ಬೆಂಗಳೂರಿನಿಂದ 221 ಕಿಮೀ ದೂರ ಮತ್ತು ಸಕಲೇಶಪುರದಿಂದ ಕೇವಲ 5 ಕಿಮೀ ದೂರದಲ್ಲಿರುವ ಈ ಕೋಟೆಯನ್ನು ಮೇಲ್ಭಾಗದಿಂದ ಪುನೀತ್ ಚಿತ್ರದ ಪರವಶನಾದೆನು ಎಂಬ ಹಾಡಿನಲ್ಲಿ ತೋರಿಸಿದ್ದಾರೆ. ನಂತರ ಇದನ್ನು ನೋಡಲು ದೂರದೂರಿನಿಂದ ಪ್ರವಾಸಿಗರು ಬರಲು ಪ್ರಾರಂಭಿಸಿದ್ದಾರೆ. ಹಚ್ಚಹಸುರಿನ ಮಧ್ಯೆ ಇರುವ ಈ ಕೋಟೆಯನ್ನು ನೋಡುವುದೇ ಕಣ್ಣಿಗೊಂದು ಹಬ್ಬ.
ಇದೇ ಮಂಜರಾಬಾದ್ ಕೋಟೆ. ಸಮುದ್ರ ಮಟ್ಟದಿಂದ 3240 ಅಡಿ ಎತ್ತರದಲ್ಲಿ ಈ ಕೋಟೆಯನ್ನು ನಕ್ಷತ್ರದ ಆಕಾರದಲ್ಲಿ ಸುಮಾರು 5 ಎಕರೆ ಜಾಗದಲ್ಲಿ ಕಟ್ಟಲಾಗಿದೆ, ಇದನ್ನು ಹತ್ತಲು 250 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು.
ಈ ಕೋಟೆಯನ್ನು ಟಿಪ್ಪುಸುಲ್ತಾನ್ ತನ್ನ ಸಾಮ್ರಾಜ್ಯದ ಗಡಿಭಾಗಗಳ ರಕ್ಷಣೆಗೋಸ್ಕರ ಕಟ್ಟಿಸಿದ್ದಂತೆ, ಅಲ್ಲಿ ಸೈನಿಕರು ಆಪತ್ಕಾಲದಲ್ಲಿ ಅನುಕೂಲವಾಗಲು ಮದ್ದುಗುಂಡುಗಳನ್ನು ಸಂಗ್ರಹಿಸಿಡಲು ಮತ್ತು ಸೈನಿಕರು ವಿಶ್ರಾಂತಿ ತೆಗೆದುಕೊಳ್ಳಲು ನಿರ್ಮಾಣ ಮಾಡಿದ್ದನಂತೆ. ಈ ಕೋಟೆಯೊಳಗೆ ಎಲ್ಲಾ ಸುರಕ್ಷಿತ ವ್ಯವಸ್ಥೆಗಳನ್ನು ಮಾಡಿ ಶತ್ರುಗಳನ್ನು ಸದೆಬಡಿಯಲು ಅನುಕೂಲವಾಗುವಂತೆ ಕಟ್ಟಿರುವ ಈ ಕೋಟೆಯ ವಿನ್ಯಾಸವೇ ಅದ್ಭುತ.