ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿಗೆ ನಾಗರಿಕರ ಒಕ್ಕೂಟ ಮನವಿ ಮಾಡಿದೆ. ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ ಸಂಬಂಧ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮತ್ತು ಗಣೇಶೋತ್ಸವ ಸಮಿತಿ ಮಧ್ಯೆ ಹಗ್ಗಜಗ್ಗಾಟ ನಡೆಯುತ್ತಿದೆ. ಈ ಹಿಂದಿನ ಈದ್ಗಾ ಮೈದಾನವನ್ನು ಮುಸ್ಲಿಮರ ಹಿಡಿತದಿಂದ ಬಿಡಿಸಿಕೊಳ್ಳಲು ಹೋರಾಡಿದ್ದು ನಾವು ಎಂದು ಪ್ರತಿಪಾದಿಸುತ್ತಿರುವ ನಾಗರಿಕ ಒಕ್ಕೂಟವು ವಿನಾಯಕ ಪ್ರತಿಷ್ಠಾಪನೆಯ ಅವಕಾಶ ತನಗೇ ಸಿಗಬೇಕು ಎಂದು ಪಟ್ಟು ಹಿಡಿದಿದೆ.
ಇದರ ಮುಂದುವರಿದ ಭಾಗವೆಂಬಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ರೇಣುಕಾಚಾರ್ಯ ಅವರನ್ನು ಭೇಟಿಯಾದ ನಾಗರಿಕರ ಒಕ್ಕೂಟವು ಗಣೇಶ ಪ್ರತಿಷ್ಠಾಪನೆಗೆ ಹಾಗೂ 3 ದಿನ ಗಣೇಶೋತ್ಸವ ನಡೆಸಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದೆ. ಇನ್ನೊಂದೆಡೆ ಬೆಂಗಳೂರು ಗಣೇಶೋತ್ಸವ ಸಮಿತಿಯೂ ಇದೇ ರೀತಿಯ ಮನವಿಯನ್ನು ಮಾಡುತ್ತಿದ್ದು, 10 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಹಾಗೂ 11ನೇ ದಿನ ಚಾಮರಾಜಪೇಟೆಯ ಗಲ್ಲಿಗಲ್ಲಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲು ನಿರ್ಧರಿಸಿದೆ. ಆದರೆ ಇದಕ್ಕೆ ಒಕ್ಕೂಟವು ವಿರೋಧ ವ್ಯಕ್ತಪಡಿಸುತ್ತಿದೆ.