ನಿರೀಕ್ಷೆ ಅನ್ನೋದು ನಾವು ಹುಟ್ಟೊಕು ಮೊದ್ಲು ಸಮಾಜದಲ್ಲಿ ಘಾಡವಾಗಿ ಬೆಳೆದು ಹೋಗಿರುವಂತಹದ್ದು.. ಈ ನಿರೀಕ್ಷೆ ಅನ್ನೋ ಪದ ನಮ್ಮಲ್ಲಿ ಅಳವಡಸಿಕೊಂಡಿದ್ದೇ ಆದಲ್ಲಿ ಅದು ನಮಗೇ ಗೊತ್ತಿಲ್ಲದ ಹಾಗೆ ನಮ್ಮಲ್ಲಿಯೇ ಹಲವಾರು ಪ್ರಶ್ನೆಗಳು ಹುಟ್ಟುತ್ತಾ ಹೋಗುತ್ತೆ.. ಆ ನಿರೀಕ್ಷೆ ಅನ್ನೋ ಭಾರ ಕೇವಲ ಪ್ರಶ್ನೆಯಾಗಿಯೇ ಉಳಿಯುತ್ತೆ ಬಿಟ್ರೆ ಅದಕ್ಕೆ ಸೂಕ್ತ ಉತ್ತರ ಸಿಗೋದು ಕಷ್ಟ. ಇನ್ನು ನಿರೀಕ್ಷೆಗೆ ಕೊನೆ ಅನ್ನೋದು ಇಲ್ಲ. ಅಷ್ಟೇ ಏಕೆ ನಿರೀಕ್ಷೆ ಒಬ್ಬರಿನ್ನೊಬ್ಬರಿಗೆ ವಿಭಿನ್ನವಾಗಿದೆ. ಶೈಕ್ಷಣಿಕವಾಗಿ ನಾವು ಮಕ್ಕಳ ಮೇಲೆ ಹೆಚ್ಚಿನ ನಿರೀಕ್ಷೆ, ಭರವಸೆಗಳನ್ನಿಡುತ್ತಾ ಹೋದ್ರೆ ಅದು ಮಕ್ಕಳ ಮೇಲೆ ಮಾನಸಿಕವಾಗಿ ಪರಿಣಾಮ ಬೀರೋದಂತೂ ಸತ್ಯ. ತನ್ನ ಮಗ ನಮಗಿಂತಲೂ ಎತ್ತರವಾಗಿ ಬೆಳೆಯಬೇಕು ಅನ್ನುವ ಅತಿರೇಖದ ಭರವಸೆಗಳು ಕೆಲವೊಂದು ಬಾರಿ ಯಾರೂ ಊಹಿಸಲಾಗದ ಅಂತ್ಯ ಕಾಣುವುದಂತೂ ಸತ್ಯ.. ಅದಕ್ಕೆ ಸೂಕ್ತ ನಿದರ್ಶನವೇ ನಾನಿಲ್ಲಿ ಬಿಚ್ಚಿಟ್ಟಿರೋ ಘಟನೆ.. ಈ ಘಟನೆ ನಡೆದು ಸುಮಾರು ದಶಕಗಳೇ ಕಳೆದಿದ್ದರೂ ಅದರಿಂದಾದ ಮಾನಸಿಕ ಹಾಗೂ ದೈಹಿಕ ವೇದನೆ ಪ್ರತಿ ಹಂತದಲ್ಲೂ ನನ್ನನ್ನು ಕಾಡ್ತಾ ಬಂದಿದೆ. ತನ್ನ ಸಹೋದರ ಸಂಬಂಧಿಯ ಮೇಲಿಟ್ಟ ಅತಿಯಾದ ನಿರೀಕ್ಷೆ ಈಗ ಇನ್ನಿಲ್ಲದ ನೋವು ತರ್ತಾ ಇದೆ..
ಕಡು ಕಂದು ಬಣ್ಣದ ಯಾರ ಅಂದಕ್ಕೂ ಸಾಟಿಯಿಲ್ಲದ ಆತನಿಗೆ ಏನಾದರೊಂದು ಸಾಧಿಸೋ ಬಹು ದೊಡ್ಡ ಹಂಬಲ.. ನನಗಿಂತಲೂ ಎರಡು ವರ್ಷ ಚಿಕ್ಕವನಾದರೂ ನಮ್ಮ ಇತರ ಸಹೋದರ ಸಂಬಂಧಿಗಳಿಗಿಂತ ತುಂಬಾ ಟ್ಯಾಲೆಂಟ್ ಹುಡುಗ.. ಅದೇ ರೀತಿಯಾಗಿ ನಮ್ಮ ಇಡೀ ಕುಟುಂಬಕ್ಕೆ ಮಾದರಿಯಾಗಿ ಬೆಳೆದವ.. ಸ್ಟೈಲಿಶ್ ಕ್ರಿಕೆಟ್ ಆಟಗಾರ.. ಅದೇ ರೀತಿ ಅತ್ಯುತ್ತಮ ಚೆಸ್ ಪ್ಲೇಯರ್ ಕೂಡ ಹೌದು.. ಆಟದ ಮೇಲೆ ಹೇಗೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೋ ಅದೇ ರೀತಿಯಾಗಿ ಓದಿನಲ್ಲೂ ಕೂಡ.. ಈತನ ಎರಡೂ ಕಡೆಯ ಚಾತುರ್ಯ ಕಂಡ ನಾನೇ ಮನೆಸೋರೆಗೊಂಡಿದ್ದೆ.. ಅದಕ್ಕೆ ಸೂಕ್ತ ನಿದರ್ಶನ 10ನೇ ತರಗತಿಯಲ್ಲಿ ಪಡೆದ ಗ್ರೇಡ್ ಮಾರ್ಕ್..
ಇನ್ನು ನಮ್ಮ ಚಿಕ್ಕಮ್ಮಳಿಗೆ ಮಗನನ್ನು ಒಂದು ವೃತ್ತಿಪರ ಕೋರ್ಸ್ ಓದಿಸಬೇಕು ಎನ್ನುವ ಅತಿಯಾದ ಬಯಕೆ. ಇಡೀ ತಮ್ಮ ಕುಟುಂಬದಲ್ಲಿರುವ ಮಕ್ಕಳಿಗಿಂತ ಒಂದು ಹಂತ ಮೇಲಾಗಿ ತನ್ನ ಮಗನಿಗೆ ಓದಿಸಬೇಕು ಅನ್ನೋ ಹಂಬಲ.. ಅದು ಪ್ರತಿಯೊಬ್ಬ ಪೋಷಕರ ಆಸೆಯೂ ಹೌದಲ್ವ.. ಆಟದ ಜೊತೆಜೊತೆಗೆ ವಿದ್ಯಾಭ್ಯಾಸದಲ್ಲೂ ಬಹಳ ಕಠಿಣ ಪರಿಶ್ರಮ ಪಟ್ಟಿದ್ದ. ಆತನ ಪರಿಶ್ರಮದ ಫಲವಾಗಿಯೇ ದ್ವಿತೀಯ ಪಿಯುಸಿಯಲ್ಲಿ ಶೇ.85 ಅಂಕ ಪಡೆದು ತೇರ್ಗಡೆ ಹೊಂದಿದ್ದ. ಕೊನೆಗೂ ತನ್ನ ಪೋಷಕರ ಆಸೆಯನ್ನು ಈಡೇರಿಸಿದ್ದ. ಆದರೆ ನನಗಿನ್ನೂ ನೆನಪಿದೆ ಒಂದು ದಿನ ನಾನು ಆತನಿಗೆ ಕರೆ ಮಾಡಿ ಕಂಗ್ರಾಟ್ಸ್ ಹೇಳುವಾಗ ಅವನ ವಾಯ್ಸ್ ಎಂದಿನಂತಿರಲಿಲ್ಲ.. ಏನೋ ದುಃಖದಲ್ಲಿ ನನ್ನ ಬಳಿ ಮಾತನಾಡ್ತಾ ಇದ್ದ.. ಆಮೇಲೆ ಗೊತ್ತಾದದ್ದು ಆತನಿಗೆ ಕೇವಲ ೦.5% ನಿಂದ ಇಂಜಿನಿಯರಿಂಗ್ ಕೋರ್ಸ್‍ನ ಸರ್ಕಾರಿ ಕೋಟಾದಿಂದ ವಂಚಿತನಾಗಿದ್ದ ಎಂದು.. ಆದ್ರೂ ಅವರ ಪೋಷಕರು ಅವನನ್ನು ಸಮಾಧಾನಗೊಳಿಸಿ ಇದಿಲ್ಲದಿದ್ದರೆ ಮ್ಯಾನೇಜ್‍ಮೆಂಟ್ ಕೋರ್ಸ್ ತಗೋಳ್ಬೋದು ಅದರಿಂದಲೂ ನೀನು ಉಜ್ವಲ ಭವಿಷ್ಯ ರೂಪಿಸ್ಕೊಳ್ಬೋದು ಎಂದು ಬುದ್ದಿವಾದ ಹೇಳ್ತಾ ಇದ್ರು.. ಆದ್ರೆ ಸರ್ಕಾರಿ ಕೋಟಾದಿಂದ ಇಂಜಿನಿಯರಿಂಗ್ ಮಾಡಲು ಸಾಧ್ಯವಾಗ್ತಾ ಇಲ್ವಲ್ಲ ಎಂಬ ನಿರಾಸೆಯಲ್ಲಿ ಮತ್ತೆ ದ್ವಿತೀಯ ಪಿಯುಸಿ ಇಂಪ್ರೂಮೆಂಟ್ ಎಕ್ಸಾಮ್ ಬರೆಯಲು ನಿರ್ಧರಿಸಿದ. ಇದರಿಂದ ಆತನಿಗೆ ಒಂದು ವರ್ಷ ವ್ಯರ್ಥವಾಗಿ ಹೋಯ್ತು..!
ದಿನಗಳು ಕಳೆಯುತ್ತಿದ್ದಂತೆ ಆತನ ಪರಿಶ್ರಮ ದ್ವಿಗುಣಗೊಳ್ಳುತ್ತಾ ಹೋಯ್ತು.. ಆತನ ನಿರೀಕ್ಷೆಯೂ ಕೂಡ ಕೈಗೆ ನಿಲುಕದಷ್ಟು ಎತ್ತರಕ್ಕೆ ಬೆಳೆಯ ತೊಡಗಿತ್ತು.. ಅದೊಂದು ದಿನ ನಿರೀಕ್ಷೆಯಂತೆಯೇ ಪರಿಕ್ಷಾ ಫಲಿತಾಂಶ ಬಂತು. ವಾಪಾಸ್ ಬರ್ತಾ ನಾನು ಒಂದು ಒಳ್ಳೆ ಶುಭ ಸುದ್ದಿಯಿಂದಲೇ ಬರ್ತೆನೆ ಅಮ್ಮ ಎಂದು ಅಮ್ಮನ ಆಶಿರ್ವಾದ ಪಡೆದು ಮನೆಯಿಂದ ಹೊರಟ(ಆದ್ರೆ ತಾಯಿಯೂ ನಿರೀಕ್ಷೆ ಇಟ್ಟಿರಲಿಲ್ಲ ತನ್ನ ಮಗನನ್ನು ನೋಡೋದು ಇದೇ ಕೊನೆಯ ಬಾರಿ ಅಂತ). ಮಗನ ಬರುವಿಕೆಗಾಗಿಯೇ ಅಮ್ಮ ಬಾಗಿಲಲ್ಲೇ ಕಾಯುತ್ತಾ ಮಗ ಒಂದೊಳ್ಳೆ ಸುದ್ದಿ ತರ್ತಾನೆ ಅನ್ನೋ ಭರವಸೆಯ ಮುಗಳ್ನಗೆ ಬೀರುತ್ತಾ ದಾರಿ ಕಾಯ್ತಾ ಇದ್ಲು. ಸಂಜೆ ಸಮಯ ನಾಲ್ಕಾದರೂ ಮಗನ ಪತ್ತೆ ಇರಲಿಲ್ಲ.. ಒಂದು ದಿನವೇ ಮುಗಿದರೂ ಮಗ ನಾಪತ್ತೆ..! ಸತತ ಮೂರು ದಿನಗಳ ಕಾಲ ಇಡೀ ಕುಟುಂಬ ಕಾಣೆಯಾದ ಮಗನನ್ನು ಪ್ರತಿ ಗಲ್ಲಿಯ ಮೂಲೆ ಮೂಲೆಯಲ್ಲೂ ಹುಡುಕಲು ಆರಂಭಿಸಿದರು.. ಆದ್ರೆ ಯಾವುದೇ ಪ್ರತಿಫಲ ಸಿಗ್ಲಿಲ್ಲ.. ಕೊನೆಗೊಂದು ದಿನ ಇಡೀ ಕುಟುಂಬಕ್ಕೆ ಅಘಾತಕಾರಿ ಸುದ್ದಿಯೊಂದು ಬಂತು.. ನಿಮ್ಮ ಮಗ ಮರೀನಾ ಬೀಚ್‍ನಲ್ಲಿ ಸತ್ತು ಬಿದ್ದಿದ್ದಾನೆ ಎಂದು.. ಆದರೆ ಇಡೀ ಕುಟುಂಬ ಅದನ್ನು ಒಪ್ಪಿಕೊಳ್ಳಲು ತಯಾರಿರ್ಲಿಲ್ಲ ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಎಂಬುದು ಪೋಷಕರ ಮಾತು.. ಆದ್ರೆ ಪೋಷಕರ ಮಾತು ಅಂದು ಸುಳ್ಳಾಗಿತ್ತು.. ಇಷ್ಟೆಲ್ಲಾ ಘೋರ ದುರಂತ ನಡೆದದ್ದು ಯಾಕೆ ಗೊತ್ತಾ..? ಕೇವಲ ಪರಿಕ್ಷಾ ಫಲಿತಾಂಶ..! ಹೌದು ನನ್ನ ಕಸಿನ್ ಬರೆದ ಇಂಪ್ರೂಮೆಂಟ್ ಎಕ್ಸಾಮ್‍ನಲ್ಲಿ ಈ ಬಾರಿ ಆತನಿಗೆ ದೊರೆತ ಅಂಕ ಶೇ.65 ಪರ್ಸೆಂಟ್.. ಅದಕ್ಕಾಗಿ ಆತ ತೆಗೆದುಕೊಂಡ ನಿರ್ಧಾರ ಆತ್ಮಹತ್ಯೆ..!
ಈತನ ಅನೇಕ ಗೆಳೆಯರು ಎಲ್ಲೋ ತಪ್ಪು ನಡೆದಿದೆ ಅಂಕಲ್ ಈಗಲೇ ನಾವು ರೀವ್ಯಾಲುವೇಷನ್‍ಗೆ ಹಾಕೋಣ ಅವನು ಉತ್ತಮ ಅಂಕ ಪಡೆದಿರುತ್ತಾನೆ ಅನ್ನೋ ಭರವಸೆ ನಮ್ಮಲ್ಲಿದೆ ಎಂದು ಸಿಟ್ಟಿನಿಂದ ಫೋಷಕರ ಬಳಿ ಬಂದು ಹೇಳಿಕೊಂಡಿದ್ರು.. ಆದರೆ ಮಗನ ಗೆಳೆಯರ ಮಾತನ್ನು ನಿರಾಕರಿಸಿದ ಪೋಷಕರು ರೀವ್ಯಾಲುವೇಷನ್‍ಗೆ ಹಾಕಿದ್ರೆ ನನ್ನ ಮಗ ವಾಪಾಸ್ಸು ಬರುತ್ತಾನೆಯೇ ಎಂದು ಅಸಹಾಯಕತೆಯಿಂದ ಮಾತನಾಡಿದರು. ನಾನು ಅದೇ ಹೇಳುತ್ತೇನೆ ರೀ ವ್ಯಾಲುವೇಷನ್‍ನಿಂದ ಪ್ರಯೋಜನವಾದ್ರೂ ಏನು..? ಅದರಿಂದಲೇ ಒಂದು ಮುಗ್ದ ಜೀವ ಹೋಯ್ತು, ನನ್ನ ಚಿಕ್ಕಮ್ಮ ತನ್ನ ಮುದ್ದಾದ ಏಕೈಕ ಮಗನನ್ನು ಕಳೆದುಕೊಂಡ್ರು.. ತಂಗಿ ಓರ್ವ ಪ್ರೀತಿಯ ಅಣ್ಣನನ್ನು ಕಳೆದುಕೊಂಡ್ಳು.. ಇನ್ನು ಅವರ ಗೆಳೆಯರು.. ತಮ್ಮ ಗೆಳಯನನ್ನು ಕಳೆದುಕೊಂಡ್ರು.. ನಾನು ಅಷ್ಟೇ ಒಬ್ಬ ಪ್ರತಿಭಾವಂತ ಸಹೋದರನನ್ನು ಕಳೆದುಕೊಂಡ ದುಃಖದಲ್ಲಿದ್ದೇನೆ.. ಏನೇ ಆದ್ರೂ ಒಳ್ಳೆ ಮನುಷ್ಯನಿಗೆ ಸಮಾಜದಲ್ಲಿ ಧೀರ್ಘಕಾಲ ಬಾಳೊಕೆ ಬಿಡೊಲ್ಲ ಆ ದೇವ್ರು.. ಈಗ ನನಗನ್ನಿಸ್ತಾ ಇದೆ ನನ್ನ ಸಹೋದರ ಇದ್ದಿದ್ರೆ ಒಬ್ಬ ಪ್ರತಿಭಾನ್ವಿತ ಚೆಸ್ ಆಟಗಾರನೋ, ಕ್ರಿಕೆಟ್ ಪ್ಲೇಯರೋ.. ಡಾಕ್ಡ್ರೋ, ಇಂಜಿನಿಯರೋ ಆಗಿರ್ತಿದ್ನೇನೋ..? ಆದ್ರೆ ವಿಧಿ ಅವನನ್ನು ಬಿಡಲಿಲ್ಲ.. ಆದ್ರೆ ಈ ಘಟನೆಯಿಂದ ಎಲ್ಲರಿಗೂ ಒಂದು ಕಿವಿ ಮಾತು ಹೇಳಲು ಬಯಸ್ತೀನಿ.. ದಯವಿಟ್ಟು ನಿಮ್ಮ ಸಾಮರ್ಥ್ಯವನ್ನು ಪರೀಕ್ಷಾ ಅಂಕಗಳೊಂದಿಗೆ ಅಳಿಯಬೇಡಿ.. ಜೀವನದಲ್ಲಿ ನೀವೇನಾದರೂ ಒಳ್ಳೆಯದನ್ನು ಮಾಡಲು ಹೋದ್ರೆ ಆ ದೇವರು ನಿಮ್ಮನ್ನು ಸುಖವಾಗಿಟ್ಟಿರುತ್ತಾನೆ.. ಅದೇ ರೀತಿ ಪೋಷಕರಿಗೆ ನನ್ನದೊಂದು ಮನವಿ ದಯವಿಟ್ಟು ಮಕ್ಕಳ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಗಳನ್ನಿಡಬೇಡಿ.. ನಿರೀಕ್ಷೆಗೂ ಮೀರಿ ಆಸೆಯನ್ನು ನಿಮ್ಮ ಮಕ್ಕಳ ಮೇಲಿಟ್ಟು ಅದು ನಿರಾಶೆ ಹೊಂದಿದ್ದರೆ ಖಂಡಿತವಾಗಿಯೂ ನೀವು ಮಕ್ಕಳ ಮೇಲೆ ಆಕ್ರೋಶ ವ್ಯಕ್ತ ಪಡಿಸಬೇಡಿ.. ಯಾಕಂದ್ರೆ ಸೋಲು ಜೀವನದ ಪಾಠ ಕಲ್ಸುತ್ತೆ.. ಅದಕ್ಕಾಗಿ ಮಕ್ಕಳ ವೈಫಲ್ಯತೆ ಅನ್ನೋದು ಕೆಟ್ಟದ್ದಲ್ಲ… ಅದು ಮುಂದಿನ ಗೆಲುವಿಗೆ ಅಡಿಪಾಯ.. ಆದ್ದರಿಂದ ಮಕ್ಕಳೇ ನಿಮ್ಮ ಸಾಮಥ್ರ್ಯವನ್ನು ದಯವಿಟ್ಟು ಅಂಕಗಳಿಂದ, ವೈಫಲ್ಯತೆಗಳಿಂದ ಅಳೆಯಬೇಡಿ.. ಎಲ್ಲರಿಗೂ ಶುಭವಾಗಲಿ.
- ಪ್ರಮೋದ್ ಲಕ್ಕವಳ್ಳಿ
POPULAR STORIES :
ಹುಡುಗಿಯೊಬ್ಳು ಐಫೋನ್ ತಗೊಳೋಕೆ ನಿಮ್ಮತ್ರ ದುಡ್ ಕೇಳುದ್ರೆ..?
Oxford ಇಂಗ್ಲೀಷ್ ಡಿಕ್ಷನರಿಯಲ್ಲಿ ದಕ್ಷಿಣ ಭಾರತದ ಎರಡು ಸಾಮಾನ್ಯ ಪದಗಳ ಸೇರ್ಪಡೆ..!
ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!
ಏಳು ಸಾವಿರ ವರ್ಷಗಳ ಹಿಂದಯೇ ಏಲಿಯನ್ಸ್ ವಿಮಾನ ನಿಲ್ದಾಣ ನಿರ್ಮಿಸಿಕೊಂಡಿದ್ವು : ಇರಾಕ್ ಸಚಿವ..!
ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!
ನಾನು ನಿನ್ನ ಮದ್ವೆ ಆಗ್ತೀನಿ.. ಅಂದಿದಕ್ಕೆ ತಲೆ ತಿರುಗಿ ಬಿದ್ಲು ನಾರಿ..! ಯಾಕೆ ಗೊತ್ತಾ..
ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..!