ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದ್ದ ಐಪಿಎಲ್ 11ಅಂತಿಮ ಘಟ್ಟ ತಲುಪಿದೆ.
ಇಂದು ಮುಂಬೈನ ವಾಂಖೆಡೆಯಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಮಾಜಿ ಚಾಂಪಿಯನ್ ಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಲಿವೆ.
ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಚೆನ್ನೈ ಎದುರು ಸ್ವಲ್ಪದರಲ್ಲೇ ಸೋಲು ಕಂಡ ಕೇನ್ ವಿಲಿಯಮ್ಸನ್ ನೇತೃತ್ವದ ಹೈದರಾಬಾದ್ ಅಂತಿಮ ಫೈಟ್ ನಲ್ಲಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ತಂಡವನ್ನು ಮಣಿಸಿ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಪ್ರಶಸ್ತಿಗೆ ಮುತ್ತಿಕ್ಕುವ ಗುರಿ ಹೊಂದಿದೆ.
ಕಳೆದ ಎರಡು ವರ್ಷ ಟೂರ್ನಿಯಲ್ಲಿ ಪಾಲ್ಗೊಳ್ಳದ ಸಿಎಸ್ ಕೆ ಈ ಬಾರಿ ಐಪಿಎಲ್ ಗೆ ಭರ್ಜರಿ ರೀ ಎಂಟ್ರಿಕೊಟ್ಟು ಅಂತಿಮ ಘಟ್ಟ ತಲುಪಿದ್ದು, ಹೈದರಾಬಾದ್ ಗೆ ಸೋಲುಣಿಸಿ ಕಳೆದೆರಡು ವರ್ಷದ ವನವಾಸದ ನೋವನ್ನು ಮರೆಸಿ, ಅಭಿಮಾನಿಗಳಿಗೆ ಖುಷಿಕೊಡುವ ತವಕದಲ್ಲಿದೆ.
ಆರು ಬಾರಿ ಫೈನಲ್ ಪ್ರವೇಶಿಸಿದ ಅನುಭವ ಧೋನಿ ನಾಯಕತ್ವದ ಸಿಎಸ್ ಕೆ ಜೊತೆಗಿದೆ. ಅಂಬಾಟಿ ರಾಯಡು, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ , ವ್ಯಾಟ್ಸನ್ ಹಾಗೂ ಧೋನಿ ಚೆನ್ನೈನ ಬ್ಯಾಟಿಂಗ್ ಬಲ.
ಹೈದರಾಬಾದ್ ಪಾಲಿಗೆ ರಶೀದ್ ಖಾನ್ ಅವರು ಅಮೋಘ ಫಾರ್ಮ್ ನಲ್ಲಿರೋದು ಹಾಗೂ ಸಂಘಟಿತ ಬೌಲಿಂಗ್ ದಾಳಿ ದೊಡ್ಡ ಶಕ್ತಿ. ನಾಯಕ ಕೇನ್ ವಿಲಿಯಮ್ಸನ್, ಸಿದ್ಧಾರ್ಥ್ ಕೌಲ್ ಬಲ ತಂಡಕ್ಕಿದೆ.
ಒಟ್ಟಿನಲ್ಲಿ ಇಂದು ಪ್ರಶಸ್ತಿಗೆ ಎರಡು ತಂಡಗಳ ನಡುವೆ ಬಿಗ್ ಫೈಟನ್ನಂತೂ ನಿರೀಕ್ಷಿಸಬಹುದು.