ಜಯಶ್ರೀ ಚಂದ್ರಶೇಖರ್ ಸುಮಾರು ಎರಡು ದಶಕಗಳಿಂದ ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೇವಲ ಮಾಧ್ಯಮ ಕ್ಷೇತ್ರದಲ್ಲಿ ಮಾತ್ರವಲ್ಲದೆ ಅದರಿಂದಾಚೆಗೂ ತನ್ನ ಛಾಪು ಮೂಡಿಸಿರುವ ಅಪರೂಪದ ಸಾಧಕಿ. ಸತತ 17 ವರ್ಷಗಳಿಂದ ಉದಯ ನ್ಯೂಸ್ ಜೊತೆಗಿರುವ ಇವರು, ಲೆಕ್ಕವಿಲ್ಲದಷ್ಟು ನಿರೂಪಕ/ನಿರೂಪಕಿಯರನ್ನು ಮಾಧ್ಯಮಲೋಕಕ್ಕೆ ಪರಿಚಯಿಸಿದ್ದಾರೆ…!
ಇವರ ತಂದೆ ಬಸವರಾಜ್, ಮೂಲತಃ ಹಾಸನದವರು. ಜಯಶ್ರೀ ಅವರು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಲ್ಲಿ, ಪೊಲೀಸ್ ಇಲಾಖೆಯಲ್ಲಿದ್ದ ತಂದೆಗೆ ಮಗಳನ್ನು ಪೊಲೀಸ್ ಅಧಿಕಾರಿಯನ್ನಾಗಿ ಮಾಡುವ ಆಸೆ ಇರಲಿಲ್ಲ. ಆದರೆ, ‘ಮಗಳು ಎತ್ತರವಿದ್ದಾಳೆ, ಈಕೆಯನ್ನು ಪೊಲೀಸ್ ಅಧಿಕಾರಿಯನ್ನಾಗಿ ಮಾಡಬೇಕು ಅಥವಾ ನಿರೂಪಕಿಯನ್ನಾಗಿ ಮಾಡಬೇಕು’ ಎಂಬ ಆಸೆ ತಾಯಿ ಗಾಯತ್ರಿ ಅವರದ್ದಾಗಿತ್ತು.
ನಿರೀಕ್ಷಿತವೋ, ಅನಿರೀಕ್ಷತವೋ..? ಕಾಕತಾಳಿಯ ಎಂಬಂತೆ ಜಯಶ್ರೀ ಅವರನ್ನು ಮಾಧ್ಯಮಲೋಕ ಬರಮಾಡಿಕೊಂಡಿತು. ಬಿಕಾಂ ಪದವಿ ಓದುತ್ತಿರುವಾಗ ಕೆಲವೊಂದಿಷ್ಟು ಕೇಬಲ್ ಚಾನಲ್‍ಗಳಲ್ಲಿ ನಿರೂಪಕಿಯಾಗಿ ಕಾರ್ಯಕ್ರಮ ನಡೆಸಿಕೊಡುವ ಅವಕಾಶ ಜಯಶ್ರೀ ಅವರಿಗೆ ಸಿಕ್ಕಿತು.
ಹೀಗಿರುವಾಗ ಹೊಸದಾಗಿ ಆರಂಭವಾಗಲಿದ್ದ ಈ-ಟಿವಿಯಿಂದ ಆಫರ್ ಬಂತು. ಹೈದರಾಬಾದ್‍ನಲ್ಲಿ ಹೊಸ ತಂಡಕ್ಕೆ ಟ್ರೈನಿಂಗ್ ನೀಡುತ್ತಿದ್ದರು. ಜಯಶ್ರೀ ಅವರ ಪಯಣ ಹೈದರಾಬಾದ್‍ನತ್ತ ಸಾಗಿತು. ಅಲ್ಲಿ ತರಬೇತಿ ಪಡೆದರು. ಇನ್ನೇನು ಈ ಟಿವಿ ಲಾಂಚ್ ಆಗಲು ಮೂರ್ನಾಲ್ಕು ತಿಂಗಳಿತ್ತಷ್ಟೇ ಜಯಶ್ರೀ ಅವರು ಬೆಂಗಳೂರಿಗೆ ಬರಲೇ ಬೇಕಾಯಿತು. ಮಗ ಚಿಕ್ಕವನಿದ್ದ, ಹೈದರಾಬಾದ್‍ನಲ್ಲಿರುವುದು ಕಷ್ಟವಾಯಿತು. ಆದ್ದರಿಂದ ಈ ಟಿವಿ ಆರಂಭಕ್ಕೂ ಮುನ್ನವೇ ರಾಜೀನಾಮೆ ನೀಡಿ ಬೆಂಗಳೂರಿಗೆ ಮರಳಿದರು. ಆಗ ಉದಯ ನ್ಯೂಸ್‍ನ ಬಾಗಿಲು ತೆರೆಯಿತು. ಅದು 2000ನೇ ಇಸವಿ.
ಅಲ್ಲಿಂದ ಇವತ್ತಿನವರೆಗೂ, ಅಂದರೆ 17 ವರ್ಷಗಳಕಾಲ ನಿರಂತರವಾಗಿ ಉದಯ ನ್ಯೂಸ್‍ನಲ್ಲಿ ನಿರೂಪಕಿ ಆಗಿದ್ದಾರೆ. ಇಂದು ಕನ್ನಡ ಸುದ್ದಿವಾಹಿಯಲ್ಲಿರುವ ಅನೇಕ ನಿರೂಪಕ/ಕಿಯರು ಇವರಿಂದ ನಿರೂಪಣೆ ಪಾಠ ಕಲಿತಿದ್ದಾರೆ..!
ಮುಖ್ಯವಾಗಿ ಸುದ್ದಿವಾಚಿಸುವ ಇವರು ಉದಯ ಟಿವಿಯಲ್ಲಿ ಜ್ಯೋತಿಷ್ಯ ಕಾರ್ಯಕ್ರಮ, ಡಾಕ್ಟರ್ ಲೈನ್, ಸಿನಿಮಾ ಸಂಬಂಧಿತ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಅಷ್ಟೇಅಲ್ಲದೆ ಬೆಳಗಾವಿಯ ವಿಕಾಸ ಸೌದ ಉದ್ಘಾಟನೆ ಸೇರಿದಂತೆ ನೂರಾರು ರಾಜಕೀಯ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದಾರೆ. ಜೊತೆಗೆ ಅನೇಕ ಡಾಕ್ಯುಮೆಂಟರಿಗಳಿಗೆ ವಾಯ್ಸ್ ನೀಡಿದ್ದಾರೆ.
ಇಷ್ಟೇ ಅಲ್ಲದೆ ನೀವು ನಿತ್ಯ ಇವರ ವಾಯ್ಸ್ ಕೇಳುತ್ತಲೇ ಇರುತ್ತೀರಿ..! ಬಿಎಸ್‍ಎನ್‍ಎಲ್‍ನಲ್ಲಿ ಕೇಳಿಬರುವ, ‘ನೀವು ಕರೆ ಮಾಡಿರುವ ಚಂದದಾರರು…’ ಎಂಬ ದನಿ ಇದೇ ಜಯಶ್ರೀ ಅವರದ್ದು..! ಬಿಎಸ್‍ಎನ್‍ಎಲ್, ಏರ್‍ಟೆಲ್, ಏರ್‍ಸೆಲ್ ಸೇರಿದಂತೆ ಹಲವು ಟೆಲಿಫೋನ್‍ಗಳಿಗೆ ಕಂಠದಾನ ಮಾಡಿದ್ದಾರೆ.
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
10 ನವೆಂಬರ್ 2017 : ಈಶ್ವರ್ ದೈತೋಟ
11 ನವೆಂಬರ್ 2017 : ಭಾವನ
12 ನವೆಂಬರ್ 2017 : ಜಯಶ್ರೀ ಶೇಖರ್
-ಶಶಿಧರ್ ಎಸ್ ದೋಣಿಹಕ್ಲು