ಬೆಂಗಳೂರು:- ನಾಳೆಯಿಂದ ಎರಡು ದಿನ ರಾಜಧಾನಿ ಬೆಂಗಳೂರಿನ ಹಲವೆಡೆ ಎರಡು ದಿನ ಸಂಚಾರ ನಿರ್ಬಂಧ ಆಗಲಿದೆ.
ನಗರದಲ್ಲಿ ಆಗಸ್ಟ್ 25 ಮತ್ತು 26 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಪ್ರಯುಕ್ತ ಸಂಚಾರ ನಿರ್ಬಂಧ, ಪರ್ಯಾಯ ರಸ್ತೆಗಳ ವಿವರ, ವಾಹನ ನಿಲುಗಡೆ ಮತ್ತು ನಿಲುಗಡೆ ನಿಷೇಧ ಸಂಬಂಧ ಸಂಚಾರ ಪೊಲೀಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಪ್ರಸಿದ್ಧ ಇಸ್ಕಾನ್ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ. ಹೀಗಾಗಿ ಮಾರ್ಗಗಳಲ್ಲಿ ಭಾರಿ ಸಂಚಾರ ದಟ್ಟಣೆ ಸಾಧ್ಯತೆ ಇದೆ. ಆದ್ದರಿಂದ, ಸಂಚಾರ ಪೊಲೀಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.
ನಗರ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವೆಸ್ಟ್‌ಆಫ್ ಕಾರ್ಡ್ ರಸ್ತೆಯಲ್ಲಿರುವ ಇಸ್ಕಾನ್ ದೇಗುಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಆಗಸ್ಟ್ 25 ಹಾಗೂ 26 ರಂದು ಲಕ್ಷಾಂತರ ಭಕ್ತಾದಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳು ದೇವರ ದರ್ಶನಕ್ಕೆ ಬರುವ ನಿರೀಕ್ಷೆ ಇದೆ. ಹೀಗಾಗಿ ದೇವಾಲಯದ ಸುತ್ತಮುತ್ತಲಿನ ರಸ್ತೆಗಳಲ್ಲಿ ಹೆಚ್ಚಿನ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ಪ್ರಕಟಣೆ ಉಲ್ಲೇಖಿಸಿದೆ.
ಮಾರ್ಗ ಬದಲಾವಣೆ ವಿವರ
ವೆಸ್ಟ್‌ಆಫ್ ಕಾರ್ಡ್ ರಸ್ತೆಯಲ್ಲಿ ಸೋಪ್ ಫ್ಯಾಕ್ಟರಿ ಜಂಕ್ಷನ್‌ನಿಂದ ವಿಜಯನಗರ, ನಂದಿನಿಲೇಔಟ್, ಮಹಾಲಕ್ಷ್ಮೀ ಲೇಔಟ್ ಕಡೆ ಹೋಗುವಂತಹ ವಾಹನಗಳು ಸೋಪ್ ಫ್ಯಾಕ್ಟರಿ ಜಂಕ್ಷನ್‌ನಲ್ಲಿ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಮುಂದುವರೆದು 10ನೇ ಕ್ರಾಸ್‌ನಲ್ಲಿ ಅಥವಾ ಕೇತಮಾರನಹಳ್ಳಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು 1ನೇ ಬ್ಲಾಕ್ ರಾಜಾಜಿನಗರ ಸಿಗ್ನಲ್‌ನಲ್ಲಿ ಕಾರ್ಡ್ ರಸ್ತೆಗೆ ಸೇರುವುದು.
ವೆಸ್ಟ್‌ಆಫ್ ಕಾರ್ಡ್ ರಸ್ತೆಯಲ್ಲಿ ಸೋಪ್ ಫ್ಯಾಕ್ಟರಿ ಜಂಕ್ಷನ್ ನಿಂದ ಮಹಾಲಕ್ಷ್ಮೀ ಮೆಟ್ರೋ ನಿಲ್ದಾಣದ ವರೆಗೆ ಪಿಕ್ಅಪ್ ಮತ್ತು ಡ್ರಾಪ್ ಮಾಡುವುದನ್ನು ನಿಷೇಧಿಸಲಾಗಿದೆ.
ಇಸ್ಕಾನ್ ದೇವಸ್ಥಾನಕ್ಕೆ ಸಾರ್ವಜನಿಕರನ್ನು ಕರೆತರುವ ಆಟೋ ಕ್ಯಾಬ್ ಚಾಲಕರು ಮತ್ತು ಸಾರ್ವಜನಿಕರು ಮಹಾಲಕ್ಷ್ಮೀ ಮೆಟ್ರೋ ನಿಲ್ದಾಣದಿಂದ ಸೋಪ್ ಫ್ಯಾಕ್ಟರಿ ಕಡೆಗೆ ಹೋಗುವ ರಸ್ತೆಯಲ್ಲಿ ಪಿಕ್ ಅಪ್ ಡ್ರಾಪ್ ಮಾಡಬಹುದಾಗಿದೆ.