‘ಕಂಬ್ಳಿಹುಳ’. ಟೈಟಲ್ ಮೂಲಕವೇ ಚಂದನವನ ಹಾಗೂ ಸಿನಿರಸಿಕರಲ್ಲಿ ಕುತೂಹಲ ಮೂಡಿಸಿದೆ . ಕಲರ್ ಫುಲ್ ಹಾಡಿನ ಮೂಲಕ ಎಲ್ಲರ ಗಮನ ಸೆಳೆದ ಚಿತ್ರತಂಡ ಈಗ ಟ್ರೇಲರ್ ಬಿಡುಗಡೆ ಮಾಡಿ ಮ್ಯಾಜಿಕ್ ಮಾಡ್ತಿದೆ . ಇನ್ನೂ ಗೃಹ ಸಚಿವ ಆರಗ ಜ್ಞಾನೇಂದ್ರ ಯುವ ಪ್ರತಿಭೆಗಳಿಗೆ ಬೆನ್ನುತಟ್ಟಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
ಕಾರ್ಯಕ್ರಮದಲ್ಲಿ ನಟ ಪ್ರವೀಣ್ ತೇಜ್, ನಿರ್ದೇಶಕ ಸತ್ಯ ಪ್ರಕಾಶ್ ಭಾಗಿಯಾಗಿ ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಿದ್ರು.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ” ಸಿನಿಮಾ ಮಾಯಾಜಗತ್ತು ಸಿಹಿ ಕಹಿ ಎಲ್ಲವೂ ಇದರಲ್ಲಿರುತ್ತೆ. ಒಂದು ಹೋರಾಟದ ಮನೋಭಾವ ಇದ್ದಾಗ ಮಾತ್ರ ಸಿನಿಮಾ ಮಾಡಲು ಸಾಧ್ಯ . ಈ ಚಿತ್ರದ ನಿರ್ಮಾಪಕರಲ್ಲಿಯೂ ಅಂತಹದ್ದೊಂದು ಹೋರಾಟದ ಮನೋಭಾವ ಇದ್ದಿದ್ದರಿಂದ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮಲೆನಾಡಿನ ಯುವಕರು ತಾವು ಬೆಳೆದಂತ ಊರು, ಪರಿಸರ, ಬದುಕು ಇವುಗಳ ಆಧಾರ ಮೇಲೆ ಕಥೆ ಕಟ್ಟಿ ಸಿನಿಮಾ ಮಾಡುತ್ತಾರೆ. ನೈಜತೆಯಿಂದ ಕೂಡಿರುವ ‘ಕಂಬ್ಳಿಹುಳ’ ಸಿನಿಮಾ ಟ್ರೇಲರ್ ನೋಡಿದಾಗ ನನಗೂ ಅದೇ ಅನಿಸಿದ್ದು, ಖಂಡಿತಾ ಸಿನಿಮಾ ಯಶಸ್ಸು ಆಗುತ್ತೆ ” ಎಂದು ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಿದರು .
ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ನಿರ್ದೇಶಕ ನವನ್ ಶ್ರೀನಿವಾಸ್ ನಿರ್ದೇಶನದ ಮೊದಲ ಸಿನಿಮಾ ಇದು. ಮಲೆನಾಡು ಭಾಗದಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಶೃಂಗೇರಿ, ಸಕಲೇಶಪುರ, ತೀರ್ಥಹಳ್ಳಿ, ಸುತ್ತಮುತ್ತ ‘ಕಂಬ್ಳಿಹುಳ’ ಚಿತ್ರೀಕರಣ ನಡೆಸಲಾಗಿದೆ.
ಎಮೋಷನಲ್ ಜರ್ನಿ ಸಿನಿಮಾ ಇದಾಗಿದ್ದು ರಂಗಭೂಮಿ ಕಲಾವಿದ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.
ಮಲೆನಾಡು ಭಾಗದಲ್ಲಿ ನಡೆಯುವ ಪ್ರೇಮಕಥೆ ಇದು. ಈ ವೇಳೆ ಚಿತ್ರದ ನಾಯಕ ಅಂಜನ್ ನಾಗೇಂದ್ರ ಮಾತನಾಡಿ , ಕಂಬ್ಳಿಹುಳ ನನಗೆ ಹೊಸ ಜೀವನ ಕೊಟ್ಟಂತ ಸಿನಿಮಾ. ನಿರ್ದೇಶಕರಿಗೆ ನನಗೆ ಯಾವುದಾದರೂ ಪಾತ್ರ ಕೊಡಿ ಮಾಡುತ್ತೇನೆ ಎಂದಿದ್ದೆ , ಒಂದಷ್ಟು ದಿನಗಳ ನಂತರ ಈ ಸಿನಿಮಾದಲ್ಲಿ ಹೀರೋ ಪಾತ್ರ ಮಾಡಬೇಕು ಎಂದರು . ನಾನು ರಂಗಭೂಮಿ ಕಲಾವಿದನಾದ್ದರಿಂದ ಸಿನಿಮಾ ನಟನೆಗೆ ಹೊಂದಿಕೊಳ್ಳಲು ಒಂದಿಷ್ಟು ವರ್ಕ್ ಶಾಪ್ ಮಾಡಿ ನಟಿಸಿದ್ದೇನೆ. ಇಲ್ಲಿವರೆಗೆ ನಮ್ಮ ಸಿನಿಮಾಗೆ ಹೇಗೆ ಸಪೋರ್ಟ್ ಮಾಡಿದ್ದೀರಾ ಹಾಗೆಯೇ ಬಿಡುಗಡೆಯಾದ ಮೇಲು ಪ್ರೀತಿ ತೋರಿಸಿ ಪ್ರೋತ್ಸಹಿಸಿ ಎಂದ್ರು.
ಚಿತ್ರದ ನಾಯಕಿ ಅಶ್ವಿತಾ ಆರ್ ಹೆಗ್ಡೆ ಮಾತನಾಡಿ , ” ಚಿತ್ರದಲ್ಲಿ ಮಲೆನಾಡಿನಲ್ಲಿ ವಾಸವಾಗಿರುವ ಮಲಯಾಳಿ ಹುಡುಗಿಯ ಪಾತ್ರ ನಿರ್ವಹಿಸುತ್ತಿದ್ದೇನೆ. ಮೂಲತಃ ನಾನು ರಂಗಭೂಮಿ ಕಲಾವಿದೆ. ನಮ್ಮೆಲ್ಲರಿಗೂ ಚಿತ್ರರಂಗ ಹೊಸತು. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಹೊಸಬರ ಸಿನಿಮಾ ನೋಡಿ ಹಾರೈಸಿ. ಅವಕಾಶ ನೀಡಿದ್ದಕ್ಕಾಗಿ ಚಿತ್ರದ ನಿರ್ದೇಶಕರಿಗೆ ನಾನು ಥ್ಯಾಂಕ್ಸ್ ಹೇಳುತ್ತೇನೆ ” ಎಂದರು .
ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರ ನೈಜ ಘಟನೆಯಾಧಾರಿತ ಸಿನಿಮಾ. ಚಿತ್ರದಲ್ಲಿ ರೋಹಿತ್ ಕುಮಾರ್, ದೀಪಕ್ ರೈ ಪಣಜೆ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ಸೇರಿದಂತೆ ಹಲವು ಯುವ ಪ್ರತಿಭೆಗಳು ನಟಿಸಿದ್ದಾರೆ. ವಿಜಯ್, ಸವೀನ್, ಪುನೀತ್ ಹಾಗೂ ಗುರು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸತೀಶ್ ರಾಜೇಂದ್ರನ್ ಛಾಯಾಗ್ರಾಹಣ, ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿಕೆ ಸಂಕಲನ, ಶಿವ ಪ್ರಸಾದ್ ಸಂಗೀತ ನಿರ್ದೇಶನ ‘ಕಂಬ್ಳಿಹುಳ’ ಚಿತ್ರಕ್ಕಿದೆ. ನವೆಂಬರ್ 4ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.