹೋಗಿಬಿಡುತ್ತೆ. ಹಾಗಾಗೇ ಈ ಹಣ್ಣನ್ನ ಸ್ಥಳೀಯರು “ಲಿಟಲ್ ಆ್ಯಪಲ್ ಆಫ್ ಡೆತ್’ ಕರೆಯುತ್ತಾರೆ.
ವಿಚಿತ್ರವೆಂದರೆ ಮಳೆಗಾಲದಲ್ಲಿ ಈ ಮರದ ಎಲೆಗಳಿಂದ ತೊಟ್ಟಿಕ್ಕುವ ನೀರು ಮರದ ಕೆಳಗೆ ನಿಂತವರ ದೇಹದ ಚರ್ಮವನ್ನು ಸುಟ್ಟು ಬಿಡುತ್ತದೆ. ಈ ಮರದ ಎಲೆಗಳು ವಿಷಕಾರಿ ದ್ರವವನ್ನು ಸ್ರವಿಸುವುದೇ ಇದಕ್ಕೆ ಕಾರಣ. ವಿಜ್ಞಾನಿಗಳ ಪ್ರಕಾರ ಈ ಮರದ ವೃಕ್ಷದಲ್ಲಿ ಹಲವು ಬಗೆಯ ವಿಷಕಾರಿ ಅಂಶಗಳಿರುವುದು ಕಂಡು ಬಂದಿದೆ. ಅಂದ ಹಾಗೆ ಈ ಮಾರಣಾಂತಿಕ ಮರ ಈಗಾಗಲೇ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಸೇರಿಕೊಂಡಿದೆ.