ರಿಸಪ್ಷನಿಸ್ಟ್ ಆಗಿದ್ದ ಶೃಂಗೇರಿ ಹುಡ್ಗ ಆ್ಯಂಕರ್ ಆಗಿದ್ದು ಹೇಗೆ…?

Date:

ಮಲೆನಾಡ ಸಿರಿ ಶೃಂಗೇರಿಯ ಮಡಿಲಿನಲ್ಲಿ ಹುಟ್ಟಿ, ಬೆಳೆದ ಇವರ ಕನಸೇ ಬೇರೆ…! ಕೆಲಸದ ಅನಿವಾರ್ಯತೆ ಬದುಕಿನ ದಿಕ್ಕನ್ನು ಬದಲಾಯಿಸಿ ಮಾಧ್ಯಮ ಸಮುದ್ರಕ್ಕೆ ನೂಕಿತು….! ಮಾಧ್ಯಮ ಕ್ಷೇತ್ರದ ಸಣ್ಣಪರಿಚಯವೂ ಇಲ್ಲದೆ ಧುಮುಕಿದರು. ಯಾವ ವಿಭಾಗದಲ್ಲೂ ಕೆಲಸ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಇವರನ್ನು ಒಳ್ಳೆಯ ಪತ್ರಕರ್ತನನ್ನಾಗಿ ರೂಪಿಸಿತು…! ಒಂದು ಕಾಲದಲ್ಲಿ ಸಣ್ಣ ಅವಕಾಶಕ್ಕೆ ಕಾದಿದ್ದ ಇವರನ್ನೀಗ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ…!

ಮಾಧ್ಯಮ ಕ್ಷೇತ್ರದಲ್ಲಿ ಚಿರಪರಿಚಿತರಾಗಿರೋ ಯುವಪತ್ರಕರ್ತರ/ ನಿರೂಪಕರ ಸಾಲಿನಲ್ಲಿ ಕಂಡುಬರುವ ಹೆಸರಿದು, ‘ಅವಿನಾಶ್ ಯುವನ್’.


ಶೃಂಗೇರಿ ಬಳಿಯ ಜಯಪುರದಿಂದ (ಕೊಪ್ಪ ತಾಲೂಕು ಜಯಪುರ) ಐದಾರು ಕಿಮೀ ದೂರದ ಕುಗ್ರಾಮ ಅಗಳಮನೆ. ಇಲ್ಲಿನ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಹುಟ್ಟಿ-ಬೆಳೆದ ಅವಿನಾಶ್ ಯುವನ್ ಜೀವನದುದ್ದಕ್ಕೂ ಸವಾಲುಗಳಿಗೆ ಎದೆಯೊಡ್ಡಿ ಬೆಳೆದವರು, ಬೆಳೆಯುತ್ತಿರುವವರು. ಅಂದುಕೊಂಡಿದ್ದು ಆಗಲಿಲ್ಲ ಎಂಬ ನಿರಾಸೆ ಇವರಲಿಲ್ಲ, ಹುಡುಕಿಕೊಂಡು ಬಂದ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗಾದರೂ ಗುರುತಿಸಿಕೊಂಡಿದ್ದೀನಿ ಎಂಬ ತೃಪ್ತಿ ಇವರದ್ದು.


ಯುವನ್ ಅವರ ತಂದೆ ರಘು ಸುವರ್ಣ, ತಾಯಿ ಸರೋಜ, ಪತ್ನಿ ಶ್ರುತಿ, ಮಗಳು ಅವಿಷ್ಕಾ. ಅಗಳಮನೆಯಲ್ಲಿ ಶಾಲೆ ಇತ್ತು. ಆದರೆ, ಕಷ್ಟದಲ್ಲೂ ಮಗನನ್ನು ಒಳ್ಳೆಯ ಶಾಲೆಗೆ ಸೇರಿಸಿ ಚೆನ್ನಾಗಿ ಓದಿಸಬೇಕು ಎಂಬ ಆಸೆ ತಂದೆಯದ್ದು. ಆದ್ದರಿಂದ ಜಯಪುರ ಶಾಲೆಗೆ ಸೇರಿಸಿದ್ರು. ಬಸ್ ಸಂಪರ್ಕ ಇಲ್ಲದೇ ಇದ್ದಿದ್ದರಿಂದ ನಾಲ್ಕೈದು ಕಿ.ಮೀ ನಡೆದುಕೊಂಡೇ ಹೋಗಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ನಂತರ ಬಾಳೆಹೊನ್ನೂರಿನಲ್ಲಿ ಪ್ರೌಢಶಿಕ್ಷಣ ಮುಗಿಯಿತು. ಅದಾದ ಮೇಲೆ ಶೃಂಗೇರಿಯ ಪ್ರತಿಷ್ಠಿತ ಜೆಸಿಬಿಎಂ ಕಾಲೇಜಿನಲ್ಲಿ ಪಿಯುಸಿ ಮಾಡಿದ್ರು.


ಇನ್ನೊಂದು ವಿಷ್ಯವನ್ನು ಹೇಳಲೇ ಬೇಕು ಇವರ ಮನೆಗೆ ವಿದ್ಯುತ್ ಸಂಪರ್ಕ ಸಿಕ್ಕಿದ್ದು ಇವರು ಸೆಕೆಂಡ್ ಈಯರ್ ಪಿಯುಸಿಯಲ್ಲಿರುವಾಗ. ಅಲ್ಲಿಯವರೆಗೂ ಸೀಮೆಎಣ್ಣೆ ಬುಡ್ಡಿಯಲ್ಲೇ ಓದು-ಬರಹ. ಆನಿಮೇಟರ್ ಆಗಬೇಕು ಎಂಬುದು ಯುವನ್ ಕನಸು. ಹಾಗಾಗಿ ಪಿಯುಸಿ ಮುಗಿಯುತ್ತಿದ್ದಂತೆ ಆನಿಮೇಷನ್ ಕೋರ್ಸ್ ಮಾಡಲು ಬೆಂಗಳೂರಿಗೆ ಬಂದ್ರು. ಆನಿಮೇಷನ್ ಕೋರ್ಸ್‍ಗೆ ಹಣದ ಅವಶ್ಯಕತೆ ತುಂಬಾ ಇದ್ದಿದ್ದರಿಂದ ಗಾಂಧಿನಗರದ ಮೌರ್ಯ ಹೋಟೆಲ್ ನಲ್ಲಿ ರಿಸಪ್ಷನಿಸ್ಟ್ ಆಗಿ ಸೇರಿದ್ರು. ರಾತ್ರಿ ಕೆಲಸ ಬೆಳಗ್ಗೆ ಕಾಲೇಜು…!


ಹೋಟೆಲ್‍ನಲ್ಲಿ ಟಿವಿ ನೋಡ್ತಾ ಇರುವಾಗ ಟಿವಿ9ನಲ್ಲಿ ರೆಹಮಾನ್ ಹಾಸನ್ ಅವರನ್ನು ನೋಡಿದಾಗ, ಎಂಥಾ ಮಾತಾಡ್ತಾರೆ, ಲೈಫ್ ಅಂದ್ರೆ ಆ್ಯಂಕರ್ ಗಳದ್ದು ಎಂದು ಅನಿಸ್ತಾ ಇತ್ತಂತೆ. ಮುಂದೊಂದು ದಿನ ರೆಹಮಾನ್ ಅವರ ಪರಿಚಯವಾಗಿದ್ದು, ಇತ್ತೀಚೆಗೆ ರೆಹಮಾನ್ ಅವರು ವಿಶ್ ಮಾಡಿದ್ದು ಸವಿಸವಿ ನೆನಪು.


ಆನಿಮೇಷನ್ ಕೋರ್ಸ್ ಕಂಪ್ಲೀಟ್ ಆಗಿ ಕೆಲಸ ಹುಡುಕುತ್ತಿದ್ದ ಸಂದರ್ಭವದು. ಆಗ ಸುವರ್ಣ ಚಾನಲ್ ನಲ್ಲಿದ್ದ ಹಮೀದ್ ಪಾಳ್ಯ ಅವರು ಮೌರ್ಯ ಹೋಟೆಲ್ ಗೆ ಬಂದಿದ್ದರು. ಹೋಟೆಲ್ ಮ್ಯಾನೇಜರ್ ಹಮೀದ್ ಪಾಳ್ಯ ಅವರಿಗೆ ಅವಿನಾಶ್ ಯುವನ್ ಅವರ ಪರಿಚಯ ಮಾಡಿಕೊಟ್ರು. ಸರ್ ಗ್ರಾಫಿಕ್ ಡಿಸೈನ್ ಮಾಡ್ತೀನಿ. ಕೆಲಸ ಇದ್ಯಾ ಅಂತ ಅವಿನಾಶ್. ವೀಡಿಯೋ ಎಡಿಟಿಂಗ್ ಮಾಡ್ತೀಯಾ ಅಂದ್ರು ಹಮೀದ್ ಪಾಳ್ಯ. ಕೆಲಸದ ಅವಶ್ಯಕತೆ ಇದ್ದಿದ್ದರಿಂದ ಆ ಕ್ಷಣಕ್ಕೆ ‘ಹ ಬರುತ್ತೆ ಸರ್’ ಎಂದು ಸುಳ್ಳು ಹೇಳಿದ್ರು ಅವಿನಾಶ್. ಮರುದಿನ ಸುವರ್ಣ ಆಫೀಸ್ ಗೆ ಹೋದ್ರು. ಈಗ ಸುವರ್ಣ ನ್ಯೂಸಿನಲ್ಲಿರುವ ಪತ್ರಕರ್ತ ಮನೋಹರ್ ಅವರು ಅಂದು ಸುವರ್ಣದಲ್ಲಿದ್ದರು. ಗ್ರಾಫಿಕ್ಸ್ ಮಾಡ್ತೀನಿ ಆದ್ರೆ, ವೀಡಿಯೋ ಎಡಿಟಿಂಗ್ ಬರಲ್ಲ ಸರ್ ಅಂತ ಅವಿನಾಶ್ ಅವರಲ್ಲಿ ಹೇಳಿಕೊಂಡ್ರು.


ಸರಿ, ಹೆದರಬೇಡ ನಾನು ಹೇಳಿಕೊಡ್ತೀನಿ ಅಂತ ಹೇಳಿದ್ರು. ಆಗ ಎಚ್.ರ್ ರಂಗನಾಥ್ ಅವರು ಸುವರ್ಣ ಚಾನಲ್‍ನ ಮುಖ್ಯಸ್ಥರಾಗಿದ್ರು. ‘ನಾಳೆ ರಂಗನಾಥ್ ಸರ್ ಇಂಟರ್ ವ್ಯೂ ಮಾಡ್ತಾರೆ. ಬಾ’ ಎಂದು ಮನೋಹರ್ ಅವರು ಹೇಳಿದ್ರು. ರಂಗನಾಥ್ ಸರ್ ಇಂಟರ್ ವ್ಯೂ ಮಾಡೋದು ಅಂತಾದ್ರೆ ಸಾಮಾನ್ಯವಾಗಿ ಎಲ್ರಿಗೂ ಆಗುವ ಭಯ ಯುವನ್ ಅವರಿಗೂ ಆಯ್ತು. ಇಂಟರ್ ವ್ಯೂ ಫೇಸ್ ಮಾಡೋದು ಹೇಗೆ ಅಂತ ಗೂಗಲ್ ನಲ್ಲಿ ಓದಿಕೊಂಡ್ರು.


ಮರುದಿನ ರಂಗನಾಥ್ ಸರ್ ಅವರ ಮುಂದೆ ಹಾಜರಾದ್ರು. ಆಗಿನ್ನೂ ತುಂಬಾ ಚಿಕ್ಕ ಹುಡುಗ ಆಗಿದ್ದ ಯುವನ್ ಅವರನ್ನು ನೋಡಿದ ರಂಗನಾಥ್ ಅವ್ರು ‘ನೀನಿನ್ನೂ ಚಿಕ್ಕಹುಡುಗ. ಇಷ್ಟುಬೇಗ ಇಲ್ಲೇನು ಕಡಿದು ಕಟ್ಟೆ ಹಾಕೋಕೆ ಬಂದಿ’ ಅಂದ್ರು. ಇಲ್ಲ ಸರ್, ಕೆಲಸ ಮಾಡೋ ಆಸಕ್ತಿ ಇದೆ ಅನ್ನೋ ಉತ್ತರ ಯುವನ್ ಅವರದ್ದಾಗಿತ್ತು. ಮನೋಹರ್ ಅವರನ್ನು ಕರೆದು, ಈ ಹುಡುಗ ಕೆಲಸ ಮಾಡ್ತಾನಂತೆ ಮಾಡಿಸ್ರಿ ಅಂತ ರಂಗನಾಥ್ ಅವ್ರು ಗ್ರೀನ್ ಸಿಗ್ನಲ್ ಕೊಟ್ರು. ಹೀಗೆ ಮೀಡಿಯಾದಲ್ಲಿ ಕೆಲಸ ಮಾಡುವ ‘ಸುವರ್ಣ’ ಅವಕಾಶ ಅವಿನಾಶ್ ಅವರದ್ದಾಯ್ತು.


2011ರಲ್ಲಿ ವೀಡಿಯೋ ಎಡಿಟರ್ ಆಗಿ ಸುವರ್ಣ ಚಾನಲ್ ಸೇರಿದ ಅವಿನಾಶ್ ನಾನು ಆ್ಯಂಕರ್ ಆಗ್ತೀನಿ ಅಂತ ಕನಸು ಮನಸ್ಸಿನಲ್ಲೂ ಎಣಿಸಿರ್ಲಿಲ್ಲ. ಅವತ್ತೊಂದು ದಿನ ಒಂದು ಪ್ಯಾಕೇಜಿಗೆ ವಾಯ್ಸ್ ವೋವರ್ ಕೊಡಬೇಕಿದ್ದ ನಿರೂಪಕರೊಬ್ಬರು ಮರೆತು ಮನೆಗೆ ಹೋಗಿದ್ದರು. ಆ ವೇಳೆಯಲ್ಲಿ ಬೇರೆ ನಿರೂಪಕರು ಕೂಡ ಇರ್ಲಿಲ್ಲ. ಇದು ಅವಿನಾಶ್ ಪಾಲಿಗೆ ಒದಗಿಬಂದ ಶುಭಗಳಿಗೆ…! ಪತ್ರಕರ್ತ ಗುರುಪ್ರಸಾದ್ (ಇಂದು ಟಿವಿ5ನಲ್ಲಿದ್ದಾರೆ) ಅವಿನಾಶ್ ಗೆ ನೀನೇ ವಾಯ್ಸ್ ವೋವರ್ ಕೊಡು ಅಂದ್ರು…! ಅವಿನಾಶ್ ಆಗಲ್ಲ ಅಂದ್ರೂ ಕೇಳದೇ ಅವಿನಾಶ್ ಅವರಿಂದಲೇ ವಾಯ್ಸ್ ವೋವರ್ ಕೊಡಿಸಿಬಿಟ್ರು, ಮರುದಿನ ಪ್ಯಾಕೇಜ್ ಪ್ರಸಾರವಾಯ್ತು. ಅದನ್ನು ಗಮನಿಸಿದ ಪತ್ರಕರ್ತರ ಲಿಂಗರಾಜ್ ಅವರು, ‘ನೀನು ದಿನಕ್ಕೊಂದು ಪ್ಯಾಕೇಜ್ ಗೆ ವಾಯ್ಸ್ ವೋವರ್ ಕೊಡುಬೇಕು’ ಅಂದ್ರು…! ನಂತರ ವಾಯ್ಸ್ ವೋವರ್ ಕೊಡ್ತೀಯ…ಆ್ಯಂಕರಿಂಗ್ ಕೂಡ ಮಾಡಬಹುದು. ಮಾಡು ಅಂತ ಪ್ರೋತ್ಸಾಹ ನೀಡಿದ್ರು ಗುರುಪ್ರಸಾದ್.


ಹಮೀದ್ ಪಾಳ್ಯ, ಜಯಪ್ರಕಾಶ್ ಶೆಟ್ಟಿ, ಗೌರೀಶ್ ಅಕ್ಕಿ, ಅಜಿತ್ ಹನುಮಕ್ಕನವರ್ ಮೊದಲಾದವರು ಆ್ಯಂಕರಿಂಗ್, ಡಿಸ್ಕಷನ್ ಮಾಡ್ತಿದ್ದುದನ್ನು ಸ್ಟೂಡಿಯೋದಲ್ಲಿ ಒಂದು ಮೂಲೆಯಲ್ಲಿ ಕುಳಿತು ಗಮನಿಸುತ್ತಾ ನಿರೂಪಣೆ ಪಾಠ ಕಲಿತರು. 2011ರಿಂದ 2013ರವರೆಗೆ ಸುವರ್ಣ ಚಾನಲ್ ನಲ್ಲಿ ಅವಿನಾಶ್ ಕೆಲಸ ಮಾಡಿದ್ರು.


ಬಳಿಕ ರಾಜ್ ನ್ಯೂಸ್ ಚುಕ್ಕಾಣಿ ಹಿಡಿದ ಹಮೀದ್ ಪಾಳ್ಯ ಅವರು ಅವಿನಾಶ್ ಅವರನ್ನು ತಮ್ಮ ಜೊತೆಗೆ ಸೇರಿಸಿಕೊಂಡ್ರು. ಇಲ್ಲಿಂದ ನಿರೂಪಕನಾಗಿ ಅಂಬೆಗಾಲು ಇಡಲಾರಂಭಿದ್ರು ಅವಿನಾಶ್ ಯುವನ್. ಸ್ಕ್ರಿಪ್ಟ್ ಬರೆಯೋದು, ಸಣ್ಣಪುಟ್ಟ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ರು. ಪ್ರೋಗ್ರಾಂ ಪ್ರಡ್ಯೂಸರ್ ಕಮ್ ಆಗಿ, ವಾಯ್ಸ್ ವೋವರ್ ಕೊಡೋರಾಗಿ, ನಿರೂಪಕರಾಗಿಯೂ ರಾಜ್ ನಲ್ಲಿ ಕೆಲಸ ಮಾಡಿದ್ರು. 1 ವರ್ಷದ ನಂತರ ಬಿಟಿವಿಯಿಂದ ಅವಕಾಶ ಸಿಕ್ತು. ರಾಜ್ ನ್ಯೂಸ್ ನಲ್ಲಿ ನಿರ್ವಹಿಸಿದ ಕೆಲಸಗಳನ್ನು ಬಿಟಿವಿಯಲ್ಲೂ ನಿರ್ವಹಿಸ್ತಿದ್ರು.


ಒಂದು ದಿನ ಯಾರೋ ‘ಒಬ್ಬ’ ವ್ಯಕ್ತಿ ನೀನು ಇಲ್ಲಿ ‘ಆ್ಯಂಕರ್’ ಅಂತ ಕನ್ಫರ್ಮ್ ಆಗಿಲ್ಲ ನೀನಿನ್ನೂ ‘ವೀಡಿಯೋ ಎಡಿಟರ್’..ನಿನಗೆ ನಿರೂಪಕರ ಬಳಿ ಏನು ಕೆಲಸ ಎಂದು ಅವಮಾನ ಆಗುವ ರೀತಿಯಲ್ಲಿ ಮಾತಾಡಿದ್ರು. ಆ ವ್ಯಕ್ತಿ ಯಾವ ಒತ್ತಡದಲ್ಲಿದ್ದರೋ,ಏನೋ ಗೊತ್ತಿಲ್ಲ…! ಆದ್ರೆ, ಅದು ಅವಿನಾಶ್ ಮನಸ್ಸನ್ನು ಗಾಯಗೊಳಿಸಿತು..ನಾನು ವಾಪಸ್ ಬೆಂಗಳೂರಿಗೆ ಕಾಲಿಟ್ಟರೆ ಪೂರ್ಣ ಪ್ರಮಾಣದ ನ್ಯೂಸ್ ರೀಡರ್, ನಿರೂಪಕನಾಗಿಯೇ ಅಂತ ನಿರ್ಧರಿಸಿ ಹುಟ್ಟೂರಿನ ಕಡೆಗೆ ನಡೆದ್ರು..


ನಾಲ್ಕೈದು ತಿಂಗಳು ಬಿಡದೆ ನಿರೂಪಣೆಯ ಬಗ್ಗೆ ಅಭ್ಯಾಸ ನಡೆಸಿದ್ರು..ನಂತರ ಒಂದು ದಿನ ಪತ್ರಕರ್ತೆ, ನಿರೂಪಕಿ ಕ್ಷಮಾ ಭಾರಧ್ವಜ್ (ಇಂದು ಪಬ್ಲಿಕ್ ಟಿವಿಯಲ್ಲಿದ್ದಾರೆ) ಕಸ್ತೂರಿ ಚಾನಲ್ ನಲ್ಲಿ ವೇಕೆನ್ಸಿ ಇದೆ, ಟ್ರೈಮಾಡಿ ಅಂತ ಅವಿನಾಶ್ ಗೆ ಹೇಳಿದ್ರು. ಮೀಡಿಯಾದಲ್ಲಿ ತನ್ನ ಬೆಸ್ಟ್ ಫ್ರೆಂಡ್ ಹಾಗೂ ಗೈಡ್ ಆಗಿರುವ ಕ್ಷಮಾ ಅವರ ಸಲಹೆಯಂತೆ ಕಸ್ತೂರಿ ಚಾನಲ್ ಮೂಲಕ 2014ರ ಕೊನೆಯಲ್ಲಿ ಮಾಧ್ಯಮಕ್ಕೆ ನಿರೂಪಕರಾಗಿ ರೀ ಎಂಟ್ರಿ ಕೊಟ್ಟರು. ಕ್ರೀಡಾ ವಿಭಾಗದ ಮುಖ್ಯಸ್ಥರಾಗಿ ನಿರೂಪಕರಾಗಿ ಹೆಚ್ಚುಕಡಿಮೆ 2 ವರ್ಷ ಕಸ್ತೂರಿಯಲ್ಲಿ ಕೆಲಸ ಮಾಡಿದ್ರು. ಇಲ್ಲಿ ರಮಾಕಾಂತ್ ಅವರಿಂದ ಪೊಲಿಟಿಕಲ್ ಡಿಸ್ಕಷನ್ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳನ್ನು ನಡೆಸಿಕೊಡುವ ಸದಾವಕಾಶ ಅವಿನಾಶ್ ಅವರಿಗೆ ಸಿಕ್ಕಿತ್ತು.


ಮನೆಯಲ್ಲಿ ಅಪ್ಪ-ಅಮ್ಮನಿಗೆ ಜಮೀನು ನೋಡ್ಕೊಳ್ಳಕ್ಕೆ ಕಷ್ಟ, ಪುಟ್ಟ ಮಗುವನ್ನು ನೋಡಿಕೊಳ್ಳಲು ಪತ್ನಿಗೆ ಕಷ್ಟ ಎಂಬ ಉದ್ದೇಶದಿಂದ ಮನೆಗೆ ಮರಳಿದ್ರು. ಊರಿನ ಹತ್ತಿರದಲ್ಲೇ ಕೆಲಸ ಮಾಡಲಿ ಎಂಬುದು ತಂದೆ-ತಾಯಿಯ ಆಸೆ. ಅದರಂತೆ ಮಂಗಳೂರಲ್ಲಿ ಹೊಸದಾಗಿ ಆರಂಭವಾದ ‘ಚಾನಲ್-1’ನಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದಾರೆ. ನಿನ್ನೆಯಷ್ಟೇ ರಿಯಲ್ ಸ್ಟಾರ್ ಉಪೇಂದ್ರ ಅವರ ಇಂಟರ್ ವ್ಯೂ ಮಾಡಿದ್ದಾರೆ. ಇದು ಮರೆಯಲಾಗದ ಕ್ಷಣವೆಂದು ಹೇಳಿಕೊಳ್ತಾರೆ ಅವಿನಾಶ್.


ಕೆಲಸ ಮಾಡುವ ಉದ್ದೇಶದಿಂದ ಮೀಡಿಯಾಕ್ಕೆ ಬರಬೇಕು. ಏನಾದ್ರು ಮಾಡ್ಬೇಕು ಎಂಬ ತುಡಿತ ಇರಬೇಕು. ಸುಮ್ಮನೇ ಶೋಆಫ್‍ಗಾಗಿ ಮೀಡಿಯಾಕ್ಕೆ ಬರಬಾರದು ಎನ್ನುವುದು ಅವಿನಾಶ್ ಯುವನ್ ಅಭಿಪ್ರಾಯ. ರಾಜ್ಯಮಟ್ಟದ ನಾನಾ ಚಾನಲ್ ಗಳಿಂದ ಆಫರ್ ಗಳು ಬರುತ್ತಿವೆ. ಆದ್ರೆ ಸದ್ಯ ಊರಿನ ಹತ್ತಿರದಲ್ಲಿರಬೇಕು ಎಂದು ಮಂಗಳೂರಲ್ಲಿದ್ದಾರೆ. ಎಲ್ಲಿ ಎಂಥಾ ಅವಕಾಶ ಸಿಕ್ಕರೂ, ಎಷ್ಟೇ ಸಂಬಳ ಸಿಕ್ಕರು ಮಲೆನಾಡಿನಲ್ಲಿ ಸಿಗೋ ನೆಮ್ಮದಿ ಬೇರೆಲ್ಲೂ ಸಿಗಲ್ಲ. ಮುಂದೊಂದು ದಿನ ಅವಕಾಶ ಸಿಕ್ಕರೆ ಟಿವಿ9ನಲ್ಲಿ ಯಾವುದಾದರೂ ವಿಭಾಗದಲ್ಲಿ ಕೆಲಸ ಮಾಡಬೇಕು..ಸಾಕು ಅನಿಸಿದ ಬಳಿಕ ಪತ್ರಿಕೋದ್ಯಮ ವೃತ್ತಿಗೆ ಗುಡ್ ಬೈ ಹೇಳಿ, ಪೂರ್ಣಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದು ಅವಿನಾಶ್ ಯುವನ್ ಅವರ ಆಸೆ.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...