ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ಬದಲಾವಣೆಯ ಪರ್ವಕಾಲ ಆರಂಭವಾಗಿದೆ. ಬದಲಾವಣೆ, ಸ್ತ್ರೀ ಸಮಾನತೆ ಇತ್ಯಾದಿ ಇತ್ಯಾದಿಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡುವ ಮಾಧ್ಯಮಗಳಲ್ಲಿಯೇ ಸ್ತ್ರೀ ಸಾರಥ್ಯ ಇರಲಿಲ್ಲ…! ಕನ್ನಡ ಮಾಧ್ಯಮ ಲೋಕದಲ್ಲಿ ಮಹಿಳೆಯರು ಒಳ್ಳೊಳ್ಳೆಯ ಸ್ಥಾನದಲ್ಲಿದ್ದಾರೆ ನಿಜ. ಆದ್ರೆ, ಇಡೀ ಸಂಸ್ಥೆಯನ್ನು ಮುನ್ನಡೆಸುವ ಹೊಣೆಯನ್ನು ಮಹಿಳೆಗೆವಹಿಸಿದ ನಿದರ್ಶನ ಕನ್ನಡ ಮಾಧ್ಯಮ ರಂಗದ ಇತಿಹಾಸದಲ್ಲಿ ಇಲ್ಲಿಯವರೆಗೂ ಇರಲಿಲ್ಲ. ಈಗ ಈ ಅಲಿಖಿತ ಸಿದ್ಧಾಂತವನ್ನು ಮೀರಿ ಅನುಭವಿ ಪತ್ರಕರ್ತೆಯೊಬ್ಬರು ಸುದ್ದಿವಾಹಿನಿಯೊಂದರ ಸಾರಥಿಯಾಗಿದ್ದಾರೆ.
ಹೌದು, ಸದ್ಯದಲ್ಲೇ ಕನ್ನಡಿಗರ ಮನೆ-ಮನ ತಲುಪಲಿರುವ ‘ಫೋಕಸ್’ ಚಾನಲ್‍ನ ಪ್ರಧಾನ ಸಂಪಾದಕಿ ಜ್ಯೋತಿ ಇರ್ವತ್ತೂರು ಅವರೇ ಕನ್ನಡ ಪತ್ರಿಕೋದ್ಯಮದ ಮೊದಲ ಯಜಮಾನಿ.
ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಎರಡಲ್ಲೂ ಅನುಭವವಿರುವ ಜ್ಯೋತಿ ಅವರು ಒಂದು ಸಂಸ್ಥೆಯನ್ನು ಸಮರ್ಥವಾಗಿ ನಡೆಸಿಕೊಂಡು ಹೋಗಬಲ್ಲರು. ಹೆಚ್ಚು ಕಡಿಮೆ 18 ವರ್ಷಗಳ ಅನುಭವ ಇವರದ್ದು. ಸಾಕಷ್ಟು ಹೆಸರು, ಕೀರ್ತಿ ಸಂಪಾದಿಸಿದ್ದರೂ ಅಹಂ ಇಲ್ಲದೆ ಕಿರಿಯರನ್ನು ಬೆಳೆಸುವ ವ್ಯಕ್ತಿತ್ವ. ತಾನೂ ಕೆಲಸ ಮಾಡಿ, ಬೇರೆಯವರಿಂದ ಕೆಲಸ ತೆಗೆಸುತ್ತಾರೆ. ಇವರ ಕೈಕೆಳಗೆ ಕೆಲಸ ಮಾಡುವವರಿಗೇ ಇವರೇ ಸ್ಪೂರ್ತಿ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇರ್ವತ್ತೂರು ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿದವರು ಜ್ಯೋತಿ. ಇಲ್ಲಿನ ನೇಮಿರಾಜ್ ಹಾಗೂ ಮಾಲತಿ ದಂಪತಿಯ 6 ಜನ ಮಕ್ಕಳಲ್ಲಿ ಕೊನೆಯವರು ಇವರು. ತಂದೆ ನಿವೃತ್ತ ಶಿಕ್ಷಕರು. ಮನೆಯಲ್ಲಿ ಸ್ವಲ್ಪ ಜಮೀನು ಕೂಡ ಇದೆ. ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದರಿಂದ ರೈತಾಪಿ ಕೆಲಸದ ಅನುಭವ ಸಹ ಜ್ಯೋತಿ ಅವರಿಗುಂಟು. ಪತಿ ಪ್ರಭಾಕರ್, ಮಗಳು ನೀಲಿಮಾ.
ಪ್ರಾಥಮಿಕ ಶಿಕ್ಷಣವನ್ನು ಇರ್ವತ್ತೂರಿನಲ್ಲಿ, ಪ್ರೌಢಶಿಕ್ಷಣವನ್ನು ಮುರತಂಗಡಿಯಲ್ಲಿ, ಪದವಿ ಪೂರ್ವಶಿಕ್ಷಣ ಹಾಗೂ ಬಿಎಸ್‍ಸಿ ಪದವಿಯನ್ನು ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಪಡೆದರು. ಅಪ್ಪ-ಅಮ್ಮನಿಗೆ ಇವರನ್ನು ಡಾಕ್ಟರ್ ಮಾಡ್ಬೇಕು ಎನ್ನುವ ಆಸೆಯಿತ್ತು. ಆದರೆ, ಜ್ಯೋತಿಯವರಿಗೆ ಚಿಕ್ಕಂದಿನಿಂದಲೂ ಪರಿಸರ ಪ್ರೇಮ. ಸಸ್ಯಗಳ ಬಗ್ಗೆ ತಿಳಿದುಕೊಳ್ಳುವುದರಲ್ಲಿ ಆಸಕ್ತಿ. ಆದ್ದರಿಂದ ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಬೇಕು ಎಂದುಕೊಂಡಿದ್ದರು. ಆದ್ರೆ, ಎಂಎಸ್‍ಸಿಗೆ ಸೀಟ್ ಸಿಗಲಿಲ್ಲ.
ಮುಂದೇನು ಎಂಬ ಪ್ರಶ್ನೆ ಕಾಡಿತು. ಕ್ರೀಯೇಟಿವ್ ಫೀಲ್ಡ್, ಬರವಣಿಗೆ, ಸಿನಿಮಾ ಮೊದಲಾದವುಗಳ ಬಗ್ಗೆ ಆಸಕ್ತಿಯಿದ್ದ ಜ್ಯೋತಿಯವರು ಏನಾದರೂ ಮಾಡಲೇಬೇಕಲ್ಲ ಅಂತ ಯೋಚಿಸ್ತಿದ್ರು. ಎಂಎಸ್‍ಸಿ ಸೀಟ್ ಸಿಗದಿರುವಾಗ ಎಜುಕೇಷನ್ ಡಿಸ್ ಕಂಟಿನ್ಯೂ ಮಾಡಬಾರದಂತ ಮೈಸೂರು ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮ ಕೋರ್ಸ್ ಮಾಡಿದ್ರು. ಬಳಿಕ ಟೀಚಿಂಗ್ ಪ್ರೊಫೆಷನ್ ಆಯ್ಕೆ ಮಾಡಿಕೊಳ್ಳೋದು ಅಂತ ಡಿಸೈಡ್ ಮಾಡಿದ್ರು.
ಅಷ್ಟರಲ್ಲಿ ಅಣ್ಣ ಉದಯ್ ಕುಮಾರ್ ಅವರು (ಈಗ ಇವರು ಮಂಗಳೂರು ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ) ಜರ್ನಲಿಸಂಗೆ ಸ್ಕೋಪ್ ಇದೆ. ನಿನಗೆ ಬರವಣಿಗೆಯಲ್ಲಿ ಆಸಕ್ತಿ ಇದೆಯಲ್ಲಾ ಮಂಗಳೂರು ಯೂನಿವರ್ಸಿಟಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮಾಡು ಅಂದ್ರು. ಅಣ್ಣನ ಸಲಹೆ ಸರಿ ಇದೆ ಅನಿಸ್ತು. ಸ್ನಾತಕೋತ್ತರ ಪದವಿಗೆ ಸೇರಿದ್ರು. ಎಂಎ ಮಾಡುವಾಗ ಟಿವಿ ಜರ್ನಲಿಸಂ ಬಗ್ಗೆ ತರಬೇತಿ ಪಡೆಯಲು ನಾರ್ವೆಯ ವೋಲ್ಡಾ ಯೂನಿವರ್ಸಿಟಿಗೆ ಹೋಗುವ ಅವಕಾಶ ಸಿಕ್ಕಿತ್ತು.
ಬರವಣಿಗೆ ಜೊತೆ ಫೋಟೋಗ್ರಫಿಯೂ ಇವರ ಆಸಕ್ತಿದಾಯಕ ಕ್ಷೇತ್ರ. ಪಿಜಿ ಮುಗಿದ ಮೇಲೆ 1999ರಲ್ಲಿ ಮಂಗಳೂರಲ್ಲೇ ‘ಇಂಡಿಯನ್ ಎಕ್ಸ್ ಪ್ರೆಸ್’ ದಿನಪತ್ರಿಕೆಯಲ್ಲಿ ಟ್ರೈನಿಯಾಗಿ ಸೇರಿದ್ರು. ಶಾಲಾ ದಿನಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿದ್ದಾದರೂ ಮುಂದಿನ ದಿನಗಳಲ್ಲಿ ಇಂಗ್ಲಿಷ್‍ನಲ್ಲಿ ಹಿಡಿತ ಸಾಧಿಸಿದ್ದರು. ಹೀಗಾಗಿ ಇಂಗ್ಲಿಷ್ ಪತ್ರಿಕೆ ಮೂಲಕ ಪತ್ರಕರ್ತೆಯಾಗಿ ವೃತ್ತಿ ಜೀವನ ಆರಂಭಿಸಲು ಸಾಧ್ಯವಾಯ್ತು.
ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಮಳೆಯಿಂದಾಗುವ ಅನಾಹುತದ ಸುದ್ದಿ ಆಗಿರಬಹುದು,ಸಾಂಸ್ಕೃತಿಕ ಕಾರ್ಯಕ್ರಮಗಳ ವರದಿ, ಕ್ರೈಂ ರಿಪೋರ್ಟಿಂಗ್ ಎಲ್ಲವನ್ನೂ ಮಾಡಿದ್ರು. ಫೋಟೋಗ್ರಫಿಯಲ್ಲೂ ಪರಿಣಿತಿ ಹೊಂದಿದ್ದರಿಂದ ಎಷ್ಟೋ ವರದಿಗಳಿಗೆ ತಾವೇ ಛಾಯಚಿತ್ರ ತೆಗೆದುಕೊಳ್ಳುತ್ತಿದ್ದರು. ಫೋಟೋಫೀಚರ್ ಗಳನ್ನು ಬರೆಯುತ್ತಿದ್ರು.
ಸುಮಾರು ಒಂದು ವರ್ಷ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಕೆಲಸ ಮಾಡಿ ತರುವಾಯ ಮಂಗಳೂರಿನಿಂದ ಆರಂಭವಾದ ‘ಜನವಾಹಿನಿ’ ಪತ್ರಿಕೆಗೆ ರಿಪೋರ್ಟರ್ ಆಗಿ ಸೇರಿದ್ರು. ಇಲ್ಲಿ ವರದಿಗಾರಿಕೆ ಜೊತೆ ಜೊತೆಗೆ ಕಥೆಗಳನ್ನು ಲೇಖನಗಳನ್ನು ಬರೀತಿದ್ರು. ಈ ಪತ್ರಿಕೆಯಲ್ಲಿ ಒಳ್ಳೆಯ ಎಕ್ಸ್ ಪೀರಿಯನ್ಸ್ ಸಿಗ್ತು. ಸುರತ್ಕಲ್ ನಲ್ಲಿ ಕೋಮುಗಲಭೆ ನಡೆದಾಗ ಎರಡು ಕೋಮುಗಳನ್ನು ಒಂದುಗೂಡಿಸುವಂತಹ ಲೇಖನಗಳನ್ನು ಬರೆದಿದ್ದು ಜ್ಯೋತಿಯವರಿಗೆ ತೃಪ್ತಿ ನೀಡಿದೆ. ಪತ್ರಕರ್ತರು ಕೋಮುಗಳನ್ನು ಒಡೆಯುವ ಕೆಲಸ ಮಾಡಬಾರದು. ಒಂದುಗೂಡಿಸುವ ಕೆಲಸ ಮಾಡಬೇಕು. ಅದನ್ನು ಜ್ಯೋತಿ ನಿಭಾಯಿಸಿದ್ದಾರೆ.
ಸ್ವಲ್ಪ ಸಮಯ ಅಲ್ಲಿ ಕೆಲಸ ಮಾಡಿ ನಂತರ ಈ-ಟಿವಿಗೆ ಜಾಯಿನ್ ಆದ್ರು. ಈ-ಟಿವಿಗೆ ಆಯ್ಕೆ ಆಗುತ್ತೇನೆಂಬ ಕಲ್ಪನೆಯೂ ಇರಲಿಲ್ಲ. ಜಾಹಿರಾತು ನೋಡಿ ನಂದೂ ಒಂದಿರಲಿ ಅಂತ ಅರ್ಜಿ ಹಾಕಿದ್ದರಂತೆ. ಆಯ್ಕೆಯಾದ ಬಳಿಕ ರಾಮೋಜಿ ಫಿಲ್ಮ್ ಸಿಟಿಯಲ್ಲಿ ತರಬೇತಿಯನ್ನು ಪಡೆದು, ನಂತರ ಬೆಂಗಳೂರಲ್ಲಿ ಕೆಲಸ ಆರಂಭಿಸಿದ್ರು. ಮಂಗಳೂರು, ಅಪ್ಪ-ಅಮ್ಮ ಕುಟುಂಬವನ್ನು ಎಂದೂ ಬಿಟ್ಟಿರದಿದ್ದ ಜ್ಯೋತಿ ಅವರಿಗೆ ಇದು ಹೊಸತಾಗಿತ್ತು.
ಬೆಂಗಳೂರಿನಲ್ಲಿ ಈ-ಟಿವಿ ಪ್ರತಿನಿಧಿಯಾಗಿ ವರದಿಗಾರಿಕೆ ಆರಂಭಿಸಿದಾಗ ಮಾಡಿದ ಮೊದಲ ವರದಿ ಮಾಡೆಲಿಂಗ್ ಬಗ್ಗೆ. ಮಾಡೆಲ್ ಗಳು ಸಿನಿಮಾ ರಂಗಕ್ಕೆ ಹೇಗೆ ಎಂಟ್ರಿಕೊಡ್ತಿದ್ದಾರೆ ಎಂಬುದರ ಕುರಿತ ವರದಿ ಅದಾಗಿತ್ತು. ಹೇಳಿ-ಕೇಳಿ ಪರಿಸರ ಪ್ರೇಮಿಯಾಗಿದ್ದ ಇವರಿಗೆ ಪರಿಸರದಲ್ಲಿನ ಸಮಸ್ಯೆಗಳು ವರದಿಗಾರಿಕೆಯ ಕಣ್ಣಿಗೆ ಬೀಳದೇ ಇರಲು ಸಾಧ್ಯವೇ…? ಬೆಳ್ಳಂದೂರು ಲೇಕ್, ವರ್ತೂರು ಲೇಕ್ ಗಳ ಸಮಸ್ಯೆಗಳ ಬಗ್ಗೆ ವಿಸ್ತ್ರತ ವರದಿ ಮಾಡಿ, ರಾಜ್ಯ ಸರ್ಕಾರದ ಗಮನವನ್ನು ಸೆಳೆದ್ರು.
ಮೊದ ಮೊದಲು ಇವರಿಲ್ಲದ್ದ ಹಿಂಜರಿಕೆ ಸ್ವಭಾವ ನಿಧಾನವಾಗಿ ದೂರಾಗುತ್ತ ಬಂತು. ಸಿನಿಮಾ, ಪೊಲಿಟಿಕಲ್, ಕ್ರೈಂ, ಮಾನವಾಸಕ್ತ ವರದಿಗಳು ಎಲ್ಲ ಬಗೆಯ ವರದಿಗಳನ್ನು ಮಾಡಿ ಸೈ ಎನಿಸಿಕೊಂಡ್ರು. ಇಷೆಲ್ಲಾ ಆದು, ಮುಖ್ಯವಾದ ಪೊಲಿಟಿಕಲ್ ಸ್ಟೋರಿಗಳನ್ನು ಮೇಲ್ ಜರ್ನಲಿಸ್ಟ್ ಗಳೇ ಮಾಡಬೇಕೆಂಬ ಪೂರ್ವಗ್ರಹ ಪೀಡಿತ ಸಂಪ್ರದಾಯದ ಬಗ್ಗೆ ಬೇಜಾರಿದ್ದರೂ ಆ ಟೈಮಲ್ಲಿ ಅದನ್ನು ಪ್ರಶ್ನಿಸುವ ಧೈರ್ಯವಿರಲಿಲ್ಲ.
ಬಿಜೆಪಿ-ಜೆಡಿಎಸ್ ಸಂಮಿಶ್ರ ಸರ್ಕಾರ ರಚನೆಯಾದಾಗ ವರದಿ ಮಾಡುವ ಅವಕಾಶ ಜ್ಯೋತಿ ಅವರದ್ದಾಯಿತು. ಈ ರಾಜಕೀಯ ಬೆಳವಣಿಗೆಗಳ ಕುರಿತ ವರದಿಗಾರಿಕೆ ಜ್ಯೋತಿ ಅವರನ್ನು ರಾಜಕೀಯ ವರದಿಗಾರ್ತಿಯಾಗಿ ಗುರುತಿಸುವಂತೆ ಮಾಡ್ತು. ನಂತರ 2004ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಸುತ್ತಿ ಜನಸಾಮಾನ್ಯರ ನಾಡಿಮಿಡಿತ ಅರಿಯುವ ಪ್ರಯತ್ನವನ್ನು ಮಾಡಿದ್ರು.
ಬುಡಕಟ್ಟು ಜನರು ವಾಸವಿದ್ದ ಕಾಡೊಂದಕ್ಕೆ ಪ್ರವೇಶಿಸಿದ್ದಾಗ ಕಾಡಿನ ಮಧ್ಯೆ ಪುಟ್ಟ ಕೆರೆಯಲ್ಲಿ ಆನೆಗಳು ನೀರು ಕುಡಿಯುತ್ತಿದ್ದವು. ಆ ದೃಶ್ಯವನ್ನೇ ಬ್ಯಾಗ್ ರೌಂಡ್ ಆಗಿ ತೆಗೆದುಕೊಂಡು ಪಿಟುಸಿ ಕೊಡಲು ಮುಂದಾದ್ರು. ಆನೆ ಇವರ ಕಡೆ ಬರುತ್ತಿದ್ದರೂ ಅಂಜದೆ ಪಿಟುಸಿ ಕೊಟ್ಟಿದ್ರು. ಇದನ್ನು ಸೆರೆಹಿಡಿದಿದ್ದು ವೀಡಿಯೋ ಜರ್ನಲಿಸ್ಟ್ ವಿಠ್ಠಲ್ ಅವರು.
ಡಾ. ರಾಜ್‍ಕುಮಾರ್ ಅವರು ವಿಧಿವಶರಾದಾಗ (2006 ಏಪ್ರಿಲ್ 12) ನಡೆದ ಲಾಠಿ ಚಾರ್ಜ್, ಗೋಲಿಬಾರ್ ಸಂದರ್ಭದಲ್ಲಿ ಸ್ಥಳದಲ್ಲಿದ್ದು ವರದಿ ಮಾಡಿದ್ದು ಜ್ಯೋತಿ ಅವರಿಗೆ ಎಂದೂ ಮರೆಯಲಾಗದ ಘಟನೆ. ಇದೊಂದು ಸವಾಲು ಕೂಡ ಆಗಿತ್ತು. ಜನಸಾಮಾನ್ಯರನ್ನು ತಲುಪುವ ‘ಹಲೋ ಇಂಡಿಯಾ’, ‘ಇದು ನಮ್ಮ ಕರ್ನಾಟಕ’ ಸೇರಿದಂತೆ ಅನೇಕ ಜನಸ್ನೇಹಿ, ಜನಪರ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯಕ್ರಮಗಳನ್ನು ವರದಿಗಳನ್ನು ಈ-ಟಿವಿಯಲ್ಲಿ ಜ್ಯೋತಿ ಮಾಡಿದ್ರು. ಜೊತೆಗೆ ಇಲ್ಲಿರುವಾಗ ಬಿಬಿಸಿ ಸಹಯೋಗದಲ್ಲಿ ಬೆಂಗಳೂರಿನ ಮಾಲಿನ್ಯದ ಬಗ್ಗೆ ಮಾಡಿದ ಡಾಕ್ಯುಮೆಂಟರಿ (ಸಾಕ್ಷ್ಯಚಿತ್ರ) ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು.
ಈ-ಟಿವಿ ಬಳಿಕ ಸಮಯ ಸುದ್ದಿವಾಹಿನಿಗೆ ಪೊಲಟಿಕಲ್ ಬ್ಯೂರೋ ಚೀಫ್ ಆಗಿ ಹೋದ್ರು. ಇಲ್ಲಿರುವಾಗ ಯುಎಸ್ ಕಾನ್ಸುಲೇಟ್ ನಿಂದ ಇಂಟರ್ ನ್ಯಾಷನಲ್ ಲೀಡರ್ ಶಿಪ್ ಪ್ರೋಗ್ರಾಂ ಅಡಿಯಲ್ಲಿ ಅಮೆರಿಕಾದ ವಿದೇಶಾಂಗ ನೀತಿ ಬಗ್ಗೆ ತಿಳಿದುಕೊಳ್ಳಲು ಅಮೆರಿಕಾ ಪ್ರವಾಸ ಹೋಗುವ ಅವಕಾಶ ಸಿಕ್ತು. ವಾಶಿಂಗ್ ಟನ್, ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ, ಫ್ಲೋರಿಡಾ ಮೊದಲಾದ ಕಡೆಗಳಿಗೆ ಭೇಟಿ ನೀಡಿದ್ದರು. ಈ ಪ್ರವಾಸದ ಬಳಿಕ ಸಮಯದಲ್ಲಿ ಕಾರಣಾಂತರದಿಂದ ಅದ್ಯಾಕೋ ಇವರನ್ನು ಪೊಟಿಕಲ್ ಬ್ಯೂರೋ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಸಿದ್ರು. ಇದರಿಂದ ವಿಚಲಿತರಾಗದೆ ತಾನೇನು ಎನ್ನೋದನ್ನು ಜ್ಯೋತಿ ಸಾಭೀತು ಪಡಿಸಿದ್ರು. ತಮ್ಮ ವಿರುದ್ಧ ಕಲ್ಲೆಸೆದರೆ ಅವುಗಳನ್ನು ಯಶಸ್ಸಿನ ಮೆಟ್ಟಿಲಾಗಿಸಿಕೊಳ್ಳಬೇಕು ಎಂಬುದಕ್ಕೆ ತಾಜಾ ಪ್ರೇರಣೆ ಜ್ಯೋತಿ.
ಪಿ. ಸಾಯಿನಾಥ್ ಅವರ ‘ಎವರಿಬಡಿ ಲವ್ಸ್ ಎ ಗುಡ್ ಡ್ರಾಟ್’ ಜ್ಯೋತಿ ಅವರ ಮೇಲೆ ಪ್ರಭಾವ ಬೀರಿದೆ. ಜನಸಾಮಾನ್ಯರ, ದನಿ ಇಲ್ಲದವರ ದನಿಯಾಗಲು ‘ಸಿರಿ ಸಾಮಾನ್ಯ’ ಎಂಬ ಕಾರ್ಯಕ್ರಮ ನಡೆಸಿದ್ರು. ಇದರಲ್ಲಿ ಮಂಗಳಮುಖಿಯರ ಮನೆಯಲ್ಲಿ ಉಳಿದು ಅವರ ಜೀವನವನ್ನು ಚಿತ್ರಿಸುವ ಕೆಲಸ ಮಾಡಿದ್ರು. ಅವರ ಬಗೆಗಿನ ನೆಗಿಟೀವ್ ಯೋಚನೆಗಳನ್ನು ದೂರಮಾಡುವಂತಹ ವರದಿಗಳನ್ನು ಮಾಡಿದ್ರು. ಬಳ್ಳಾರಿಯ ಗಣಿಗಾರಿಕೆ ನಿಂತ ಮೇಲಿನ ಪರಿಸ್ಥಿತಿ, ಹೆಗ್ಗಡ ದೇವನ ಕೋಟೆಯಲ್ಲಿನ ಜೇನು ಕುರುಬರ ಜೀವನ ಸೇರಿದಂತೆ ಹತ್ತಾರು ವರದಿಗಳ ಮೂಲಕ ತನ್ನ ವರದಿಗಾರಿಕೆಯ ತಾಕತ್ತನ್ನು ತೋರಿಸಿದ್ರು.
ರೈತರು, ಲೈಂಗಿಕ ಅಲ್ಪಸಂಖ್ಯಾತರು, ಶೋಷಿತರು ಹೀಗೆ ಎಲ್ಲಾ ವರ್ಗದ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ದನಿಯಾದ ಜ್ಯೋತಿ ಮತ್ತೆ ರಾಜಕೀಯ ವಿಭಾಗದ ಮುಖ್ಯಸ್ಥರಾದ್ರು. ‘ರಾಜನೀತಿ’, ‘ನಾಯಕ-ನಾವಿಕ’ ಮೊದಲಾದ ಪೊಲಟಿಕಲ್ ಸಂದರ್ಶನ , ಪ್ರೋಗ್ರಾಂಗಳನ್ನು ನಡೆಸಿಕೊಟ್ರು.
ಸ್ಟುಡಿಯೋದಲ್ಲಿ ಕುಳಿತು ಕಾರ್ಯಕ್ರಮ ಮಾಡೋದಕ್ಕು ಸೈ, ಫೀಲ್ಡ್ ಗೆ ಇಳಿದು ವರದಿಗಾರಿಕೆ ಮಾಡೋದ್ರಲ್ಲೂ ಸೈ ಎನಿಸಿಕೊಂಡಿದ್ದ ಇವರಿಗೆ 2015ರಲ್ಲಿ ಹೊಸದಾಗಿ ಆರಂಭವಾದ ಪ್ರಜಾ ಟಿವಿಯಲ್ಲಿ ಅವಕಾಶ ಸಿಕ್ಕಿತು. ಇಲ್ಲಿ ಪೊಲಿಟಿಕಲ್ ಹೆಡ್ ಆಗಿ ‘ಚದುರಂಗ’ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ರು.
ಇನ್ನೊಂದು ವಿಷಯವನ್ನು ಹೇಳಲೇಬೇಕು. ಜ್ಯೋತಿ ಅವರಿಗೆ ಸಂಗೀತದಲ್ಲೂ ತುಂಬಾ ಆಸಕ್ತಿಯಿದೆ. ಚಿಕ್ಕಂದಿನಲ್ಲಿ ಇವರು ಭಾವಗೀತೆಗಳನ್ನು ಹಾಡುತ್ತಿರುವಾಗ ಸಹೋದರ ಸಂಬಂಧಿ ವೃಷಭ್ ಅವುಗಳನ್ನು ರೆಕಾರ್ಡ್ ಮಾಡುತ್ತಿದ್ದರು. ಸದಾ ಪ್ರೋತ್ಸಾಹ ನೀಡುತ್ತಿದ್ದ ವೃಷಭ್ ಅವರ ಅಗಲುವಿಕೆ ಜ್ಯೋತಿಯವರಿಗೆ ಮತ್ತೆ ಮತ್ತೆ ಕಾಡುವ ನೋವು.
ಇವತ್ತಿಗೂ ಹಳ್ಳಿಗೆ ಹೋದಾಗ ಅಲ್ಲಿನ ಹಳೆಯ ನೆನಪುಗಳು. ಶಾಲೆ, ಊರಿನವರು ಎಲ್ಲರೂ ನೆನಪಾಗ್ತಾರೆ. ಬಾಲ್ಯವೇ ಚಂದ. ಎಲ್ಲರೂ ನಮ್ಮೊಡನೆ ಇರಬೇಕಿತ್ತು ಅನಿಸುತ್ತೆ ಎಂದು ಹೇಳುತ್ತಾರೆ ಜ್ಯೋತಿ.
ನಾಡೋಜ ಪ್ರತಿಷ್ಠಾನದ ಗೌರವಕ್ಕೆ, ನ್ಯೂಸ್ ಪೇಪರ್ ಅಸೋಷಿಯೇಶನ್ ನಿಂದ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಶಸ್ತಿಯ ಹಿಂದೆ ಹೋಗದ ಇವರು, ತಮ್ಮ ಕೆಲಸದಿಂದ ಜನಸಾಮಾನ್ಯರಿಗೆ, ಸಮಾಜಕ್ಕೆ ಒಳಿತಾದರೆ ಅದೇ ಪತ್ರಕರ್ತರಿಗೆ ಸಿಗೋ ದೊಡ್ಡ ಪ್ರಶಸ್ತಿ ಎನ್ನುತ್ತಾರೆ.
ಇದೀಗ ‘ಫೋಕಸ್’’ ಟಿವಿಯ ಪ್ರಧಾನ ಸಂಪಾದಕರಾಗಿ ದೊಡ್ಡ ಜವಬ್ದಾರಿಯನ್ನು ಹೊತ್ತಿದ್ದಾರೆ. ಮೊದಲೇ ಹೇಳಿದಂತೆ ಕನ್ನಡ ಪತ್ರಿಕೋದ್ಯಮದಲ್ಲಿ ಸಂಪಾದಕರಾದ ಮೊದಲ ಮಹಿಳೆ ಜ್ಯೋತಿ. ಕನ್ನಡ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಮೊದಲ ಬಾರಿಗೆ ಮಹಿಳೆಗೆ ಪ್ರಧಾನ ಸಂಪಾದಕಿ ಹುದ್ದೆ ನೀಡೋ ಮೂಲಕ ಬದಲಾವಣೆ ಗಾಳಿ ಬೀಸಿದೆ. ಈ ಗಾಳಿ ಬೀಸೋ ನಿರ್ಧಾರ ತಗೊಂಡಿದ್ದು ಫೋಕಸ್ ಟಿವಿ ಕನ್ನಡದ ಎಂ.ಡಿ ಹೇಮಂತ್ ಅವರು ಅನ್ನುತ್ತಾರೆ ಜ್ಯೋತಿ ಇರ್ವತ್ತೂರು.
ಶುಭವಾಗಲಿ ಮೇಡಂ…
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
37)15ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು