ಅಪ್ಪ ಮತ್ತು ಮಕ್ಕಳು ಸೇರಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಬಿಬಿ ಕಾವಲು ಗ್ರಾಮದ ಬಳಿ ನಡೆದಿದೆ.
ಪ್ರೇಮಮ್ಮ ಎಂಬ 50 ವರ್ಷದ ಮಹಿಳೆ ದೌರ್ಜನ್ಯಕ್ಕೆ ಒಳಗಾದವರು. ಕಾಳೇಗೌಡ (60), ಚೇತನ್ (30), ಪ್ರವೀಣ್ (28) ಆರೋಪಿಗಳು.
ಜಮೀನಿನ ವಿವಾದದ ಹಿನ್ನೆಲೆಯಲ್ಲಿ ತಂದೆ-ಮಕ್ಕಳು ಸೇರಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಪ್ರೇಮಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಇವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು, ಅತ್ಯಾಚಾರಕ್ಕೂ ಪ್ರಯತ್ನಿಸಿದ್ದಾರೆಂದು ತಿಳಿದುಬಂದಿದೆ. ಪ್ರೇಮಮ್ಮ ಕೃಷ್ಣರಾಜಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಆರೋಪಿಗಳ ವಿರುದ್ಧ ಕೆ. ಆರ್ ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.