ದೊಡ್ಡ ಮೆಣಸು, ಡೊಳ್ಳು ಮೆಣಸು ಅಂತ ಕರೆಯುವ ಕ್ಯಾಪ್ಸಿಕಂಅನ್ನು ಬಳಸದೇ ಇರೋರು ಯಾರೂ ಇಲ್ಲ. ಹಸಿರು, ಕೆಂಪು, ಹಳದಿ, ಕೇಸರಿ ಇತ್ಯಾದಿ ಬಗೆಬಗೆಯ ಬಣ್ಣಗಳಲ್ಲಿ ಲಭ್ಯ. ಈ ಬಣ್ಣಗಳು ಅದರಲ್ಲಿರುವ ಆಂಟಿ-ಆಕ್ಸಿಡೆಂಟ್ಗಳನ್ನು ಎತ್ತಿ ತೋರಿಸುತ್ತವೆ. ಇವನ್ನು ನಾವು ತರಕಾರಿಗಳು ಎಂದು ಕರೆದರೂ ಸಹ ಇದು ನೈಟ್ಶೇಡ್ ಕುಟುಂಬಕ್ಕೆ ಸೇರಿದ ಸಸ್ಯಗಳ ಫಲ. ಇದು ಒಂದು ಜಾತಿಯ ಹಣ್ಣು. ಸಿಹಿಮೆಣಸು ಎಂಬುದಾಗಿಯೂ ಇದನ್ನು ಕರೆಯಲಾಗುತ್ತದೆ.
ಇದು ಕಡಿಮೆ ಕ್ಯಾಲೋರಿ ಹೊಂದಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿಯನ್ನು ಹಾಗೂ ಇನ್ನಿತರ ಆಂಟಿ-ಆಕ್ಸಿಡೆಂಟ್ಗಳನ್ನು ಒಳಗೊಂಡಿರುತ್ತದೆ. ಹಸಿರು ಬಣ್ಣದ ಡೊಳ್ಳುಮೆಣಸು ಕೆಲವೊಂದು ಬಾರಿ ಸ್ವಲ್ಪ ಖಾರವಾಗಿರುತ್ತದೆ. ಆದರೆ ಬಣ್ಣಬಣ್ಣದವು ಖಾರವಾಗಿರುವುದಿಲ್ಲ. ಹೆಚ್ಚು (ಶೇ. 92 ರಷ್ಟು) ನೀರಿನಂಶವನ್ನು ಹೊಂದಿರುತ್ತದೆ. ಉಳಿದವು ಕಾರ್ಬೆಹೈಡ್ರೇಟ್ಗಳು ಮತ್ತು ಕಡಿಮೆ ಪ್ರಮಾಣದಲ್ಲಿ ಪ್ರೊಟೀನ್ ಮತ್ತು ಕೊಬ್ಬನ್ನು ಒಳಗೊಂಡಿರುತ್ತವೆ.
ಕ್ಯಾಪ್ಸಿಕಂ ಹೆಚ್ಚು ಆಂಟಿ-ಆಕ್ಸಿಡೆಂಟ್ಗಳನ್ನು ಹೊಂದಿರುವುದರಿಂದ ದೇಹಕ್ಕೆ ಅನೇಕ ರೀತಿಯ ಉಪಯೋಗಗಳನ್ನು ಮಾಡಿಕೊಡುತ್ತದೆ. ಹೆಚ್ಚಿನ ಹಣ್ಣು ತರಕಾರಿಗಳ ಸೇವನೆಯು ಅನೇಕ ಕ್ರೋನಿಕ್ ತೊಂದರೆಗಳನ್ನು ಕಡಿಮೆ ಮಾಡಲು ಅನುಕೂಲಕಾರಿ. ಅದರಲ್ಲಿಯೂ ಮುಖ್ಯವಾಗಿ ಕ್ಯಾನ್ಸರ್ ಹಾಗೂ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ತಡೆಯಲು ಸಹಕಾರಿ. ಕಣ್ಣಿನ ಆರೋಗ್ಯಕ್ಕೆ ಡೊಳ್ಳುಮೆಣಸು ಉತ್ತಮ. ಲ್ಯೂಟಿನ್ ಮತ್ತು ಝಿಯಾಕ್ಸೆಂಥಿನ್ ಎಂಬ ಕೆರೊಟಿನೈಡ್ಗಳು ಡೊಳ್ಳು ಮೆಣಸಿನಲ್ಲಿದ್ದು, ಇದು ಕಣ್ಣಿನ ಆರೋಗ್ಯಕ್ಕೆ ಸಹಾಯ ಮಾಡುವಂತಹ ಪೋಷಕಾಂಶಗಳಾಗಿದೆ. ಮೂಲತಃ ಡೊಳ್ಳುಮೆಣಸಿನಲ್ಲಿನ ಆಂಟಿ-ಆಕ್ಸಿಡೆಂಟ್ಗಳು ರೆಟಿನಾದ ರಕ್ಷಣೆಯನ್ನು ಮಾಡುವಂಥದ್ದಾಗಿದ್ದು, ಆಕ್ಸಿಡೇಟಿವ್ ಹಾನಿಗಳಿಂದ ರಕ್ಷಿಸುತ್ತದೆ. ಮುಂದಿನ ಅಂಕಣದಲ್ಲಿ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.