ಇವತ್ತು ಒಂದೊಳ್ಳೆ ಸ್ಥಾನದಲ್ಲಿ ಇರೋರನ್ನು ನೋಡಿ, ನಾವು ಇವರಂತೆ ಆಗ್ಬೇಕು ಅಂತ ಅನ್ಕೊತ್ತೀವಿ. ಆ ಮಟ್ಟಕ್ಕೆ ಬೆಳಿಬೇಕೆಂದು ಕನಸು ಕಾಣ್ತೀವಿ. ಆದ್ರೆ, ಅವರು ಆ ಸ್ಥಾನ ತಲುಪಲು ಎಷ್ಟೆಲ್ಲಾ ಕಷ್ಟಪಟ್ಟಿದ್ರು ಅನ್ನೋದು ನಮ್ಮ ಗಮನಕ್ಕೆ ಬಂದಿರಲ್ಲ…! ಸಾಧನೆ ಅನ್ನೋದು ರಾತ್ರಿ ಬೆಳಗಾಗುವುದರಲ್ಲಿ ದೇವರು ಕರುಣಿಸಿದ ವರವಲ್ಲ. ತಪಸ್ಸಿನ ಫಲ…!
ಸುವರ್ಣ ಸುದ್ದಿವಾಹಿನಿಯ ನಿರೂಪಕ ಹರೀಶ್ ಪುತ್ರನ್ ಇಂಥಾ ತಪಸ್ವಿಗಳ ಸಾಲಿಗೆ ಸೇರ್ತಾರೆ. ಇವತ್ತು ಟಿವಿ ಪರದೆ ಮೇಲೆ ಅವರನ್ನು ನೋಡಿ ಖುಷಿಪಡುವವರು, ಅವರಂತೆ ಆಗ್ಬೇಕಂತ ಕನಸು ಕಂಡಿರೋರು ಇದ್ದಾರೆ. ಆದ್ರೆ, ಇವರು ಮೀಡಿಯಾಕ್ಕೆ ಎಂಟ್ರಿಕೊಡೋಕೆ ಕೇವಲ ಒಂದೇ ಒಂದು ಇಂಟರ್ ವ್ಯೂ ಗೆ ಎಷ್ಟೆಲ್ಲಾ ಕಷ್ಟಪಟ್ಟಿದ್ರು ಗೊತ್ತಾ…?
ನೀವು ನಂಬ್ತೀರೋ ಬಿಡ್ತೀರೋ ಹುಟ್ಟೂರು ಕುಂದಾಪುರದಿಂದ ಬೆಂಗಳೂರಿಗೆ ಕನಿಷ್ಠ ತಿಂಗಳಿಗೆ ಒಮ್ಮೆಯಂತೆ ಹೆಚ್ಚು ಕಡಿಮೆ ಎರಡು ವರ್ಷ ಅಲೆದಿದ್ರು. ಇಂಟರ್ ವ್ಯೂ ಅಟೆಂಡ್ ಮಾಡಿ ಫೇಲ್ ಆಗಿದ್ರೆ ಅದೊಂದುತರ. ಬಟ್ ಇವರಿಗೆ ಎರಡು ವರ್ಷ ಇಂಟರ್ ವ್ಯೂ ಅಟೆಂಡ್ ಮಾಡಲೇ ಆಗಿರ್ಲಿಲ್ಲ…! ರಿಸಪ್ಷನ್ ನಿಂದ ಒಳಗಡೆ ಎಡಿಟರ್ ಚೇಂಬರ್ ಗೆ ರೆಸ್ಯೂಮೇ ಪಾಸ್ ಆಗಿರ್ಲಿಲ್ಲ…! ಇವ್ರು ಮೀಡಿಯಾಕ್ಕೆ ಪ್ರವೇಶ ಮಾಡೋ ಕಾಲಘಟ್ಟದಲ್ಲಿ ಇದ್ದುದು ಮೂರು ಮತ್ತೊಂದು ಚಾನಲ್ ಮಾತ್ರ. ಇವುಗಳಲ್ಲಿ ಕೆಲಸಗಿಟ್ಟಿಸಿಕೊಳ್ಳೋದು ಸುಲಭದ ಮಾತಾಗಿರ್ಲಿಲ್ಲ.
ಕುಂದಾಪುರದ ಶೇಖರ್ ಮತ್ತು ಶಾರದ ದಂಪತಿಯ ಪುತ್ರ ಹರೀಶ್ ಪುತ್ರನ್. ಇವರ ಪತ್ನಿ ಸಿನಿಮಾ ಕಲಾವಿದೆ ಶ್ವೇತಾ. ಮುದ್ದಾದ ಮಕ್ಕಳು ಸಂದ್ಯ ಮತ್ತು ಸನ್ವಿತ್. ಹರೀಶ್ ಹಾಗೂ ಶ್ವೇತಾ ಅವರದ್ದು ಲವ್ ಮ್ಯಾರೇಜ್. ಅಪ್ಪ ಬ್ಯಾಂಕ್ ನೌಕರರು, ಮನೆಯಲ್ಲಿ ಜಮೀನು ಕೂಡ ಇತ್ತು. ಯಾವುದಕ್ಕೇನು ಕಡಿಮೆ ಇರ್ಲಿಲ್ಲ. ಬಟ್ ಅದೇನೋ ಚಿಕ್ಕಂದಿನಿಂದಲೂ ಹರೀಶ್ ಸ್ವಾಭಿಮಾನಿ. ಕುಂದಾಪುರದಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮುಗಿಸಿದ್ರು. ಓದಿನ ಮೇಲೆ ಆಸಕ್ತಿ, ಅದಕ್ಕೆ ಪೂರಕವಾದ ವಾತಾವರಣವಿದ್ದರೂ ಹರೀಶ್ ಕಾಲೇಜು ಮೆಟ್ಟಿಲು ಹತ್ತಲಿಲ್ಲ. ದುಡಿಮೆಯ ಜೊತೆ ಜೊತೆಗೆ ವಿದ್ಯಾಭ್ಯಾಸ ಮುಂದುವರೆಸಲು ಮನಸ್ಸು ಮಾಡಿದ್ರು.
ಎಸ್‍ಎಸ್‍ಎಲ್‍ಸಿ ಆದ್ಮೇಲೆ ಶಾಲಾ ಮಕ್ಕಳಿಗೆ ಟ್ಯೂಷನ್ ಮಾಡೋಕೆ ಶುರುಮಾಡಿದ್ರು. ಮಾವನ ಜೊತೆ ಸೇರಿ ಕುಂದಾಪುರದಲ್ಲಿ ಕೋಚಿಂಗ್ ಸೆಂಟರ್ ತೆರೆದ್ರು. ಇಲ್ಲಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೂ ಪಾಠ ಮಾಡಲಾಗ್ತಿತ್ತು. 25 ಮಂದಿ ಶಿಕ್ಷಕರಿದ್ರು. ಹರೀಶ್ ಕೂಡ ಶಾಲಾ ಮಕ್ಕಳಿಗೆ ಪಾಠ ಮಾಡುತ್ತಾ ಮನೆಯಲ್ಲಿ ಕುಳಿತು ಪಿಯುಸಿ, ಪದವಿ (ಬಿ.ಎ) ಮತ್ತು ಸ್ನಾತಕೋತ್ತರ ಪದವಿಯನ್ನು (ಸಮಾಜಶಾಸ್ತ್ರ ವಿಷಯದಲ್ಲಿ) ಪಡೆದ್ರು. ಮಕ್ಕಳಿಗೆ ಪಾಠ ಮಾಡ್ತಾನೇ ತನ್ನ ಕಲಿಕೆಯನ್ನು ಮುಂದುವರೆಸಿದ್ದ ಹರೀಶ್ ಅವರಿಗೆ ಇದ್ದಕ್ಕಿದಂತೆ ಮಾಧ್ಯಮ ಕ್ಷೇತ್ರದತ್ತ ಆಸಕ್ತಿ ಬೆಳೆಯಿತು. ಅಶೋಕ್ ಎಂಬುವವರು ‘ಉದಯ ಟಿವಿ’ಗೆ ಹೋಗಲು ಸೂಚಿಸಿದ್ರು. ಸರಿ, ಅಂತ ಕುಂದಾಪುರದಿಂದ ಬೆಂಗಳೂರಿಗೆ ಬಂದ್ರು. ಉದಯ ಟಿವಿ ಕಚೇರಿಗೆ ರೆಸ್ಯೂಮ್ ಕೊಟ್ಟು ಬಂದ್ರು. ಇಂಟರ್ ವ್ಯೂ ಗೆ ಕರೆ ಬರ್ಲಿಲ್ಲ…! ಮತ್ತೆ ಹೋದ್ರು, ಆಗಲೂ ಇದೇ ಹಣೆಬರಹ. ಹೀಗೆ ತಿಂಗಳಿಗೆ ಒಮ್ಮೆಯಂತೆ ಎರಡು ವರ್ಷಗಳ ಕಾಲ ಕುಂದಾಪುರ-ಬೆಂಗಳೂರು ಅಲೆದಾಡಿದ್ರು.
ಹೀಗೆ ಇದ್ರೆ ಆಗಲ್ಲ, ಸ್ವಲ್ಪ ಆ್ಯಂಕರಿಂಗ್ ಪ್ರಾಕ್ಟೀಸ್ ಮಾಡುವ ಅಂತ ಮಂಗಳೂರಿನ ಲೋಕಲ್ ಚಾನಲ್ ಒಂದಕ್ಕೆ ಸೇರಿದ್ರು. 1 ವರ್ಷ ಪ್ರಾಕ್ಟೀಸ್ ಮಾಡಿದ್ರು. ಅದಾದ ಬಳಿಕ ಮನೆಯಲ್ಲಿ ಟಿವಿ ನೋಡ್ತಾ ನೋಡ್ತಾ ನಿರೂಪಣೆ ಅಭ್ಯಾಸದಲ್ಲಿ ನಿರತರಾದ್ರು. ಇವರ ಪ್ರಯತ್ನಕ್ಕೆ ಕೊನೆಗೂ ಫಲ ಸಿಗೋ ಸುಸಂದರ್ಭ ಬಂದೇ ಬಿಡ್ತು. ನಿರೂಪಕಿ ಜಯಶ್ರೀ ಶೇಖರ್ ಅವರಿಂದಾಗಿ ಉದಯ ಟಿವಿ ಸೇರಲು ಸಾಧ್ಯವಾಯ್ತು. ಈ ಮುಖೇನ 2007ರ ಡಿಸೆಂಬರ್ ನಲ್ಲಿ ಮಾಧ್ಯಮ ಲೋಕಕ್ಕೆ ಅಧಿಕೃತ ಪಾದಾರ್ಪಣೆ ಮಾಡಿದ್ರು. ನಂತರದ ದಿನಗಳಲ್ಲಿ ಉದಯ ಟಿವಿಗೆ ಉದ್ಯೋಗವನ್ನರಿಸಿ ಬರುತ್ತಿದ್ದ ಎಷ್ಟೋ ಮಂದಿ ಫೇಲ್ ಆಗಿ ನಿರಾಸೆಯಿಂದ ವಾಪಸ್ಸು ಹೋಗುತ್ತಿದ್ದುದನ್ನು ಗಮನಿಸಿದ ಜಯಶ್ರೀ ಶೇಖರ್, ಶ್ರೀಧರ್ ಶರ್ಮಾ ಮತ್ತು ಹರೀಶ್ ಅವರು ಸ್ಪೆಷಲ್ ಕೋಚಿಂಗ್ ಸೆಂಟರ್ ತೆರೆಯಲು ಮುಂದಾದ್ರು. ಇಲ್ಲಿತನಕ ಈ ಕಾನ್ಸೆಪ್ಟೇ ಇರ್ಲಿಲ್ಲ. ಇದೊಂದು ಹೊಸ ಪ್ರಯತ್ನವಾಗಿತ್ತು. ಇಲ್ಲಿ ಟಿವಿ ನಿರೂಪಣೆ, ವೇದಿಕೆ ನಿರೂಪಣೆ, ಹಿನ್ನೆಲೆ ಧ್ವನಿ ಹಾಗೂ ಕಂಠದಾನದ ತರಗತಿಗಳನ್ನು ನಡೆಸ್ತಿದ್ರು. ಇಲ್ಲಿ ಕಲಿತವರಿಗೆ ಅವರು ಅಲ್ಲೇನು ಮಾಡಿದ್ದಾರೆ ಅದರ ಸಿಡಿ ಮತ್ತು ಸರ್ಟಿಫಿಕೇಟ್ ಕೊಡ್ತಿದ್ರು. ಇದು ಮೀಡಿಯಾಕ್ಕೆ ಸೇರೋರಿಗೆ ತುಂಬಾ ಹೆಲ್ಪ್ ಆಗಿತ್ತು. ಹೆಚ್ಚು ಕಡಿಮೆ ಎರಡು ವರ್ಷಗಳ ಕಾಲ ಈ ಸಂಸ್ಥೆಯನ್ನು ನಡೆಸಿ ಕಾರಣಾಂತರಿಂದ ಮುಚ್ಚಬೇಕಾಯ್ತು.
5 ವರ್ಷದ ನಂತರ ಹರೀಶ್ ಅವರಿಗೆ ಕಸ್ತೂರಿ ಚಾನಲ್ ಬಾಗಿಲು ತೆರೆಯಿತು. ಪತ್ನಿ ಅವರ ಮಾತಿನಂತೆ ಉದಯದಿಂದ ಕಸ್ತೂರಿಯತ್ತ ನಡೆದರು. ಅಲ್ಲೊಂದು ವರ್ಷ ಕೆಲಸ ಮಾಡಿ ಸಮಯ ಚಾನಲ್ ಗೆ ಸೇರಿದ್ರು. ಇಲ್ಲಿ ಮೂರು ವರ್ಷ ದುಡಿದು ನಂತರ ಸುವರ್ಣ ಕುಟುಂಬದ ಸದಸ್ಯರಾದ್ರು. ಕಳೆದ 1 ವರ್ಷದಿಂದ ಸುವರ್ಣ ವಾಹಿನಿಯಲ್ಲಿದ್ದಾರೆ.
‘ಸುವರ್ಣ ತನ್ನ ಕುಟುಂಬದಂತಿದೆ. ಇಲ್ಲಿ ಭಾವನಾ, ಅಜಿತ್ ಹನುಮಕ್ಕನವರ್ ಸೇರಿದಂತೆ ಇಡೀ ಬಳಗದ ಸಹಕಾರ, ಪ್ರೋತ್ಸಾಹ ಸಿಕ್ಕಿದೆ. ಸಮಯದಲ್ಲಿ ಜೊತೆಯಲ್ಲಿದ್ದ ಜಯಪ್ರಕಾಶ್ ಶೆಟ್ಟಿಯವರೂ ಕೂಡ ಇವತ್ತು ನಮ್ಮ ಜೊತೆಗಿರೋದು ಖುಷಿಯ ವಿಚಾರ. ಇವರು ಕೂಡ ಸಾಕಷ್ಟು ಪ್ರೋತ್ಸಾಹ ನೀಡಿ ಬೆಳೆಸಿದ್ದಾರೆ. ಇಲ್ಲಿಯವರೆಗೂ ನನ್ನ ಮಾಧ್ಯಮ ಪಯಣದಲ್ಲಿ ಬೆನ್ನುತಟ್ಟಿ ಪ್ರೋತ್ಸಾಹಿಸಿ, ತಪ್ಪುಗಳನ್ನು ತಿದ್ದಿ ಬೆಳೆಸಿದ ಎಲ್ಲರಿಗೂ ನಾನು ಆಭಾರಿ’’ ಎನ್ನುತ್ತಾರೆ ಹರೀಶ್.
10 ವರ್ಷದ ಮಾಧ್ಯಮ ಜರ್ನಿಯಲ್ಲಿ ಎಲ್ಲಾ ಬಗೆಯ ಡಿಸ್ಕಷನ್ಸ್ ಗಳನ್ನು, ಹತ್ತಾರು ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇದರಿಂದಾಚೆಗೆ ಹರೀಶ್ ಅದ್ಭುತ ಕಂಠದಾನ ಕಲಾವಿದ. ಇವರ ದನಿಗೆ ಕಂಡಾಪಟ್ಟೆ ಬೇಡಿಕೆ ಇದೆ…! ಒಂದು ಕಾಲದಲ್ಲಿ ಅನಿವಾರ್ಯತೆಯಿಂದ ಕಂಠದಾನ ನೀಡಲು ಶುರುಮಾಡಿದ್ದು, ಇವತ್ತು ವೃತ್ತಿಬದುಕಿನ ಭಾಗವಾಗಿ ಮುಂದುವರೆದಿದೆ…! ‘ಅಕ್ಷತೆ, ‘ಜಯಸೂರ್ಯ’, ‘ಸೀತಾನದಿ’ ಸೇರಿದಂತೆ ಹತ್ತಾರು ಸಿನಿಮಾಗಳು, ಧಾರವಾಹಿ, ಕಿರುಚಿತ್ರ, ಸರ್ಕಾರಿ ಜಾಹಿರಾತು, ಕಮರ್ಷಿಯಲ್ ಪ್ರೋಗ್ರಾಮ್ಸ್, ಜಾಹಿರಾತುಗಳು, ಕಾರ್ಟೂನ್ಸ್‍ಗಳು ಸೇರಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಕಂಠದಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕನ್ನಡದಲ್ಲಿ ಕ್ರಿಕೆಟ್ ಕಾಮೆಂಟ್ರಿಯನ್ನೂ ಕೊಟ್ಟಿದ್ದಾರೆ…! ಈಗಲೂ ಇವುಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಅಮಿರ್ ಖಾನ್ ಅವರ ‘ಸತ್ಯಮೇವ ಜಯತೆ’ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡಲು 70 ಮಂದಿ ಕಲಾವಿದರು ಕಂಠದಾನ ಮಾಡಿದ್ರು…! ಅದರಲ್ಲಿ ಅಮಿರ್ ಖಾನ್ ಅವರ ದನಿಗೆ ಸರಿದೂಗಿದ್ದು ಹರೀಶ್ ಅವರ ದನಿ ಮಾತ್ರ. ಇದಕ್ಕೆ ‘ಮಾಧ್ಯಮ ಸಮ್ಮಾನ್’ ಪ್ರಶಸ್ತಿ ಬಂತು. ಆದ್ರೆ, ಕಾರಣಾಂತರದಿಂದ ಕನ್ನಡದಲ್ಲಿ ಈ ಕಾರ್ಯಕ್ರಮ ಪ್ಲೇ ಆಗಿಲ್ಲ.
ಅದೇನೇ ಇರಲಿ ಹರೀಶ್ ಅವರು ಸುದ್ದಿವಾಹಿನಿಯಲ್ಲಿ ನ್ಯೂಸ್ ರೀಡರ್ ಆಗಿ, ಅದರಿಂದಾಚೆಗೆ ಕಂಠದಾನ ಕಲಾವಿದರಾಗಿ ಬ್ಯುಸಿ ಆಗಿದ್ದಾರೆ. ‘ಜರ್ನಲಿಸಂ ಕೋರ್ಸ್ ಕಂಪ್ಲೀಟ್ ಮಾಡಿದ್ದೀವಿ, ಕೆಲಸ ಸಿಗುತ್ತೆ ಎನ್ನುವ ಭ್ರಮೆ ಬೇಡ. ಅಲ್ಲಿ ಓದಿರೋ ಥಿಯರಿಗಳಿಗೂ ಇಲ್ಲಿನ ಕೆಲಸಗಳಿಗೂ ಸಂಬಂಧವಿಲ್ಲ. ಅನುಭವಕ್ಕಿಂತ ದೊಡ್ಡದಾವುದೂ ಇಲ್ಲ. ಸಣ್ಣ-ಪುಟ್ಟ ಸಂಸ್ಥೆಗಳೆಂದು ನೋಡಬಾರದು. ಅವಕಾಶ ಸಿಕ್ಕಲ್ಲಿ ಜಾಯಿನ್ ಆಗಿ ಚೆನ್ನಾಗಿ ಕೆಲಸ ಕಲಿಯಬೇಕು. ನಂತರ ತನ್ನಿಂದತಾನೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ’ ಎನ್ನೋದು ಹರೀಶ್ ಅವರು ಮಾಧ್ಯಮ ವಿದ್ಯಾರ್ಥಿಗಳಿಗೆ ಹೇಳೋ ಕಿವಿಮಾತು.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್