ಭಾರತ, ಪಾಕಿಸ್ತಾನವನ್ನು ಅವತ್ತು ಬಗ್ಗುಬಿಡಿದಿದ್ದು ಹೀಗೇ..!? ಒಂದೊಳ್ಳೇ ಊಟ ಬಡಿಸಿದ್ರೂ, ನಂಚಿಕೊಳ್ಳೋಕೆ ಆರ್ಡಿಎಕ್ಸ್ ಕೇಳುತ್ತೆ..!!

Date:

 

raaaಅರವತ್ತೆಂಟು ವರ್ಷಗಳ ಹಿಂದೆ ಭಾರತ ತನ್ನ ಬಲ ಭುಜದ ತುಂಡು ಮಾಂಸವನ್ನು ಕಿತ್ತು ಇವತ್ತಿಗೂ ಸಂಕಷ್ಟ ಅನುಭವಿಸುತ್ತಿದೆ. `ನಿನ್ನ ಜೊತೆ ಇರಲು ಸಾಧ್ಯವೇ ಇಲ್ಲ ಅಂದ ಪಾಕ್ ಗೆ ಮುಕ್ತಿ ಕೊಟ್ಟರೂ ಅದರ ದುರಾಸೆ, ಕುತ್ಸಿತ ಬುದ್ಧಿಯನ್ನು ಈ ಕ್ಷಣಕ್ಕೂ ಅರಗಿಸಿಕೊಳ್ಳುತ್ತಿದೆ. ಪಾಕ್ ಅಂದರೆ ಅದೊಂಥರಾ ಟೆರ್ರಿಬಲ್ ಮೆಂಟಾಲಿಟಿ. ಒಂದೊಳ್ಳೆಯ ಊಟ ಬಡಿಸಿದ್ರೂ, ನೆಂಚಿಕೊಳ್ಳುವುದಕ್ಕೆ ಆರ್ಡಿಎಕ್ಸ್ ಪುಡಿ ಸಿಗುತ್ತಾ ಎಂದೇ ಯೋಚಿಸುತ್ತದೆ..!

ಪಾಕಿಸ್ತಾನಕ್ಕೆ ಭಾರತದ ಮೇಲೆ ಅದ್ಯಾವ ಪರಿ ದ್ವೇಷ, ಹೊಟ್ಟೆಯುರಿ ಇದೆ ಎನ್ನುವುದಕ್ಕೆ 1965ರ ಯುದ್ಧಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಇಂಡೋ-ಪಾಕ್ ಯುದ್ಧ ಶುರುವಾಗುವ ಕೇವಲ ಮೂರು ವರ್ಷದ ಹಿಂದೆಯಷ್ಟೇ ಚೀನಾದ ಜೊತೆ ಯುದ್ಧ ಮಾಡಿ ಸೋತು ಬಸವಳಿದಿದ್ದ ಭಾರತಕ್ಕೆ ಸೋಲನ್ನು ವಿಮರ್ಶೆ ಮಾಡಿಕೊಳ್ಳುವುದಕ್ಕೆ ಕೆಲವು ವರ್ಷಗಳೇ ಬೇಕಿತ್ತು. ಅಷ್ಟಕ್ಕೂ ಚೀನಾದ ವಿರುದ್ಧ ಭಾರತದ ಸೈನ್ಯ ಪರಿಪೂರ್ಣವಾಗಿ ಸೋತಿರಲಿಲ್ಲ. ಅವರಲ್ಲಿ ಕೆಚ್ಚೆದೆ, ಹೋರಾಟದ ಶಕ್ತಿಯಿನ್ನೂ ಬಾಕಿಯಿತ್ತು. ಆದರೆ ಭಾರತದ ರಾಜತಾಂತ್ರಿಕ ವೈಪರಿತ್ಯ, ಅರ್ಜೆನ್ಸಿಗಳು ಸಿನೋ-ಇಂಡೋ ವಾರ್ನಲ್ಲಿ ಭಾರತವನ್ನು ತಲೆ ತಗ್ಗಿಸುವಂತೆ ಮಾಡಿತ್ತು. ಈ ಹಂತದಲ್ಲಿ ಭಾರತದ ಶಸ್ತ್ರಕೋಟೆಯಲ್ಲಿ ಬೆರಳೆಣಿಕೆಯ ಅಸ್ತ್ರಗಳಿದ್ದವಷ್ಟೆ..! ಈ ಸಂದರ್ಭವನ್ನೇ ಎನ್ಕ್ಯಾಶ್ ಮಾಡಿಕೊಳ್ಳಲು ಪಾಕ್ ಹವಣಿಸಿತ್ತು.

1947ರಲ್ಲಿ ಕಾಶ್ಮೀರಕ್ಕಾಗಿ ನಡೆದ ಕದನದಲ್ಲಿ ಹೀನಾಯವಾಗಿ ಸೋತ ಪಾಕಿಸ್ತಾನ ಯಾವ ಪರಿ ಅವಮಾನಕ್ಕೀಡಾಗಿತ್ತೆಂದರೇ, ಹೇಗಾದ್ರೂ ಆ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲೇಬೇಕೆಂದು ಕಾದಿತ್ತು. ಇದಕ್ಕೆ ಪೂರಕವಾಗಿ ಸಿನೋ- ಇಂಡೋ ವಾರ್ ನಲ್ಲಿ ಭಾರತ ಸೋತು ಗಾಯಗೊಂಡು ಕುಳಿತಿತ್ತು. ಇದು ಚೀನಾಕ್ಕಿಂತ ಪಾಕಿಸ್ತಾನಕ್ಕೆ ಹೆಚ್ಚು ಖುಷಿ ತಂದ ವಿಚಾರ..! ಜೊತೆಗೆ ಭಾರತದ ಮೇಲೆ ಯುದ್ಧ ಮಾಡಲು ಇದು ಪ್ರಶಸ್ತವಾದ ಸಂದರ್ಭ ಎಂದು ಪಾಕಿಸ್ತಾನದ ವಿದೇಶಾಂಗ ಮಂತ್ರಿ ಝುಲ್ಫಿಕರ್ ಅಲಿ ಭುಟ್ಟೋ ಮತ್ತು ಕೆಲ ಸೇನಾ ಅಧಿಕಾರಿಗಳು ಆಪರೇಷನ್ ಜಿಬ್ರಾಲ್ಟರ್ ಗೆ ಸಿದ್ದತೆ ನಡೆಸಿದರು.

ನಿಜ ಹೇಳಬೇಕೆಂದರೇ ಚೀನಾ ವಿರುದ್ಧ ಸೋತ ನಂತರ ಭಾರತದ ಅರ್ಥವ್ಯವಸ್ಥೆಯಲ್ಲಿ ಏರುಪೇರುಂಟಾಗಿತ್ತು. ಮೊದಲೇ ಹೇಳಿದಂತೆ ಗಾಯಗೊಂಡ ಹುಲಿಗೆ, ಔಷಧಿ ಹಣ ಹೊಂದಿಸಿಕೊಂಡರೇ ಸಾಕೆನ್ನುವ ಪರಿಸ್ಥಿತಿಯಿತ್ತು. ಹೀಗಿರುವಾಗಲೇ ಕಾಂಗ್ರೆಸ್ ಆಡಳಿತ ದುರ್ಬಲಗೊಂಡಿತ್ತು. ಎಲ್ಲಾ ಕಡೆ ಅಸಮಾಧಾನ ತಾಂಡವವಾಡುತ್ತಿತ್ತು. ನೆಹರೂ ನೇಮಿಸಿದ್ದ ಉತ್ತರಾಧಿಕಾರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೇಲೆ ಸ್ವತಃ ಕಾಂಗ್ರೆಸ್ ನಲ್ಲಿಯೇ ಬೇಸರವಿತ್ತು. ಅವರು ಪ್ರಾಮಾಣಿಕ ಸರಿ, ಆದರೆ ದುರ್ಬಲ ಎಂಬುದು ಭಾರತಕ್ಕೆ ಮಾತ್ರವಲ್ಲ, ಖುದ್ದಾಗಿ ಪಾಕಿಸ್ತಾನಕ್ಕೆ ಅನ್ನಿಸತೊಡಗಿತ್ತು. ಈ ಸಂದರ್ಭದಲ್ಲಿ ಸೋತು ಕೂತಿದ್ದ ಭಾರತದ ವಿರುದ್ಧ ಸೆಣಸಲು ಸಜ್ಜಾಗಿದ್ದ ಪಾಕಿಸ್ತಾನ- ಪರಮ ಶಿಸ್ತಿನ, ಅಷ್ಟೇ ಚಾಣಾಕ್ಷನಾಗಿದ್ದ ಅಯೂಬ್ ಖಾನ್ ಕೈಲಿತ್ತು. ಪಾಕ್ ಅಧ್ಯಕ್ಷ ಅಯೂಬ್ ಖಾನ್ ಗೆ ಈ ಯುದ್ಧ ಬೇಕಿರಲಿಲ್ಲ. ಅವನ ದಾರಿ ತಪ್ಪಿಸಿದ್ದು ಅವತ್ತಿನ ಪಾಕ್ ಸರ್ಕಾರದಲ್ಲಿ ವಿದೇಶಾಂಗ ಮಂತ್ರಿಯಾಗಿದ್ದ ಝುಲ್ಫಿಕರ್ ಅಲಿ ಭುಟ್ಟೊ.

ಇನ್ನು ಪಾಕಿಸ್ತಾನದ ರಣತಂತ್ರಗಳು ಹೇಗಿತ್ತೆಂದರೇ ಈ ಸಂದರ್ಭದಲ್ಲಿ ಅದು ಅಮೇರಿಕಾ ಜೊತೆ ಸಂಬಂಧವನ್ನು ಸುಧಾರಿಸಿಕೊಂಡಿತ್ತು. ಚೀನಾಕ್ಕೆ ಇವತ್ತಿನಂತೆ ಅವತ್ತು ಕೂಡ ಬಕೆಟ್ ಹಿಡಿಯತೊಡಗಿತ್ತು. ಎಲ್ಲಾ ರೀತಿಯಿಂದಲೂ ಭಾರತವನ್ನು ಕುಟ್ಟಿ ಕೆಡವಲು ಸಜ್ಜಾದ ಪಾಕಿಸ್ತಾನ ಹಲವಾರು ತಂತ್ರಗಳನ್ನು ಹೆಣೆದಿತ್ತು. ಈ ಬಾರಿ ಭಾರತವನ್ನು ಸೋಲಿಸಿ ಕಾಶ್ಮೀರವನ್ನು ಪಡೆಯಲೇಬೇಕೆಂದರೇ ಹಲವಾರು ತೆರನಾದ ರೂಪುರೇಷೆ ಸಿದ್ಧಪಡಿಸಲೇಬೇಕೆಂದು ಕೆಟ್ಟ ನಿರ್ಧಾರಗಳನ್ನು ಮಾಡಿತ್ತು. ಕೆಲವೊಮ್ಮೆ ಪಿತೂರಿಗಳಿಗೆ ಗೆಲುವು ಸಿಕ್ಕಿಬಿಡುತ್ತದೆ. ಆ ನೀಚ ಬುದ್ದಿಗೆ ಸಮಯ ಸಂದರ್ಭಗಳು ಜೊತೆಯಾಗುತ್ತವೆ. ಪಾಕಿಸ್ತಾನ ಭಾರತದ ಮೇಲೆ ಯುದ್ಧ ಮಾಡುವ ಹುಕಿಗೆ ಬಿದ್ದಿದ್ದೇ, ಸ್ಥಳೀಯರನ್ನು ಎನ್ಕ್ಯಾಶ್ ಮಾಡಿಕೊಳ್ಳಲುಬೇಕಾದ ಎರಡು ಸಂದರ್ಭಗಳು ತಾನಾಗೇ ಒದಗಿಬಂದಿತ್ತು. ಅದನ್ನು ನೀಟಾಗಿ ಎನ್ ಕ್ಯಾಶ್ ಮಾಡಿಕೊಳ್ಳುವುದರಲ್ಲಿ ಪಾಕ್ ಸೋತಿತ್ತು. ಪಾಕಿಸ್ತಾನದ ಕಾಶ್ಮೀರ ದಾಹ ಯಾವ ಪರಿ ಮಿತಿ ಮೀರಿತ್ತೆಂದರೇ ನಲವತ್ತೇಳರ ಯುದ್ದದಲ್ಲಿ ಸೋತರೂ, ಅದಕ್ಕೆ ಅರವತೈದರ ಯುದ್ಧದಲ್ಲಿ ಗೆಲ್ಲಲೇಬೇಕೆಂಬ ಅದಮ್ಯ ಹಠವಿತ್ತು. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ಕುತಂತ್ರವನ್ನು ಹೆಣೆದಿತ್ತು. ಅದರಲ್ಲೂ ಝುಲ್ಫಿಕರ್ ಅಲಿ ಭುಟ್ಟೋ, ಭಾರತವನ್ನು ಸೋಲಿಸಲು ಅದ್ಯಾವ ಪರಿ ತಯಾರಿ ನಡೆಸಿದ್ದ ಅಂದರೇ, ತನ್ನ ದುರುದ್ದೇಶಕ್ಕೆ ಭಾರತದವರನ್ನೇ ಸೆಳೆಯಲು ಪ್ರಯತ್ನಿಸಿದ್ದ. ಸ್ಥಳೀಯರ ಬೆಂಬಲ ಸಿಕ್ಕರೆ ಭಾರತವನ್ನು ಯಾರಿಂದಲೂ ಕಾಪಾಡಲು ಸಾಧ್ಯವಿಲ್ಲ. ರಣ್ ಆಫ್ ಕಚ್, 1963ರ ಹಝ್ರತ್ ಬಾಲ್ ಮಸೀದಿಯ ದಾಖಲೆ ಕಳವು ಮುಂತಾದ ಘಟನೆಗಳಿಗೆ ಕೋಮು ನೆರಳನ್ನು ಸೋಕಿಸಿ, ಭಾರತದ ವಿರುದ್ಧ ವಿಷ ಬೀಜ ಬಿತ್ತುವ ಕೆಲಸವನ್ನು ಪಾಕ್ ಆರಂಭಿಸಿತ್ತು. ಅದೃಷ್ಟವಶಾತ್ ಭಾರತಾಂಬೆಯ ಮಕ್ಕಳ್ಯಾರು ಪಾಕ್ ಚಿತಾವಣೆಗೆ ಕ್ಯಾರೇ ಅನ್ನಲಿಲ್ಲ. ಇದು ಪಾಕ್ ನ ಎರಡು ವರ್ಷದ ತಯಾರಿಯಲ್ಲಿ ಬಿದ್ದ ಮೊದಲನೇ ಏಟು.

ಅಸಲಿಗೆ ಆಪರೇಷನ್ ಜಿಬ್ರಾಲ್ಟರ್ ಪಾಕಿಸ್ತಾನದ ಜಿಒಸಿ ( ಜನರಲ್ ಆಫ್ ಕಮಾಂಡರ್ ) ಅಖ್ತರ್ ಮಲಿಕ್ ನ ಕನಸಿನ ಕೂಸು. ಕಾಶ್ಮೀರ ವಿಮೋಚನೆಗಾಗಿ ಅವನೇ ರೂಪುರೇಷೆ ಸಿದ್ದಮಾಡಿದ್ದ. ಅವನೇ ಎಲ್ಲರಿಗೂ ಟ್ರೈನಿಂಗ್ ಕೊಟ್ಟಿದ್ದ. ಜಿಬ್ರಾಲ್ಟರ್ ಕಾರ್ಯಾಚರಣೆಗೆ ಭಾರತದ ಗಡಿ ನಿಯಂತ್ರಣ ರೇಖೆ ಹಾಗೂ ಕಾಶ್ಮೀರ ಕಣಿವೆಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಜಿಬ್ರಾಲ್ಟರ್ ಆಪರೇಷನ್ನ ಮುಖ್ಯ ಉದ್ದೇಶ, ಮೊದಲನೆಯದಾಗಿ ಅಕ್ರಮವಾಗಿ ಗಡಿ ನುಸುಳಿ ಸ್ಥಳೀಯರ ವಿಶ್ವಾಸ ಸಂಪಾದಿಸಬೇಕು, ಅವರನ್ನು ಭಾರತದ ವಿರುದ್ಧ ತಿರುಗಿ ಬೀಳುವಂತೆ ಪ್ರೇರೇಪಿಸಬೇಕು. ಪ್ಲಾನ್ ನಂತೆ ಜಿಬ್ರಾಲ್ಟರ್ನ ನಲವತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾರತದ ಗಡಿಯನ್ನು ದಾಟಿದ್ದರು..! ಆದರೆ ಜಿಬ್ರಾಲ್ಟರ್ ಬೇಳೆ ಬೇಯಲಿಲ್ಲ. ಅಕ್ರಮ ನುಸುಳುಕೋರರನ್ನು ಭಾರತೀಯ ಸೇನೆ ಹಾಗೂ ಸ್ಥಳೀಯರು ಸೇರಿ ಕೊಂದುಹಾಕಿದರು. ಅಲ್ಲಿಗೆ ಪಾಕ್ ಯೋಜನೆ ಉಲ್ಟಾಪಲ್ಟಾವಾಗಿತ್ತು. ಗಾಯಗೊಂಡಿರುವ ಭಾರತವನ್ನು ಹಣಿಯಲು ಹೆಚ್ಚಿನ ಸೈನ್ಯವೇ ಬೇಡ, ಈ ತಂತ್ರಗಳು ಸಾಕೆಂದು ಭಾವಿಸಿದ್ದ ಪಾಕ್ನ ಆಗಿನ ಏರ್ಸ್ಟಾಫ್ ಚೀಫ್ ಮೊಹಮ್ಮದ್ ಮೂಸಾ, ತಿರುಗಿಬಿದ್ದ ಭಾರತದ ಆಕ್ರೋಶವನ್ನು ನೋಡಿ ಕಂಪಿಸಿಹೋಗಿದ್ದ.

ಆದರೆ ಪಾಕಿಸ್ತಾನ ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಆಪರೇಷನ್ ಜಿಬ್ರಾಲ್ಟರ್ ಗೂ ನನಗೂ ಸಂಬಂಧವಿಲ್ಲವೆಂದು ವಾದಿಸಿತ್ತು. ಅಂತಿಮವಾಗಿ ಆ ಘಟನೆಯನ್ನು ಸ್ಥಳೀಯರ ದಂಗೆ ಎಂದು ಜಗತ್ತಿಗೆ ಪ್ರಸ್ತುತಪಡಿಸಿ ನೇರ ಯುದ್ಧಕ್ಕಿಳಿಯಿತು. ಈ ಹಂತದಲ್ಲಿ ಪಾಕಿಸ್ತಾನಕ್ಕೆ ಕೆಲವು ಕಾಶ್ಮೀರಿ ಯುವಕರು ಸಾಥ್ ಕೊಟ್ಟರು. ಮುಂದೆ ಭದ್ರತಾ ಪಡೆಯ ಗುಂಡಿನ ದಾಳಿಗೆ ಪಾಕ್ ಹಾಗೂ ಅವರನ್ನು ಬೆಂಬಲಿಸಿದವರು ಬಲಿಯಾದರು. ಭಾರತ ಯುದ್ಧ ಗೆದ್ದಿತ್ತು. ಗಾಯಗೊಂಡ ಹುಲಿಯನ್ನು ಸೋಭಿಯಾಗಿ ಕೆಡವಬಹುದೆಂದುಕೊಂಡಿದ್ದ ಪಾಕ್ನ ಅಜೆಂಡಾ ಸುಳ್ಳಾಗಿತ್ತು. ಅದರ ಮೂರ್ನಾಲ್ಕು ವರ್ಷದ ಸಿದ್ಧತೆ ಮಣ್ಣು ಪಾಲಾಗಿತ್ತು. ಅಲ್ಲಿಗೆ ಮತಾಂಧ ಝುಲ್ಫಿಕರ್ ಅಲಿ ಭುಟ್ಟೋ ಮತ್ತವನ ಛೇಲಾಗಳ ಸೊಲ್ಲಡಗಿತ್ತು.

ಕೊನೆಗೆ ವಿಶ್ವಸಂಸ್ಥೆ ಉಭಯ ದೇಶಗಳ ಮಧ್ಯೆ ಸಂಧಾನಕ್ಕೆ ಮುಂದಾಯಿತು. ರಷ್ಯಾದ ತಾಷ್ಕೆಂಟ್ ನಲ್ಲಿ ಭಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ಪಾಕ್ನ ಅಯೂಬ್ ಖಾನ್ ಮಧ್ಯೆ ಶಾಂತಿ ಸಂಧಾನವಾಯ್ತು. ಆ ಮೂಲಕ 1965ರ ಯುದ್ಧಕ್ಕೆ ನಾಮಕಾವಸ್ತೆ ಅಂತ್ಯ ಸಿಕ್ಕಿತ್ತು. ಇಲ್ಲಿ ಯುದ್ಧದಾಹವಿದ್ದಿದ್ದು ಅವತ್ತಿನ ವಿದೇಶಾಂಗ ಮಂತ್ರಿ ಝುಲ್ಫಿಕರ್ ಅಲಿ ಭುಟ್ಟೋಗೆ ಮಾತ್ರ; ಅಯೂಬ್ ಖಾನ್ಗೆ ಯುದ್ಧ ಬೇಕಿರಲಿಲ್ಲ..! ಅವನನ್ನು ಚಿತಾವಣೆ ಮಾಡಿ ಭಾರತದ ಮೇಲೆ ಯುದ್ದ ಮಾಡುವಂತೆ ಪ್ರೇರೇಪಿಸಲಾಗಿತ್ತು. ಕಡೆಗೆ ಸೋತು ಸಂಧಾನಕ್ಕೆ ವಿಶ್ವಸಂಸ್ಥೆಯ ಮೊರೆ ಹೋಗಿತ್ತು.

`ಏನೋ ಮಾಡೇಬಿಡ್ತೀವಿ..’ ಎಂದು ಹೊರಟ ಪಾಕ್ನ ಧೈರ್ಯಕ್ಕೆ ಕಾರಣವೂ ಇತ್ತು. ಅದಕ್ಕೆ ಎರಡು ಸತ್ಯಗಳು ಅತ್ಯಂತ ನಿಚ್ಚಳವಾಗಿತ್ತು. ಮೊದಲನೆಯದ್ದು ಭಾರತ ಗಾಯಗೊಂಡು ಕುಳಿತಿದೆ, ಎರಡನೆಯದ್ದು ಪಾಕ್ನಲ್ಲಿರುವಷ್ಟು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಭಾರತದ ಬಳಿಯಿಲ್ಲ. ಇವೆರಡೇ ಹಕೀಕತ್ತನ್ನು ಆಧಾರ ಮಾಡಿಕೊಂಡು, ಆಪರೇಷನ್ ಜಿಬ್ರಾಲ್ಟರ್ ಮೂಲಕ ಭಾರತಕ್ಕೆ ನೀರು ಕುಡಿಸಲು ಪಾಕಿಸ್ತಾನ ಮುಂದಾಗಿತ್ತು. ಇತ್ತ ಭಾರತಕ್ಕೆ `ಪಾಕಿಸ್ತಾನದ ಮುಂದೇ ನಾವೇನು ಅಲ್ಲ..’ ಎಂಬ ಸತ್ಯ ಗೊತ್ತಿತ್ತು. ತಾನೇ ಮೇಲೆ ಬಿದ್ದು ಯುದ್ಧಕ್ಕೆ ಮುಂದಾಗುವ ದೇಶ ನುಗ್ಗಿ ಬರುತ್ತದೆ. ಅವರನ್ನು ತಡೆಯುವುದಾ..? ಅಥವಾ ಹಿಮ್ಮೆಟ್ಟಿಸುವುದಾ..? ಭಾರತಕ್ಕೆ ಅರ್ಥವಾಗಲಿಲ್ಲ..! ನುಗ್ಗಿ ಬರುವ ಪವರ್ಫುಲ್ ಪಾಕಿಸ್ತಾನದ ಮುಂದೆ, ನಾವು ಕೆಲವೇ ಅಸ್ತ್ರಗಳನ್ನಿಟ್ಟುಕೊಂಡು ತಿಪ್ಪರಲಾಗಹಾಕಬೇಕಷ್ಟೇ..!

ಇದು ಭಾರತಕ್ಕೆ ಗೊತ್ತಿದ್ದ ಹಕೀಕತ್ತು. ಹಾಗೆಯೇ ನುಗ್ಗಿ ಬರುವ ಹುಂಬ ಪಾಕಿಸ್ತಾನವನ್ನು ಒಂದೇ ಒಂದು ಅಸ್ತ್ರದಿಂದ ಮಕಾಡೆ ಬೀಳಿಸಬಹುದು ಎಂಬ ಅಂಶವೂ ಭಾರತಕ್ಕೆ ಗೊತ್ತಿತ್ತು. ಆ ಅಸ್ತ್ರದ ಹೆಸರು ಚಾಣಾಕ್ಷತನ. ಭಾರತೀಯ ಸೈನ್ಯದ ಬುದ್ಧಿವಂತಿಕೆಯ ಮುಂದೆ ಭಾರೀ ಶಸ್ತ್ರಾಸ್ತ ಹೊಂದಿದ್ದ ಪಾಕ್ ಮಂಡಿಯೂರಿ ಕುಳಿತಿತ್ತು. ಆ ಇತಿಹಾಸಕ್ಕೆ ಈಗ ಬರೋಬ್ಬರಿ ಐವತ್ತು ವರ್ಷವಾಗಿದೆ. ಆದರೆ ಇಂಡೋ- ಪಾಕ್ ಸಂಬಂಧದಲ್ಲಿ ಇವತ್ತಿಗೂ ಅಂತಹ ಬದಲಾವಣೆಯಾಗಿಲ್ಲ. ಹಾವು-ಮುಂಗುಸಿಯ ಆಟವಿನ್ನೂ ನಡೆಯುತ್ತಿದೆ. ಈಗಲೂ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿಯಿದೆ. ಮೇಲ್ನೋಟಕ್ಕೆ ಸುಧಾರಿತ ಸಂಬಂಧದಂತೆ ಕಂಡರೂ ಆಂತರ್ಯದ ಕಸಿವಿಸಿಗಳಿನ್ನೂ ಮುಗಿದಿಲ್ಲ. ಹೀಗಿರುವಾಗ ಈ ಸಂಭ್ರಮಗಳು ಉಭಯ ದೇಶಗಳ ಸಂಬಂಧಗಳನ್ನು ಮತ್ತಷ್ಟು ಬಿಗಡಾಯಿಸಬಹುದಾ..? ಇದು ಒಂದು ಮಗ್ಗಲಿನ ಲೆಕ್ಕಾಚಾರವಷ್ಟೇ. ಅಸಹಾಯಕ ಭಾರತದ ಮೇಲೆ ಯುದ್ಧ ಮಾಡಿ, ಗೆಲ್ಲಬಹುದೆಂಬ ಕನಸನ್ನು ಪಾಕಿಸ್ತಾನ ಮಾತ್ರ ಕಾಣಲು ಸಾಧ್ಯ. ಕುತಂತ್ರ, ವಾಮ ಮಾರ್ಗಗಳು ಆ ರಾಷ್ಟ್ರಕ್ಕೆ ತೀರಾ ಸಲೀಸೆನಿಸುವ ಸಂಗತಿ. ಅವತ್ತು ಭಾರತ ಕೊಟ್ಟ ಪ್ರತ್ಯುತ್ತರ ಇಷ್ಟು ಭಯಾನಕವಾಗಿರುತ್ತದೆ ಎಂದು ಅದು ನಿರೀಕ್ಷಿಸಿರಲಿಲ್ಲ.

ಅವತ್ತು ಯುದ್ಧಕ್ಕೆ ಪ್ರಚೋದಿಸಿದ್ದು ಪಾಕಿಸ್ತಾನವೇ ಆದರೂ, ಅದರ ಪರಿಣಾಮವನ್ನು ಭಾರತವೂ ಅನುಭವಿಸಿದೆ. ಯುದ್ಧ ಮುಗಿದು ಐದು ದಶಕ ಕಳೆದರೂ ಅದರ ಭೀಕರತೆಯ ಸಾಕ್ಷಿಗಳಿನ್ನು ಮಾಸಿಲ್ಲ. ಭಾರತ-ಪಾಕಿಸ್ತಾನದ ಸಂಬಂಧ ಸುಧಾರಿಸಿಲ್ಲ. ಆ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಶ್ಮೀರದ ವಿಚಾರದಲ್ಲಿ ಎರಡೂ ರಾಷ್ಟ್ರಗಳು ಪಟ್ಟನ್ನು ಸಡಿಲಿಸುತ್ತಿಲ್ಲ. ಒಟ್ಟಿನಲ್ಲಿ ರಾಷ್ಟ್ರವೊಂದರ ನಿಲುವು, ಹೆಜ್ಜೆಗಳಲ್ಲಿ ಸಣ್ಣ ದುಡುಕುಗಳಾದರೂ ಅದರ ಪರಿಣಾಮ ಭೀಕರವಾಗಿರುತ್ತದೆ. ವ್ಯವಧಾನ, ದೂರದೃಷ್ಠಿಕೋನಗಳಿಲ್ಲದ ಹೊರತು ಯಾವ ಸಂಬಂಧಗಳು ಸುಧಾರಿಸುವುದಿಲ್ಲ. ಇವೆಲ್ಲವನ್ನು ಮೀರಿ ನಾವು ಎರಡೆರಡು ಯುದ್ಧ ಗೆದ್ದಿದ್ದೇವೆ. ಮೈ ಮೇಲೆ ಬಿದ್ದ ಶತ್ರುಗಳಿಗೆ ತಕ್ಕ ಪಾಠ ಕಲಿಸಿ ಹಿಮ್ಮೆಟ್ಟಿಸಿದ್ದೇವೆ. ಅಷ್ಟರ ಮಟ್ಟಿಗೆ ನಾವೇ ನಿಜವಾದ ಕಲಿಗಳು. ಜೈ ಹಿಂದ್..!

POPULAR  STORIES :

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ಎಸ್.ಯಡಿಯೂರಪ್ಪ.! ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ..!

ಸ್ಯಾಂಡಲ್ ವುಡ್ ನಲ್ಲಿ ಅಪ್ಪ ಮಗನ ನಡುವೆ ಪೈಪೋಟಿ ಶುರುವಾಗಲಿದೆ..!

ಐಪಿಎಲ್ ಸೀಸನ್ 9ರಲ್ಲಿ ಪ್ರೇಕ್ಷಕನೇ 3ನೇ ಅಂಪೈರ್ ಅಂತೆ..!

ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?

ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!

`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?

ನಾನ್ “ವೆಜ್” ಅಂದ್ರೂ ಪ್ರಾಬ್ಲಂ…!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...