ಕ್ರೀಡಾ ಜೀವನದ ಉತ್ತುಂಗ ಸ್ಥಿತಿಯಲ್ಲಿದ್ದಾಗ ಅರೋಗ್ಯ ಕೈಕೊಟ್ಟರೆ ಕ್ರೀಡಾಪಟುವಿನ ಸ್ಥಿತಿ ಏನಾಗ ಬೇಡ..? ಸಾಮಾನ್ಯರಾದರೆ ಜೀವನವೇ ಮುಗಿಯಿತು, ಇನ್ನು ತನ್ನಿಂದ ಏನು ಸಾಧ್ಯವಿಲ್ಲ ಎಂದು ಹತಾಶರಾಗುತ್ತಾರೆ. ಕೆಲವರು ಮಾತ್ರ ಛಲಬಿಡದ ವಿಕ್ರಮನಂತೆ ಹೋರಾಡಿ ಮರಳಿ ಅಖಾಡಕ್ಕೆ ಇಳಿಯುತ್ತಾರೆ. ಕನ್ನಡಿಗ ಗಿರೀಶ್ ರಕ್ತ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಯ ವಿರುದ್ಧ ಒಂಭತ್ತು ತಿಂಗಳು ಸೆಣಸಾಡಿ ಮತ್ತೆ ಬಾಕ್ಸಿಂಗ್ ಅಂಗಳದಲ್ಲಿ ಮಿಂಚು ಹರಿಸಿದ್ದಾರೆ. ನವದೆಹಲಿಯಲ್ಲಿ ನಡೆದ ನ್ಯಾಷನಲ್ ಫೆಡರೇಷನ್ ಕಪ್ ನಲ್ಲಿ ಚಿನ್ನದ ಪದಕ ಜಯಿಸಿದರು.
ಬೆಂಗಳೂರಿನ ಗಿರೀಶ್ ಆರ್ ಗೌಡ ಬಾಕ್ಸಿಂಗ್ ಅನ್ನೆ ಜೀವನವೆಂದು ನಂಬಿಕೊಂಡವರು. ಕಿಕ್ ಬಾಕ್ಸಿಂಗ್ ಕ್ರೀಡೆಯಲ್ಲಿ ಅನೇಕ ರಾಷ್ಟ್ರೀಯ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಜಯಿಸಿದ್ದರು. ಎಲ್ಲಾ ಬಾಕ್ಸರ್ ಗಳು ರಿಂಗ್ ನೊಳಗಷ್ಟೆ ಹೋರಾಡುತ್ತಾರೆ. ಆದರೆ ಇವರು ಬಾಕ್ಸಿಂಗ್ ರಿಂಗ್ ನ ಜೊತೆಗೆ ರಕ್ತದ ಕ್ಯಾನ್ಸರ್ ವಿರುದ್ಧ ಹೋರಾಡಬೇಕಿತ್ತು. ಬಾಕ್ಸಿಂಗ್ ರಿಂಗ್ ಅನ್ನೇ ಪ್ರಪಂಚವೆಂದು ತಿಳಿದಿದ್ದ ಅವರ ಜೀವನದಲ್ಲಿ ರಕ್ತದ ಕ್ಯಾನ್ಸರ್ ಮಹಾ ಮಾರಿಯಂತೆ ಎರಗಿತು. ಕಳೆದ ಮಾರ್ಚ್ ನಿಂದ ಜೂನ್ ವರೆಗಿನ ಮೂರು ತಿಂಗಳಲ್ಲಿ ಗಿರೀಶ್ ಕ್ಯಾನ್ಸರ್ ವಿರುದ್ಧ ನಡೆಸಿದ ಹೋರಾಟ ಸಾಮಾನ್ಯದ್ದಲ್ಲ. ಕ್ಯಾನ್ಸರ್ ನ ಅಡ್ಡ ಪರಿಣಾಮಗಳಿಂದ ಅಸ್ವಸ್ಥಗೊಂಡ ಅವರು 3 ತಿಂಗಳುಗಳ ಕಾಲ ಬಾಕ್ಸಿಂಗ್ ರಿಂಗ್ ನಿಂದ ದೂರವಿರಬೇಕಾಯಿತು. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಶ್ರಮದಾಯಕವಾದ ಯಾವ ಕೆಲಸಗಳನ್ನು ಮಾಡಬಾರದೆಂದು ಕಟ್ಟುನಿಟ್ಟಾಗಿ ತಿಳಿಸಿದ್ದರು. ಕ್ಯಾನ್ಸರ್ ನಿಂದ ಚೇತರಿಸಿಕೊಂಡು ಧ್ರುತಿಗೆಡದೆ ಗಿರೀಶ್ ದೈನಂದಿನ ಚಟುವಟಿಕೆಗಳಿಗೆ ಮರಳಿದರು. ಎಂದಿನಂತೆ ಅಭ್ಯಾಸದಲ್ಲಿ ತೊಡಗಿದರು.
“ಇದು ನನ್ನ ಮರುಜನ್ಮ ಎನ್ನಬೇಕು, ಕಳೆದ ಒಂಭತ್ತು ತಿಂಗಳಿನಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಿದೆ, ಅದು ನನ್ನ ಮೊದಲ ಹೋರಾಟ ಎಂದು ಭಾವಿಸುತ್ತೇನೆ. ರಾಷ್ಟ್ರೀಯ ಮಟ್ಟದಲ್ಲಿ ಇದು ನನ್ನ ಒಂಭತ್ತನೇ ಪದಕವಾಗಿದೆ. ಕಳೆದ ವರ್ಷ ನಾನು ಅನುಭವಿಸಿದ ನೋವು, ನಿರಾಶೆ, ಕ್ಯಾನ್ಸರ್ ಆಘಾತದಿಂದ ಇದೀಗ ಮುಕ್ತನಾಗಿದ್ದೇನೆ” ಎಂದು ಗಿರೀಶ್ ಕಳೆದ ಒಂಭತ್ತು ತಿಂಗಳಿನ ಹೋರಾಟವನ್ನು ಹಂಚಿಕೊಂಡಿದ್ದಾರೆ.
ಹುಟ್ಟ ಹೋರಾಟಗಾರ 31 ವರ್ಷದ ಗಿರೀಶ್ ನವದೆಹಲಿಯಲ್ಲಿ ನಡೆದ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ 81 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಜಯಿಸಿದ್ದಾರೆ. ಪುಣೆ ರಷ್ಯಾದಲ್ಲಿ ನಡೆದ ಅಂತರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಲ್ಲಿ ಬೆಳ್ಳಿಯ ಪದಕ ಜಯಿಸಿದ್ದಾರೆ. 8 ಬಾರಿ ಕಿಕ್ ಬಾಕ್ಸಿಂಗ್ ನ ನ್ಯಾಷನಲ್ ಚಾಂಪಿಯನ್ ಆಗಿರುವ ಅವರು ನಲವತ್ತಕ್ಕು ಹೆಚ್ಚು ಯುವ ಬಾಕ್ಸರ್ ಗಳಿಗೆ ತರಬೇತಿ ನೀಡುತ್ತಿದ್ದಾರೆ. ಗಿರೀಶ್ ಗರಡಿಯಲ್ಲಿ ಪಳಗಿದ ಅನೇಕರು ಬಾಕ್ಸಿಂಗ್ ನ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.
ಬ್ಲಡ್ ಕ್ಯಾನ್ಸರ್ ಅಂದ್ರೇನೆ ಜನ ಹೌಹಾರುತ್ತಾರೆ. ಅಂತಹದರಲ್ಲಿ ಮಾರಣಾಂತಿಕ ಕಾಯಿಲೆಯನ್ನು ಜಯಿಸಿ ಮತ್ತೆ ಬಾಕ್ಸಿಂಗ್ ಜೀವನದಲ್ಲಿ ಯಶಸ್ಸು ಸಾಧಿಸಿದ ಗಿರೀಶ್ ರವರಿಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು..
-ರಾಜೇಶ್ ಹೆಬ್ಬಾರ್