ಖ್ಯಾತ ಚಲನಚಿತ್ರ ನಿರ್ದೇಶಕ ಹೊಸ ಅಲೆಯ ಮಾಂತ್ರಿಕ ಕಾಶಿನಾಥ್ ನಮ್ಮನ್ನಗಲಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳಹಿಂದೆ ಬೆಂಗಳೂರಿನ ಶಿವ ಶಂಕರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಾಶಿ ಇಂದು ಕೊನೆಯುಸಿರೆಳೆದಿದ್ದಾರೆ. ೩೬ ಕನ್ನಡ ಚಿತ್ರಗಳು, ೧ ತೆಲುಗು ಸಿನಿಮಾದಲ್ಲಿ ಅಭಿನಯಿಸಿದ್ರು.
೧೧- ಕನ್ನಡ, ೧- ಹಿಂದಿ, ೧- ತೆಲುಗು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ೧೩- ಕನ್ನಡ, ೨- ಹಿಂದಿ, ೧- ತೆಲುಗು ಸಿನಿಮಾಗಳಿಗೆ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ೭ ಕನ್ನಡ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. ೩ ಕನ್ನಡ ಸಿನಿಮಾಗಳಿಗೆ ಚಿತ್ರಗೀತೆಗಳನ್ನು, ೧- ಕನ್ನಡ, ೧- ತೆಲುಗು ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ, ಸುನಿಲ್ ಕುಮಾರ್ ದೇಸಾಯಿ, ಎಸ್ ನಾರಾಯಣ, ಮನೋಹರ್ ಸೇರಿದಂತೆ ಅನೇಕ ಕನ್ನಡ ಚಿತ್ರರಂಗದ ದಿಗ್ಗಜರು ಕಾಶಿ ಅವರ ಗರಡಿಯಲ್ಲಿ ಪಳಗಿದವರು. ತಾನು ಬೆಳೆಯುವುದಲ್ಲದೇ ಹೊಸ ಪ್ರತಿಭೆಗಳನ್ನು ತನ್ನೊಟ್ಟಿಗೆ ಬೆಳೆಸಿದ ಕಾಶಿ ಸರಳ ಸಜ್ಜನರಾಗಿ ಕನ್ನಡ ಚಿತ್ರರಂಗದಲ್ಲಿ ಮನೆಮಾತಾಗಿದ್ದರು. ‘ಶ್’ ಚಿತ್ರದಲ್ಲಿನ ನಿರ್ದೇಶಕನ ಪಾತ್ರ ಕಾಶಿಯವರ ನಿಜಬದುಕಿನ ಅನಾವರಣವೇ ಆಗಿದೆ.
ಕೆಲಕಾಲ ಚಿತ್ರರಂಗದಿಂದ ದೂರವಿದ್ದ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಜೂಮ್ ಚಿತ್ರದ ಮೂಲಕ ಸಿನೆಮಾ ಕ್ಷೇತ್ರಕ್ಕೆ ಮರಳ್ಳಿದ್ದರು. ಜೂಮ್ ಚಿತ್ರ ಸೂಪರ್ ಹಿಟ್ ಆಯಿತು. ನಂತರ ಚೌಕ ಚಿತ್ರದಲ್ಲಿನ ತಂದೆಯ ಪಾತ್ರವನ್ನು ಕೂಡ ಪ್ರೇಕ್ಷಕ ಇಷ್ಟಪಟ್ಟಿದ್ದ.
ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದ ಕೋಟೆಶ್ವರ ಗ್ರಾಮದವರಾದ ಕಾಶಿನಾಥ್ ಬದುಕು ಕಂಡುಕೊಂಡಿದ್ದು ಬೆಂಗಳೂರಿನಲ್ಲಿ.
ವಿಜಯ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಪಡೆದ ಕಾಶಿ ಮುಂದುವರೆದಿದ್ದು ಚಲನಚಿತ್ರರಂಗದಲ್ಲಿ. ಕಾಲೇಜು ದಿನಗಳಲ್ಲೆ ತಂಡವೊಂದನ್ನು ಕಟ್ಟಿಕೊಂಡು ನಾಟಕಗಳನ್ನು ನಿರ್ದೇಶಿಸುತ್ತ ಕಲಾವಿದನಾಗಿ ಬೆಂಗಳೂರಿನ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು.
ನಂತರ ಸುರೇಶ್ ಹೆಬ್ಳಿಕರ್ ಮುಂತಾದ ಸ್ನೇಹಿತರೊಂದಿಗೆ ಸಿನೆಮಾ ಪ್ರಯತ್ನಕ್ಕಿಳಿದರು.
೧೯೭೮ ರಲ್ಲಿ ಅಪರಿಚಿತ ಚಿತ್ರದ ಮೂಲಕ ಕಾಶಿ ಕನ್ನಡದ ಚಿತ್ರರಸಿಕರ ಮನಗೆದ್ದರು. ೮೦-೯೦ ರ ದಶಕವಂತು ಕಾಶಿಪಾಲಿಗೆ ಸುವರ್ಣಯುಗ. ಒಂದರ ಹಿಂದೊಂದರಂತೆ ಅನಂತನ ಆವಾಂತರ, ಅಜಗಜಾಂತರ, ಅನುಭವ ಚಿತ್ರಗಳು ಅವರಿಗೆ ದೊಡ್ಡ ಯಶಸ್ಸು ತಂದು ಕೊಟ್ಟವು. ಕನ್ನಡ ಚಿತ್ರರಂಗದಲ್ಲಿದ್ದ ಸಿದ್ಧಮಾದರಿಗಳನ್ನೆಲ್ಲ ಮುರಿದು ಹೊಸಮಾದರಿಯ ವಿನೂತನ ಪ್ರಯೋಗಗಳ ಮೂಲಕ ಕಾಶಿನಾಥ್ ಹೊಸ ಅಲೆಯ ನಿರ್ದೇಶಕರಾಗಿ ಯಶಸ್ಸು ಗಳಿಸಿದರು. ಸಾಹಸ, ಚಿತ್ರದ ನಾಯಕನ ವೈಭವೀಕರಣ, ಮರಸುತ್ತುವ ಹಾಡುಗಳು ಇಷ್ಟಕ್ಕೆ ಸೀಮಿತವಾಗಿದ್ದ ಕನ್ನಡ ಚಿತ್ರೋದ್ಯಮದಲ್ಲಿ ಬೇರೆ ಮಾದರಿಯ ಚಿತ್ರಗಳು ಗೆಲ್ಲಬಹುದು ಎಂದು ಅನುಭವ ಚಿತ್ರದ ಮೂಲಕ ಕಾಶಿ ತೋರಿಸಿಕೊಟ್ಟರು.
ನಾಯಕನೆಂದರೆ ಹೀಗೆ ಇರಬೇಕೆನ್ನುವ ಸಿದ್ಧ ಮಾದರಿಯನ್ನ ತೊಡೆದು ಹಾಕಿದ ಖ್ಯಾತಿ ಕಾಶಿನಾಥ್ ಗೆ ಸಲ್ಲುತ್ತದೆ. ಈ ಮೂಲಕ ಪ್ರತಿಭೆಯುಳ್ಳ ಯಾರು ಬೇಕಾದರು ನಟಿಸಬಹುದು ಎಂಬುದನ್ನ ಇವರು ಹೊಸ ಪೀಳಿಗೆಗೆ ಮನವರಿಕೆ ಮಾಡಿಕೊಟ್ಟರು.
ಉಪೇಂದ್ರ ಕನ್ನಡ ಚಿತ್ರರಂಗದ ಗಣ್ಯರು ಕಾಶಿ ಅಗಲಿಕೆಗೆ ಕಂಬನಿ ಸುರಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಕಾಶಿ ಮಾಡದ ಹೊಸ ಪ್ರಯತ್ನಗಳಿಲ್ಲ ಎಂಬಂತೆ ಪ್ರತೀತವಾಗಿದ್ದ ಕಾಶಿ ಈಗ ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಹಿರಿಯ ನಿರ್ದೇಶಕನಿಗೆ ನುಡಿನಮನ ಸಲ್ಲಿಸ ಬೇಕಾದುದು ನಮ್ಮೆಲ್ಲರ ಕರ್ತವ್ಯ.
ಕಾಶಿನಾಥ್ ಅಗಲಿಕೆಯಿಂದ ಕನ್ನಡ ಚಿತ್ರರಂಗ ಹಿರಿಯ ನಟ ನಿರ್ದೇಶಕರೊಬ್ಬರನ್ನು ಕಳೆದುಕೊಂಡಿದೆ. ಎಷ್ಟೋ ಹೊಸ ನಟರು, ನಿರ್ದೇಶಕು ಚಿತ್ರರಂಗಕ್ಕೆ ಬಂದಿದ್ದಾರೆ. ಆದರೆ ಅವರ್ಯಾರಿಂದರೂ ಕಾಶಿ ಅಗಲಿಕೆಯಿಂದ ತೆರವಾದ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ಕಾಶಿನಾಥ್ ಅವರಿಗೆ ಕಾಶಿನಾಥ್ ಅವರೇ ಸಾಟಿ.