ರಾಹುಲ್ ದ್ರಾವಿಡ್ ವಿಶ್ವ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗ. ಭಾರತ ತಂಡದ ಆಪತ್ಭಾಂದವರಾಗಿದ್ದ ದ್ರಾವಿಡ್ ತಂಡ ಸಂಕಷ್ಟದಲ್ಲಿರುವಾಗಲೆಲ್ಲ ಗೋಡೆಯಂತೆ ನಿಂತು ಸೋಲಿನಿಂದ ಪಾರು ಮಾಡುತ್ತಿದ್ದವರು.
ಸಚಿನ್ ಔಟ್ ಆದಾಗ ಅಭಿಮಾನಿಗಳಲ್ಲಿ ಬೇಸರ ಮನೆ ಮಾಡುತ್ತಿತ್ತು. ಆದರೆ, ಪಂದ್ಯ ಕಳೆದು ಕೊಳ್ಳುವ ಆತಂಕ ಇರುತ್ತಿರಲಿಲ್ಲ. ದ್ರಾವಿಡ್ ಇದ್ದಾರೆ ಎಂಬ ಧೈರ್ಯ ಇರುತ್ತಿತ್ತು.
ದ್ರಾವಿಡ್ ತಂಡ ಬೇಕಾಗಿದ್ದನ್ನೆಲ್ಲಾ ಕೊಟ್ಟರು. ಟೆಸ್ಟ್ ಸ್ಪೆಷಲಿಸ್ಟ್ ಎಂದು ಬ್ರಾಂಡ್ ಆಗಿದ್ದ ದ್ರಾವಿಡ್ ಏಕದಿನ ಕ್ರಿಕೆಟ್ ನಲ್ಲಿ ಅತಿವೇಗದ ಅರ್ಧಶತಕ ( 22 ಎಸೆತಗಳಲ್ಲಿ) ಬಾರಿಸಿ ಟೆಸ್ಟ್ , ಏಕದಿನ, ಟಿ20 ಗೂ ಸೈ ಎಂದು ಸಾಭೀತು ಪಡಿಸಿದ್ದರು. ತಂಡಕ್ಕೆ ವಿಕೆಟ್ ಕೀಪರ್ ಬೇಕೆಂದಾಗ ನಾನಿದ್ದೇನೆ ಎಂದು ಆ ಮಹತ್ತರ ಹೊಣೆಯನ್ನೂ ನಿಭಾಯಿಸಿದ್ರು.
ಬ್ಯಾಟಿಂಗ್ ನಲ್ಲಿಯೂ ಅಷ್ಟೇ ಒಪನಿಂಗ್ ಇರಲಿ, ಒನ್ ಡೌನ್, ತ್ರೀಡೌನ್ , ಫೋರ್ತ್ ಡೌನ್, ಫಿಫ್ತ್ ಡೌನ್ ಹೀಗೆ ಯಾವುದೇ ಕ್ರಮಾಂಕವಿರಲಿ ಬ್ಯಾಟ್ ಬೀಸಬಲ್ಲೆ ಎಂದು ತೋರಿಸಿದ್ದರು. ತಂಡಕ್ಕೊಬ್ಬ ನಾಯಕ ಬೇಕೆಂದಾಗ…ಆ ಜವಬ್ದಾರಿಯನ್ನು ವಹಿಸಿಕೊಂಡರು.
ದ್ರಾವಿಡ್ ಅವರೇ ಕ್ರಿಕೆಟ್ ಯೂನಿವರ್ಸಿಟಿ ಇದ್ದಂತೆ. ವಿಶ್ವಕ್ರಿಕೆಟೇ ಇವರ ಆಟಕ್ಕೆ ಮನಸೋತಿದೆ.ಗುಣದಲ್ಲೂ ಅಪರಂಜಿ. ಇಂಥಾ ದ್ರಾವಿಡ್ ಗೆ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವ ಆಸೆ ಈಡೇರಿರಲಿಲ್ಲ. ಟೀಂ ಇಂಡಿಯಾದ ಪರವಾಗಿ 1999, 2003, 2007ರಲ್ಲಿ ವಿಶ್ವಕಪ್ ಆಡಿದ್ದರು ಪ್ರಶಸ್ತಿ ಹಿಡಿದು ಸಂಭ್ರಮಿಸಲು ಸಾಧ್ಯವಾಗಿರಲಿಲ್ಲ. 2003ರಲ್ಲಿ ಭಾರತ ರನ್ನರ್ ಅಪ್ ಆಗಿತ್ತು. 2007ರಲ್ಲಿ ದ್ರಾವಿಡ್ ನಾಯಕತ್ವದಲ್ಲೇ ವಿಶ್ವಕಪ್ ಕಣಕ್ಕಿಳಿದಿದ್ದರೂ ಕನಿಷ್ಠ ಸೆಮಿಫೈನಲ್ ತಲುಪಲೂ ಸಾಧ್ಯವಾಗಿರಲಿಲ್ಲ.
ಕಿರಿಯರ ತಂಡದ ಕೋಚ್ ಆಗಿ 2016ರಲ್ಲಿ ರನ್ನರ್ ಅಪ್ ಆಗಿ ತೃಪ್ತಿ ಪಟ್ಟಿದ್ದರು. ದ್ರಾವಿಡ್ ಕ್ರಿಕೆಟ್ ಜೀವನದಲ್ಲಿ ಮರೀಚಿಕೆ ಆಗಿದ್ದ ವಿಶ್ವಕಪ್ ಅನ್ನು ಈ ಬಾರಿ ಶಿಷ್ಯರು ಸಾಧ್ಯವಾಗಿಸಿದ್ದಾರೆ. ಪೃಥ್ವಿ ಶಾ ಮತ್ತು ತಂಡ ಗುರುವಿಗೆ ವಿಶ್ವಕಪ್ ಉಡುಗೊರೆ ನೀಡಿದೆ.