ಭಾರತ ಕ್ರಿಕೆಟ್ ತಂಡದ ಅನುಭವಿ ವೇಗಿ ಆಶಿಶ್ ನೆಹ್ರಾ ತಮ್ಮ 20 ವರ್ಷಗಳ ಸುದೀರ್ಘ ಕ್ರಿಕೆಟ್ ಬದುಕಿಗೆ ಇಂದು ವಿದಾಯ ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು 53 ರನ್ ಗಳ ಅಂತರದಿಂದ ಗೆದ್ದ ವಿರಾಟ್ ಪಡೆ ಹಿರಿಯ ವೇಗಿಗೆ ಗೆಲುವಿನ ಉಡುಗೊರೆ ನೀಡಿ ಬೀಳ್ಕೊಟ್ಟಿತು.
ನವದೆಹಲಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದ ಗೆಲುವಿನೊಂದಿಗೆ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಗೆಲುವಿನ ಖಾತೆ ತೆರೆಯಿತು. ಹಿಂದೆ ಭಾರತ ಮತ್ತು ಕೀವಿಸ್ ಮುಖಾಮುಖಿಯಾಗಿದ್ದ ಐದೂ ಟಿ 20 ಪಂದ್ಯಗಳಲ್ಲಿ ಭಾರತ ಸೋತಿತ್ತು.
ಇಂದು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೊಹ್ಲಿ ಪಡೆ ನಿಗಧಿತ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿತು. ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ತಲಾ 80 ರನ್ ಗಳ ಹಾಗೂ ಕೊಹ್ಲಿ ಅಜೇಯ 26 ರನ್ ಹಾಗೂ ಧೋನಿ ಅಜೇಯ 7 ರನ್ ಕೊಡುಗೆ ನೀಡಿದರು.
ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಕೀವಿಸ್ ನಿಗಧಿತ ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 149 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಚಹಾಲ್ ಮತ್ತು ಅಕ್ಷರ್ ಪಟೇಲ್ ತಲಾ 2 ಹಾಗೂ ಭುವನೇಶ್ವರ್ ಕುಮಾರ್, ಬೂಮ್ರಾ , ಹಾರ್ದಿಕ್ ಪಾಂಡ್ಯ ತಲಾ1 ವಿಕೆಟ್ ಪಡೆದರು. ( 1 ರನ್ ಔಟ್) .