ಚುನಾವಣಾ ಸಮಯದಲ್ಲಿ ಫೇಸ್ಬುಕ್ ದುರ್ಬಳಕೆ ಆಗುತ್ತಿರುವುದನ್ನು, ತಪ್ಪು ಮಾಹಿತಿಗಳು, ಹಾನಿಕಾರಕ ವಿಷಯಗಳು ಹರುಡುವುದನ್ನುನಿಯಂತ್ರಣ ಮಾಡಲು ಫೇಸ್ಬುಕ್ನ ಮೆನ್ಲೋ ಪಾರ್ಕ್ ಪ್ರಧಾನ ಕಚೇರಿಯಲ್ಲಿ ವಾರ್ ರೂಂನ್ನು ಸ್ಥಾಪಿಸಿದೆ.
ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ಗುರುತಿಸಿ ಅದನ್ನು ತಡೆಯುವ ನಿಟ್ಟಿನಲ್ಲಿ ಸ್ಥಾಪಿತವಾದ ವಾರ್ ರೂಂನಲ್ಲಿ 20 ಮಂದಿ ಸದಾ ಕಾರ್ಯಾನ್ಮುಖರಾಗಿರುತ್ತಾರೆ.
ಕ್ಯಾಲಿಫೋರ್ನಿಯಾದ ಮೆನ್ಲೋಪಾರ್ಕ್ನಲ್ಲಿ ಸ್ಥಾಪಿತವಾದ ಈ ಫೇಸ್ಬುಕ್ ವಾರ್ ರೂಂ ಮುಖ್ಯವಾಗಿ ಯುನೈಟೆಡ್ ಸ್ಟೇಟ್ಸ್ ಹಾಗೂ ಮತ್ತಿತರ ಕಡೆಗಳಲ್ಲಿ ನಡೆಯಲಿರುವ ಚುನಾವಣೆಯ ಮೇಲೆ ಫೇಸ್ಬುಕ್ ಮೂಲಕ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವ ವಿದೇಶಿ ಕುಶಲಮತಿಗಳು ತಪ್ಪು ಮಾಹಿತಿ ಬಿತ್ತರಿಸುವುದರ ವಿರುದ್ಧ ಹೋರಾಡಲಿದೆ.
ವಾರ್ರೂಂನ ಒಳಗೋಡೆಗಳಲ್ಲಿ ಹಲವು ಗಡಿಯಾರಗಳಿದ್ದು, ಅವು ಯುಎಸ್ ಹಾಗೂ ಬ್ರೆಜಿಲ್ನ ವಿವಿಧ ಪ್ರದೇಶಗಳ ಸಮಯವನ್ನು ತೋರಿಸುತ್ತವೆ. ಮ್ಯಾಪ್ ಮತ್ತು ಟಿವಿ ಪರದೆಗಳ ಮೇಲೆ ಸಿಎನ್ಎನ್, ಫಾಕ್ಸ್ ನ್ಯೂಸ್, ಟ್ವಿಟರ್ಗಳು ಕಾಣಿಸುತ್ತವೆ. ಹಾಗೇ ಮತ್ತೊಂದು ಮಾನಿಟರ್ ನೈಜ ಸಮಯದ ಫೇಸ್ಬುಕ್ ಚಟವಟಿಕೆಯ ಗ್ರಾಫ್ ಅನ್ನು ತೋರಿಸುತ್ತಿರುತ್ತದೆ.
2016 ರ ಯುಎಸ್ ಚುನಾವಣೆ ವೇಳೆ ರಷ್ಯಾ ಹಾಗೂ ಮತ್ತಿತರರು ಫೇಸ್ಬುಕ್ನಲ್ಲಿ ಸುಳ್ಳು ಮಾಹಿತಿಗಳನ್ನು ಹಬ್ಬಿಸಿದರೂ ಅದನ್ನು ತಡೆಯುವಲ್ಲಿ ವಿಫಲವಾಗಿತ್ತು. ಹಾಗೇ ನಿಂದನೆಗೆ ಒಳಗಾಗಿತ್ತು. ಅದು ಮತ್ತೆ ಮರುಕಳಿಸದೆ ಇರಲಿ ಎಂಬ ಕಾರಣಕ್ಕೆ ಫೇಸ್ಬುಕ್ ಈಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.