ಎಂ, ಕರುಣಾನಿಧಿ, ರಾಷ್ಟ್ರರಾಜಕಾರಣದಲ್ಲಿ, ಅದರಲ್ಲೂ ಮುಖ್ಯವಾಗಿ ತಮಿಳುನಾಡಿನ ರಾಜಕಾರಣದಲ್ಲಿ ಎಂದೂ ಅಳಿಸಲಾಗದ ಹೆಸರು.
ಸೋಲಿಲ್ಲದ ಸರದಾರನಾಗಿದ್ದ ಕರುಣಾನಿಧಿ ಇಂದು ಸಂಜೆ 6.10ಕ್ಕೆ ಸಾವಿಗೆ ಶರಣಾದರು. ಇಹಲೋಕದ ಯಾತ್ರೆ ಮುಗಿಸಿದ ಈ ಸ್ಟಾರ್ ರಾಜಕಾರಣಿಯ ಲೈಫ್ ಜರ್ನಿ ಹೇಗಿತ್ತು ಗೊತ್ತಾ?
1924 ಜೂನ್ 3ರಂದು ಮುತ್ತುವೇಲ್ ಹಾಗೂ ಅಂಜುಗಂ ದಂಪತಿ ಪುತ್ರನಾಗಿ ತಿರುವರೂರ್ ನ ತಿರುವಲೈನಲ್ಲಿ ಜನಿಸಿದ ಕರುಣಾನಿಧಿ ಅರ್ಥಾತ್ ಮುತ್ತುವೇಲ್ ಕರುಣಾನಿಧಿ ಅವರ ಜನ್ಮನಾಮ ದಕ್ಷಿಣಾ ಮೂರ್ತಿ. ಪದ್ಮಾವತಿ ಅಮ್ಮಾಳ್, ದಯಾಳು ಅಮ್ಮಾಳ್, ರಜತಿಯಮ್ಮಾಳ್ ಎಂಬ ಮೂವರು ಪತ್ನಿಯರು. ಎಂ.ಕೆ.ಮುತ್ತು ಪದ್ಮಾವತಿ ಅಮ್ಮಾಳ್ ಮಗ, ಅಳಗಿರಿ, ಸ್ಟಾಲಿನ್, ಸೆಲ್ವಿ ಮತ್ತು ತಮಿಳರಸು ದಯಾಳು ಅಮ್ಮಾಳ್ ಮಕ್ಕಳು. ಕನ್ನಿಮೊಳಿ ರಜತಿಯಮ್ಮಾಳ್ ಪುತ್ರಿ.
ಕರುಣಾನಿಧಿ ಅವರು ಜಸ್ಟೀಸ್ ಪಕ್ಷದ ನಾಯಕ ಅಳಗಿರಿಸ್ವಾಮಿಯ ಭಾಷಣದಿಂದ ಪ್ರೇರಿತರಾಗಿ ತನ್ನ 14ನೇ ವಯಸ್ಸಿಗೆ ರಾಜಕೀಯ ಧುಮಿಕಿದರು.
ಹಿಂದಿ ಭಾಷಾ ವಿರೋಧಿ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಸ್ಥಳೀಯ ಯುವಕರನ್ನು ಒಗ್ಗೂಡಿಸಿ ಸಂಘಟನೆ ಕಟ್ಟಿದ್ರು. ಮಾನವರ್ ನೇಸನ್ ಎಂಬ ಕೈಬರಹದ ಪತ್ರಿಕೆಯ ಮೂಲಕ ಸಂಘಟನೆಯ ಸದಸ್ಯರನ್ನು ಸದಾ ಕ್ರಾಂತಿಯ ಮೊನಚಲ್ಲೇ ಇರುವಂತೆ ನೋಡಿಕೊಂಡರು. ವಿದ್ಯಾರ್ಥಿ ದೆಸೆಯಲ್ಲಿ ತಮಿಳುನಾಡು ತಮಿಳ್ ಮಾನವರ್ ಮಂದ್ರ್ಮ್ ಎಂಬ ವಿದ್ಯಾರ್ಥಿ ಸಂಘಟನೆ ಸ್ಥಾಪಿಸಿದ್ದ ಕರುಣಾ ಪಾಲಿಗೆ ಈ ಸಂಘಟನೆ ದ್ರಾವಿಡ ಚಳವಳಿಯ ಮೊದಲ ವಿದ್ಯಾರ್ಥಿ ಸಂಘಟನೆಯಾಗಿತ್ತು.
ಓದುತ್ತಿರುವಾಗಲೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಇವರು, ಮುರಸೋಳಿ ಎಂಬ ಪತ್ರಿಕೆ ಸ್ಥಾಪಿಸಿದರು. ಇದು ಇಂದು ಪಕ್ಷದ ಮುಖವಾಣಿಯಾಗಿ ಪ್ರಸಿದ್ಧಿ ಪಡೆದಿದೆ. ಕಳ್ಳಕುಡಿ ಎಂಬಲ್ಲಿ ಸಿಮೆಂಟ್ ಫ್ಯಾಕ್ಟರಿ ಸ್ಥಾಪನೆ ವಿರೋಧಿಸಿ ನಡೆಸಿದ ಪ್ರತಿಭಟನೆಯಿಂದ ರಾಜಕೀಯ ಜೀವನಕ್ಕೆ ಮಹತ್ವ ತಿರುವು.
ಒಂದು ರಾಜ್ಯದ ಮುಖ್ಯಮಂತ್ರಿ ಗಾದಿಗೆ ಏರೋದು ಅಂದ್ರೆ ಸುಲಭದ ಮಾತಲ್ಲ. ಅಂತಹುದ್ರಲ್ಲಿ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದವರು ಎಂ. ಕರುಣಾನಿಧಿ. ಎಂಕೆ ಒಬ್ಬ ರಾಜತಂತ್ರ ನಿಪುಣ, ಚಾಣಕ್ಷ ರಾಜಕಾರಣಿ ಅನ್ನೋದನ್ನ ಮತ್ತೇನೂ ಅಲ್ಲ ಈ ಕೆರಿಯರ್ ಗ್ರಾಫ್ ಕರಾರುವಕ್ಕಾಗಿ ಹೇಳುತ್ತೆ. ಇಳಿವಯಸ್ಸಿನ ಅನಾರೋಗ್ಯ ಕಾಡುತ್ತಿದ್ದರೂ, ತಾವಿರುವಲ್ಲಿಂದಲೇ ಪಕ್ಷ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದ ರಾಜಕಾರಣಿಯಾಗಿದ್ದವರು ಅಂದ್ರೆ ಅದು ಎಂ.ಕರುಣಾನಿಧಿ. ಇದೇ ಅವರ ಪ್ಲಸ್ ಪಾಯಿಂಟ್. ಇದು ಅವರ ಮಕ್ಕಳ ಪಾಲಿಗೆ ಮೈನಸ್ ಪಾಯಿಂಟ್ ಕೂಡಾ ಹೌದು. ಅಂದ ಹಾಗೆ. 2016ರ ತಮಿಳುನಾಡು ಚುನಾವಣೆಯಲ್ಲಿ ಪಕ್ಷವನ್ನು ಸಂಪೂರ್ಣವಾಗಿ ಮುನ್ನಡೆಸಿದ್ದು ಅವರ ಪುತ್ರ ಎಂ.ಕೆ.ಸ್ಟಾಲಿನ್ ಎನ್ನುವಂತಿಲ್ಲ. ಕಾರಣ ಅಲ್ಲೂ ಕೂಡ ಎಂಕೆ ನೆರಳೇ ಇತ್ತು.
ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಟಾಲಿನ್ ಅವರನ್ನೇ ಬಿಂಬಿಸಬಹುದೆಂಬ ನಿರೀಕ್ಷೆ ಕೆಲಕಾಲದಿಂದ ಇತ್ತು. ಆದರೂ, 2016ರ ತಮಿಳುನಾಡು ವಿಧಾನಸಭೆ ವೇಳೆಗೆ, ಸ್ವತಃ ಸ್ಟಾಲಿನ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಕರುಣಾನಿಧಿ ಅವರೇ ಆಗಿದ್ದಾರೆ ಎಂದು ಘೋಷಿಸಿದ್ದರು. ಇದರೊಂದಿಗೆ ಕರುಣಾನಿಧಿ ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಹುದ್ದೆಗೇರುವ ಕನಸು ಕಾಣುತ್ತಿರುವುದು ಸ್ಪಷ್ಟವಾಗಿತ್ತು. ವ್ಹೀಲ್ಚೇರ್ನಲ್ಲಿ ಕುಳಿತೇ ಇನ್ನೂ ಕ್ರಮಿಸಬೇಕೆಂದುಕೊಂಡಿದ್ದ ರಾಜಕೀಯದ ಹಾದಿಯತ್ತ ದೃಷ್ಟಿ ನೆಟ್ಟಿದ್ರು ಎಂ.ಕರುಣಾನಿಧಿ.
ರಾಜಕೀಯ ಮಾತ್ರವಲ್ಲದೆ ,ತಮಿಳು ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಕರುಣಾನಿಧಿ, ಅನೇಕ ಕವನ, ನಾಟಕ, ಕಾದಂಬರಿ, ಐತಿಹಾಸಿಕ ಕಾದಂಬರಿ, ಸಿನಿಮಾ ಗೀತೆಗಳು, ಸಂಭಾಷಣೆ ಬರೆದಿದ್ದಾರೆ. ಇದಲ್ಲದೆ ಪ್ರಬಂಧಗಳನ್ನೂ ಬರೆದಿದ್ದಾರೆ. ಜೊತೆಗೆ, ಕನ್ಯಾಕುಮಾರಿಯಲ್ಲಿ 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಹಿಂದೆ ಕರುಣಾನಿಧಿ ಶ್ರಮವೂ ಇದೆ.
ಕತೆ ಕವನ ಸಾಹಿತ್ಯ ಕುರಿತು ತಲೆಕೆಡಿಸಿಕೊಳ್ಳುತ್ತಿದ್ದ ಕರುಣಾನಿಧಿ, ನಿಧಾನವಾಗಿ ರಾಜಕೀಯದಲ್ಲಿ ಗಂಭೀರವಾಗಿ ತೊಡಗಿದ್ರು. ಕರುಣಾನಿಧಿಯವರು ತಮಿಳುನಾಡು ವಿಧಾನಸಭೆಗೆ 1957ರಲ್ಲಿ ತಿರುಚಿರಾಪಲ್ಲಿ ಜಿಲ್ಲೆಯ ಕುಳಿತಲೈ ವಿಧಾನಸಭೆ ಕ್ಷೇತ್ರದಿಂದ ಮೊದಲು ಚುನಾಯಿತರಾದರು.
ಕರುಣಾನಿಧಿ ಆಗಿನ್ನೂ ಯುವಕರು, ಬಿಸಿ ರಕ್ತ ,ಅನ್ಯಾಯದ ವಿರುದ್ಧ ಸಿಡಿಯುತ್ತಿದ್ದರು. ಆ ಪ್ರಾಯದಲ್ಲಿ ಅದೊಂದು ಚಳುವಳಿಗೆ ಇಳಿದೇಬಿಟ್ರು ಕರುಣಾನಿಧಿ. ದಾಲ್ಮಿಯಪುರಮ್ ರೈಲು ನಿಲ್ದಾಣದ ಹೆಸರು ಬದಲಾವಣೆಗಾಗಿ ಮಾಡಿದ ಚಳುವಳಿಯದು. ಆ ಚಳುವಳಿ ಎಷ್ಟು ತೀವ್ರತೆ ಪಡೆಯುತ್ತೆ ಅಂದ್ರೆ ಕರುಣಾನಿಧಿ ಜೈಲಿನ ಹಾದಿಯನ್ನು ತುಳಿಯುವಂತಾಗಿತ್ತು. ಆ ಹೋರಾಟದಿಂದ ತಿರುಚಿರಾಪಲ್ಲಿ ಸೆಂಟ್ರಲ್ ಜೈಲಿನಲ್ಲಿ ಕರುಣಾನಿಧಿಯನ್ನು ಬಂಧಿಸಿ ಇರಿಸಿದ್ರು ಪೊಲೀಸರು.
1967ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಾಗ, ಲೋಕೋಪಯೋಗಿ ಇಲಾಖೆಯ ಮಂತ್ರಿ ಪದವಿ ಪಡೆದರು. 1969ರಲ್ಲಿ ಅಣ್ಣಾದೊರೈ ನಿಧನರಾದ ನಂತರ, ಕರುಣಾನಿಧಿ ತಮಿಳುನಾಡಿಗೆ ಮೊದಲ ಬಾರಿ ಮುಖ್ಯಮಂತ್ರಿಯಾದರು. ಅಲ್ಲಿಂದ ಸಿಎಂ ಗದ್ದುಗೆಯನ್ನು ತಮ್ಮಬಳಿ ಭದ್ರವಾಗಿಟ್ಟುಕೊಂಡರು. 1969-71, 1971-1976, 1989-1991 , 1996-2001, 2006-2011 ಈ ಅವಧಿಗಳಲ್ಲಿ ಅಂದರೆ, 5 ಬಾರಿ ತಮಿಳಿನಾಡಿನ ಮುಖ್ಯಮಂತ್ರಿ ಆಗಿದ್ದರು. ಅಷ್ಟೇ ಅಲ್ಲ 2016ರ ವಿಧಾಸಭಾ ಚುನಾವಣೆಯಲ್ಲಿ ಡಿಎಂಕೆ ಇದೇ ಕರುಣಾನಿಧಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿತ್ತು. ಆಗ ಇವರ ವಯಸ್ಸು 92…!
ಚುನಾವಣೆಗಳು ವರ್ಷದಿಂದ ವರ್ಷದವರೆಗೆ
1967 ತಮಿಳುನಾಡು ವಿಧಾನಸಭೆ 1969 1971
1971 ತಮಿಳುನಾಡು ವಿಧಾನಸಭೆ 1971 1976
1989 ತಮಿಳುನಾಡು ವಿಧಾನಸಭೆ 1989 1991
1996 ತಮಿಳುನಾಡು ವಿಧಾನಸಭೆ 1996 2001
2006 ತಮಿಳುನಾಡು ವಿಧಾನಸಭೆ 2006 2011
1967ರಲ್ಲಿ ತಮಿಳುನಾಡಿನ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಡಿಎಂಕೆ ಪಕ್ಷಕ್ಕೆ, ಜನಬೆಂಬಲ ಸಿಗುತ್ತೆ. ಹೀಗಾಗಿ 1969ರಿಂದ 1971ರವರೆಗೂ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇರ್ತಾರೆ ಎಂ.ಕರುಣಾನಿಧಿ. ಅದೇ ರೀತಿ 1971ರಲ್ಲಿ ನಡೆದ ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಕರುಣಾನಿಧಿ ಅಂಡ್ ಟೀಮೇ ಮೇಲುಗೈ ಸಾಧಿಸುತ್ತೆ. ಹಾಗಾಗಿ 1971ರಿಂದ ನಂತ್ರ ಪುನಃ ಕರುಣಾನಿಧಿ ನೇತೃತ್ವದ ಪಾರ್ಟಿಯೇ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿರುತ್ತೆ. ಇದೇ ರೀತಿ 1989ರಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲೂ ಡಿಎಂಕೆ ಮೇಲುಗೈ ಸಾಧಿಸಿ, ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆ ಆಗ್ತಾರೆ ಎಂ.ಕರುಣಾನಿಧಿ. ನಂತರ ನಡೆದ 1996ರ ವಿಧಾನಸಭೆ ಚುನಾವಣೆಯಲ್ಲೂ ಪುನಃ ನಾಲ್ಕನೇ ಬಾರಿಗೆ ಕರುಣಾನಿದಿಯೇ ಸಿಎಂ.. ಬಳಿಕ, 2006ರಲ್ಲಿ ಎಲ್ಲರಿಗೂ ಅಚ್ಚರಿ ಹುಟ್ಟಿಸುವಂತೆ 5ನೇ ಬಾರಿಗೆ ಮುಖ್ಯಮಂತ್ರಿ ಆಗ್ತಾರೆ ಕರುಣಾನಿಧಿ.
ಇಳಿವಯಸ್ಸಿನಲ್ಲಿಯೂ ಕರುಣಾನಿಧಿ ಮತ ಸೆಳೆಯಬಲ್ಲ ಸ್ಟಾರ್ ನಾಯಕ. ಇದಕ್ಕೂ ಕೆಲವು ನಿದರ್ಶನಗಳಿವೆ. ಅದು 2009ರ ಫೆಬ್ರವರಿ.. ತಮಿಳುನಾಡು ಮುಖ್ಯಮಂತ್ರಿಯೂ ಆಗಿದ್ದ ಕರುಣಾನಿಧಿ, ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿದ್ರು. ಅಷ್ಟಾಗ್ಯೂ, ಏಪ್ರಿಲ್ ನಲ್ಲಿ ಉತ್ತರ ಚೆನ್ನೈನಲ್ಲಿ ಏರ್ಪಡಿಸಿದ್ದ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ದಯಾನಿಧಿ ಮಾರನ್ ಪರವಾಗಿ ವೀಲ್ಚೇರ್ನಲ್ಲಿ ಕುಳಿತೇ 15 ನಿಮಿಷ ಕಾಲ ಭಾಷಣ ಮಾಡಿದ್ದರು. ಕರುಣಾನಿಧಿಯ ಈ ಭಾಷಣದ ಪರಿಣಾಮ ಆ ಚುನಾವಣೆಯಲ್ಲಿ ತಮಿಳುನಾಡಿನ 39 ಲೋಕಸಭಾ ಸ್ಥಾನಗಳ ಪೈಕಿ 27 ಡಿಎಂಕೆ, ಕಾಂಗ್ರೆಸ್ ಮೈತ್ರಿಕೂಟದ ಪಾಲಾಗಿತ್ತು. ಅದೇ ಕರುಣಾನಿಧಿ ವರ್ಚಸ್ಸು..ಅದೇ ರಾಜಕೀಯದಲ್ಲಿ ಕಪ್ಪುಕನ್ನಡಕಾಧಾರಿಯ ಖದರ್.
ರಾಜಕೀಯ ಬದುಕಿನಲ್ಲಿ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿಕೊಂಡ ಕರುಣಾನಿಧಿ ಈ ಹಿಂದೆ ರಾಮಸೇತುವಿನ ವಿಚಾರದಲ್ಲಿ ಹಿಂದುಗಳ ಭಾವನೆಯನ್ನು ಘಾಸಿಗೊಳಿಸುಂತೆ ಮಾತನಾಡಿ ಬಹುಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಿದ್ರು. ಹಲವು ಬಾರಿ ಅವರ ದುರಹಂಕಾರದ ಮಾತುಗಳೇ ಅವರಿಗೆ ಶತ್ರುವಾಗಿದ್ದಿದೆ. 2ಜಿ ಹಗರಣದ ಕಳಂಕವೂ ಕರುಣಾನಿಧಿ ಕುಟುಂಬದ ಮೇಲಿದೆ, ಇದಲ್ಲದೇ ತಮಿಳುನಾಡಿನಲ್ಲೇ ಅಧಿಕಾರಾವಧಿಯಲ್ಲಿ ಮಾಡಿದ ಅನೇಕ ಭ್ರಷ್ಟಾಚಾರ ಪ್ರಕರಣಗಳ ಕಳಂಕವೂ ಇದೆ..ಜೊತೆಗೆ ಯುವ ನಾಯಕತ್ವಕ್ಕೆ ಮಣೆಹಾಕದೆ ಮತ್ತದೇ ಹಿರಿತಲೆಯನ್ನೇ ನೆಚ್ಚಿಕೊಳ್ಳಬೇಕಾಗಿ ಬಂದಿರುವುದು ಆ ಪಕ್ಷ ಹಾಗೂ ಆ ನಾಡಿನ ದುರಂತವೇ ಸರಿ.
ತಮಿಳುನಾಡು ಸಿಎಂ ಆಗಿದ್ದ, ಎಂಜಿಆರ್ ನಿಧನ ನಂತರ ಅವರ ಪತ್ನಿ ಜಾನಕಿ ಅವರು ಸಿಎಂ ಆಗಿದ್ದು, ಜೆ ಜಯಲಲಿತಾ ಅವರಿಗೆ ಇರುಸು ಮುರುಸು ಉಂಟಾಗಿ, ಪಕ್ಷ ಒಡೆದಿದ್ದು, ಇದರ ಲಾಭ ಪಡೆದ ಕರುಣಾನಿಧಿ ಅಧಿಕಾರಕ್ಕೆ ಬಂದಿದ್ದು ಮತ್ತೊಂದು ಮಜಲು. ಇದಾದ ಬಳಿಕ ಜಯಾ ರಾಜಕೀಯವಾಗಿ ಅತ್ಯಂತ ಚಾಣಕ್ಷ ನಡೆ ಇಡುತ್ತಾ, ಕರುಣಾ ಪ್ರತಿ ನಡೆಯನ್ನೂ ಧಿಕ್ಕರಿಸಿ ಮುನ್ನಡೆದರು.
ಒಂದು ಕಾಲದ ಗೆಳೆಯರನ್ನು ರಾಜಕೀಯ ದ್ವೇಷಿಗಳನ್ನಾಗಿ ಪರಿವರ್ತಿಸಿ ಬಹುಕಾಲವಾಗಿತ್ತು. ಹಗೆತನಕ್ಕಾಗಿ ಅಧಿಕಾರ ಸ್ಥಾಪನೆ ಉದ್ದೇಶ ಇಟ್ಟುಕೊಂಡ ಇಬ್ಬರು, ದ್ವೇಷದಿಂದಲೇ ಸಾರ್ಜಜನಿಕರಿಗೆ ಜನಪ್ರಿಯ ಯೋಜನೆಗಳನ್ನು ಘೋಷಿಸುತ್ತಾ ಬಂದರು. ಪ್ರತಿ ಬಾರಿ ಎರಡು ಪಕ್ಷಗಳು ಅಧಿಕಾರಕ್ಕೆ ಬರುವ ಜನಬಲ, ದ್ವೇಷ ರಾಜಕಾರಣ ಕಾರಣವಾಯಿತು. ಪಕ್ಷದ ಕಾರ್ಯಕರ್ತರ ನಡುವೆ ರಾಜಕೀಯ ಸಂಘರ್ಷ ಮುಂದುವರಿಯತೊಡಗಿತು.
ಸೇಡಿನ ರಾಜಕೀಯ 1989ರಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಕರುಣಾ ಹಾಗೂ ಜಯಾ ನಡುವಿನ ಕಿತ್ತಾಟ, ಅಸಭ್ಯ ಮಟ್ಟದ ಪದ ಬಳಕೆ, ಜಯಾ ಮೇಲೆ ಹಲ್ಲೆ, ಜಯಾ ಸೀರೆ ಎಳೆಯಲು ಯತ್ನ ಎಲ್ಲವೂ ಕರುಣಾ ಅವರನ್ನು ಬಹುವಾಗಿ ಕಾಡಿದ್ದಿರಬಹುದು. ಜಯಾ ಕೂಡಾ ಕರುಣಾನಿಧಿ ಅವರನ್ನು ರಾತ್ರೋರಾತ್ರಿ ಅರೆಸ್ಟ್ ಮಾಡಿಸಿ ಸೇಡು ತೀರಿಸಿಕೊಂಡರು. ಸೇಡಿನಿಂದಲೇ ಇಬ್ಬರು ರಾಜಕೀಯ ನಡೆ ಇಡುತ್ತಾ ರಾಜ್ಯವನ್ನು ತಮ್ಮದೇ ಆದ ರೀತಿಯಲ್ಲಿ ಬೆಳೆಸಿದರು. ದೇಶದ ಪ್ರಭಾವಿ ರಾಜಕಾರಣಿಗಳು ಕರುಣಾನಿಧಿಗೆ ಬಹುಪತ್ನಿತ್ವದ ಸಂಸಾರ ಮಕ್ಕಳ ಬಲವಿದ್ದರೆ, ಜಯಾ ಅವರಿಗೆ ಅಭಿಮಾನಿಗಳು, ನಿಷ್ಠಾವಂತರ ಬೆಂಬಲ ರಾಜಕೀಯ ಶ್ರೀರಕ್ಷೆಯಾಯಿತು. ಆದರೆ, ವಿವಾದಗಳು, ಭ್ರಷ್ಟಾಚಾರದ ನಡುವೆ ದೇಶದ ಪ್ರಭಾವಿ ರಾಜಕಾರಣಿಗಳಾಗಿ ಉಳಿಯುವಲ್ಲಿ ಇಬ್ಬರೂ ಕೂಡಾ ಯಶಸ್ವಿಯಾದರು.
ತಮಿಳುನಾಡು ರಾಜಕಾರಣಕ್ಕೆ ಮಾತ್ರವಲ್ಲ ತಮಿಳು ಸಾಹಿತ್ಯಕ್ಕೂ ಇವರ ಕೊಡುಗೆ ಅಪಾರ. ಅನೇಕ ಕವನ, ನಾಟಕ, ಕಾದಂಬರಿ, ಸಿನಿಮಾ ಗೀತೆಗಳು, ಸಂಭಾಷಣೆಯನ್ನೂ ಸಹ ಬರೆದಿದ್ದಾರೆ. ರಾಜಕೀಯ-ಸಾಹಿತ್ಯ ಎರಡೂ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕರುಣಾನಿಧಿ ಅವರಿಗೆ ಅವರೇ ಸಾಟಿ.
ಕರುಣಾನಿಧಿ ಸ್ವಜನಪಕ್ಷಪಾತ ಉತ್ತೇಜಿಸುತ್ತಲೇ ಬಂದ್ರೂ ಅಂತನೂ ಹೇಳಲಾಗ್ತಿದೆ..ನೆಹರು-ಗಾಂಧಿ ಕುಟುಂಬದ ಮಾದರಿಗೆ, ಒಂದು ರಾಜಕೀಯ ವಂಶಾಡಳಿತ ಆರಂಭಿಸಲು ಪ್ರಯ್ನಸುತ್ತಿದ್ದಾರೆ ಎಂದು ಹೇಳಿ ವಿರೋಧ ಪಕ್ಷಗಳ ಟೀಕಿಸುತ್ತಲೇ ಬಂದಿದ್ರು..ಇದನ್ನೇ ಅವರ ಪಕ್ಷದ ಅನೇಕ ಸದಸ್ಯರು ಹಾಗೂ ಕೆಲವು ರಾಜಕೀಯ ವೀಕ್ಷಕರು ದೂಷಿಸಿದ್ರು..ಆದರೂ ತಮಿಳುನಾಡಿನಲ್ಲಿ ಸಿನಿಮಾ ಹಾಗೂ ರಾಜಕೀಯ ರಂಗದಲ್ಲಿ ಸದಾ ನೆನಪಿನಲ್ಲಿ ಉಳಿಯುವ ಹೆಸರುಗಳಲ್ಲಿ ಮೊದಲಿನ ಸಾಲಿನಲ್ಲಿ ಕಾಣಸಿಗ್ತಾರೆ ಎಂ.ಕರುಣಾನಿಧಿ