ಹೆಣ್ಣು ಹುಟ್ಟಿದರೆ ನಿರಾಸೆ ಮಾಡಿಕೊಳ್ಳುವವರೇ ಹೆಚ್ಚು. ಅದರಲ್ಲೂ ಕೆಲ ಹೆತ್ತವರು ಹೆಣ್ಣು ಎಂಬ ಕಾರಣಕ್ಕೆ ಆ ಮಗುವನ್ನು ತೊಟ್ಟಿಗೆ ಬಿಸಾಕಿ ಮನುಷ್ಯತ್ವವನ್ನು ಮರೆಯುತ್ತಾರೆ. ಇಂತಹ ಎಷ್ಟೋ ಘಟನೆಗಳು ನಮ್ಮೆದುರಿಗೇ ಘಟಿಸಿವೆ. ಆದರೆ ಇಲ್ಲೊಂದು ಗ್ರಾಮವಿದೆ. ಅಲ್ಲಿ ಹೆಣ್ಣು ಹುಟ್ಟಿದರೆ ಇಡೀ ಗ್ರಾಮಸ್ಥರೇ ಖುಷಿಯ ಕಡಲಲ್ಲಿ ತೇಲುತ್ತಾರೆ. ಹಬ್ಬದೂಟ ಹಾಕಿಸುತ್ತಾರೆ. ಅಲ್ಲದೇ 111 ಗಿಡ ನೆಟ್ಟು ಖುಷಿಪಡುತ್ತಾರೆ.
ಯೆಸ್.. ರಾಜಸ್ಥಾನದ ಪಿಪ್ಲಂತ್ರಿ ಎಂಬ ಗ್ರಾಮದಲ್ಲಿ ಒಂದು ಹೆಣ್ಣು ಮಗು ಹುಟ್ಟಿದರೆ ಬರೋಬ್ಬರಿ 111 ಗಿಡಗಳನ್ನು ನೆಡುತ್ತಾರೆ. ಅದನ್ನು ಬೆಳೆಸುತ್ತಾರೆ. ಗಿಡ ಬೆಳೆದಂತೆಲ್ಲಾ ಮಗು ಕೂಡಾ ಚೆನ್ನಾಗಿ ಬೆಳೆಯಲಿ ಎಂದು ಆಶಿಸುತ್ತಾರೆ. ಇಲ್ಲಿಯವರೆಗೂ ಈ ಗ್ರಾಮದಲ್ಲಿ 25 ಮಿಲಿಯನ್ ಗೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಅದರಲ್ಲಿ ಬೇವಿನ ಮರ, ಮಾವಿನ ಮರ, ಶೀಶಮ್ ಎಂಬ ಮರಗಳನ್ನು ನೆಡಲಾಗಿದೆ.
ಪಿಪ್ಲಂತ್ರಿ ಗ್ರಾಮಸ್ಥರಿಗೆ ಹೆಣ್ಣಿನ ಮೇಲೆ ಎಷ್ಟೊಂದು ಗೌರವವಿದೆ ಎಂದರೆ ಹೆಣ್ಣು ಮಗು ಹುಟ್ಟಿದ ಕೂಡಲೇ, ಗ್ರಾಮದಲ್ಲೆಲ್ಲಾ ದೇಣಿಗೆ ಸಂಗ್ರಹಿಸಲಾಗುತ್ತದೆ. ಅದು ಬರೋಬ್ಬರಿ 21 ಸಾವಿರ ರೂಪಾಯಿ ಆಗುತ್ತದೆ. ಬಳಿಕ ಮಗುವಿನ ಪೋಷಕರ ಬಳಿ 10.000 ಸಾವಿರ ರೂಪಾಯಿ ಪಡೆಯಲಾಗುತ್ತದೆ. ಹಾಗೆ ಜಮಾವಣೆಯಾದ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲಾಗುತ್ತದೆ. ಆ ಹಣದಿಂದ ಬರುವ ಬಡ್ಡಿಯಲ್ಲೇ ಮಗುವಿನ ಶಿಕ್ಷಣ, ಮದುವೆ ವೆಚ್ಚ ಎಲ್ಲವನ್ನೂ ಭರಿಸಲಾಗುತ್ತದೆ. ಇನ್ನೊಂದು ವಿಶೇಷವೆಂದರೆ ಹೆಣ್ಣು ಹುಟ್ಟಿದ ಕೂಡಲೇ ಪೋಷಕರ ಬಳಿ 20 ವರ್ಷದವರೆಗೂ ಮದುವೆ ಮಾಡುವುದಿಲ್ಲ ಎಂಬ ಕರಾರು ಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಾರೆ..!
ಈ ಗ್ರಾಮದಲ್ಲಿ ಹೆಚ್ಚಾಗಿ ಲೋಳೆಸರವನ್ನು ಬೆಳೆಯಲಾಗುತ್ತದೆ. ಅದಕ್ಕಾಗಿ ಸುಮಾರು 2.5 ಮಿಲಿಯನ್ ಲೋಳೆಸರ ಗಿಡಗಳನ್ನು ನೆಡಲಾಗಿದೆ. ಅದನ್ನು ಮಾರುಕಟ್ಟೆ ಸಾಗಿಸಿ ಲಾಭ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲ ಪ್ರಗತಿಪರ ರೈತರು ಲೋಳೆಸರದ ಜೆಲ್ ಮತ್ತು ಜ್ಯೂಸ್ ಮಾಡಿ ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸುತ್ತಾರೆ. ಆ ಮೂಲಕ ಪರಿಸರ ಮತ್ತು ಹೆಣ್ಣು ಮಗುವಿನ ಪೋಷಣೆ ಮಾಡುತ್ತಿದ್ದಾರೆ. ಎಲ್ಲಾ ಗ್ರಾಮಗಳೂ ಈ ರೀತಿಯಾದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ..?