ಇತ್ತೀಚೆಗಷ್ಟೇ ಏರುತ್ತಿರುವ ಜಾಗತಿಕ ತಾಪಮಾನ ನಿಯಂತ್ರಿಸಲು ಪ್ಯಾರಿಸ್ ನ ಡಿ ಬೊರ್ಗೆಟ್ ನಲ್ಲಿ ಸತತ ಹದಿಮೂರು ದಿನಗಳ ಕಾಲ ಸಂಧಾನ ಶೃಂಗ ಸಭೆ ನಡೆದಿತ್ತು. ಭಾರತ, ಚೀನಾ, ಅಮೆರಿಕಾ ಫ್ರಾನ್ಸ್ ಸೇರಿದಂತೆ 196 ರಾಷ್ಟ್ರಗಳ ಪ್ರತಿನಿಧಿಗಳು ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಹಗಲು ರಾತ್ರಿ ನಡೆಸಿದ ಸಂಧಾನದ ಫಲವಾಗಿ ಎರಡು ಮಹತ್ವದ ಕಾನೂನುಬದ್ಧ ನಿರ್ಣಯಗಳು ಅಂಗೀಕಾರವಾಗಿತ್ತು. ಆ ಮೂಲಕ ಮೂವತ್ತೊಂದು ಪುಟಗಳ ಹವಾಮಾನ ಬದಲಾವಣೆ ಕುರಿತ ಹೊಸ ಜಾಗತಿಕ ಒಪ್ಪಂದಕ್ಕೆ ಮುದ್ರೆ ಬಿದ್ದಂತಾಗಿತ್ತು. ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನ ನಿಜಕ್ಕೂ ಆತಂಕ ಮೂಡಿಸುತ್ತಿದೆ. ಜಗತ್ತುಬಿಡಿ ತೀರಾ ಬೆಂಗಳೂರಿನಂತ ಬೆಂಗಳೂರೇ ಎಂದು ಕಾಣದ ಸುಡು ಬಿಸಿಲಿಗೆ ನರಳುವಂತಾಗಿದೆ. ಒಂದು ಶತಮಾನದ ಹಿಂದಿದ್ದ ವಾತಾವರಣಕ್ಕೂ ಈಗಿನ ವಾತಾವರಣಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ. ಹಸಿರೇ ಹೆಚ್ಚು ಕಾಣುತ್ತಿದ್ದ ಭೂಮಿ, ಬಹುತೇಕ ಹಳದಿ ಬಣ್ಣಕ್ಕೆ ಮಾರ್ಪಾಡಾಗಿದೆ. ಪ್ರಕೃತಿ ಮುನಿದರೇ ಅದರ ಎಫೆಕ್ಟ್ ತಾಳುವುದು ಅಷ್ಟು ಸುಲಭವಲ್ಲ. ಇಡೀ ಮಾನವ ಸಂತತಿಯೇ ಅವನತಿಯಾಗುತ್ತದೆ.
ಶತಮಾನದಿಂದ ಶತಮಾನಕ್ಕೆ, ದಶಕದಿಂದ ದಶಕಕ್ಕೆ, ವರ್ಷದಿಂದ ವರ್ಷಕ್ಕೆ ಜಾಗತಿಕ ತಾಪಮಾನ ಏರುತ್ತಲೇ ಇದೆ. ಜಾಗತಿಕ ತಾಪಮಾನ ಇಳಿಸುವ ಬಗ್ಗೆ ಬಡ ಹಾಗೂ ಶ್ರೀಮಂತ ರಾಷ್ಟ್ರಗಳ ಮಧ್ಯೆ ಮೌನ ಕಲಹಕ್ಕೆ ಕಾರಣವಾಗಿದ್ದ ವಿವಾದ ಇತ್ತೀಚೆಗಷ್ಟೇ ಬಗೆಹರಿದಿತ್ತು. ಅಷ್ಟಕ್ಕೂ ಜಾಗತಿಕ ತಾಪಮಾನಕ್ಕೆ ಕಾರಣ ಮಾನವ ಚಟುವಟಿಕೆಗಳು, ಪಳೆಯುಳಿಕೆ ಇಂಧನಗಳ ದಹಿಸುವಿಕೆ ಅರ್ಥಾತ್ ಹಸಿರುಮನೆ ಅನಿಲ ಉತ್ಪಾದಕಗಳು, ತೀವ್ರ ಬೇಸಾಯ ಮತ್ತು ಮರಕಡಿಯುವಿಕೆ. ಇವು ವಾತಾವರಣದಲ್ಲಿ ಹಸಿರು ಮನೆ ಅನಿಲ ಬಿಡುಗಡೆಗಳನ್ನು ಹೆಚ್ಚಿಸಿ, ಹಸಿರುಮನೆ ಪರಿಣಾಮಗಳನ್ನು ಹೆಚ್ಚಿಸುತ್ತವೆ. ಜಾಗತಿಕ ತಾಪಮಾನ ಹೆಚ್ಚಳವು, ಹಸಿರುಮನೆ ಅನಿಲಗಳ ಬಿಡುಗಡೆಯಿಂದ ಮೇಲ್ಮೈ ತಾಪಮಾನದ ಹೆಚ್ಚಳದೊಂದಿಗೆ ಜೊತೆಗೂಡಿದ್ದು, ಕಾಲಕ್ರಮೇಣ ಜಾಗತಿಕ ವಾತಾವರಣದ ತಾಪಮಾನವನ್ನು ಹೆಚ್ಚಿಸುತ್ತಿದೆ.
ವಾತಾವರಣದ ಬದಲಾವಣೆ ಉಷ್ಣತೆ ಹಾಗೂ ಮಳೆ ಪ್ರಮಾಣಗಳನ್ನು ಕಾಲಕ್ರಮೇಣ ಬದಲಾಗುವುದನ್ನು ಸೂಚಿಸುತ್ತದೆ. ಪಳೆಯುಳಿಕೆ ಇಂಧನವನ್ನು ಉರಿಸುವುದರಿಂದ ಹಾಗೂ ಅದರಿಂದಾಗುವ ಭೂಮಿಯ ಮೇಲ್ಮೈ ತಾಪಮಾನ ಏರುವಿಕೆಯಿಂದ ವಾತಾವರಣದಲ್ಲಿ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್ ಪ್ರಮಾಣ ಶೀಘ್ರವಾಗಿ ಹೆಚ್ಚಾಗುತ್ತಿರುವುದರಿಂದ ಹವಾಮಾನದಲ್ಲಿ ವೈಪರಿತ್ಯ ಉಂಟಾಗುತ್ತಿದೆ. ಜೊತೆಗೆ ಕೃಷಿಯು ಹವಾಗುಣದೊಂದಿಗೆ ತೀವ್ರ ತೆರನಾಗಿ ಪರಸ್ಪರ ಸಂಬಂಧಿತವಾಗಿದೆ. ವಾತಾವರಣದ ಅಂಶಗಳಲ್ಲಿ ಮುಖ್ಯ ಅಂಶವಾದ ಉಷ್ಣಾಂಶ ಅಥವಾ ತಾಪಮಾನವು ಕೃಷಿ ಉತ್ಪಾದನೆಯೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಹವಾಮಾನ ವೈಪರೀತ್ಯದಲ್ಲಿ ಓಜೋನ್ ಪಾತ್ರವೂ ಪ್ರಮುಖವಾಗಿದೆ.
ಹಸಿರುಮನೆ ಅನಿಲಗಳು ಭೂಮಿಯ ಪರಿಸರದಲ್ಲಿದ್ದು ಸೂರ್ಯನಿಂದ ಶಕ್ತಿಯನ್ನು ಪಡೆದುಕೊಂಡು ಭೂಮಿಯ ವಾತಾವರಣದಲ್ಲಿ ನೆಲೆಗೊಳ್ಳುತ್ತವೆ. ಪ್ರಾಕೃತಿಕವಾಗಿ ಕಾಣುವ ಹಸಿರುಮನೆ ಅನಿಲಗಳೆಂದರೆ, ನೀರಿನ ಆವಿ, ಓಜೋನ್, ಇಂಗಾಲದ ಡೈಆಕ್ಸೈಡ್, ಮೀಥೇನ್ ಮತ್ತು ನೈಟ್ರಸ್ ಆಕ್ಸೈಡ್. ಮಾನವನಿಂದ ಉತ್ಪಾದಿತವಾದ ಹಸಿರುಮನೆ ಅನಿಲಗಳ ಬಿಡುಗಡೆ ಬಗ್ಗೆ ಆತಂಕವಿರುವುದಾದರೂ ನೈಸರ್ಗಿಕವಾಗಿ ಬಿಡುಗಡೆಯಾಗುವ ಅನಿಲಗಳಾದರೂ ಕೊನೆಯ ಪಕ್ಷ ಉಪಯುಕ್ತಕರವಾಗಿವೆ. ಅವುಗಳಿಲ್ಲದೆ ಹೋಗಿದ್ದಲ್ಲಿ ಭೂಮಿಯ ಸರಾಸರಿ ತಾಪಮಾನವು ಈಗಿರುವುದಕ್ಕಿಂತ 33 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆಯಾಗಿರುತ್ತಿತ್ತು. ಇದರಿಂದ ಸುಮಾರು 15 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನವುಂಟಾಗಿ ಭೂಮಿಯಲ್ಲಿ ಜೀವಿಗಳು ಬದುಕಿ ಉಳಿಯದಂತಹ ವಾತಾವರಣ ನಿರ್ಮಾಣವಾಗುತ್ತಿತ್ತು.
ದುರಾದೃಷ್ಟವೆಂದ್ರೇ ಭೂಮಿಯಲ್ಲಿ ಪರಿಸರದ ಬಗ್ಗೆ ಕಾಳಜಿವಹಿಸುವಿಕೆಯಲ್ಲಿ ಬಹು ದೊಡ್ಡ ಕೊರತೆ ಕಂಡುಬರುತ್ತಿದೆ. ಭೂಮಿಯ ವಾತಾವರಣದಲ್ಲಿ ನೈಸರ್ಗಿಕ ಅಥವಾ ಉಪಯುಕ್ತಕರ ಹಸಿರುಮನೆ ಅನಿಲಗಳು ಕಂಡುಬರುವಂತೆಯೇ ಮಾನವನಿಂದ ಉತ್ಪಾದಿತವಾಗುವ ಅನಿಲಗಳ ಪ್ರಮಾಣ ಹೆಚ್ಚಾಗುತ್ತಿದ್ದು ಇದರಿಂದ ಜಾಗತಿಕ ತಾಪಮಾನದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ.
ಹಸಿರುಮನೆ ಅನಿಲಗಳಲ್ಲಿ ಬಹಳಷ್ಟು ಪರಿಚಿತವಾದ ಅನಿಲವೆಂದರೆ ಕಾರ್ಬನ್ ಡೈ ಆಕ್ಸೈಡ್. ಇಂಗಾಲದ ಬಿಡುಗಡೆ ಪದವನ್ನು ಬಹಳಷ್ಟು ಮಟ್ಟಿಗೆ ಹಸಿರುಮನೆ ಅನಿಲ ಬಿಡುಗಡೆ ಪದಕ್ಕೆ ಪರ್ಯಾಯವಾಗಿ ಬಳಸುತ್ತಿರುವುದಕ್ಕೆ ಕಾರಣ ಹಸಿರುಮನೆ ಅನಿಲಗಳು ಬಹಪಾಲು ಇಂಗಾಲಮೂಲದವೇ ಆಗಿರುತ್ತವೆ. ಪಳೆಯುಳಿಕೆ ಇಂಧನಗಳು ಮತ್ತು ಇತರ ಸಾವಯವ ಘನವಸ್ತುಗಳನ್ನು ಉರಿಸುವಾಗ ಹಾಗೂ ಕೆಲವು ರಾಸಾಯನಿಕ ಪ್ರತಿಕ್ರಿಯೆಗಳು ನಡೆಯುವಾಗ, ಉದಾಹರಣೆಗೆ ಸಿಮೆಂಟ್ ತಯಾರಿಸುವಾಗ ಇಂಗಾಲದ ಡೈ ಆಕ್ಸೈಡ್ ರೂಪುಗೊಳ್ಳುತ್ತದೆ. ಸಸ್ಯಗಳು ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುವುದರಿಂದಲೂ ಪರಿಸರದಲ್ಲಿ ಇಂಗಾಲದ ಡೈಆಕ್ಸೈಡ್ನ ನಿವಾರಣೆಯಾಗುತ್ತದೆ. ಹಸಿರುಮನೆ ಅನಿಲಗಳಲ್ಲಿ ಬಹುಮುಖ್ಯವಾದ ಏಕೈಕ ಅನಿಲ ಇಂಗಾಲದ ಡೈಆಕ್ಸೈಡ್. ಇದು ಶೇ. 55ರಷ್ಟು ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತದೆ. ಇತರ ಅನಿಲಗಳಲ್ಲಿ ಶೇ. 25ರಷ್ಟು ಕ್ಲೋರೊಫ್ಲೊರೊ ಕಾರ್ಬನ್ಗಳು, ಶೇ.15ರಷ್ಟು ಮಿಥೇನ್ ಹಾಗೂ ಶೆ. 5ರಷ್ಟು ನೈಟ್ರಸ್ ಆಕ್ಸೈಡ್ ಅನಿಲಗಳು ಕಾರಣವಾಗುತ್ತವೆ. ಹಸಿರುಮನೆ ಪರಿಣಾಮದಲ್ಲಿ ಓಜೋನ್ ಅನಿಲದ ಪ್ರಮಾಣ ಎಷ್ಟು ಎಂಬುದನ್ನು ಇನ್ನೂ ಕಂಡುಹಿಡಿಯಬೇಕಾಗಿದೆ.
ಸಾಮಾನ್ಯವಾಗಿ ಮಿಥೇನ್ ಅನಿಲವು ಇಂಗಾಲದಷ್ಟು ಹೆಚ್ಚು ಉತ್ಪಾದನೆಯಾಗುವುದಿಲ್ಲವಾದರೂ ಇದು ಹಸಿರುಮನೆ ಪರಿಣಾಮ ಬೀರುವ ಮುಖ್ಯ ಅನಿಲವಾಗಿದೆ. ಮಿಥೇನ್ ಅನಿಲವು ಪಳೆಯುಳಿಕೆ ಇಂಧನಗಳ ಉತ್ಪಾದನೆ ಮತ್ತು ಸಾಗಾಟದ ಅವಧಿಯಲ್ಲಿ ಬಿಡುಗಡೆಗೊಳ್ಳುತ್ತದೆ. ಈ ಅನಿಲ ಬಿಡುಗಡೆಯಾಗುವ ಇತರ ಪ್ರಮುಖ ಮೂಲಗಳೆಂದರೆ ಜಾನುವಾರು ಸಾಕಣೆ ಮತ್ತು ಇತರ ಕೃಷಿ ಪದ್ಧತಿಗಳ ಹಾಗೂ ಮಣ್ಣಿನ ಗುಂಡಿಗಳಲ್ಲಿ ಶೇಖರಗೊಳ್ಳುವ ಸಾವಯವ ತ್ಯಾಜ್ಯಗಳ ಕೊಳೆತವಸ್ತುಗಳು. ಜಾಗತಿಕ ತಾಪಮಾನ ಹೆಚ್ಚಿಸುವಲ್ಲಿ ಮಿಥೇನ್ ಸಾಮಥ್ರ್ಯವನ್ನು ಶೇಕಡಾ 21 ಎಂದು ಹೇಳಲಾಗಿದ್ದು, ಇದರ ಅರ್ಥ ಮೀಥೇನ್ ಅನಿಲವು ಹಸಿರುಮನೆ ಅನಿಲಗಳಲ್ಲಿ ಇಂಗಾಲಕ್ಕಿಂತ 21 ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿದೆ. ಜಾಗತಿಕ ತಾಪಮಾನ ಏರಿಕೆಯಲ್ಲಿ ಇಂಗಾಲದ ಡೈ ಆಕ್ಸೈಡ್, ಮಿಥೇನ್ನಂತೆ ನೈಟ್ರಸ್ ಆಕ್ಸೈಡ್, ನೀರಿನ ಆವಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾಗೆಯೇ ತಾಪಮಾನವನ್ನು ಕಡಿಮೆಗೊಳಿಸುವುದಕ್ಕೆ ಹಲವು ದಾರಿಗಳಿವೆ. ಅದು ಇಡೀ ವಿಶ್ವದ ಶಪಥವಾದರೇ ಮಾತ್ರ ಸಾಧ್ಯವಾಗುತ್ತದೆ.
ಭೂಗೋಳದ ವಾತಾವರಣದಲ್ಲಿನ ವ್ಯತ್ಯಾಸಗಳು ನೈಸರ್ಗಿಕವಾಗಿ ಉಂಟಾಗಿವೆ. ಕೈಗಾರಿಕಾ ಕ್ರಾಂತಿಯ ಅವಧಿಯಲ್ಲಿ ಕೃಷಿ ಮತ್ತು ಕೈಗಾರಿಕಾ ಪದ್ಧತಿಗಳಲ್ಲಿನ ಬದಲಾವಣೆಗಳನ್ನು ತರುವ ಮೂಲಕ ವಾಯುಗುಣ ಮತ್ತು ಪರಿಸರಗಳಲ್ಲಿ ವ್ಯತ್ಯಾಸಗಳುಂಟಾದವು. ಕೈಗಾರಿಕಾ ಕ್ರಾಂತಿಗೆ ಮೊದಲು ಮಾನವ ಚಟುವಟಿಕೆಗಳು ವಾಯುಗುಣದ ಪರಿಸರದಲ್ಲಿ ಬಹು ಕಡಿಮೆ ಅನಿಲಗಳನ್ನು ಬಿಡುಗಡೆಗೊಳಿಸುತ್ತಿದ್ದವು. ಆದರೆ ಜನಸಂಖ್ಯಾ ಬೆಳವಣಿಗೆಯೊಂದಿಗೆ, ಪಳೆಯುಳಿಕೆ ಇಂಧನ ದಹನ ಹಾಗೂ ಅರಣ್ಯ ವಿನಾಶಗಳ ಮೂಲಕ ವಾಯುಗುಣದಲ್ಲಿನ ಅನಿಲಗಳ ಮಿಶ್ರಣದ ರೂಪವೇ ಬದಲಾಗಿದೆ.
ನಿಜಕ್ಕೂ ಜಾಗತಿಕ ತಾಪಮಾನದ ಹೆಚ್ಚಳವೇ ಈಗ ಪ್ರಸ್ತುತ ಸಮಸ್ಯೆಯಾಗಿದೆ. ಇದರೊಂದಿಗೆ ಹೆಚ್ಚುತ್ತಿರುವ ವಾಯು ಮತ್ತು ಸಮುದ್ರದ ಉಷ್ಣಾಂಶಗಳು, ಹಿಮಪ್ರದೇಶದಲ್ಲಿನ ಮಂಜುಗಡ್ಡೆಗಳ ಕರುಗುವಿಕೆ ಮತ್ತು ಸಮುದ್ರಮಟ್ಟದ ಹೆಚ್ಚಳಗಳು ಹೆಚ್ಚು ಹೆಚ್ಚು ಗಮನಕ್ಕೆ ಬರುತ್ತಿವೆ. ಅದರಲ್ಲೂ ಕಳೆದ ಎರಡು ದಶಕಗಳ ಅವಧಿಯಲ್ಲಿ ಜಾಗತಿಕ ತಾಪಮಾನ ಆತಂಕಕಾರಿಯಾಗಿ ಏರಿಕೆಯಾಗಿದೆ. ಕಳೆದ ನೂರು ವರ್ಷಗಳಲ್ಲಿ ಜಾಗತಿಕ ತಾಪಮಾನವು 0.74 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಳವಾಗಿದೆ. ಜಾಗತಿಕ ಸಮುದ್ರಮಟ್ಟವು 20ನೇ ಶತಮಾನದಲ್ಲಿ 17 ಸೆಂಟಿಮೀಟರ್ನಷ್ಟು ಹೆಚ್ಚಳವಾಗಿರುವುದರಿಂದ ಹಿಮ ಸುರಿಯುವ ಬೆಟ್ಟದ ಪ್ರದೇಶಗಳು ಮತ್ತು ಧ್ರುವ ಪ್ರದೇಶಗಳಿಂದ ಮಂಜುಗಡ್ಡೆಗಳು ಕರಗಿ ನೀರಾಗಿವೆ. ಉಷ್ಣಾಂಶಗಳು ಮತ್ತು ಮಂಜುಗಡ್ಡೆ, ಸಮುದ್ರದ ಲವಣತೆ, ಗಾಳಿ ಬೀಸುವಿಕೆ ಮಾದರಿಗಳು, ಬರಗಾಲ, ಮಳೆ ಬೀಳುವಿಕೆ ಪ್ರಮಾಣ, ಬಿಸಿಗಾಳಿ ಹಾಗೂ ಉಷ್ಣವಲಯಗಳಲ್ಲಿನ ಚಂಡಮಾರುತಗಳ ತೀವ್ರತೆಗಳೂ ಪ್ರಾದೇಶಿಕ ಬದಲಾವಣೆಗಳಾಗಿವೆ.
ಜಾಗತಿಕ ತಾಪಮಾನದಿಂದ ಸಮುದ್ರ ಮಟ್ಟದಲ್ಲಿ ಬದಲಾವಣೆಯಾಗುತ್ತದೆ. ಪ್ರಕೃತಿ ವಿಕೋಪಗಳಾದ ಪ್ರವಾಹ, ನೆರೆ, ಬರಗಾಲ ಮತ್ತು ಸುಂಟರಗಾಳಿಗಳು ಹೆಚ್ಚಾಗುತ್ತದೆ. ಇವುಗಳಿಂದ ಮಾನವ ಜನಾಂಗವೇ ನಿರ್ಮೂಲನೆಯಾಗಬಹುದು. ಹಿಮಾಲಯದ ಮಂಜುಗಡ್ಡೆಗಳು ಕರಗಿ ಹರಿಯುವಿಕೆಯಿಂದ ಕುಡಿಯುವ ನೀರಿನ ಸಂಪನ್ಮೂಲದ ಮೇಲೆ ಉಂಟಾಗಬಹುದಾದ ಅನಾಹುತದಿಂದಾಗಿ ಒಂದು ಶತಕೋಟಿಗೂ ಹೆಚ್ಚು ಜನ ಕುಡಿಯುವ ನೀರಿನ ಕೊರತೆಯನ್ನು ಎದುರಿಸಬೇಕಾಗುತ್ತದೆ. ಏಷ್ಯಾದ ವಿಚಾರಕ್ಕೆ ಬರುವುದಾದರೇ ಮುಸುಕಿನ ಜೋಳ ಮತ್ತು ಗೋಧಿ ಇಳುವರಿಗಳು ಭಾರತದಲ್ಲಿ ಶೇಕಡಾ 5ರಷ್ಟು ಕಡಿಮೆಯಾಗುತ್ತವೆ. ಚೀನಾದಲ್ಲಿ ಭತ್ತದ ಬೆಳೆ ಶೇಕಡಾ 12ರಷ್ಟು ಇಳಿಕೆಯಾಗುತ್ತದೆ. ತೀರಪ್ರದೇಶದ ನೆರೆ ಪ್ರವಾಹಗಳು ಹೆಚ್ಚುತ್ತವೆ. ಋತುಕಾಲಿಕವಾಗಿ ನಡೆಯುವ ನೀರ್ಗಲ್ಲು ಹಿಮದ ಕರುಗುವಿಕೆಯು ಶೇಕಡಾ 15 ರಷ್ಟು ಹೆಚ್ಚಾಗುತ್ತದೆ. ಅಸಲಿಗೆ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ಅರಣ್ಯ, ಸಮುದ್ರ ಮೀನುಗಾರಿಕೆ, ವಾಯು ಮತ್ತು ನೀರಿನ ಸಂಪನ್ಮೂಲಗಳ ಶಿಥಿಲೀಕರಣದಿಂದಾಗಿ ಕೃಷಿ ಉತ್ಪನ್ನದ ಸಾಮಥ್ರ್ಯವೇ ಶಿಥಿಲಗೊಳ್ಳುತ್ತಿದೆ.
ಜಾಗತಿಕ ತಾಪಮಾನದ ಏರಿಕೆ ಇದೇ ರೀತಿ ಮುಂದುವರಿದರೇ ಕೆಲವೇ ದಶಕಗಳಲ್ಲಿ ವಿಶ್ವದಲ್ಲಿ ಧಾನ್ಯದ ಬೆಳೆ ಉತ್ಪಾದನೆಯಲ್ಲಿ ನಷ್ಟ ಉಂಟಾಗಿ 400 ದಶಲಕ್ಷ ಜನರನ್ನು ಹಸಿವೆಯ ಸಮಸ್ಯೆಗೆ ಹಾಗೂ 3 ಶತಕೋಟಿ ಜನರನ್ನು ನೆರೆ ಹಾವಳಿಗೆ ಮತ್ತು ಕುಡಿಯುವ ನೀರಿನ ಕೊರತೆಯ ಸಮಸ್ಯೆಗೆ ಗುರಿಮಾಡುತ್ತದೆ. ವಾಯುಗುಣ ಬದಲಾವಣೆಯಿಂದ ಬೆಳೆ ಉತ್ಪಾದನೆಯಲ್ಲಿ ಉಂಟಾಗುವ ನಷ್ಟಗಳಿಂದಾಗಿ ಅಪೌಷ್ಟಿಕ ಆಹಾರದಿಂದ ದುರ್ಬಲ ಜನರ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗುತ್ತದೆ. ಇದು ಬಡತನ ಮತ್ತು ಆಹಾರ ಸುರಕ್ಷತೆಯ ವಿರುದ್ಧದ ಹೋರಾಟವನ್ನು ಕುಂಠಿತಗೊಳಿಸುತ್ತದೆ. ಒಟ್ಟಿನಲ್ಲಿ ಜಾಗತಿಕ ತಾಪಮಾನದಿಂದ ಭೂಮಿಯೇ ಸರ್ವನಾಶವಾಗುತ್ತದೆ.
- ರಾ.ಚಿಂತನ್
POPULAR STORIES :
ಕ್ಯಾನ್ಸರ್ ಕಾಲನ್ನ ನುಂಗಿತ್ತು..!! ಮುಂದೇನಾಯ್ತು..?
ಅವರಿಬ್ಬರ ಸಾವಿನ ಅಂತರ ಒಂದು ಗಂಟೆ ಮಾತ್ರ..!
ಈ ಬದುಕನ್ನು ಅತಿಭಾವುಕರಾಗಿ ಪ್ರೀತಿಸೋಣ, ಬೇಕಿದ್ದರೆ ಆ ಪ್ರೀತಿಗೆ ಆತ್ಮ ಹಿರಿಹಿರಿ ಹಿಗ್ಗಿ ಹೃದಯವೇ ಒಡೆದುಹೋಗಲಿ.!
ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!
ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..
ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!