2014ರಲ್ಲಿದ್ದ ಅಲೆಗಳು ಈಗಿಲ್ಲ. ಆದರೆ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಒಂದೊಂದೇ ರಾಜ್ಯವನ್ನು ಪ್ರಯಾಸದಿಂದ ಗೆಲ್ಲುವುದರಲ್ಲಿ ಬಿಜೆಪಿ ಯಶಸ್ವಿಯಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಸಂಪ್ರದಾಯ ಗೆದ್ದರೇ, ಗುಜರಾತ್‍ನಲ್ಲಿ ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ಸಮರ್ಪಕವಾಗಿ ಉಪಯೋಗಿಸಿಕೊಂಡಿದೆ. ಅಲ್ಲಿ ಬಿಜೆಪಿ ಗೆದ್ದು ಬಾಗಿದೆ. ಕಾಂಗ್ರೆಸ್ ಸೋತು ಬೀಗಿದೆ.
ಗುಜರಾತ್‍ನಲ್ಲಿ ಪಾಟಿದಾರ್, ಹಿಂದುಳಿದವರ ಹೋರಾಟ ಬಿಜೆಪಿಯನ್ನು ದೊಡ್ಡ ಮಟ್ಟದಲ್ಲಿ ಘಾಸಿಗೊಳಿಸುವುದು ಖಾತ್ರಿಯಾದ ಕೂಡಲೇ, ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ಸದುಪಯೋಗಪಡಿಸಿಕೊಳ್ಳಬಹುದು ಎಂದು ಬಿಜೆಪಿಗೆ ಅರ್ಥವಾಗಿತ್ತು. ಹೀಗಾಗಿ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನ ಹದಿನಾಲ್ಕು ಮಂದಿ ರಾಜ್ಯಸಭೆ ಸದಸ್ಯರನ್ನು ಹೈಜಾಕ್ ಮಾಡಿತ್ತು. ಆದರೆ ಕಾಂಗ್ರೆಸ್ ಪ್ರಯಾಸದಿಂದ ಅಹ್ಮದ್ ಪಟೇಲ್ ಅವರನ್ನು ಗೆಲ್ಲಿಸುವುದರಲ್ಲಿ ಯಶಸ್ವಿಯಾಗಿತ್ತು. ಗುಜರಾತ್ ಚುನಾವಣೆಗೆ ಆರು ತಿಂಗಳ ಮುಂಚೆಯೇ ಬಿಜೆಪಿಯ ಸಂಘಟನಾ ಚಾತುರ್ಯ, ಚುನಾವಣಾ ತಂತ್ರಗಾರಿಕೆಗಳು ಗೋಚರವಾಗಿತ್ತು. ಅಸಲಿಗೆ ಕಾಂಗ್ರೆಸ್‍ನಲ್ಲಿ ಇರುವ ಸಮಸ್ಯೆಯೇ ಈ ಚಾತುರ್ಯತೆ ಇಲ್ಲದಿರುವುದು. ಆಡಳಿತ ವಿರೋಧಿ ಅಲೆಯನ್ನು ಪರಿಪೂರ್ಣವಾಗಿ ಲಾಭದಾಯಕವಾಗಿ ಪರಿವರ್ತಿಸಿಕೊಳ್ಳುವುದರಲ್ಲಿ ಅದು ಸೋತಿದೆ. ಬಿಜೆಪಿ ಗೇಮ್‍ಪ್ಲಾನ್ ಅನ್ನು ತಡವಾಗಿ ಅರ್ಥಮಾಡಿಕೊಳ್ಳುವುದರ ಪರಿಣಾಮಗಳಿವು. ಆದರೆ ಬಿಜೆಪಿಯ ವಿರುದ್ಧವಾದ ಗಾಳಿ ಬೀಸಿದೆ ಎಂಬುದಷ್ಟೇ ಸತ್ಯ.
ಈಗ ಬಿಜೆಪಿ ಕರ್ನಾಟಕವನ್ನು ಟಾರ್ಗೆಟ್ ಮಾಡಿದೆ. ಅದಾಗಲೇ ಪರಿವರ್ತನಾ ಯಾತ್ರೆ ನಡೆಯುತ್ತಿದೆ. ಪರಿವರ್ತನಾ ಯಾತ್ರೆಯಲ್ಲಿ ಜನರು ಸೇರುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಸಮಾಧಾನಪಟ್ಟುಕೊಳ್ಳಬೇಕಷ್ಟೆ. ಏಕೆಂದರೇ ಗುಜರಾತ್‍ನಲ್ಲೂ ಮೋದಿ ಸಭೆಗೆ ಜನರು ಹೆಚ್ಚಾಗಿ ಸೇರುತ್ತಿರಲಿಲ್ಲ. ಈಗ ಅಧಿಕಾರ ಹಿಡಿದಿಲ್ವೇ..?. ಎಷ್ಟು ಜನರು ಸಭೆ, ಸಮಾರಂಭಕ್ಕೆ ಸೇರುತ್ತಾರೆ ಎನ್ನುವುದರ ಮೇಲೆ ಅಧಿಕಾರ ನಿಶ್ಚಯವಾಗುವುದಿಲ್ಲ ಎಂಬುದಕ್ಕೆ ನಿದರ್ಶನವಿದು.
ಅತ್ತ ಗುಜರಾತ್‍ನಲ್ಲಿನ ಗೆಲುವು ಬಿಜೆಪಿ ವಲಯದಲ್ಲಿ ಆನೆಬಲ ಬಂದಂತಾಗಿರುವುದು ಸುಳ್ಳಲ್ಲ. ಕರ್ನಾಟಕದಲ್ಲಿ ಅಧಿಕಾರ ಹಿಡಿಯಲೇಬೇಕೆಂಬ ಹಠ ಶುರುವಾಗಿದೆ. ಇಪ್ಪತ್ತೆರಡು ವರ್ಷದಿಂದ ಆಳುತ್ತಿದ್ದ ರಾಜ್ಯವನ್ನು, ಕೇಂದ್ರದಲ್ಲಿ ಮೋದಿಯಂತಹ ಪ್ರಭಲ ನಾಯಕರಿದ್ದು ಉಳಿಸಿಕೊಳ್ಳಲು ಹರಸಾಹಸಪಟ್ಟಿರುವಾಗ, ಸಿದ್ದರಾಮಯ್ಯನವರ ಯಶಸ್ವಿ ಆಡಳಿತವಿರುವ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವುದು ಅಷ್ಟು ಸುಲಭವಲ್ಲ. ಸಿದ್ದರಾಮಯ್ಯನವರಿಗೆ ಮಾತ್ರವಲ್ಲ, ಕಾಂಗ್ರೆಸ್‍ಗಿರುವ ಅಧಮ್ಯ ಭರವಸೆಯೂ ಅದೆ. ಜೊತೆಗೆ ಉತ್ತರ ಭಾರತದ ಮತದಾರರ ಮನಃಸ್ಥಿತಿಗೂ, ದಕ್ಷಿಣ ಭಾಗದ ಜನರ ಚಿಂತನಾ ಲಹರಿಗೂ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಹಿಂದುತ್ವದ ಮೂಲಕ ಅಶಾಂತಿಯನ್ನು ಮೂಡಿಸುವ ಕೆಲಸವಾದರೂ ವರ್ಕೌಟ್ ಆಗುವುದು ಅನುಮಾನ.
ಕರ್ನಾಟಕದ ಬಿಜೆಪಿಯನ್ನು ಉತ್ತರದ ಬಿಜೆಪಿಯನ್ನು ಎರಡು ಭಾಗವಾಗಿ ವಿಂಗಡಿಸಿ ನೋಡಬೇಕಿದೆ. ಎರಡೂ ಬದಿಯ ಶೈಲಿಯಲ್ಲಿ ಬದಲವಾಣೆಗಳಿವೆ. ಕರ್ನಾಟಕದ ಬಿಜೆಪಿ ಹಿಂಬಾಲಕರು ಯಡಿಯೂರಪ್ಪನವರ ಬಿಜೆಪಿಯನ್ನು ಒಪ್ಪಿಕೊಳ್ಳುತ್ತಾರೆ. ಅನಂತ ಕುಮಾರ್ ಹೆಗ್ಡೆ, ಪ್ರತಾಪ್ ಸಿಂಹ ಅವರ ಉತ್ತರ ಭಾರತದ ಶೈಲಿಯ ಕಠೋರ ಬಿಜೆಪಿಯನ್ನು ಅರಗಿಸಿಕೊಳ್ಳುವುದಿಲ್ಲ. ಕೆಲವು ಕಡೆ ಅವರಿಗೆ ಹಿಂಬಾಲಕರಿದ್ದರೂ ಬಹುಸಂಖ್ಯಾತರು ಯಡಿಯೂರಪ್ಪ ಮುನ್ನಡೆಸುವ ಬಿಜೆಪಿಯನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಸಿದ್ದರಾಮಯ್ಯನವರ ಯಶಸ್ವಿ ಆಡಳಿತವನ್ನು ಸೋಲಿಸುವುದು ಈಗಿರುವ ರಾಜ್ಯ ಬಿಜೆಪಿ ನಾಯಕರಿಂದ ಆಗುವ ಮಾತಲ್ಲ.
ಹೀಗಾಗಿ ಕೇಂದ್ರದ ಬಿಜೆಪಿ ನಾಯಕರು ಕರ್ನಾಟಕದ ಮೇಲೆ ಚಿತ್ತವಿಟ್ಟಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರವನ್ನು ಸೋಲಿಸುವ ಸಂಕಷ್ಟಗಳು ಅರಿವಿರುವುದರಿಂದ, ಕೇವಲ ಹಿಂದುತ್ವದಿಂದ ಗೆಲ್ಲುವುದು ಸುಲಭವಲ್ಲ ಎಂಬ ಸಂಗತಿಯೂ ಅವರಿಗೆ ಗೊತ್ತಿದೆ. ಹೀಗಾಗಿ ಶಕ್ತಿ ಕೇಂದ್ರದ ಅಧಿಕಾರವನ್ನು ಬಳಸಿ ಕರ್ನಾಟಕವನ್ನು ಕಾಡುತ್ತಿರುವ ದಶಕಗಳ ಸಮಸ್ಯೆಯನ್ನು ನಿವಾಳಿಸಿ ಆ ಮೂಲಕವೂ ಜನರನ್ನು ಓಲೈಸಿಕೊಳ್ಳುವ ಉಪಾಯ ಮಾಡಿದೆ. ಈಗ ಬಿಜೆಪಿ ರೂಪಿಸಿರುವ ಈ ಪ್ಲಾನ್ ಯಾವುದೇ ಕಾರಣಕ್ಕೂ ವಿಫಲವಾಗುವುದಿಲ್ಲ. ದೊಡ್ಡದೊಂದು ವೋಟ್‍ಬ್ಯಾಂಕ್ ಸೃಷ್ಟಿಸುವ ಆತಂಕ ಕಾಂಗ್ರೆಸ್ ಅನ್ನು ಕಾಡುತ್ತಿದೆ.
ಉತ್ತರ ಕನ್ನಡ, ಮೈಸೂರು ಗಲಾಟೆಯ ಹಿಂದಿದ್ದ ನಿರ್ದೇಶನ ಬಯಲಿಗೆ ಬರುತ್ತಿದ್ದಂತೆ, ಅತ್ತ ಗುಜರಾತ್‍ನಲ್ಲಿ ಸರಳ ಬಹುಮತ ಸಿಗುತ್ತಿದ್ದಂತೆ ಬಿಜೆಪಿ ಕಠೋರ ರೂಪುರೇಶೆಯನ್ನು ಬದಿಗಿಟ್ಟು ಕರ್ನಾಟಕದ ಮತದಾರರನ್ನು ಗೆಲ್ಲಬೇಕೆಂದರೇ, ಅದರಲ್ಲೂ ನಿರ್ದಿಷ್ಠ ಭಾಗದ ಮತಗಳನ್ನು ಸೆಳೆದುಕೊಳ್ಳಬೇಕೆಂದರೇ ಏನು ಮಾಡಬೇಕೆಂಬ ಖಚಿತತೆಗೆ ಬಂದಿದೆ. ಅದರ ಪ್ರಕಾರವಾಗಿ ಕೇಂದ್ರ ಸರ್ಕಾರದಿಂದ ಮಾತ್ರ ಸಾಧ್ಯವಿದ್ದ ಕಾವೇರಿ ಹಾಗೂ ಮಹದಾಯಿ ಸಮಸ್ಯೆಗೆ ಪರಿಹಾರ ಸೂಚಿಸುವ ಕಾರ್ಯಕ್ಕೆ ಮುಂದಾಗಿದೆ. ಕಾವೇರಿ, ಮಹದಾಯಿಗಾಗಿ ದಶಕಗಳಿಂದ ರೈತರು, ಕನ್ನಡಿಗರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲನ್ನು ಏರಿದೆ. ರಾಜ್ಯವನ್ನಾಳಿದ ಬಹುತೇಕ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಬೇಡಿಕೊಂಡಿದ್ದಾರೆ. ಆದರೆ ಕರ್ನಾಟಕದ ಪರ ನಿಂತರೆ ತಮಿಳುನಾಡು, ಗೋವಾದ ವಿರೋಧ ಎದುರಿಸಬೇಕಾದೀತು ಎಂದು ಕೇಂದ್ರ ಸರ್ಕಾರ ಅಹವಾಲು ಸ್ವೀಕರಿಸಿ ಸುಮ್ಮನಾಗುತ್ತಲೇ ಇತ್ತು. ಈಗಿನ ಸಿದ್ದರಾಮಯ್ಯ ಸರ್ಕಾರವೂ ಮಹದಾಯಿ, ಕಾವೇರಿ ಸಂಗತಿಯಲ್ಲಿ ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಹಲವಾರು ಪತ್ರಗಳನ್ನು ಬರೆದಿತ್ತು. ನೋ ಯೂಸ್.
ಆದರೆ ಅಮಿತ್ ಶಾ, ಮೋದಿಯಂತಹ ಪ್ರಖಂಡ ನಾಯಕರು ಸೂಕ್ತ ಸಮಯಕ್ಕೆ ಕಾಯುತ್ತಿದ್ದರು. ಕಾವೇರಿ ಮಹದಾಯಿ ವಿವಾದವನ್ನು ಬಗೆಹರಿಸುವ ದಾರಿಗಳನ್ನು ಕಂಡುಕೊಂಡಿದ್ದರು. ಮುಹೂರ್ತವಿಲ್ಲದ ಸಮಯದಲ್ಲಿ ಕರ್ನಾಟಕ ಸರ್ಕಾರಕ್ಕೆ ಸಹಾಯ ಮಾಡುವ ಅತುರತೆ ಪ್ರದರ್ಶಿಸಲಿಲ್ಲ. ಇಲ್ಲಿನ ರೈತರ, ಹೋರಾಟಗಾರರ ಕೂಗು ಕಿವಿಗೆ ಬಿದ್ದರೂ ಅದನ್ನು ಸಂಗೀತದಂತೆ ಆಸ್ವಾಧಿಸುತ್ತ ಕುಳಿತುಬಿಟ್ಟರು. ಈಗ ಸಮಯ ಬಂದಿದೆ. ಕರ್ನಾಟಕದಲ್ಲಿ ಅಧಿಕಾರ ಹಿಡಿಯಲೇಬೇಕಿದೆ. ಅದಕ್ಕಾಗಿ ಕರ್ನಾಟಕದ ಮತದಾರರನ್ನು ಸೆಳೆಯಲು ಪ್ರಖಂಡವಾದ ಎರಡು ಅಸ್ತ್ರಗಳನ್ನು ಪ್ರಯೋಗಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅವುಗಳ ಪೈಕಿ ಮೊದಲ ಅಸ್ತ್ರ ಪೊಲ್ಲಾವರಂ ಪ್ರಾಜೆಕ್ಟ್. ಕಾವೇರಿಯನ್ನು ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಹರಿಸುವ ಪ್ಲಾನ್ ಇದು.
ಬೀದಿ ಹೋರಾಟದಿಂದ ಹಿಡಿದು, ಕಾನೂನು ಹೋರಾಟದವರೆಗೂ ಕಾವೇರಿ ನಿತ್ರಾಣಗೊಂಡಿದ್ದಾಳೆ. ತಮಿಳುನಾಡು ಒಪ್ಪಂದಗಳ ಪತ್ರ ಹಿಡಿದುಕೊಂಡು ವಾದಕ್ಕಿಳಿದರೇ, ಕರ್ನಾಟಕ ತನ್ನ ನೆಲದಲ್ಲಿ ಹುಟ್ಟುವ ನೀರು ನಮಗೇ ಸಿಗದಿದ್ದಾಗ ತಮಿಳುನಾಡಿಗೆ ಕೊಡುವುದು ಹೇಗೆ ಎಂದು ವಾದ ಮಾಡುತ್ತಿದೆ. ಮೇಲ್ಬಾಗದ ರಾಜ್ಯವಾದ ಕಾರಣಕ್ಕೆ ಕೆಳಭಾಗದಲ್ಲಿರುವ ತಮಿಳುನಾಡಿನ ಕಡೆ ಕೋರ್ಟ್ ಕನಿಕರ ತೋರಿಸುವುದು ಹೆಚ್ಚು. ಹೀಗಾಗಿ ತಮಿಳುನಾಡು ಪಡೆದುಕೊಳ್ಳುವಲ್ಲಿ ಸಫಲವಾಗುತ್ತಿದೆ. ಕರ್ನಾಟಕಕ್ಕೆ ಪದೇಪದೇ ಹಿನ್ನಡೆಯಾಗುತ್ತಿದೆ. ಹೀಗಾಗಿ ಪದೇಪದೇ ಕೇಂದ್ರದ ಮಧ್ಯಸ್ಥಿಕೆಗಾಗಿ ಕರ್ನಾಟಕ ಸರ್ಕಾರ ಒತ್ತಾಯಿಸುತ್ತಲೇ ಇದೆ. ಆದರೆ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟ ನಿಲುವನ್ನು ತಾಳುತ್ತಿಲ್ಲ. ಹದಿನೆಂಟು ಸಂಸದರನ್ನು ಕೊಟ್ಟ ಕರ್ನಾಟಕ ಹಾಗೂ ತಮಿಳುನಾಡು ಎರಡೂ ಕಡೆ ಕಮಲ ನೆಡುವ ಉದ್ದೇಶವಿದೆ. ಹೀಗಾಗಿ ಈಗ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಗೋದಾವರಿಯಿಂದ ಸ್ಟೀಲ್ ಪೈಪ್‍ಗಳ ಮೂಲಕ ಕಾವೇರಿಗೆ ನೀರು ಹರಿಸುವ ಪೊಲ್ಲಾವರಂ ಪ್ರಾಜೆಕ್ಟ್ ಕಾರ್ಯಯೋಜನೆ ರೂಪಿಸಿದೆ. ಹೀಗಾದರೇ ಎರಡೂ ರಾಜ್ಯಗಳ ದಶಕಗಳ ಸಮಸ್ಯೆಗೆ ಪರಿಹಾರ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ರೂಪಿಸಿದ ಯೋಜನೆಯ ಪ್ರಕಾರ, ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಕಾವೇರಿಗೆ ಹರಿಸಲಾಗುತ್ತದೆ. ಗೋದಾವರಿ ನದಿಯಲ್ಲಿ ಸದ್ಯ ಮೂರು ಸಾವಿರ ಟಿಎಂಸಿ ನೀರು ಸಮುದ್ರಕ್ಕೆ ಹರಿದು ಪೋಲಾಗುತ್ತಿದೆ. ಸಮುದ್ರ ಸೇರುವ ಬದಲು ಅದೇ ನೀರನ್ನು ಕೊಳವೆ ಮಾರ್ಗದ ಮೂಲಕ ಕಾವೇರಿ ನದಿಗೆ ಜೋಡಣೆ ಮಾಡುವ ಯೋಜನೆಗೆ ಕೇಂದ್ರ ಮುಂದಾಗಿದ್ದು, ಈ ಸಂಬಂಧ ಫಲಾನುಭವಿ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮುಖ್ಯಮಂತ್ರಿಗಳ ಸಭೆ ಕರೆಯಲಿದೆ. ಎಲ್ಲ ರಾಜ್ಯಗಳೂ ಸಮ್ಮತಿಸಿದರೆ ಗೋದಾವರಿ ಕಾವೇರಿಗೆ ಹರಿಯಿತೆಂದೇ ಲೆಕ್ಕ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ರಿವರ್ ಲಿಂಕಿಂಗ್ ಪ್ರಾಜೆಕ್ಟ್‍ನ ಭಾಗವಾಗಿ ಗೋದಾವರಿ-ಕಾವೇರಿ ನದಿ ಜೋಡಣೆ ನಡೆಯಲಿದ್ದು, ಶೇಕಡ ತೊಂಭತ್ತರಷ್ಟು ವೆಚ್ಚವನ್ನು ಕೇಂದ್ರವೇ ಭರಿಸಲಿದೆ. ಉಳಿದ ಶೇಕಡ ಹತ್ತರಷ್ಟು ಮೊತ್ತವನ್ನು ರಾಜ್ಯ ಸರಕಾರಗಳು ಭರಿಸಲಿವೆ. ಸದ್ಯ ಈ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸಿ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಪೊಲ್ಲಾವರಂ ಪ್ರಾಜೆಕ್ಟ್ ನದಿ ತಿರುವಿನ ಅಂಶವಾಗಿರುವುದರಿಂದ ಗೋದಾವರಿ ನದಿಗೆ ಮಾರಕವಾಗಬಹುದು. ಆದರೆ ಕಾವೇರಿ ಸಮಸ್ಯೆ ಬಗೆಹರಿಯುತ್ತದೆ. ಭವಿಷ್ಯದ ಆತಂಕಕ್ಕಿಂದ ಆತುರವಾಗಿ ಕರ್ನಾಟಕದ ಅಧಿಕಾರ ಅನಿವಾರ್ಯವಾಗಿರುವುದರಿಂದ ಕೇಂದ್ರ, ಕಾವೇರಿಯನ್ನು ಪ್ರಭಲ ಅಸ್ತ್ರವಾಗಿ ಮಾಡಿಕೊಂಡಿದೆ. ಹಳೇ ಮೈಸೂರು, ಮಂಡ್ಯ, ಬೆಂಗಳೂರು ಭಾಗದಲ್ಲಿ ಕಾವೇರಿ ಹನಿಗೆ ಕಮಲ ಅರಳಿತೆಂದೇ ಲೆಕ್ಕಾಚಾರ.
ಹಾಗೆಯೇ ಮಲಪ್ರಭಾ ಕಣಿವೆಯಲ್ಲಿ ಉಂಟಾಗಿರುವ ನೀರಿನ ಕೊರತೆಯನ್ನು ಮಹದಾಯಿ ಮೂಲಕ ನೀಗಿಸಲು ಕರ್ನಾಟಕ ನಡೆಸಿದ ಕಾನೂನು ಹೋರಾಟಕ್ಕೆ ನ್ಯಾಯಾಧಿಕರಣದಲ್ಲಿ ಸೋಲಾಗಿತ್ತು. ಮಹದಾಯಿ ನದಿಯಿಂದ 7 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಮಲಪ್ರಭಾಕ್ಕೆ ಹರಿಸಬೇಕೆಂಬ ಕರ್ನಾಟಕದ ಮಧ್ಯಂತರ ಅರ್ಜಿಯನ್ನು ನ್ಯಾ.ಜೆ.ಎಂ. ಪಾಂಚಾಲ್ ನೇತೃತ್ವದ ತ್ರಿಸದಸ್ಯ ನ್ಯಾಯಾಧಿಕರಣ ವಜಾಗೊಳಿಸಿದ ನಂತರ ಯಥಾಪ್ರಕಾರ ರೈತರು ಬೀದಿಗಿಳಿದು ಹೋರಾಡಿದ್ದರು. ಹೋರಾಟ ಮುಂದುವರಿದಿದೆ. ಮಹದಾಯಿ ವಿವಾದ ಬಗೆಹರಿಯುವ ಲಕ್ಷಣ ಗುಜರಾತ್‍ನಲ್ಲಿ ಬಿಜೆಪಿ ಗೆಲ್ಲುವವರೆಗೂ ಇರಲಿಲ್ಲ.
ಈಗ ನ್ಯಾಯಾಧಿಕರಣದ ತೀರ್ಪಿನ ವಿಚಾರಕ್ಕೆ ಬನ್ನಿ. ನ್ಯಾಯಾಧಿಕರಣ ತನ್ನ ತೀರ್ಪಿನಲ್ಲಿ ಹೇಳಿರುವ ಅಂಶಗಳು ಒಟ್ಟಾರೆಯಾಗಿ ಕಳಸಾ ಬಂಡೂರಿ ಯೋಜನೆಯಿಂದ ಅನಾನುಕೂಲ ಹೆಚುತ್ತದೆ ಎಂಬುದಾಗಿತ್ತು. ಬೃಹತ್ ಪ್ರಮಾಣದ ಶಾಶ್ವತ ಕಾಮಗಾರಿಗಳು ಮತ್ತು ನದಿಗೆ ಅಡ್ಡವಾಗಿ ಅಣೆಕಟ್ಟನ್ನು ನಿರ್ಮಾಣ ಮಾಡದೆ ನದಿಯಿಂದ 7 ಟಿಎಂಸಿ ನೀರನ್ನು ತೆಗೆಯಲು ಸಾಧ್ಯವಿಲ್ಲ. ಅಣೆಕಟ್ಟುಗಳನ್ನು ತಾತ್ಕಾಲಿಕ ಕಾಮಗಾರಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೆ, ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಮಾಡಿದರೆ ಅಲ್ಲಿ ಸಹಜವಾಗಿಯೇ ನೀರು ಸಂಗ್ರಹಗೊಳ್ಳುತ್ತದೆ. ಮಹದಾಯಿ ಮತ್ತು ಮಲಪ್ರಭಾ ನದಿಗಳ ನಡುವಿನ ಅಂತರ ಹೆಚ್ಚಿರುವುದರಿಂದ, ನೀರನ್ನು ಒಂದೆಡೆಯಿಂದ ಮತ್ತೊಂದೆಡೆ ತಿರುಗಿಸಲು ಶಾಶ್ವತ ಕಾಮಗಾರಿ ಅನಿವಾರ್ಯ. ಹೀಗಾಗಿ ಶಾಶ್ವತ ಕಾಮಗಾರಿ ಬೇಕಾಗಿಲ್ಲ ಎಂಬ ಕರ್ನಾಟಕದ ವಾದ ಒಪ್ಪುವುದು ಕಷ್ಟ ಎನ್ನುವುದು ನ್ಯಾಯಾಧಿಕರಣದ ತೀರ್ಪಿನ ಮೊದಲ ಅಂಶವಾಗಿತ್ತು.
1974ರ ಪರಿಸರ ಮಾಲಿನ್ಯ ತಡೆ ಮತ್ತು ನಿಯಂತ್ರಣ ಅಂದರೇ ದ ವಾಟರ್ ಆಕ್ಟ್ 1974 ಹಾಗೂ 1986ರ ಪರಿಸರ ರಕ್ಷಣಾ ಕಾಯ್ದೆ, ವನ್ಯಜೀವಿ ಸಂರಕ್ಷಣೆ ಮತ್ತು ಜೀವ ವೈವಿಧ್ಯಗಳ ರಕ್ಷಣಾ ಕಾಯ್ದೆಗಳ ಪ್ರಕಾರ ಇಂಥಹ ಯೋಜನೆಗಳಿಗೆ ಕೇಂದ್ರ ಸರ್ಕಾರ ಅಥವಾ ಯೋಜನಾ ಆಯೋಗ ಸೇರಿದಂತೆ ಹಸಿರು ನ್ಯಾಯಾಧಿಕರಣದ ಅನುಮತಿ ಬೇಕು. ಆದರೆ ಕರ್ನಾಟಕ ಇಂಥ ಯಾವುದೇ ಅನುಮತಿಗಳನ್ನು ಪಡೆದುಕೊಂಡಿಲ್ಲ. ಇದು ಎರಡನೇ ಅಂಶ.
ಹೆಚ್ಚುವರಿ ನೀರು ನಿರರ್ಥಕವಾಗಿ ಸಮುದ್ರ ಸೇರುತ್ತಿದೆ ಎಂಬ ಕರ್ನಾಟದ ವಾದವನ್ನು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ವೈಜ್ಞಾನಿಕವಾಗಿ ಸಮುದ್ರದ ನೀರು ಕ್ರಮೇಣವಾಗಿ ಆವಿಯಾಗುತ್ತಲೇ ಇರುತ್ತದೆ. ಗಾಳಿಯಲ್ಲಿನ ತೇವಾಂಶದಿಂದಾಗಿ ಮೋಡಗಳು ಉತ್ಪತ್ತಿಯಾಗಿ ನಂತರ ಮಳೆ ಬರುತ್ತದೆ. ಭೂಮಿ, ನದಿ ಮತ್ತು ಸಮುದ್ರದ ನಡುವಿನ ನೀರಿನ ಸಂಚಾರಕ್ಕೆ ಜಲಚಕ್ರ ಎನ್ನುತ್ತೇವೆ. ಈ ನೀರಿನ ಸಂಚಾರದಿಂದಲೇ ಭೂಮಿಯಲ್ಲಿರುವ ಎಲ್ಲಾ ಜೀವ ಸಂಕುಲಗಳಿಗೆ ಶುದ್ಧ ನೀರು ಸಿಗುತ್ತಿದೆ. ಕೆಲವೇ ಕೆಲವು ನದಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ನದಿಗಳ ನೀರು ಕೊನೆಗೆ ಸಮುದ್ರವನ್ನು ಸೇರುತ್ತವೆ. ಸಮುದ್ರಕ್ಕೆ ಸೇರುವ ಮುನ್ನ ಕಣಿವೆ ರಾಜ್ಯಗಳು ತಮ್ಮ ಅಗತ್ಯಕ್ಕೆ ನೀರನ್ನು ಬಳಸಿಕೊಳ್ಳುವುದು ಸಹಜ. ಅದರೆ ಕರ್ನಾಟಕ ಮಂಡಿಸಿದಂತೆ 7 ಟಿಎಂಸಿ ಏತ ನೀರಾವರಿಗೆ ಸಮ್ಮತಿ ನೀಡಿದಲ್ಲಿ ಮಹದಾಯಿ ಕಣಿವೆ ವ್ಯಾಪ್ತಿಯ ಪರಿಸರದ ಮೇಲೆ ಅಗಾಧ ಪರಿಣಾಮ ಬೀರಲಿದೆ ಮತ್ತು ನೈಸರ್ಗಿಕ ಅಸಮತೋಲನಕ್ಕೆ ನಾವೇ ಅವಕಾಶ ನೀಡಿದಂತಾಗುತ್ತದೆ. ಇದು ತೀರ್ಪಿ ಮೂರನೇ ಅಂಶವಾಗಿತ್ತು.
ಕರ್ನಾಟಕ ನೀರನ್ನು ತೆಗೆಯಲು ಗುರುತಿಸಿರುವ ಮಹದಾಯಿಯ ಉದ್ದೇಶಿತ 3 ಕಣಿವೆ ಪ್ರದೇಶಗಳಲ್ಲಿ ಹೆಚ್ಚುವರಿ ನೀರಿನ ಲಭ್ಯತೆ ಇದೆ ಎಂಬುದು ಸಾಬೀತಾಗಿಲ್ಲ. ಒಂದು ವೇಳೆ ನೀರು ಹೆಚ್ಚಿದೆ ಎಂದಾಗಿದ್ದರೆ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತಿದೆ ಎಂಬ ವಾದಕ್ಕೆ ಪ್ರಸ್ತುತತೆ ಇರುತ್ತಿತ್ತು. ಆದರೆ ಹೆಚ್ಚುವರಿ ನೀರಿಲ್ಲ ಎಂದ ಮೇಲೆ ಸಮುದ್ರಕ್ಕೆ ಹರಿವ ನೀರನ್ನು ತಡೆಯುವುದು ಹೇಗೆ?.. 7 ಟಿಎಂಸಿ ನೀರು ಎತ್ತುವುದರಿಂದ ನೀರು ಎತ್ತಲು ಗುರುತಿಸಲಾಗಿರುವ ಮಹದಾಯಿ ಕಣಿವೆಯ 3 ಪ್ರದೇಶಗಳ ಕೆಳ ಭಾಗದ ಮೇಲೆ ಅದು ಯಾವ ರೀತಿಯ ಪರಿಣಾಮಗಳನ್ನು ಬೀರಲಿದೆ ಎಂಬುದನ್ನು ಕರ್ನಾಟಕ ಈ ನ್ಯಾಯಾಧಿಕರಣಕ್ಕೆ ವಿವರಿಸಿಲ್ಲ. ಮಹದಾಯಿ ನೀರು ವ್ಯರ್ಥವಾಗಿ ನದಿ ಸೇರುತ್ತಿದೆ ಎಂದು ಒತ್ತಿ ಹೇಳುತ್ತಿರುವ ಕರ್ನಾಟಕ ಮೊದಲು `ನದಿಗಳ ಶಾರೀರಿಕ ವಿಜ್ಞಾನ’ವನ್ನು ಅರಿತುಕೊಳ್ಳಬೇಕು. ಇದು ತೀರ್ಪಿನ ನಾಲ್ಕನೇ ಅಂಶವಾಗಿತ್ತು.
ನ್ಯಾಯಾಧೀಕರಣದ ಆದೇಶದ ಪ್ರಕಾರ ಮಹದಾಯಿ ವಿವಾದ ಬಗೆಹರಿಯುವಂಥದ್ದಲ್ಲ. ಕರ್ನಾಟಕಕ್ಕೆ ಈ ಸಂಗತಿಯಲ್ಲಿ ಗೆಲುವು ಮರೀಚಿಕೆ ಎನ್ನಲಾಗಿತ್ತು. ಈ ಹಿಂದೆ ಅಂತಾರಾಜ್ಯ ನೀರಿನ ಸಮಸ್ಯೆ ಭುಗಿಲೆದ್ದಾಗ ಅಂದಿನ ಪ್ರಧಾನಿ ಇಂದಿರಾ ಗಾಂದಿ ಮಧ್ಯಪ್ರವೇಶಿಸಿ ವಿವಾದ ಬಗೆಹರಿಸಿದ್ದರು. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದರೇ ವಿವಾದ ಸರಳವಾಗಿ ಬಗೆಹರಿಯುತ್ತದೆ ಎಂಬ ನಂಬಿಕೆಯಿತ್ತು. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಅವಿರತ ಒತ್ತಾಯಿಸುತ್ತಲೇ ಬಂತು. ಅಪ್ಪಿತಪ್ಪಿಯೂ ಈ ಬಗ್ಗೆ ಕೇಂದ್ರ ಚಕಾರವೆತ್ತಲಿಲ್ಲ. ಆ ಸಾಧ್ಯತೆ ಮೋದಿಗಿದೆಯಾದರೂ ಎರಡು ರಾಜ್ಯಗಳ ನಡುವೆ ಅವರು ನಿನ್ನೆಯವರೆಗೂ ಮಧ್ಯಪ್ರವೇಶಿಸಿರಲಿಲ್ಲ. ಈಗ ಅಮಿತ್ ಶಾ, ಮನೋಹರ್ ಪಾರಿಕ್ಕರ್ ಅವರ ಜೊತೆ ಮಾತನಾಡಿದ್ದು ವಿವಾದ ಬಗೆಹರಿಯುವ ಸೂಚನೆ ಸಿಕ್ಕಿದೆ. ಕರ್ನಾಟಕದಲ್ಲಿ ಅಧಿಕಾರ ಹಿಡಿಯಲೇಬೇಕೆಂಬ ಮರ್ಜಿ ಹೊತ್ತಿರುವ ಕೇಂದ್ರ ಸರ್ಕಾರದ ಉದ್ದೇಶ ಸ್ಪಷ್ಟವಾಗಿದ್ದರೂ ವಿವಾದ ಬಗೆಹರಿದದ್ದೇ ದೊಡ್ಡ ವಿಚಾರವಾಗುತ್ತದೆ. ಬಿಜೆಪಿಯ ಅಧಿಕಾರದ ಉದ್ದೇಶ ಈಡೇರುವುದಕ್ಕೆ ಮಹದಾಯಿ ದೊಡ್ಡ ಅಸ್ತ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇವೆಲ್ಲವನ್ನು ಮೀರಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳುತ್ತದಾ..? ಬಿಜೆಪಿ ಗೇಮ್‍ಪ್ಲಾನ್‍ಗೆ ನಿತ್ರಾಣವಾಗುತ್ತಾ..?