ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3ನೇ ಹಾಗೂ ಕೊನೆಯ ಟಿ20 ಪಂದ್ಯಕ್ಕೆ ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ಮೈದಾನ ಸಜ್ಜಾಗಿದೆ. ಟೆಸ್ಟ್ ಸರಣಿಯನ್ನು 1-2ರ ಅಂತರದಲ್ಲಿ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ,ನಂತರ ನಡೆದ ಏಕದಿನ ಸರಣಿಯನ್ನು 5-1ಅಂತರದಲ್ಲಿ ತನ್ನದಾಗಿಸಿಕೊಂಡಿತ್ತು. ಇದು ಐತಿಹಾಸಿಕ ಗೆಲುವು.

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದಿದ್ದ ಭಾರತ 2ನೇ ಪಂದ್ಯವನ್ನು ಸೋತಿತ್ತು. ಇಂದು ನಡೆಯಲಿರುವ ಮೂರನೇ ಟಿ20 ಕದನ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ಅತ್ಯಂತ ಮಹತ್ವದ ಪಂದ್ಯ. ಈ ಪಂದ್ಯ ಗೆದ್ದವರು ಟಿ20 ಸರಣಿ ಗೆಲುವಿನ ಕಿರೀಟ ತಮ್ಮದಾಗಿಸಿಕೊಳ್ಳುವರು.

ವಿರಾಟ್ ನೇತೃತ್ವದ ಭಾರತ ಹಾಗೂ ಜೆ.ಪಿ ಡುಮಿನಿ ಮುಂದಾಳತ್ವದ ದಕ್ಷಿಣ ಆಫ್ರಿಕಾ ತಂಡಗಳೆರಡೂ ಸಹ ಪ್ರಬಲವಾಗಿವೆ. ಯಾವ ತಂಡ ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳುತ್ತದೆ ಎಂದು ಕಾದುನೋಡಬೇಕು. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 9.30ಕ್ಕೆ ಪಂದ್ಯ ಆರಂಭವಾಗಲಿದೆ.








