ಅಡಿಕೆ ಮರವನ್ನು ಹತ್ತಿ ಔಷಧಿ ಸಿಂಪಡಿಸುವುದು, ಅಡಕೆ ಕೊಯ್ಲು ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಅದು ಸಾಮಾನ್ಯವಾಗಿ ಒಲಿಯದ ಸಾಹಸ ಕಲೆ ಎಂತಲೂ ಹೇಳಬಹುದು…!
ಸಾಮಾನ್ಯವಾಗಿ ಪುರುಷರು ಈ ಕೆಲಸ ಮಾಡುತ್ತಾರೆ. ಆದರೆ, ಇಲ್ಲೊಬ್ಬ ದಿಟ್ಟ ಮಹಿಳೆ ಈ ಕೆಲಸ ಮಾಡುತ್ತಿದ್ದಾರೆ.
ಸುಳ್ಯದ ಜಾಲ್ಸೂರು ಗ್ರಾಮದ ಕೋನಡ್ಕಪದವಿನ ಚಂದ್ರಲೇಖಾ ಎಂಬುವವರೇ ಈ ದಿಟ್ಟ ಮಹಿಳೆ.
ಚಿಕ್ಕವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡಿರುವ ಚಂದ್ರಲೇಖಾ ಅವರು ಮಗಳು ನಿಶ್ಚಿತಾಳ ಜೊತೆ ಜೀವನ ನಡೆಸುತ್ತಿದ್ದಾರೆ. ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡ್ತಾ ಬದುಕು ಕಟ್ಟಿಕೊಂಡಿದ್ದರು.
ಮೂರು ವರ್ಷದ ಹಿಂದೆ ಆಲೆಟ್ಟಿ ನಾಗಪಟ್ಟಣದಲ್ಲಿರುವ ಅಕ್ಕ ರತ್ನಾವತಿ ಮತ್ತು ಬಾವ ಆನಂದ ಗೌಡರ ಅಡಿಕೆ ತೋಟ ಕೊಳೆರೋಗಕ್ಕೆ ತುತ್ತಾಗಿತ್ತು. ಭಾವನಿಗೆ ವಯಸ್ಸಾಗಿದ್ದು , ಅಡಕೆ ಮರ ಏರುವ ಸ್ಥಿತಿಯಲ್ಲಿ ಅವರಿರಲಿಲ್ಲ. ಔಷಧ ಸಿಂಪಡಣೆಗೆ ಯಾರೂ ಸಿಗದೇ ಇರುವಾಗ ದಾರಿಕಾಣದೆ ಚಂದ್ರಲೇಖ ಅಕ್ಕನ ಸಂಸಾರ ತೊಂದರೆಗೆ ಸಿಲುಕಬಾರದೆಂದು ಮರ ಹತ್ತಿ ಔಷಧ ಸಿಂಪಡಣೆ ಮಾಡಿದರು. ಅಲ್ಲಿಂದ ಔಷಧ ಸಿಂಪಡಣೆ ಮುಂದುವರೆಸಿದ್ದಾರೆ. ಮೆಡಿಕಲ್ ಕಾಲೇಜಲ್ಲೂ ಕೆಲಸ ಮಾಡ್ತಿದ್ದಾರೆ. ಕೇವಲ ಪುರುಷರಿಂದ ಮಾತ್ರ ಸಾಧ್ಯ ಎಂಬ ಕೆಲಸವನ್ನು ಮಾಡಿ ತೋರಿಸಿದ ಈಕೆಯ ದಿಟ್ಟತನ ಮೆಚ್ಚಲೇ ಬೇಕು.