ಮಾಜಿ ಪ್ರಧಾನಿ , ಭಾರತ ರತ್ನ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (93) ಇನ್ನಿಲ್ಲ. ಸಂಜೆ 5.5 ನಿಮಿಷಕ್ಕೆ ವಿಧಿವಶರಾಗಿದ್ದಾರೆ ಎಂದು ಏಮ್ಸ್ ಆಸ್ಪತ್ರೆ ಪ್ರೆಸ್ ರಿಲೀಸ್ ನಲ್ಲಿ ಸ್ಪಷ್ಟಪಡಿಸಿದೆ.
ಅನಾರೋಗ್ಯದ ಸಮಸ್ಯೆಯಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವಾಜಪೇಯಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಕಿಡ್ನಿ ಸಮಸ್ಯೆ ,.ಮೂತ್ರಕೋಶದ ಸೋಂಕಿನಿಂದ ಬಳಲುತ್ತಿದ್ದರು. 2009ರಲ್ಲಿ ಪಾರ್ಶ್ವವಾಯುವಿಗೆ ತುತ್ತಾದ ಬಳಿಕ ವಾಜಪೇಯಿ ಅವರ ಒಂದೇ ಕಿಡ್ನಿ ಕಾರ್ಯನಿರ್ವಹಿಸುತ್ತಿತ್ತು.
ಅಜಾತಶತ್ರುವಾಗಿ 93ವರ್ಷದ ಸುದೀರ್ಘ ಜೀವನ ನಡೆಸಿದ ವಾಜಪೇಯಿ ಅವರು ರಾಜಕೀಯ, ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಅಪಾರ.
1924ರ ಡಿಸೆಂಬರ್ 25ರಂದು ಮಧ್ಯಪ್ರದೇಶದ ಗ್ವಾಲಿಯರ್ ಬಳಿಯ ಶಿಂದೆ ಕಿ ಚವ್ವಾಣಿ ಎಂಬ ಗ್ರಾಮದಲ್ಲಿ ವಾಜಪೇಯಿ ಅವರ ಜನನ. ಇವರ ತಂದೆ ಕೃಷ್ಣ ಬಿಹಾರಿ ವಾಜಪೇಯಿ, ತಾಯಿ ಕೃಷ್ಣದೇವಿ. ಇವರ ತಂದೆ ಶಿಕ್ಷಕರು ಹಾಗೂ ಕವಿಗಳಾಗಿದ್ದರು.
ಇಂದಿನ ಲಕ್ಷ್ಮೀ ಬಾಯಿ ಕಾಲೇಜು ಅಂದಿನ ವಿಕ್ಟೋರಿಯಾ ಕಾಲೇಜಿನಿಂದ ವಾಜಪೇಯಿ ಅವರು ಪದವಿಯನ್ನು ಪಡೆದರು. ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿ ಪಾಂಡಿತ್ಯ ಪಡೆದ ಇವರು, ಕಾನ್ಪುರದ ಡಿ ಎ ವಿ ಕಾಲೇಜಿನಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಮಾಸ್ಟರ್ ಡಿಗ್ರಿ ಪಡೆದ ಅಟಲ್ 1942ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ, ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್)ವನ್ನು ಸೇರಿದರು. ‘ವೀರ ಅರ್ಜುನ’ ಹಾಗೂ ‘ಪಾಂಚಜನ್ಯ’ ಎನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು. ಇವರೊಬ್ಬ ಶ್ರೇಷ್ಠ ವಾಗ್ಮಿ ಸಹ ಆಗಿದ್ದರು.
3 ಅವಧಿಯಲ್ಲಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ನಡೆಸಿದ್ದ ಇವರು ಪಕ್ಷಾತೀತವಾಗಿ ಪ್ರತಿಯೊಬ್ಬರಿಂದ ಗೌರವ ,ಪ್ರೀತಿಗೆ ಪಾತ್ರರಾಗಿದ್ದರು.
ಪ್ರಧಾನಮಂತ್ರಿಯಾಗಿ ಮೊದಲ ಅವಧಿ
- 1996ರಲ್ಲಿ ನಡೆದ ಲೋಕ ಸಭಾ ಚುನಾವಣೆಯಲ್ಲಿ ಬಿ ಜೆ ಪಿ ಹೆಚ್ಚು ಮತಗಳನ್ನು ಪಡೆದ ಏಕ ಪಕ್ಷವಾಗಿ ಹೊರ ಹೊಮ್ಮಿತು. 519 ಸೀಟುಗಳ ಪೈಕಿ ಬಿ ಜೆ ಪಿ 187 ಸೀಟುಗಳನ್ನು ಗೆದ್ದರೆ ಕಾಂಗ್ರೆಸ್ 140 ಹಾಗು ಬಿ ಜೆ ಪಿಯೇತರ, ಕಾಂಗ್ರೆಸ್ಸೇತರ ಪಕ್ಷಗಳ ಸಂಘ ಯುನೈಟೆಡ್ ಫ್ರಂಟ್ 192 ಸೀಟುಗಳನ್ನು ಗೆದ್ದುಕೊಂಡಿತು. ಹೆಚ್ಚು ಸೀಟು ಪಡೆದ ಏಕೈಕ ಪಕ್ಷವಾದ ಕಾರಣ ಬಿ ಜೆ ಪಿ ಗೆ ಸರ್ಕಾರ ರಚಿಸಲು ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಆಹ್ವಾನವಿತ್ತರು.
- ಸ್ಥಳೀಯ ಹಾಗೂ ಕಾಂಗ್ರೆಸ್ಸೇತರ ಪಕ್ಷಗಳು ಬಿ ಜೆ ಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಬಹುದೆಂದು ಭಾವಿಸಿ ವಾಜಪೇಯಿ ಭಾರತದ ಹತ್ತನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಿ ಜೆ ಪಿ ನಾಯಕತ್ವದಲ್ಲಿ ಸರ್ಕಾರ ರಚನೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಆದರೆ ಯುನೈಟೆಡ್ ಫ್ರಂಟ್ ಬಹುಮತ ಸಾಧಿಸಲು ಕಾಂಗ್ರೆಸ್ ಅನ್ನು ಬಾಹ್ಯ ಬೆಂಬಲಕ್ಕಾಗಿ ಯಾಚಿಸಿತು.
- ಕಾಂಗ್ರೆಸ್ ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರಿಂದ ವಾಜಪೇಯಿ ಕೇಂದ್ರದಲ್ಲಿ ಬಹುಮತ ಸಾಧಿಸಲು ಸಾಧ್ಯವಾಗಲಿಲ್ಲ. ಯುನೈಟೆಡ್ ಫ್ರಂಟ್ ದೇವೇಗೌಡರ ಮುಂದಾಳತ್ವದಲ್ಲಿ ಸರ್ಕಾರ ರಚನೆ ಮಾಡಲು ಮುಂದಾದಾಗ ಕೇವಲ ಹದಿಮೂರು ದಿನವಾಗಿದ್ದ ವಾಜಪೇಯಿ ಸರ್ಕಾರ ಪತನಗೊಂಡಿತು.
ಪ್ರಧಾನಮಂತ್ರಿಯಾಗಿ 2ನೇಅವಧಿ
- 1998 ರಲ್ಲಿ ಚುನಾವಣೆಗಳು ನಡೆದಾಗ ಮತ್ತೆ ಬಿ ಜೆ ಪಿ ಯೇ ಮಿಕ್ಕ ಪಕ್ಷಗಳಿಗಿಂತ ಮುನ್ನಡೆ ಸಾಧಿಸಿತಾದರೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಕೂಡಲೇ ಸಮಾನ ಮನಸ್ಕ ಪಕ್ಷಗಳ ಒಡಗೂಡಿ ಎನ್ ಡಿ ಎ ಮೈತ್ರಿ ಕೂಟ ರಚಿಸಿತು.ಮೈತ್ರಿ ಕೂಟದ ಮೂಲಕ ಬಹುಮತ ಸಾಧಿಸಿದ ಕಾರಣ 10 ಮಾರ್ಚ್ 1998 ರಂದು ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲಾಯಿತು.
- ಈ ಅವಧಿಯಲ್ಲಿಯೇ ದೇಶ ಕಾರ್ಗಿಲ್ ಯುದ್ಧವನ್ನು ಎದುರಿಸಿತು. ಎನ್ ಡಿ ಎ ಮೈತ್ರಿ ಕೂಟದಲ್ಲಿದ್ದ ಒಂದು ಮುಖ್ಯ ಪಕ್ಷ ತಮಿಳುನಾಡಿನ ಎ ಐ ಎ ಡಿ ಎಂ ಕೆ. 1999 ರಲ್ಲಿ ಬಿ ಜೆ ಪಿ ಪಕ್ಷವು ಜಯಲಲಿತಾ ಕೆಲವು ಭ್ರಷ್ಟಾಚಾರ ಸಂಬಂಧಿ ದೂರುಗಳಲ್ಲಿ ನಿಯಂತ್ರಣ ಕಾಯ್ದುಕೊಳ್ಳಲು ಹವಣಿಸಿರುವ ಬಗ್ಗೆ ಗಂಭೀರ ಆರೋಪ ಮಾಡಿತು. ಎನ್ ಡಿ ಎ ಮೈತ್ರಿ ಕೂಟ ಸರ್ಕಾರ ಪತನವಾಗುವಂತಹ ಯಾವ ಒಪ್ಪಂದಗಳಿಗೂ ಅವಕಾಶವಿಲ್ಲ ಎಂದಿತು.
- ಕೂಡಲೇ ಜಯಲಿತಾ ಸರ್ಕಾರಕ್ಕೆ ಕೊಟ್ಟಿದ್ದ ತಮ್ಮ ಬೆಂಬಲವನ್ನು ಹಿಂಪಡೆದರು. ಸರ್ಕಾರ ರಚಿಸಲು ಬೇಕಾದಷ್ಟು ಸೀಟುಗಳ ಸಂಖ್ಯೆಯನ್ನು ವಾಜಪೇಯಿ ಸರ್ಕಾರ ಹೊಂದಿಲ್ಲದ ಕಾರಣ ವಿಶ್ವಾಸ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ನಿರ್ಧರಿಸಲಾಯಿತು. ಆದರೆ ವಿಶ್ವಾಸ ಮತಗಳಲ್ಲಿಯೂ ಅವಶ್ಯ ಸಂಖ್ಯೆಯನ್ನು ತಲುಪಲು ಸಾಧ್ಯವಾಗದ ಕಾರಣ ವಾಜಪೇಯಿ ಸರ್ಕಾರ ಪತನವಾಯಿತು.
- ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರಿಗೆ ಸರ್ಕಾರ ರಚಿಸಲು ಸಾಧ್ಯವಾದ ಪಕ್ಷದಲ್ಲಿ ಮತ್ತೊಂದು ಸರ್ಕಾರ ರಚನೆ ಮಾಡಲು ಸೂಚಿಸಿದರು, ಆದರೆ ಕಾಂಗ್ರೆಸ್ ಪಕ್ಷವು ಬಹುಮತಗಳ ಕೊರತೆಯಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದಿತು.
- ಯಾವ ಪಕ್ಷಗಳಿಗೂ ಬಹುಮತವಾಗದ ಕಾರಣ ಹನ್ನೆರಡನೆ ಲೋಕಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆದೇಶ ಹೊರಡಿಸಿದರು. ಹಾಗೂ ಮುಂದಿನ ಚುನಾವಣೆಗಳು ನಡೆದು ಫಲಿತಾಂಶ ಪ್ರಕಟವಾಗುವ ವರೆವಿಗೂ ವಾಜಪೇಯಿ ಕಾರ್ಯ ನಿರ್ವಾಹಕ ಪ್ರಧಾನಿಯಾಗಿ ಮುಂದುವರೆಯಲು ಸೂಚಿಸಿದರು.
ಪ್ರಧಾನಮಂತ್ರಿಯಾಗಿ 3ನೇ ಅವಧಿ
- ಕಾರ್ಗಿಲ್ ಯುದ್ಧ ನಡೆದ ಕೆಲವೇ ತಿಂಗಳುಗಳಲ್ಲಿ ನಡೆದ ಹದಿಮೂರನೇ ಲೋಕಸಭಾ ಚುನಾವಣೆಗಳು ನಡೆದು ಮತ್ತೆಯೂ ಬಿ ಜೆ ಪಿ ಪಕ್ಷ ಮುನ್ನಡೆ ಸಾಧಿಸಿತು. ಯುನೈಟೆಡ್ ಫ್ರಂಟ್ ಪಕ್ಷಗಳೂ ಕೂಡ ಮುನ್ನಡೆ ಸಾಧಿಸಿದವು.ಬಿ ಜೆ ಪಿ ನೇತೃತ್ವದ ಎನ್ ಡಿ ಎ 270 ಸೀಟುಗಳನ್ನು ಪಡೆಯಿತು, ಕಾಂಗ್ರೆಸ್ 156 ಸೀಟುಗಳಿಗೆ ತೃಪ್ತಿ ಪಟ್ಟುಕೊಂಡು ವಿರೋಧ ಪಕ್ಷದಲ್ಲಿ ಕೂರಬೇಕಾಯಿತು.
- ಎನ್ ಡಿ ಎ ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸಿ ಬಹುಮತ ಸಾಧಿಸಿತು.ಇದರ ಫಲವಾಗಿ ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು. ಅಕ್ಟೋಬರ್ 1999 ರಲ್ಲಿ ವಾಜಪೇಯಿ ಮೂರನೇ ಬಾರಿಗೆ ಪ್ರಧಾನಿಯಾದರು.ಸಂಪೂರ್ಣ ಐದು ವರ್ಷ ಅವಧಿಯನ್ನು ಪೂರೈಸಿದ ಕಾಂಗ್ರೆಸ್ಸೇತರ ಮೊದಲ ಸರಕಾರವೆಂಬ ಪಾತ್ರಕ್ಕೂ ವಾಜಪೇಯಿ ಸರ್ಕಾರ ಭಾಜನವಾಯಿತು.
ಅಜಾತ ಶತ್ರು ಹೆಜ್ಜೆ ಗುರುತು
1951 – ಭಾರತೀಯ ಜನ ಸಂಘ್ ಪಕ್ಷದ ಸಂಸ್ಥಾಪನೆ
1957 – ಎರಡನೇ ಲೋಕಸಭೆಗೆ ಚುನಾಯಿತರಾಗಿದ್ದು
1957-77 – ಸಂಸತ್ ನಲ್ಲಿ ಭಾರತೀಯ ಜನಸಂಘ್ ಪಕ್ಷದ ನಾಯಕನಾಗಿದ್ದು
1962 – ರಾಜ್ಯ ಸಭೆಯ ಸದಸ್ಯರಾಗಿದ್ದು
1966 – 67 – ಸರ್ಕಾರಿ ಖಾತ್ರಿ ಸಮಿತಿಯ ಛೇರ್ಮನ್
1967 – ನಾಲ್ಕನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು
1967-70 – ಸಾರ್ವಜನಿಕ ಖಾತೆ ಸಮಿತಿಗೆ ಛೇರ್ಮನ್
1968-73 – ಭಾರತೀಯ ಜನಸಂಘ್ ಪಕ್ಷದ ಅಧ್ಯಕ್ಷರಾಗಿ
1971 – ಐದನೇ ಲೋಕಸಭೆಗೆ ಮರುಚುನಾಯಿತರಾಗಿದ್ದು
1977 – ಆರನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು
1977 – 79 – ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿ
1977 – 80 – ಜನತಾ ಪಕ್ಷದ ಸಂಸ್ಥಾಪಕ ಸದಸ್ಯರಾಗಿ
1980 – ಏಳನೇ ಲೋಕಸಭೆಗೆ ಮರುಚುನಾಯಿತರಾಗಿದ್ದು
1980-86 – ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ
1980-84, 1986 ಹಾಗು 1993 – 96 – ಸಂಸತ್ ನಲ್ಲಿ ಬಿ ಜೆ ಪಿ ನಾಯಕ ರಾಗಿ
1986 – ರಾಜ್ಯಸಭಾ ಸದಸ್ಯರಾಗಿ
1988 – 90 – ಗೃಹ ಸಮಿತಿ ಸದಸ್ಯರಾಗಿ ಹಾಗು ವ್ಯಾಪಾರ ವ್ಯವಹಾರ ಸಲಹಾ ಸಮಿತಿಯ ಸದಸ್ಯರಾಗಿ
1991 – ಹತ್ತನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು
1991-93 – ಸಾರ್ವಜನಿಕ ಖಾತೆ ಸಮಿತಿಯ ಛೇರ್ಮನ್
1993-96 – ವಿದೇಶಾಂಗ ವ್ಯವಹಾರಗಳ ಸಮಿತಿ ಛೇರ್ಮನ್ ಹಾಗು ಲೋಕಸಭಾ ವಿಋಒಶ ಪಕ್ಷದ ನಾಯಕ
1996- ಹನ್ನೊಂದನೇ ಲೋಕಸಭೆಗೆ ಮರುಚುನಾಯಿತ
16 ಮೇ 1996 – 31 ಮೇ 1996 – ಭಾರತದ ಪ್ರಧಾನ ಮಂತ್ರಿಯಾಗಿ
1996-97 – ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ
1997-98 – ವಿದೇಶಾಂಗ ವ್ಯವಹಾರಗಳ ಸಮಿತಿ ಛೇರ್ಮನ್
1998 – ಹನ್ನೆರಡನೆ ಲೋಕಸಭೆಗೆ ಮರುಚುನಾಯಿತರಾಗಿದ್ದು
1998-99 – ಭಾರತದ ಪ್ರಧಾನ ಮಂತ್ರಿಗಳು, ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರು ಹಾಗು ಹಂಚಿಕೆಯಾಗದೆ ಉಳಿಕೆಯಾದ ಖಾತೆಗಳ ಸಚಿವರು
1999 – ಹದಿಮೂರನೇ ಲೋಕಸಭೆಗೆ ಮರುಚುನಾಯಿತರಾಗಿದ್ದು
13 ಅಕ್ಟೋಬರ್ 1999 ರಿಂದ 13 ಮೇ 2004 ರವರೆಗೆ – ಭಾರತದ ಪ್ರಧಾನ ಮಂತ್ರಿಗಳಾಗಿ
2004 – ಹದಿನಾಲ್ಕನೇ ಲೋಕಸಭೆಗೆ ಮರುಚುನಾಯಿತರಾಗಿದ್ದು
2005 – ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಣೆ
ಪ್ರಶಸ್ತಿಗಳು
1992 ರಲ್ಲಿ, ಪದ್ಮ ವಿಭೂಷಣ.
1994 ರಲ್ಲಿ, ಲೋಕಮಾನ್ಯ ತಿಲಕ್ ಪ್ರಶಸ್ತಿ.
1994 ರಲ್ಲಿ, ಉತ್ತಮ ರಾಜಕೀಯ ಪಟು ಗೌರವ.
1994 ರಲ್ಲಿ, ಪಂಡಿತ್ ಗೋವಿಂದ್ ವಲ್ಲಭ್ ಪಂತ್ ಪ್ರಶಸ್ತಿ.
2015 ರಲ್ಲಿ ಭಾರತ ರತ್ನ ಪ್ರಶಸ್ತಿ.
2015 ರಲ್ಲಿ, ಬಾಂಗ್ಲಾ ವಿಮೋಚನಾ ಯುದ್ಧ ಪ್ರಶಸ್ತಿ.