ವಿಧಾನಸಭಾ ಚುನಾವಣೆ ಸಮೀಪಿಸ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸಂಘಟನೆಯನ್ನು ಬಲಪಡಿಸಲು ಕಾರ್ಯಪ್ರವೃತ್ತವಾಗಿದ್ದು, ಜೆಡಿಎಸ್ ನವೆಂಬರ್‍ನಿಂದ ಸಂಘಟನಾ ರ್ಯಾಲಿ ಆರಂಭಿಸಲಿದೆ.
ಹೃದಯ ಶಸ್ತ್ರಚಿಕಿತ್ಸೆ ಒಳಗಾಗಿರೋ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರ ಸ್ವಾಮಿ ವಿಶ್ರಾಂತಿ ಬಳಿಕ ಇದೀಗ ಮತ್ತೆ ಅಖಾಡಕ್ಕೆ ಇಳಿಯಲು ತಯಾರಾಗಿದ್ದಾರೆ. ನವೆಂಬರ್ 3ರಂದು ಚಾಮುಂಡಿ ಬೆಟ್ಟದಲ್ಲಿ ಜೆಡಿಎಸ್ ಸಂಘಟನಾ ರ್ಯಾಲಿಗೆ ಚಾಲನೆ ದೊರೆಯಲಿದೆ.
ಉತ್ತರ ಕರ್ನಾಟಕದ 62 ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಮೊದಲ ಹಂತದ ಪ್ರವಾಸ ಮಾಡಲಿದ್ದಾರೆ. ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರೋ ಅವರು ತಮ್ಮ ಆರೋಗ್ಯದ ಕಡೆಗೂ ಹೆಚ್ಚು ಗಮನ ನೀಡಬೇಕಾಗದ ಅಗತ್ಯವಿದೆ. ಮನೆಯವರ ಒತ್ತಾಯಕ್ಕೆ ಮಣಿದು ಪ್ರವಾಸದ ವೇಳೆಯಲ್ಲಿ ಆರೋಗ್ಯಕ್ಕೆ ಯಾವುದೇ ತೊಂದರೆ ಆಗಬಾರದೆಂಬ ದೃಷ್ಠಿಯಿಂದ ಮುಂಜಾಗೃತಕ್ರಮವಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಪ್ರವಾಸದ ವೇಳೆಯಲ್ಲಿ ಎಚ್.ಡಿ ಕುಮಾರ ಸ್ವಾಮಿ ಅವರು ಮಾಂಸಹಾರದಿಂದ ದೂರ ಉಳಿಯಲಿದ್ದಾರೆ. ಪ್ರವಾಸಕ್ಕಾಗಿ ಸುಮಾರು 1 ಕೋಟಿ ರೂ ವೆಚ್ಚದಲ್ಲಿ ವಿಶೇಷ ಬಸ್ ತಯಾರಿಸಲಾಗಿದ್ದು ಕುಮಾರ ಸ್ವಾಮಿ ಅವರ ಜೊತೆ ಪ್ರವಾಸದಲ್ಲಿರೋ ಬಾಣಸಿಗ ಬಸ್‍ನಲ್ಲಿಯೇ ಅಡುಗೆ ತಯಾರು ಮಾಡಿಕೊಡುತ್ತಾರೆ. ಜೊತೆಗೆ ನಿತ್ಯ ಯೋಗ ಮಾಡುವ ಸಲುವಾಗಿ ಯೋಗಗುರು ಇರುತ್ತಾರೆ. ಆರೋಗ್ಯ ವಿಚಾರಿಸಲು ಪುರುಷ ನರ್ಸ್ ಕೂಡ ಜೊತೆಗಿರುತ್ತಾರೆ.