ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪುತ್ರನಿಗೆ ಜನ್ಮದಿನದ ಶುಭ ಕೋರಿ ಮನೆಗೆ ಹಿಂತಿರುಗುತ್ತಿದ್ದ ಅಭಿಮಾನಿಯೊಬ್ಬ ಅಪಘಾತದಿಂದ ಮೃತಪಟ್ಟ ಘಟನೆ ತುಮಕೂರು-ಕೊರಟಗೆರೆ ಮುಖ್ಯರಸ್ತೆಯ ಮುಗ್ಗೊಂಡನಹಳ್ಳಿ ಬಳಿ ನಡೆದಿದೆ.
ಮಧುಗಿರಿಯ ಬೆಂಕಿಪುರದ ನಿವಾಸಿ ರಾಕೇಶ್(21) ಮೃತ. ಬೆಂಗಳೂರಿನಿಂದ ಮರುಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಬೈಕ್ ಸವಾರ ಕಾರ್ತಿಕ್ ಗೆ ಗಂಭೀರ ಗಾಯವಾಗಿದೆ. ಆತನನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ರಾಕೇಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದೊಡ್ಡ ಅಭಿಯಾನಿ. ಈತ ತನ್ನ ಸ್ನೇಹಿತ ಕಾರ್ತಿಕ್ ಅವರ ಜೊತೆಯಲ್ಲಿ ಬೈಕ್‍ನಲ್ಲಿ ದರ್ಶನ್ ಪುತ್ರ ವಿನೀಶ್‍ಗೆ ಜನ್ಮದಿನದ ಶುಭ ಹಾರೈಸಲು ಬುಧವಾರ ಬೆಳಗ್ಗೆ ಬೆಂಗಳೂರಿಗೆ ಬಂದಿದ್ದ. ವಿನೀಶ್ ನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿ ಶುಭ ಕೋರಿದ್ದ ರಾಕೇಶ್ ಮತ್ತು ಕಾರ್ತಿಕ್ ಬೈಕ್‍ನಲ್ಲಿ ಗ್ರಾಮಕ್ಕೆ ಮರಳುತ್ತಿದ್ದರು. ಕಾರ್ತಿಕ್ ಬೈಕ್ ಚಲಾಯಿಸುತ್ತಿದ್ದರೆ ರಾಕೇಶ್ ಹಿಂಬದಿಯಲ್ಲಿ ಕುಳಿತಿದ್ದ.
ತುಮಕೂರು-ಕೊರಟಗೆರೆ ಮುಖ್ಯರಸ್ತೆಯ ಮುಗ್ಗೊಂಡನಹಳ್ಳಿ ಬಳಿ ಬೈಕ್ ಬರುತ್ತಿದ್ದಂತೆ, ಕಾರ್ತಿಕ್ ತಳ್ಳೋಗಾಡಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಹಿಂಬದಿಯಲ್ಲಿ ಕುಳಿತ್ತಿದ್ದ ರಾಕೇಶ್ ಬೈಕ್‍ನಿಂದ ಎಗರಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.