ವಿಡಂಬನಾ ಬರಹದ ‘ಕಿರಿಕ್’ ರಾಜು…!

Date:

ಮಣ್ಣೆ ರಾಜು, ತುಂಬಾ ಗಂಭೀರ ವ್ಯಕ್ತಿ. ಹಿರಿಯರಿರಲಿ, ಕಿರಿಯರಿರಲಿ ಎಲ್ಲರೊಂದಿಗೆ ಒಂದೇರೀತಿ ಬೆರೆಯುವ ದೊಡ್ಡ ವ್ಯಕ್ತಿತ್ವ ಇವರದ್ದು. ಪತ್ರಿಕೋದ್ಯಮದಲ್ಲಿ 3 ದಶಕದ ಹಿರಿಯದಾದ ಅನುಭವ ಇವರ ಜೊತೆಗಿದೆ. ವಿಡಂಬನಾ ಬರಹಗಳ ಮೂಲಕ ತನ್ನದೇ ಓದುಗ ಬಳಗವನ್ನು ಸೃಷ್ಟಿಸಿಕೊಂಡಿರುವ ಅದ್ಭುತ ಬರಹಗಾರರು. ಇವರು ಮಾಡ್ತಿದ್ದ ‘ಕಿರಿಕ್’ ಎಲ್ರಿಗೂ ಇಷ್ಟ…! ಇದಕ್ಕಾಗಿಯೇ ಪತ್ರಿಕೆ ಕೊಳ್ಳುತ್ತಿದ್ದವರೂ ಇದ್ದಾರೆ. ಇವರು ವಿಡಂಬನಾ ಬರಹಗಳ ‘ಕಿರಿಕ್’ ರಾಜು…!

ತುಮಕೂರು ವಾರ್ತೆ ದಿನಪತ್ರಿಕೆಯಲ್ಲಿ ಸತತ 501 ದಿನಗಳ ಕಾಲ ‘ಕಿರಿಕ್’ ಎಂಬ ಹೆಸರಲ್ಲಿ ವಿಡಂಬನಾ ಅಂಕಣ ಬರೆದು ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಒಂದೇ ಒಂದು ದಿನವೂ ಬಿಡದೆ (ರಜಾದಿನಗಳನ್ನು ಹೊರತುಪಡಿಸಿ) ಇಷ್ಟೊಂದು ವಿಡಂಬನಾ ಅಂಕಣ ಬರೆದಿರೋದು ಕನ್ನಡ, ಭಾರತೀಯ ಪತ್ರಿಕೋದ್ಯಮ ಮಾತ್ರವಲ್ಲ ವಿಶ್ವ ಪತ್ರಿಕೋದ್ಯಮದಲ್ಲಿಯೇ ಮೊದಲು…!  ಪ್ರಜಾವಾಣಿ ದಿನಪತ್ರಿಕೆಯಲ್ಲಿ ಟಿಎಸ್‍ಆರ್ ಅವರು ಬರೆಯುತ್ತಿದ್ದ ‘ಛೂ ಬಾಣ’ ನಿಮಗೆ ನೆನಪಿರಬಹುದು. ಮಣ್ಣೆರಾಜು ವಿಡಂಬನ ಬರಹಗಳನ್ನು ಬರೆಯಲು ಸ್ಪೂರ್ತಿ, ಪ್ರೇರಣೆ ಟಿಎಸ್‍ಆರ್ ಅವರು ಹಾಗೂ ಅವರ ಛೂ ಬಾಣ ಅಂಕಣ. ಮಣ್ಣೆರಾಜು ಅವರು ವಾರದ ಏಳು ದಿನಗಳಲ್ಲಿಯೂ ಕಿರಿಕ್ ಬರೀತಿದ್ರು. ಶುರುಮಾಡಿದ್ದಲ್ಲಿಂದ ಮೊನ್ನೆ ಮೊನ್ನೆ 501ನೇ ಹಾಗೂ ಕೊನೆಯ ಅಂಕಣ ಬರೆಯುವ ತನಕ ಪ್ರತಿ ಸಂಚಿಕೆಯಲ್ಲೂ ಕಿರಿಕ್ ಮಿಸ್ ಆಗಿರ್ಲಿಲ್ಲ.

ಗಂಗರ ರಾಜಧಾನಿ ಆಗಿನ ಮಾನ್ಯಪುರ, ಈಗಿನ ಮಣ್ಣೆ (ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲೂಕು)ಯಲ್ಲಿ 1964ರ ಜನವರಿ 4ರಂದು ಜನಿಸಿದರು. ಚಿಕ್ಕನಾಗಯ್ಯ ಮತ್ತು ಬೈಲಮ್ಮ ದಂಪತಿಯ 6 ಮಂದಿ ಮಕ್ಕಳಲ್ಲಿ 3ನೇಯವರು ಸಿ.ಎನ್ ರಾಜು. ಪತ್ರಿಕೋದ್ಯಮಕ್ಕೆ ಬಂದ್ಮೇಲೆ ಮಣ್ಣೆರಾಜು ಎಂದು ಗುರುತಿಸಿಕೊಂಡರು. ಪತ್ನಿ ಅನುಸೂಯ. ಸೃಜನ್ ಮತ್ತು ಸಂಸ್ಕೃತಿ ಇವರ ಮಕ್ಕಳು.


ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರು ಮಣ್ಣೆಯಲ್ಲಿ ಮುಗಿಸಿ ತುಮಕೂರು ವಿಜ್ಞಾನ ಕಾಲೇಜಿನಲ್ಲಿ (ಇಂದಿನ ತುಮಕೂರು ಯೂನಿವರ್ಸಿಟಿ ಕಾಲೇಜು) ವಿಜ್ಞಾನ ವಿಷಯದಲ್ಲಿ ಪಿಯುಸಿ (ಪಿಸಿಎಂಬಿ)ಮಾಡಿದರು. ಆ ಬಳಿಕ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮ ಪದವಿ ಪಡೆದ್ರು.


ಆದ್ರೆ, ಶಿಕ್ಷಣ ಪಡೆದ ಕ್ಷೇತ್ರದಲ್ಲಿ ಮುಂದುವರೆದು ವೃತ್ತಿ ಬದಕು ರೂಪಿಸಿಕೊಳ್ಳೋಕೆ ಮಣ್ಣೆಯವರು ಮನಸ್ಸು ಮಾಡಲಿಲ್ಲ. ಚಿಕ್ಕಂದಿನಿಂದಲೂ ಆಸಕ್ತಿಯಿದ್ದ ಬರವಣಿಗೆಯಲ್ಲಿ ತನನ್ನು ತಾನು ತೊಡಗಿಸಿಕೊಳ್ಳಲು ಮಾಧ್ಯಮ ಕ್ಷೇತ್ರದತ್ತ ಮುಖಮಾಡಿದ್ರು.
ಪಿಯುಸಿ ದಿನಗಳಲ್ಲಿಯೇ ಪ್ರಜಾವಾಣಿ, ಸುಧಾ, ಮಯೂರ ಮೊದಲಾದ ದಿನಪತ್ರಿಕೆ, ನಿಯತಕಾಲಿಕೆಗಳಿಗೆ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದ ಮಣ್ಣೆಯವರು ಪದವಿ ಬಳಿಕ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಕೆಲಸಕ್ಕೆ ಟ್ರೈ ಮಾಡಿದ್ರು. ಸರಸ್ವತಿ ಬರಹವನ್ನು ಕರುಣಿಸಿದ್ದರೂ ಜರ್ನಲಿಸಂ ಕೋರ್ಸ್ ಆಗಿಲ್ಲ ಎಂಬ ಕಾರಣಕ್ಕೆ ಅಲ್ಲಿ ಅವಕಾಶ ತಪ್ಪಿತು.


ಹಾಗಂತ ಪತ್ರಿಕೋದ್ಯಮದ ಸಹವಾಸವೇ ಬೇಡವಂತ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ತುಮಕೂರಿನ ಸ್ಥಳಿಯ ಪತ್ರಿಕೆ ‘ ಸೊಗಡು’ ಮೂಲಕ 1987ರಲ್ಲಿ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ್ರು. 3 ವರ್ಷಗಳ ಕಾಲ ಸೊಗಡಿನಲ್ಲಿ ಸೇವೆಮಾಡಿ, 1990ರ ಆಸುಪಾಸಿನಲ್ಲಿ ತುಮಕೂರಿನ ‘ಪ್ರಜಾಪ್ರಗತಿ’ ಪತ್ರಿಕೆಗೆ ಸೇರಿದ್ರು. ಅಲ್ಲಿ ಆರಂಭದಲ್ಲಿ ‘ವಕ್ರನೋಟ’ ಎಂಬ ವಿಡಂಬನ ಅಂಕಣವನ್ನು ನಿತ್ಯ ಬರೆಯುತ್ತಿದ್ದರು. 2000ನೇ ಇಸವಿಯಲ್ಲಿ ‘ತುಕಾಲಿ’ ಚಾನಲ್ ಮೂಲಕ ಎಲಕ್ಟ್ರಾನಿಕ್ ಮೀಡಿಯಾಕ್ಕೆ ಎಂಟ್ರಿ ಕೊಟ್ರು. ತುಕಾಲಿ ಮಾಲೀಕತ್ವ ಬದಲಾಗಿ ಅದು ‘ಅಮೋಘ’ ಚಾನಲ್ ಆಗಿದೆ. ಈಗಲೂ ಇದೇ ಸಂಸ್ಥೆಯಲ್ಲಿ ಮುಂದುವರೆದಿದ್ದಾರೆ. ಅಮೋಘ ಮಾಲೀಕರು ತುಮಕೂರು ವಾರ್ತೆ ದಿನಪತ್ರಿಕೆಯನ್ನು ಪಡೆದ ಮೇಲೆ ‘ಕಿರಿಕ್’ ಎಂಬ ಹೆಸರಲ್ಲಿ ಮಣ್ಣೆಯವರು ನಿತ್ಯ ವಿಡಂಬನಾ ಅಂಕಣ ಬರೀತಿದ್ರು. ಯಾವುದಕ್ಕಾದರೂ ಒಂದು ಕೊನೆ ಇರಬೇಕಲ್ಲಾ..? ಹಾಗಾಗಿ 501 ದಾಖಲೆಯ ಅಂಕಣಗಳ ಬಳಿಕ ನಿಲ್ಲಿಸಿದ್ದಾರೆ. ಆದ್ರೆ, ಬೇರೆ ರೂಪದಲ್ಲಿ, ಬೇರೆ ಹೆಸರಲ್ಲಿ ಖಂಡಿತಾ ಹಾಸ್ಯಾಂಕಣ ಮುಂದುವರೆಸಲಿದ್ದಾರೆ.


ಕೆಲವು ದಿನಗಳ ಕಾಲ ‘ಅಗ್ನಿ’ ಪತ್ರಿಕೆಯಲ್ಲಿ ‘ಕಿರಿಕ್ಕು’ ಎಂಬ ಅಂಕಣ ಬರಿತಿದ್ರು. ಅರಗಿಣಿ ಸಿನಿಮಾ ಪತ್ರಿಕೆಗೂ ಕೆಲಸ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಟಿವಿ ಸೀರಿಯಲ್ ಗಳಿಗೆ ಚಿತ್ರಕಥೆ, ಸಂಭಾಷಣೆ ಬರೆದುಕೊಟ್ಟಿದ್ದಾರೆ. ಸುವರ್ಣ ವಾಹಿನಿಯಲ್ಲಿ ಬರ್ತಿದ್ದ ‘ಪರಮೇಶಿ ಪರದಾಟ’, ‘ಅತ್ತೆ ಸೊಸೆ’, ಉದಯ ಟಿವಿಯಲ್ಲಿ ಪ್ರಸಾರವಾಗ್ತಿದ್ದ ‘ಅಕ್ಕ-ಪಕ್ಕ’, ದೂರದರ್ಶನದ ‘ಅಗ್ನಿಸಾಕ್ಷಿಗೆ’ ಒಂದಿಷ್ಟು ಕಂತುಗಳಿಗೆ ಚಿತ್ರಕಥೆ ಬರೆದಿದ್ದಾರೆ. ಅಕ್ಕ-ಪಕ್ಕ ಧಾರವಾಹಿಯ ಟೈಟಲ್ ಸಾಂಗ್ ಬರೆದಿದ್ದು ಮಣ್ಣೆ ರಾಜು ಅವರೇ.


ರಾಜ್ಯದ ವಿವಿಧ ದಿನಪತ್ರಿಕೆ, ನಿಯತಕಾಲಿಕೆಗಳಲ್ಲಿ ಇವರ ಸುಮಾರು 1ಸಾವಿರಕ್ಕೂ ಹೆಚ್ಚಿನ ವಿಡಂಬನಾ ಲೇಖನಗಳು ಪ್ರಕಟವಾಗಿವೆ. ತುಮಕೂರು ವಾರ್ತೆಯಲ್ಲಿ ಇವರು ಬರೆಯುತ್ತಿದ್ದ ‘ಕಿರಿಕ್’ ಅಂಕಣ ಬರಹಗಳನ್ನು ಉರ್ದು ಸಾಹಿತಿ ಮುನೀರ್ ಅಹಮ್ಮದ್ ಅವರು ಉರ್ದುವಿಗೆ ಅನುವಾದ ಮಾಡುತ್ತಿದ್ದಾರೆ. ಈ ಕಿರಿಕ್ ಪುಸ್ತಕವನ್ನು ಗೋಮಿನಿ ಪ್ರಕಾಶನದ ಗುಬ್ಬಚ್ಚಿ ಸತೀಶ್ ಪ್ರಕಟಿಸುತ್ತಿದ್ದಾರೆ.
ಮಾಧ್ಯಮ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು, ಸನ್ಮಾನಗಳು ಇವರನ್ನರಸಿ ಬಂದಿವೆ. ಮದುವೆ ಆಗಿರೋ ದಿನ ಇವರಿಗೆ ಅತ್ಯಂತ ಸಂತೋಷದ ದಿನವಂತೆ. ಅಪ್ಪ-ಅಮ್ಮನ ಅಗಲುವಿಕೆ, ಹುಟ್ಟಿ, ಬೆಳೆದ ಊರು, ಶಾಲೆ, 1ನೇ ತರಗತಿಗೆ ಜಾಯಿನ್ ಆಗಿದ್ದು ಮತ್ತೆ ಮತ್ತೆ ನೆನಪಾಗ್ತಿರುತ್ತಂತೆ.


‘ಪತ್ರಿಕೋದ್ಯಮಕ್ಕೆ ಬರೋರು ಸೇವಾ ಮನೋಭಾವದಿಂದ ಬರಬೇಕು. ಜನ ಪತ್ರಕರ್ತರನ್ನು ನಂಬುತ್ತಾರೆ. ನಾವು ಅವರ ನಂಬಿಕೆಗೆ ದ್ರೋಹ ಮಾಡ್ಬಾರ್ದು. ಬರವಣಿಗೆ ಮತ್ತು ನಡುವಳಿಕೆ ಮುಖ್ಯ. ಆದರ್ಶ ನಡುವಳಿಕೆ ಇಟ್ಟುಕೊಳ್ಳಲು ಸಾಧ್ಯವಾಗದೇ ಇದ್ದವರು ಮೀಡಿಯಾಕ್ಕೆ ದಯವಿಟ್ಟು ಬರಬೇಡಿ. ಇದೊಂದು ಸೇವಾಕ್ಷೇತ್ರ. ಸಾಹಿತ್ಯ ಹಿನ್ನೆಲೆ ಮುಖ್ಯವಾಗುತ್ತೆ. ಇತ್ತೀಚಿನ ದಿನಗಳಲ್ಲಿ ಜರ್ನಲಿಸಂ ತುಂಬಾ ಹದಗೆಟ್ಟಿದೆ’ ಎನ್ನುತ್ತಾರೆ ಮಣ್ಣೆರಾಜು.


ಕಿರಿಕ್ ಅಂಕಣದ ಬದಲು ಬೇರೆ ವಿಡಂಬನಾ ಬರಹಗಳನ್ನು ತುಮಕೂರು ವಾರ್ತೆಯಲ್ಲಿ ಆರಂಭಿಸ್ತಾರೆ. ಜೊತೆಗೆ ಮತ್ತೆ ರಾಜ್ಯಮಟ್ಟದ ಪತ್ರಿಕೆಗಳಿಗೂ ಬರೆಯಲು ನಿರ್ಧರಿಸಿದ್ದಾರೆ. ನೀವು ಕಿರಿಕ್ ಬರಹ ಓದಿಲ್ಲ ಅಂತಾದ್ರೆ ಈಗಲೇ ಓದಿ.
ಶುಭ ಹಾರೈಕೆಗಳೊಂದಿಗೆ ….
-ಶಶಿಧರ್ ಎಸ್ ದೋಣಿಹಕ್ಲು

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...