ಕ್ರಿಕೆಟರ್ ಆಗಬೇಕಿದ್ದವರು ಆ್ಯಂಕರ್ ಆದ್ರು…!

Date:

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ…, ಜಾತಿ ರಾಜಕೀಯ ಎಂಬ ಕೆಟ್ಟ ಹುಳು ಸೋಕದೇ ಇದ್ದಿದ್ದರೆ ಇವತ್ತು ಟೀಂ ಇಂಡಿಯಾದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ಮಿಂಚುತ್ತಿದ್ದರೇನೋ..? ಇಲ್ಲವೆ, ಕೊನೇಪಕ್ಷ ಆ ಸ್ಥಾನಕ್ಕೆ ಪ್ರಬಲ ಪೈಪೋಟಿಯನ್ನಂತೂ ನೀಡುತ್ತಿದ್ದರು…! ಆದರೆ, ಅದು ಸಾಧ್ಯವಾಗಿಲ್ಲ…! ಅಂದು ಕ್ರಿಕೆಟರ್ ಆಗಬೇಕೆಂದು ಕನಸು ಕಂಡಿದ್ದವರು ಇವತ್ತು ಆ್ಯಂಕರ್ ಆಗಿದ್ದಾರೆ…!


ಅರುಣ್ ಬಡಿಗೇರ್, ಈ ಹೆಸರು ಕೇಳದೇ ಇರೋರು ಯಾರಿದ್ದಾರೆ..? ಯಾರೂ ಇಲ್ಲ…! ಪಬ್ಲಿಕ್ ಟಿವಿಯ ನ್ಯೂಸ್ ರೀಡರ್, ಆ್ಯಂಕರ್. ಇವರನ್ನು ನಿತ್ಯ ನೀವು ಪಬ್ಲಿಕ್ ಟಿವಿ ಪರದೆಯಲ್ಲಿ ನೋಡ್ತಾನೇ ಇರ್ತೀರಿ…! ನಿರೂಪಕರಾಗಿ ತೆರೆಯ ಮೇಲೆ ಮಿಂಚುತ್ತಿರುವ ಇವರ ಬಗ್ಗೆ ನಿಮಗೆ ಗೊತ್ತಿರದ ಎಷ್ಟೋ ಸಂಗತಿಗಳು ಇಲ್ಲಿವೆ. ಕನಸುಗಳ ಬೆನ್ನಟ್ಟಿ ಹೊರಟವರಿಗೆ ಇವರ ಜೀವನ ದಿಕ್ಸೂಚಿ.


ಇವರು ಹುಟ್ಟಿ, ಬೆಳೆದಿದ್ದು ಧಾರವಾಡದಲ್ಲಿ. ತಂದೆ ಚಂದ್ರಶೇಖರ್ ಎಸ್ ಬಡಿಗೇರ್ ಕೆ.ಇ ಬೋರ್ಡ್ ಶಾಲೆಯ ನಿವೃತ್ತ ಶಿಕ್ಷಕರು. ತಾಯಿ ಕಸ್ತೂರಿ ಚಂದ್ರಶೇಖರ್ ಬಡಿಗೇರ್ ಕೆ.ಇ ಬೋರ್ಡ್ ಸ್ಕೂಲ್‍ನ ಶಿಕ್ಷಕಿ. ಪತ್ನಿ ಸಂಗೀತಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಮಗಳು ಆರುಷಿ.


ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಕೆ.ಇ ಬೋರ್ಡ್ ಸ್ಕೂಲ್ ನಲ್ಲಿಯೇ ಪೂರೈಸಿದ ಅರುಣ್ ಬಡಿಗೇರ್ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಕರ್ನಾಟಕ ಕಲಾ ವಿದ್ಯಾಲಯದಲ್ಲಿ ಬಿಎ (ಕ್ರಿಮಿನಾಲಜಿ, ಪಬ್ಲಿಕ್ ಅಡ್ಮಿನಿಸ್ಟ್ರೇಷನ್) ಪದವಿ ಹಾಗೂ ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಚಿನ್ನದ ಪದಕದೊಂದಿಗೆ) ಪಡೆದಿದ್ದಾರೆ.


ಶಾಲಾ ದಿನಗಳಲ್ಲಿ ಎನ್‍ಸಿಸಿ ‘ಎ’ ಸರ್ಟಿಫಿಕೇಟ್, ಪಿಯುಸಿಯಲ್ಲಿ ಎನ್‍ಸಿಸಿ ‘ಬಿ’ ಸರ್ಟಿಫಿಕೇಟ್. ಪದವಿಯಲ್ಲಿ ‘ಸಿ’ ಸರ್ಟಿಫಿಕೇಟ್ ಪಡೆದಿದ್ದರು. ಪಿಯುಸಿ, ಪದವಿ ವೇಳೆಯಲ್ಲಿ ಸೀನಿಯರ್ ಅಂಡರ್ ಆಫಿಸರ್ ಆಗಿ ತಂಡವನ್ನು ಮುನ್ನಡೆಸಿದ ಅನುಭವ ಕೂಡ ಇವರದ್ದು. ಮಹಾರಾಷ್ಟ್ರದಲ್ಲಿ ನ್ಯಾಷನಲ್ ಟ್ರ್ಯಾಕಿಂಗ್ ಕ್ಯಾಂಪ್, ನಾಗಲ್ಯಾಂಡ್‍ನಲ್ಲಿ ನ್ಯಾಷನಲ್ ಇಂಟಿಗ್ರೆಟೆಡ್ ಕ್ಯಾಂಪ್ ನಲ್ಲಿ ಪಾಲ್ಗೊಂಡಿದ್ದರು. ಎರಡು ವರ್ಷ ಎನ್‍ಎಸ್‍ಎಸ್‍ನಲ್ಲಿ ಗುರುತಿಸಿಕೊಂಡಿದ್ದರು. ಇವುಗಳಲ್ಲದೆ ಯೂಥ್‍ಫೆಸ್ಟಿನಲ್ಲಿ ಡೊಳ್ಳುಕುಣಿತದಲ್ಲಿ ಭಾಗವಹಿಸಿದ್ದರು. ಇವರ ತಂಡ ದಕ್ಷಿಣ ಭಾರತದಲ್ಲಿ ಮೂರನೇ ಸ್ಥಾನ ಪಡೆದಿತ್ತು.


ಇವೆಲ್ಲಕ್ಕಿಂತ ಮುಖ್ಯವಾಗಿ ಇವರಿಗೆ ಚಿಕ್ಕಂದಿನಿಂದಲೂ ಕ್ರಿಕೆಟಿಗನಾಗಬೇಕೆಂಬ ಆಸೆ. ಆರಂಭಿಕ ಬ್ಯಾಟ್ಸ್‍ಮನ್ ಆಗಿ, ಸ್ಪಿನ್ ಬೌಲರ್ ಆಗಿ ಶಾಲಾಮಟ್ಟದಲ್ಲಿ 14 ವರ್ಷದೊಳಗಿನ ಜಿಲ್ಲಾ ಕ್ರಿಕೆಟ್ ತಂಡದಲ್ಲಿ ಆಡಿದ್ದರು. ಆದರೆ, ಜಾತಿ ಎಂಬ ಭೂತ ರಾಜ್ಯ ತಂಡದ ಪರ ಆಡುವ ಅವಕಾಶವನ್ನು ಕಸಿದುಕೊಂಡಿತು. ಅಂಡರ್ 16 ತಂಡಕ್ಕೆ ಆಯ್ಕೆಯಾಗುವ ಅವಕಾಶದಿಂದ ವಂಚಿತರಾದರು. ಮುಂದೆ ಕಾಲೇಜು, ಯೂನಿವರ್ಸಿಟಿ ಕ್ರಿಕೆಟ್ ತಂಡದ ಭಾಗವಾಗಿದ್ದರು.  ಪಿಯುಸಿ ಮಾಡುವಾಗ ಪೊಲೀಸ್ ಕಾನ್ಸ್ ಟೇಬಲ್ ಕೆಲಸ ಸಿಕ್ಕಿತು. ಆದರೆ, ಬೇಡ ಎಂದು ಅವಕಾಶವನ್ನು ಕೈಚೆಲ್ಲಿದ್ರು. ಎಸ್‍ಐ ಆಗಬೇಕೆಂದು ಕನಸು ಕಂಡ್ರು. ನಂತರ ಗುರುಗಳೊಬ್ಬರ ಮಾರ್ಗದರ್ಶನದಂತೆ ಪತ್ರಕರ್ತನಾಗಲು ನಿರ್ಧರಿಸಿದ್ರು.


2009ಲ್ಲಿ ಸ್ನಾತಕೋತ್ತರ ಪದವಿ ಮುಗಿದ ಕೂಡಲೇ ಗೋವಾ ಡಾನ್ ಬಾಸ್ಕೋ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ್ರು. ಆದರೆ, ಸರ್ಕಾರಿ ಕೆಲಸವನ್ನು ಪಡೆಯಬೇಕೆಂಬ ಉದ್ದೇಶದಿಂದ ಕೆಲವೇ ತಿಂಗಳಲ್ಲಿ ಉಪನ್ಯಾಸಕ ವೃತ್ತಿಗೆ ರಾಜೀನಾಮೆ ನೀಡಿ ಪಿಡಿಒ ಪರೀಕ್ಷೆಗೆ ತರಬೇತಿ ಪಡೆಯಲು ಮುಂದಾದ್ರು. ಕೇವಲ ಆರೇ ಆರು ಅಂಕಗಳಿಂದ ಪಿಡಿಒ ಹುದ್ದೆ ಪಡೆಯುವ ಅವಕಾಶ ತಪ್ಪಿ ಹೋಯ್ತು. ಅದಾದ ಬಳಿಕ ನವೆಂಬರ್ 1ರಂದು ಉದ್ಯೋಗವನ್ನರಸಿ ಬೆಂಗಳೂರು ಕಡೆಗೆ ಬಂದ್ರು. ಕೆಲಸ ಸಿಕ್ಕರೆ ವಾಪಸ್ಸು ಬರುತ್ತೇನೆ, ಇಲ್ಲವಾದ್ರೆ ಬರಲ್ಲ ಅಂತ ಮನೆಯಲ್ಲಿ ಹೇಳಿ ಹೊರಟಿದ್ದ ಅರುಣ್ ಅವರು ಕೆಲಸಕ್ಕಾಗಿ ಅಲೆದಿದ್ದು ಅಷ್ಟಿಷ್ಟಲ್ಲ.


15 ದಿನಗಳ ಕಾಲ ಕೆಲಸ ಹುಡುಕಿಕೊಂಡು ಅಲೆದರು. ನವೆಂಬರ್ 16ರಂದು ಸುವರ್ಣ ನ್ಯೂಸ್‍ನಲ್ಲಿ ಸಂದರ್ಶನಕ್ಕೆ ಹೋದ್ರು. ಬೆಳಗ್ಗೆ 8 ಗಂಟೆಗೆ ಸುವರ್ಣ ಆಫೀಸ್‍ಗೆ ಹೋಗಿದ್ದ ಅರುಣ್ ಅವರಿಗೆ ಇಂಟರ್ ವ್ಯೂ ನಡೆದಿದ್ದು ರಾತ್ರಿ 10.30ಕ್ಕೆ…! ಇದು ಅವರ ತಾಳ್ಮೆಯ ಪರೀಕ್ಷೆಯಂತಿತ್ತು…! ಕೊನೆಗೂ ಸುವರ್ಣದಲ್ಲಿ ಕೆಲಸ ಸಿಕ್ಕಿತು.

ಎರಡು ವರ್ಷ ಸುವರ್ಣ ನ್ಯೂಸ್‍ನಲ್ಲಿ ಕೆಲಸ ಮಾಡಿ, 2011ರ ನವೆಂಬರ್‍ನಲ್ಲಿ ಪಬ್ಲಿಕ್ ಟಿವಿ ಸೇರಿದ್ರು. ಡಿಸೆಂಬರ್ 2011ರಿಂದ 2014ರ ಆಗಸ್ಟ್ ವರೆಗೆ ಪಬ್ಲಿಕ್ ಟಿವಿಯ ದೆಹಲಿ ಬ್ಯೂರೋ ಮುಖ್ಯಸ್ಥರಾಗಿ ಸೇವೆಸಲ್ಲಿಸಿದರು. ಕಾಲೇಜು ದಿನಗಳಲ್ಲಿ ದೆಹಲಿಗೆ ಸ್ಟಡಿ ಟೂರ್ ಹೋಗಿದ್ದಾಗ ಮುಂದೆ ನಾನಿನಲ್ಲಿ ಕೆಲಸ ಮಾಡಬೇಕು ಎಂದು ಆಸೆಪಟ್ಟಿದ್ದರು. ಅದು ಪಬ್ಲಿಕ್ ಟಿವಿ ಮೂಲಕ ಈಡೇರಿತು…!


ದೆಹಲಿ ಬ್ಯೂರೋ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ, ಗುಜರಾತ್, ಹಿಮಾಚಲ ಪ್ರದೇಶ್ ಚುನಾವಣೆ, ಉತ್ತರಖಂಡ ಪ್ರವಾಹ, ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಕೋಮುದಂಗೆ ಸೇರಿದಂತೆ ಅನೇಕ ವರದಿಗಳನ್ನು ಮಾಡಿದ ಅಪಾರ ಅನುಭವ ಇವರ ಜೊತೆಗಿದೆ.


2014ರ ಆಗಸ್ಟ್ ನಲ್ಲಿ ವೈಯಕ್ತಿಕ ಕಾರಣಗಳಿಂದ ದೆಹಲಿಯಲ್ಲಿರೋದು ಕಷ್ಟವಾಗಿ ತಾನಾಗಿಯೇ ವರ್ಗಾವಣೆ ಬಯಸಿ ಬೆಂಗಳೂರಿಗೆ ಬಂದರು. ಅವತ್ತಿಂದ ಇವತ್ತಿನವರೆಗೂ ಬೆಂಗಳೂರಿನ ಕೇಂದ್ರಕಚೇರಿಯಲ್ಲಿ ಕೆಲಸ ಮಾಡ್ತಿದ್ದಾರೆ. 2014ರ ನವೆಂಬರ್‍ನಿಂದ ನಿರೂಪಕನಾಗಿ ಕಾಣಿಸಿಕೊಳ್ಳುವ ಅವಕಾಶ ದೊರೆಯಿತು. ಈ ಅವಕಾಶವನ್ನು ಸಹ ಸಮರ್ಪಕವಾಗಿ ಬಳಸಿಕೊಂಡು ಕನ್ನಡಿಗರನ್ನು ತಲುಪುವಲ್ಲಿ ಯಶಸ್ವಿಯಾದರು. ನಿರೂಪಣೆಯ ಜೊತೆಗೆ ತೆರೆಮರೆಯಲ್ಲಿ ಜಿಲ್ಲಾ ವರದಿ ಸಂಯೋಜಕರಾಗಿಯೂ ಕೆಲಸ ಮಾಡಿದ್ದಾರೆ. ಪ್ರತಿನಿತ್ಯ ರಾತ್ರಿ 8ಗಂಟೆಗೆ ಪಬ್ಲಿಕ್ ಟಿವಿಯಲ್ಲಿ ಚೆಕ್ ಬಂಧಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಜೊತೆಗೆ ವಾರ್ತೆ ವಾಚನ, ಪ್ಯಾನಲ್ ಡಿಸ್ಕಷನ್‍ಗಳಲ್ಲಿಯೂ ಇವರನ್ನು ಕಾಣುತ್ತಿದ್ದೇವೆ.


ಇನ್ನುಳಿದಂತೆ ಹೊಸ ಹೊಸ ಜಾಗಗಳನ್ನು ಹುಡುಕುವುದು, ಹಾಡುವುದು, ವೀಡಿಯೋ ಎಡಿಟ್ ಮಾಡೋದು, ಗಾರ್ಡನಿಂಗ್ ಇವರ ಹವ್ಯಾಸ.  ಬೇರೆ ಬೇರೆ ಕಡೆಳಿಂದ ಅವಕಾಶಗಳು ಬರುತ್ತಿದ್ದರೂ ಅರುಣ್ ಪಬ್ಲಿಕ್ ಟಿವಿ ಬಿಡುವ ಮನಸ್ಸು ಮಾಡಿಲ್ಲ. ಒಂದೇ ಕಡೆ ಕೆಲಸ ಮಾಡಿದ್ರೆ ಒಳ್ಳೆಯ ಹೆಸರು, ನಂಬಿಕೆ ಉಳಿಸಿಕೊಳ್ಳಬಹುದು ಎಂಬುದು ಇವರ ನಿಲುವು.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

10 ನವೆಂಬರ್ 2017 : ಈಶ್ವರ್ ದೈತೋಟ

11 ನವೆಂಬರ್ 2017 : ಭಾವನ

12  ನವೆಂಬರ್ 2017 : ಜಯಶ್ರೀ ಶೇಖರ್

13 ನವೆಂಬರ್ 2017 : ಶೇಷಕೃಷ್ಣ

14 ನವೆಂಬರ್ 2017 : ಶ್ರೀಧರ್ ಶರ್ಮಾ

15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

16 ನವೆಂಬರ್ 2017 : ಅರವಿಂದ ಸೇತುರಾವ್

17 ನವೆಂಬರ್ 2017 : ಲಿಖಿತಶ್ರೀ

18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

19 ನವೆಂಬರ್ 2017 : ಅಪರ್ಣಾ

20 ನವೆಂಬರ್ 2017 :  ಅಮರ್ ಪ್ರಸಾದ್

21 ನವೆಂಬರ್ 2017 :   ಸೌಮ್ಯ ಮಳಲಿ

22 ನವೆಂಬರ್ 2017 :  ಅರುಣ್ ಬಡಿಗೇರ್

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...