ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಜನ್ಮದಿನವಿಂದು. ಅಹಿಂಸಾ ಮಾರ್ಗದಿ ದೇಶಕ್ಕೆ ಸ್ವಾತಂತ್ಯ್ರ ತಂದುಕೊಟ್ಟ ಇವರ ಬಗ್ಗೆ ತಿಳಿಯದಿವರಲ್ಲ. ಗಾಂಧೀಜಿ ಅಂದರೆ ಪ್ರತಿಯೊಬ್ಬರಿಗೂ ಗೊತ್ತು. ಇವತ್ತು ಇವರ ಜನ್ಮದಿನ (ಅಕ್ಟೋಬರ್ 2). ಆದ್ದರಿಂದ ಇವರ ಬಗೆಗಿನ ಕೆಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಳ್ಳೋಣ..
• ಗಾಂಧೀಜಿ ಅವರ ಆರೋಗ್ಯದ ಗುಟ್ಟೇನು ? : ಗೋಧಿ ರೊಟ್ಟಿ, ಬೇವಿನ ಚೆಟ್ನಿ, ಆಡಿನ ಹಾಲು, ಹೆಸರು ಬೇಳೆ ಖೀರು ಪ್ರತಿದಿನ ಬೆಳಗ್ಗಿನ ತಿಂಡಿಯಾಗಿತ್ತು! ಜೊತೆಗೆ ನಡಿಗೆ ಇವರಿಗೆ ತುಂಬಾ ಇಷ್ಟವಾಗಿತ್ತು. ಇದೇ ಇವರ ಆರೋಗ್ಯದ ಗುಟ್ಟು.
• ಗಾಂಧೀಜಿಯವರನ್ನು ಮೊದಲು ಮಹಾತ್ಮ ಎಂದು ಕರೆದವರು ಯಾರು ಗೊತ್ತಾ? : ಗಾಂಧೀಜಿಯವರನ್ನು ಮೊಟ್ಟಮೊದಲ ಬಾರಿಗೆ ಮಹಾತ್ಮ ಎಂದವರು ಕವಿ ರವೀಂದ್ರ ನಾಥ ಟ್ಯಾಗೋರ್ ಅವರು. ಒಮ್ಮೆ ಟ್ಯಾಗೋರವರು ಗಾಂಧೀಜಿಯವರ ಶಾಂತಿನಿಕೇತನಕ್ಕೆ ಹೋಗಿದ್ದಾಗ , ಗಾಂಧೀಜಿ ಟ್ಯಾಗೋರ್ ಅವರನ್ನು ಕುರಿತು, `ನಮಸ್ತೆ ಗುರುದೇವ’ ಅಂದಿದ್ರಂತೆ. ಆಗ ರವೀಂದ್ರನಾಥ ಟ್ಯಾಗೋರ್ ಅವರು ಗಾಂಧೀಜಿಯವರನ್ನು ‘ಮಹಾತ್ಮ’ ಎಂದು ಕರೆದರಂತೆ.
• ನೋಟಿನ ಮೇಲಿನ ಗಾಂಧೀಜಿ ಫೋಟೋ ಎಲ್ಲಿಯದು? : ನಮ್ಮ ನೋಟಿನ ಮೇಲೆ ನಗುತ್ತಿರುವ ಗಾಂಧೀಜಿ ಫೋಟೋ ಇದೆಯಲ್ಲಾ? ಅದನ್ನು ತೆಗೆದುಕೊಂಡಿದ್ದು 1946ರಲ್ಲಿ ಬ್ರಿಟಿಷ್ ಸೆಕ್ರೆಟರಿ ಫೆಡ್ರಿಕ್ ಫೆಥಿಕ್ ಲಾರೆನ್ಸ್ ರಾಷ್ಟ್ರಪತಿ ಭವನದಲ್ಲಿ ಗಾಂಧೀಜಿಯವರನ್ನು ಭೇಟಿಯಾದಗ ತೆಗದ ಫೋಟೋಗಳಿಂದ ಬಳಸಿಕೊಂಡಿರುವ ಫೋಟೋ! ಆದರೆ, ಇದನ್ನು ತೆಗೆದ ಫೋಟೋಗ್ರಾಫರ್ ಯಾರು ಅಂತ ಗೊತ್ತಿಲ್ಲ!
• ನಿಮಗಿದು ಗೊತ್ತಾ: ಗಾಂಧೀಜಿ ಅಮೇರಿಕಾಕ್ಕೆ ಭೇಟಿ ನೀಡಿಲ್ಲ. ಆದರೆ, ಅಲ್ಲಿಯೂ ಇವರ ಅಭಿಮಾನಿಗಳು, ಅನುಯಾಯಿಗಳು ಇದ್ದರು. ಹೆನ್ರಿ ಫೋರ್ಡ್ ಎಂಬ ಅಭಿಮಾನಿಗೆ ಗಾಂಧೀಜಿ ತಮ್ಮ ಹಸ್ತಾಕ್ಷರವಿರುವ ಚರಕವೊಂದನ್ನು ಕಳುಹಿಸಿಕೊಟ್ಟಿದ್ದರು. ಹೆನ್ರಿ ಗಾಂಧೀಜಿಯವರ ಬಗ್ಗೆ ಅಪಾರ ಭಕ್ತಿ, ಗೌರವ ಹೊಂದಿದ್ದ ಅಮೇರಿಕದ ಪ್ರಜೆ.
• ಆಶ್ಚರ್ಯವಾಗುತ್ತೆ! : ನಡೆಯುವುದು ಅಂದರೆ ಗಾಂಧೀಜಿಗೆ ತುಂಬಾ ಇಷ್ಟ. ಇದು ಕೂಡ ಇವರ ಆರೋಗ್ಯದ ಗುಟ್ಟೇನೋ. ಶಾಲೆಗೆ ಹೋಗುವಾಗ ನಡೆದುಕೊಂಡೇ ಹೋಗುತ್ತಿದ್ದ ಇವರು ಲಂಡನ್‍ನಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದಾಗಲೂ ಸುಮಾರು 10 ಕಿ.ಮೀ ನಡೆದುಕೊಂಡು ಹೋಗ್ತಿದ್ರಂತೆ! 1930ರಲ್ಲಿ ಗಾಂಧೀಜಿ ದಂಡಿ ಯಾತ್ರೆ ನಡೆಸಿದಾಗ ಅವರಿಗೆ 60 ವರ್ಷ. ಆ ವಯಸ್ಸಲ್ಲಿಯೇ ಆಗ 241 ಕಿ.ಮೀ ನಡೆದುಕೊಂಡೇ ಹೋಗಿದ್ದರು!