ಅವಳು ಮಿಸ್ ಇಂಡಿಯ ನಫೀಸಾ ಜೋಸೆಫ್, ನಿಷ್ಕಲ್ಮಶ ಪ್ರೀತಿಯನ್ನು ಹುಡುಕಿ ಸೋತಳು..!

Date:

ಕಲರ್ಫುಲ್ ಲೈಟಿಂಗ್ಸ್ ಮದ್ಯೆ ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡ್ತಾ ಇದ್ರೆ, ವೀಕ್ಷಕರ ಗ್ಯಾಲರಿಯಲ್ಲಿ ಹಷೋದ್ಗಾರ, ಮಿಂಚು ಹರಿದಂತೆ ಭಾಸ. ನಿಸ್ಸಂಶಯವಾಗಿ ಅಲ್ಲೊಂದು ಕಲರ್ಫುಲ್ ದುನಿಯಾ ತೆರೆದುಕೊಂಡಿರುತ್ತೆ. ಮಾಡೆಲಿಂಗ್ ಪ್ರಪಂಚವೇ ಹಾಗೇ…ಸ್ವರ್ಗ ಕೈಗೆಟುಕೋ ರೀತಿ. ಹೈಫೈ ಅಮಲು..! ಆ ರತಿಯ ಘಮಲು..! ಆ ಸಂದರ್ಭವನ್ನ ವರ್ಣಿಸಲು ನಿಜಕ್ಕೂ ಪದಗಳನ್ನು ಹುಡುಕಲೇಬೇಕು.
ಮಾಡೆಲಿಂಗ್ ಎಂಬ ಚಿತ್ರವಿಚಿತ್ರ ಲೋಕದಲ್ಲಿ ಹೆಣ್ಣು ತನ್ನೆಲ್ಲಾ ಸೌಂದರ್ಯವನ್ನ ಪ್ರದರ್ಶಿಸಿ ಸೈ ಎನಿಸಿಕೊಂಡರೇ ಮಿಸ್ ವರ್ಲ್ಡ್, ಮಿಸ್ ಇಂಡಿಯಾದಂಥ ಹಲವಾರು ಕಿರೀಟಗಳು ಮುಡಿಗೇರುತ್ತವೆ. ಅದೊಂದು ಹೆಮ್ಮೆಯ ವಿಚಾರ ಎನ್ನುವುದು ಕೇವಲ ತರ್ಕದ ಅಥವಾ ಜಿಜ್ಞಾಸೆಯ ಸಂಗತಿಯಲ್ಲ. ಆಯಾ ದೇಶದ ಮಟ್ಟಿಗೆ ಪಾರಿತೋಷಕದ ಸಮಾಚಾರವೂ ಹೌದು.

ಆದರೆ ಮಾಡೆಲಿಂಗ್ ಪ್ರಪಂಚ ಕಣ್ಣಿಗೆ ಕಾಣುವ ಥರ ಸೊಗಸಾದ ಜಗತ್ತೇನಲ್ಲ. ಅಲ್ಲಿ ಅಕ್ಷರಶಃ ಹತಾಶೆಯಿದೆ. ಲೈಂಗಿಕ ದೌರ್ಜನ್ಯವಿದೆ. ನಂಬಿಕೆ ದ್ರೋಹವಿದೆ. ಎಲ್ರೂ ಐಶ್ವರ್ಯ ರೈ, ಸುಷ್ಮಿತಾ ಸೇನ್, ಲಾರಾ ದತ್ತಾ, ಪ್ರಿಯಾಂಕ ಚೋಪ್ರಾ ಆಗಲು ಸಾಧ್ಯವಿಲ್ಲ. ನೂರಕ್ಕೆ ಹತ್ತು ಜನರ ಕೊರಳಿಗೆ ವಿಖ್ಯಾತಿಯ ಮಾಲೆ ಬಿದ್ದರೇ, ಉಳಿದ ತೊಂಬತ್ತು ಮಂದಿಯ ಕೊರಳಿಗೆ ಬೀಳೋದು ನೇಣು. ಅದು ಸ್ವಇಚ್ಚೆಯಿಂದ ತಂದುಕೊಳ್ಳುವ ಮರಣ. ನಿರೀಕ್ಷೆ ಮೀರಿ ಬೆಳೆದು, ಅರಗಿಸಿಕೊಳ್ಳೋ ಮುನ್ನವೇ ಮುಗಿದು ಹೋಗುವ ಖ್ಯಾತನಾಮರಲ್ಲಿ ಅವಳು ಕೂಡ ಒಬ್ಬಳು.

ನಫೀಸಾ ಜೋಸೆಫ್. ಮಿಸ್ ಇಂಡಿಯಾ ಆಗ್ಲೇಬೇಕು ಅಂಥ ಹಠಕ್ಕೆ ಬಿದ್ದ ಹುಡುಗಿ; ಮಿಸ್ ಇಂಡಿಯಾ ಆಗಿ ಹೊರಹೊಮ್ಮಿದ್ದಳು. ಅಷ್ಟರ ಮಟ್ಟಿಗೆ ನಫೀಸಾ ಮಾಡೆಲಿಂಗ್ ಪ್ರಪಂಚದಲ್ಲಿ ತನ್ನ ಚಾಪನ್ನು ಮೂಡಿಸಿದ್ದಳು. ನಫೀಸಾ ಜೋಸೆಫ್ ಹೆಸರು ಕನ್ನಡಿಗರಿಗೆ ಅಷ್ಟಾಗಿ ಪರಿಚಯವಿಲ್ಲ. ಆದರೆ ಮುಂಬೈ ಮಾಡೆಲಿಂಗ್ ಜಗತ್ತು ಆಕೆಯನ್ನು ಡಾರ್ಖ್ ಹಾರ್ಸ್ ಎಂದೇ ಕರೆದಿತ್ತು. ಪ್ರತಿ ಸಂಜೆಯಾದರೆ ಎಂ.ಟಿ.ವಿಯ “ಫುಲ್ ಹೌಸ್” ಮತ್ತು “ಗ್ರೇವ್ ಯಾರ್ಡ್ ಶಿಫ್ಟ್” ಕಾರ್ಯಕ್ರಮಗಳಿಗೆ ನಫೀಸಾ ಜೋಸೆಫ್ ಇದ್ದರೇನೇ ಚೆಂದ. ಸ್ಟಾರ್ ಟೀವಿ ತನ್ನ ಫ್ಯಾಷನ್ ಕುರಿತ ಸೀರಿಯಲ್ಗೆಂದು ಈಕೆಯನ್ನು ಆಯ್ದುಕೊಂಡಿತ್ತು. ಮನಸ್ಸು ಮಾಡಿದ್ದರೆ ನಫೀಸಾ ಹಿಂದಿ ಚಿತ್ರರಂಗದ ಬೇಡಿಕೆಯ ಹೀರೋಯಿನ್ ಆಗುತ್ತಿದ್ದಳೇನೋ!?

ಆಕೆಗೆ ದುಡ್ಡು, ಖ್ಯಾತಿ, ಗ್ಲ್ಯಾಮರ್ ಗಿಂತಲೂ ನೆಮ್ಮದಿ ಬೇಕಿತ್ತು. ಅದನ್ನು ಮನುಷ್ಯತ್ವದಲ್ಲಿ ಹುಡುಕುತ್ತಾ ಹೊರಟಳು. ಗ್ಲ್ಯಾಮರ್ ಲೋಕದಲ್ಲಿ ಭಾವನೆಗಳಿಗೆ ಬೆಲೆಯಿಲ್ಲ ಎಂಬ ಪರಮ ಸತ್ಯ ಅರಿವಾಗುವ ಹೊತ್ತಿಗೆ ಬದುಕೇ ಸಾಕೆನಿಸಿತ್ತು. ಒಮ್ಮೆ ಗ್ಲ್ಯಾಮರ್ ಲೋಕವನ್ನು ಹೊಕ್ಕಿ ಬಿಟ್ಟರೆ ಮನುಷ್ಯತ್ವದ ಬಟ್ಟೆ ಕಳಚಿಟ್ಟೇ ಒಳಕ್ಕೆ ಕಾಲಿಡಬೇಕೆಂಬ ವಿಕಟ ವಾಸ್ತವವನ್ನು ಆಕೆ ತಡವಾಗಿ ಅರ್ಥ ಮಾಡಿಕೊಂಡಳು. ತನ್ನ ಹತ್ತೊಂಬತ್ತನೇ ವಯಸ್ಸಿಗೇ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡವಳು ನಫೀಸಾ ಜೋಸೆಫ್. ಆದರೆ ತನ್ನ ಇಪ್ಪತ್ತೈದನೇ ವಯಸ್ಸಿನಲ್ಲಿ ಗೌತಮ್ ಖಂಡುಜಾನಂಥ ವಿಚ್ಛೇದಿತ, ಸ್ತ್ರೀಲೋಲ ಉದ್ದಿಮೆದಾರನಿಗಾಗಿ ಪ್ರಾಣ ಕಳೆದುಕೊಳ್ಳಬೇಕಿರಲಿಲ್ಲ. ಪ್ರಪಂಚ ಮತ್ತು ಕಾಲ ಎರಡೂ ವಿಶಾಲವಾಗಿತ್ತು. ಆತನಿಗಿಂತಲೂ ಯೋಗ್ಯ “ಪುರುಷ”ರಿದ್ದರು. ಕಾಯಬಹುದಿತ್ತು. ಮಾಡೆಲಿಂಗ್ ಲೋಕದ ದುರಂತವೇ ಅಂಥದ್ದು. ಅಲ್ಲಿ ನಫೀಸಾ ಥರದ ಸೂಕ್ಷ್ಮ ಮನಸ್ಸಿನ ಹುಡುಗಿಯರು ಸಲ್ಲುವುದಿಲ್ಲ.

ನಫೀಸಾ ಹುಟ್ಟಿದ್ದು ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ರೆಸಿಡೆನ್ಸಿ ರಸ್ತೆಯ ಬಿಷಪ್ ಕಾಟನ್ ಕಾನ್ವೆಂಟಿನಲ್ಲಿ ಓದುತ್ತಿದ್ದಾಗಲೇ ಅವಳಿಗೆ ಮಿಕ್ಕೆಲ್ಲರಿಗಿಂತಲೂ ಸೂಕ್ಷ್ಮ ಸಂವೇಧನೆಗಳಿದ್ದವು. ಆಕೆಗೆ ಮಾಡೆಲಿಂಗ್ ನ ಆಕರ್ಷಣೆಯಿತ್ತು. ಆನಂತರ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿಗೆ ಸೇರಿದಳಾದರೂ ಓದಿಗಿಂತಲೂ ಕ್ಯಾಟ್ ವಾಕ್, ರ್ಯಾಂಪ್ ಇತ್ಯಾದಿಯತ್ತಲೇ ಆಸಕ್ತಿ ಹೆಚ್ಚಾಗಿತ್ತು. ಅದೇನು ವ್ಯಾಮೋಹವೋ; ಎಲೈಟ್ ವರ್ಗದ ಪ್ರತಿಷ್ಠಿತ ಕಾನ್ವೆಂಟುಗಳಲ್ಲಿ ಓದಿದ ಬೆಂಗಳೂರಿನ ಹುಡುಗಿಯರ ಗುಂಪೊಂದು ಆ ಕಾಲದಿಂದಲೂ ಮಿಸ್ ಇಂಡಿಯಾ ಕಿರೀಟದತ್ತ ಮುಖ ಹೊತ್ತು ನಿಂತಿದೆ.

1960ರಲ್ಲಿ ಇಂಗ್ಲಿಷಿನ ಈವ್ಸ್ ವೀಕ್ಲಿ ಎಂಬ ಪತ್ರಿಕೆ ಮಿಸ್ ಇಂಡಿಯಾ ಸ್ಪರ್ಧೆಯನ್ನು ಏರ್ಪಡಿಸುತ್ತಿತ್ತು. ಅನಂತರ ಇಂಗ್ಲೀಷಿನ “ಫೆಮಿನಾ” ಪತ್ರಿಕೆ ಅ ಕೆಲಸಕ್ಕಿಳಿಯಿತು. 1972ರಲ್ಲಿ ಮಾಲತಿ ಬಸಪ್ಪ ಎಂಬ ಕೂರ್ಗಿ ಹುಡುಗಿ ಮಿಸ್ ಇಂಡಿಯಾ ಕಿರೀಟ ಧರಿಸಿದ್ದೇ ತಡ ಶೈಲಾ ಲೋಪೆಜ್, ರಾಣಿ ಜೈರಾಜ್, ಪ್ರಿಯಾಂಕ ಛೋಪ್ರಾ, ಲಾರಾ ದತ್ತಾ, ಸಾರಾ ಕಾರ್ನರ್ ಮುಂತಾದ ಸಾಲು ಸಾಲು ಬೆಂಗಳೂರಿನ ಬೆಡಗಿಯರು ಮಿಸ್ ಇಂಡಿಯಗಳಾಗತೊಡಗಿದರು.

ಇವತ್ತಿಗೂ ಅಷ್ಟೇ; ಮಾಡೆಲಿಂಗ್ ರಾಜಧಾನಿ ಮುಂಬಯಿಯನ್ನು ಹೊರತುಪಡಿಸಿದರೆ ಅತೀ ಹೆಚ್ಚು ಮಿಸ್ ಇಂಡಿಯಾಗಳು ಆಯ್ಕೆಯಾದದ್ದು ಬೆಂಗಳೂರಿನಿಂದ. ಅದಕ್ಕೆ ಕಾರಣ ಮಾಡೆಲಿಂಗ್ ಗುರು ಪ್ರಸಾದ್ ಬಿದ್ದಪ್ಪ. ಬಿಷಪ್ ಕಾಟನ್ ಕಾನ್ವೆಂಟಿನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ್ದೇ ತಡ ನಫೀಸಾ, ಪ್ರಸಾದ್ ಬಿದ್ದಪ್ಪನ ಮನೆಯಲ್ಲಿ ಪ್ರತ್ಯಕ್ಷಳಾಗಿ “ಅದೇನು ಮಾಡ್ತೀರೋ ಗೊತ್ತಿಲ್ಲ. ನಾನು ಮಿಸ್ ಇಂಡಿಯಾ ಆಗಲೇಬೇಕು!” ಎಂದು ಎದೆಯುಬ್ಬಿಸಿ ನಿಂತಿದ್ದಳು. ಆ ಕಾಲಕ್ಕೆ ಪ್ರಸಾದ್ ಬಿದ್ದಪ್ಪ ಬೆಂಗಳೂರಿನಿಂದ ಆಯ್ಕೆಯಾದ ಪ್ರತಿಯೊಬ್ಬ ಮಾಡೆಲಿಂಗ್ ಬೆಡಗಿಯರಿಗೂ ಗಾಡ್ ಫಾದರ್ ಆಗಿದ್ದರು. ಸೌಂದರ್ಯ ಸ್ಪರ್ಧೆಯೊಂದರ ಪ್ರಾಯೋಜಕರಿಂದ ಹಿಡಿದು ತೀರ್ಪುಗಾರರ ತನಕ ಪ್ರತಿಯೊಬ್ಬರೂ ಅವರಿಗೆ ಗೊತ್ತು. ಗುರು ಬಿದ್ದಪ್ಪನ ಬಲ ಮತ್ತು ಅಧಮ್ಯ ಛಲದಿಂದ ನಫೀಸಾ 1997ರ ಮಿಸ್ ಇಂಡಿಯಾ ಕಿರೀಟ ಧರಿಸಿಯೇ ಬಿಟ್ಟಳು.

ಅಷ್ಟಕ್ಕೂ ಆಕೆಯನ್ನು ಮಿಸ್ ಇಂಡಿಯಾ ಪಟ್ಟಕ್ಕೇರಿಸಿದ್ದು ಆಕೆಯ ಸೆಕ್ಸ್ ಅಪೀಲ್ ಅಲ್ಲ; ಆಕೆಯ ಪ್ರತಿಭೆ. “ನಿನಗಿರುವ ಮಹತ್ವಾಕಾಂಕ್ಷೆ ಏನು?” ಎಂದು ಜ್ಯೂರಿಯೊಬ್ಬ ಪ್ರಶ್ನೆ ಕೇಳುತ್ತಿದ್ದರೆ ನಫೀಸಾ ಥಟ್ಟನೆ ಹೇಳಿದ್ದಳು: `ನನ್ನ ಮೂವತ್ತನೇ ವಯಸ್ಸಿಗೆ ರಾಜಕೀಯ ಪ್ರವೇಶಿಸುತ್ತೇನೆ. ಸಧ್ಯಕ್ಕೆ ಸಿನಿಮಾ ನಟಿಯಾಗುತ್ತೇನೆ. ಅನಂತರ ನನ್ನದೇ ಆದ ಪಕ್ಷ ಕಟ್ಟಿ ದೇಶಕ್ಕೆ ಯಾರೂ ಮಾಡದಂಥ ಸೇವೆ ಸಲ್ಲಿಸುತ್ತೇನೆ. ಹಾಗೊಮ್ಮೆ ಅಬ್ರಹಾಂ ಲಿಂಕನ್ ಬದುಕಿರುತ್ತಿದ್ದರೆ ನಾನು ಆತನನ್ನೇ ಮದುವೆಯಾಗುತ್ತಿದ್ದೆ”. ಬೇರೇನೂ ಬೇಕಿರಲಿಲ್ಲ; ನಫೀಸಾಳ ಇದೊಂದೇ ಉತ್ತರ ಆಕೆಯನ್ನು 1997 ಫೆಮಿನಾ ಮಿಸ್ ಇಂಡಿಯಾ ಪಟ್ಟಕ್ಕೇರಿಸಿಬಿಟ್ಟಿತು. ಅವತ್ತು ನೆರೆದಿದ್ದ ಇಡೀ ಸಭಾಂಗಣವೇ ಚಪ್ಪಾಳೆ ತಟ್ಟಿತ್ತು.

ಮಿಸ್ಇಂಡಿಯಾ ಕಿರೀಟ ಮುಡಿಗೇರಿದ ನಂತರ ನಫೀಸಾ, ಬೆಂಗಳೂರನ್ನು ತೊರೆದು ಮಾಡೆಲಿಂಗ್ ರಾಜಧಾನಿ ಮುಂಬಯಿ ಸೇರಿಕೊಂಡಳು. ಬಾಂದ್ರಾದ ನರ್ಗೀಸ್ ದತ್ ರಸ್ತೆಯ ಲ್ಯಾಂಡ್ಸ್ ಬ್ರೀಜ್ ಅಪಾರ್ಟ್ ಮೆಂಟಿನಲ್ಲೊಂದು ಫ್ಲಾಟ್ ಖರೀದಿಸಿದ್ದಳು. ಅದಕ್ಕೂ ಮುನ್ನ ಪ್ರತಿಷ್ಠಿತ ಎಂಟಿವಿ ಆಕೆಯನ್ನು ವೀಡಿಯೋ ಜಾಕಿಯನ್ನಾಗಿ ನೇಮಿಸಿಕೊಂಡಿತ್ತು. ಅನೇಕ ಕಂಪೆನಿಗಳಿಗೆ ಆಕೆ ಮಾಡೆಲ್ ಆದಳು. ಐನೂರಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡಳು. ಈ ಹಂತದಲ್ಲೇ ಆಕೆಯ ಬದುಕಲ್ಲಿ ಸಮೀರ್ ಸೋನಿ ಕಾಲಿಟ್ಟಿದ್ದ.

ಸಮೀರ್ ಸೋನಿ ಆಗಷ್ಟೇ ಕಣ್ಣು ಬಿಡುತ್ತಿದ್ದ ಕಿರುತೆರೆ ಹೀರೋ. ಈಗ ಅದೇ ಕಿರುತೆರೆ ಜಗತ್ತಿನಲ್ಲಿ ಅವನು ಆಲದ ಮರ. ಆರಂಭದಲ್ಲಿ ಈತ ಫ್ಯಾಷನ್ ಷೋಗಳಲ್ಲಿ ಭಾಗವಹಿಸುತ್ತಿದ್ದ. ಮಾಡೆಲಿಂಗ್ ಮಾಡುತ್ತಿದ್ದ. ಆತನಲ್ಲಿ ಸೌಂದರ್ಯವಿತ್ತು. ಆರೋಗ್ಯವಿತ್ತು. ಪೌರುಷ, ದುಡ್ಡು ಎಲ್ಲವೂ ಇತ್ತು. ಇರದಿದ್ದುದ್ದು ಅಬ್ರಹಾಂ ಲಿಂಕನ್ ಮಾತ್ರ. ಆತ ಓರ್ವ ಸ್ಲೀಪಿಂಗ್ ಡಾಲ್. ಮಿಕ್ಕೆಲ್ಲ ಪುರುಷ ಮಾಡೆಲ್ ಗಳಂತೆ ಹೆಣ್ಣುಬಾಕನಾಗಿದ್ದ. ಇದು ಗೊತ್ತಾಗುವ ಹೊತ್ತಿಗೆ, ನಫೀಸಾ ಅವನನ್ನು ಗಾಢವಾಗಿ ಪ್ರೀತಿಸುತ್ತಿದ್ದಳು.

ಆದರೆ ಹಠಕ್ಕೆ ಬಿದ್ದ ನಫೀಸಾ, ತನ್ನನ್ನು ವಂಚಿಸಿದ ಸಮೀರ್ ಸೋನಿಗೆ ಪಾಠ ಕಲಿಸಲೆಂದೇ ಸಮೀರ್ ಮಲ್ಹೊತ್ರಾ ಎಂಬ ಮತ್ತೊಬ್ಬ ಶ್ರೀಮಂತ ಮಾಡೆಲ್ ನ ಸಂಗಕ್ಕೆ ಬಿದ್ದಳು. ಒಂದೆರಡು ಹಿಂದಿ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದ ಸಮೀರ್ ಆಕರ್ಷಕವಾಗಿ ಮಾತನಾಡುತ್ತಿದ್ದ. ಗುಲಾಬಿ ಹೂವು ತರುತ್ತಿದ್ದ. ದಿನಕ್ಕೊಂದು ರೆಸ್ಟೋರೆಂಟಿಗೆ ಕರೆದೊಯ್ದು ಕ್ಯಾಂಡಲ್ ಲೈಟ್ ಡಿನ್ನರ್ ಕೊಡಿಸುತ್ತಿದ್ದ. ಆತನ ಆಕರ್ಷಕ ಡೈಲಾಗುಗಳೆಲ್ಲ ಸೌಂದರ್ಯ ಸ್ಪರ್ಧೆ ಗೆಂದು ಉರು ಹೊಡೆದ ಬಾಯಿಪಾಠವಾಗಿತ್ತೇ ಹೊರತು ಎದೆಯಾಳದಿಂದ ಬರುತ್ತಿರಲಿಲ್ಲ. ಮಾಡೆಲಿಂಗ್ ಲೋಕದ ಶಾಪವಾದ ಲಂಪಟ ಪ್ರವೃತ್ತಿಗೆ ಆತ ಕೂಡ ಹೊರತಾಗಿರಲಿಲ್ಲ.

ನಫೀಸಾಗೆ ಬೇಕಿದ್ದದ್ದು ಅಪ್ಪಟ ಪ್ರೀತಿ. ಬಹುಶಃ ಅದನ್ನು ಕೊನೆಯದಾಗಿ ಗೌತಮ್ ಖಂಡೂಜಾ ಎಂಬ ಶ್ರೀಮಂತ ಯುವಕನಲ್ಲಿ ಹುಡುಕಲು ಹೊರಟಿದ್ದಾಳೆ. ಖಂಡೂಜಾ ಮುಂಬಯಿಯ ಆಟೋಮೊಬೈಲ್ ಬಿಡಿಭಾಗಗಳ ಡೀಲರ್. ಮಹಾನ್ ಶೋಕಿಲಾಲ. ಬಾಂದ್ರಾದ ಶ್ರೀಮಂತ ಏರಿಯಾದ ಪಾಲಿಹಿಲ್ ನಲ್ಲಿ ಆತನ ಮನೆಯಿತ್ತು. ಪನ್ವೆಲ್ನಲ್ಲಿ ವೋಲ್ವೋ ಕಂಪೆನಿಗೆ ಆಟೋಮೊಬೈಲ್ ಸ್ಪೇರ್ ಪಾರ್ಟ್ ಗಳನ್ನು ತಯಾರಿಸುವ ಫ್ಯಾಕ್ಟರಿ ಇಟ್ಟುಕೊಂಡಿದ್ದ. ಇಲ್ಲಿಗೆ ವರ್ಷದ ಹಿಂದಷ್ಟೇ ಮುಂಬಯಿಯ ಪಬ್ ಒಂದರಲ್ಲಿ ನಫೀಸಾಳನ್ನು ತಾನೊಬ್ಬ ವಿಂಡ್ ಸರ್ಫರ್ ಎಂದೇ ಪರಿಚಯಿಸಿಕೊಂಡಿದ್ದ. ಆ ಮೂಲಕ ನಫೀಸಾಳನ್ನು ಬಲೆಗೆ ಬೀಳಿಸಿಕೊಳ್ಳೋ ಹುನ್ನಾರ ಮಾಡಿದ್ದ. ಯಾಕಂದ್ರೆ ನಫೀಸಾ ಬೆಂಗಳೂರಿನ ಪೀಪಲ್ಸ್ ಫಾರ್ ಎನಿಮಲ್ಸ್ ಎಂಬ ಸ್ವಯಂಸೇವಾ ಸಂಸ್ಥೆಯ ಸಕ್ರಿಯ ಕಾರ್ಯಕರ್ತೆಯಾಗಿದ್ದಳು. ಬೀದಿನಾಯಿಗಳ ಮೂಕ ವೇಧನೆ, ರಸ್ತೆಗೆ ಸಿಕ್ಕು ಗಾಯಗೊಳ್ಳುವ ಅವುಗಳ ದುಃಸ್ಥಿತಿ ಎಲ್ಲವನ್ನೂ ಮನಮುಟ್ಟುವಂತೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಅಂಕಣ ಬರೆಯುತ್ತಿದ್ದಳು. ಆಕೆಯ ಅಂಕಣದ ಹೆಸರೇ; ನಫೀಸಾ ಫಾರ್ ಎನಿಮಲ್ಸ್! ಇಂಟರ್ನೆಟ್ ಸಂದರ್ಶನವೊಂದರಲ್ಲಿ ಕಿಡಿಗೇಡಿಯೊಬ್ಬ “ನಿನ್ನಂಥ ಸುಂದರ ಯುವತಿಯನ್ನು ಒಲಿಸಿಕೊಳ್ಳಬೇಕೆಂದರೆ ಏನು ಮಾಡಬೇಕು?” ಎಂಬ ಪ್ರಶ್ನೆ ಹಾಕಿದ್ದ. ಅದಕ್ಕೆ ನಫೀಸಾ “ಪ್ರಾಣಿಗಳನ್ನು ಪ್ರೀತಿಸು, ನನ್ನ ಹೃದಯದಲ್ಲಿ ನೀನಿರುತ್ತೀಯ!” ಎಂದಿದ್ದಳು.

ಹಾಗೆ ನೋಡಿದ್ರೇ, ಸಮುದ್ರ ದಂಡೆಯಲ್ಲಿ ಬರಿಮೈಯಲ್ಲಿ ವಿಂಡ್ ಸರ್ಫಿಂಗ್ ಮಾಡುತ್ತಿದ್ದ ಗೌತಮ್ ಖಂಡೂಜಾನಲ್ಲೂ ಪೌರುಷವಿತ್ತು. ನಫೀಸಾಳನ್ನು ನಿಜಕ್ಕೂ ಆತ ಪ್ರೀತಿಸುತ್ತಿದ್ದ. ಈ ಹೊತ್ತಿಗಾಗಲೇ ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದೇನೆಂದು ಹೇಳಿಕೊಂಡೂ ಇದ್ದ. ನಫೀಸಾ ತನ್ನ ತಾಯಿಯೊಂದಿಗೆ ಆತನ ಮನೆಗೂ ಹೋಗಿ ಬಂದಿದ್ದಳು. 2004, ಆಗಸ್ಟ್ 28ಕ್ಕೆ ಅವರಿಬ್ಬರ ಮದುವೆ ನಿಶ್ಚಯವಾಗಿತ್ತು. ಆದರೆ ಖಂಡೂಜಾ ತನ್ನ ಪತ್ನಿಯೊಂದಿಗೆ ಸೇರಿಕೊಂಡು ಡಿವೋರ್ಸ್ ನ ಕಪಟ ನಾಟಕ ಹೆಣೆದಿದ್ದ. ಡಿವೋರ್ಸ್ ಆಗಿದೆಯೆಂದು ನಂಬಿಸಿದ್ದನಾದರೂ ಡಿವೋರ್ಸ್ ಪಡೆದಿರಲಿಲ್ಲ. ಸಾಲದ್ದಕ್ಕೆ ತನ್ನ ಪತ್ನಿಯೊಂದಿಗೆ ದುಬೈನ ಬ್ಯಾಂಕ್ ಒಂದರಲ್ಲಿ ರಹಸ್ಯ ಜಂಟಿ ಖಾತೆಯೊಂದನ್ನು ಇಟ್ಟುಕೊಂಡಿದ್ದ. ತಾನು ಅತಿಯಾಗಿ ಹಚ್ಚಿಕೊಂಡಿದ್ದ ಹಾಗೂ ಕೊನೆಯದಾಗಿ ನಂಬಿದ್ದ ಗೌತಮ್ ತನ್ನನ್ನು ವಂಚಿಸಿದ್ದು ಗೊತ್ತಾಗಿದ್ದೇ ನಫೀಸಾ ಆಘಾತಗೊಂಡಳು.

ಅಷ್ಟೇ.. ಜುಲೈ ಇಪ್ಪತ್ತೊಂಬತ್ತರ ರಾತ್ರಿ ತನ್ನ ಫ್ಲಾಟ್ ಗೆ ಬಂದವಳೇ ಗೌತಮ್ಗೆ ಫೋನ್ ಮಾಡಿದ್ದಾಳೆ. ಫೋನಿನಲ್ಲೇ ಜಗಳ ಕಾದಿದ್ದಾಳೆ. ತನ್ನ ಗೆಳತಿ ಪೂನಮ್ ಎಂಬಾಕೆಯೊಂದಿಗೆ ಕೆಲ ಹೊತ್ತು ದುಃಖ ತೋಡಿಕೊಂಡಿದ್ದಾಳೆ. ಜೋರಾಗಿ ಅತ್ತಿದ್ದಾಳೆ. ಏನಾಯ್ತು ಅಂತ ಕೇಳಲು ಬಂದ ತಾಯಿಯನ್ನೇ ಗದರಿಸಿ ಮಲಗುವಂತೆ ಹೇಳಿದ್ದಾಳೆ. ಚಿತ್ತಕ್ಷೋಭೆಯಲ್ಲಿ ತನ್ನ ಕೋಣೆಗೆ ಹೋಗಿದ್ದೇ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾಳೆ. ಅಲ್ಲಿಗೆ ನಫೀಸಾ ಜೋಸೆಫ್ ಎಂಬ ಸುಂದರಿಯ ಬದುಕು ಅಂತ್ಯಗೊಂಡಿತ್ತು. ಅರೆಬೆತ್ತಲೆ ಸಾಮ್ರಾಜ್ಯದಲ್ಲಿ ಅಬ್ರಹಾಂ ಲಿಂಕನ್ ಇರಲು ಸಾಧ್ಯವಿರಲಿಲ್ಲ..? ಆ ಹುಡುಕಾಟದಲ್ಲಿ ಸಂಪೂರ್ಣವಾಗಿ ಸೋತುಹೋದಳು.

  •  ರಾ ಚಿಂತನ್

POPULAR  STORIES :

ಖಂಡೀಲ್ ಬೆತ್ತಲಾಗದಿದ್ರೇ ಏನಂತೆ..? ಆರ್ಷಿ ಖಾನ್ ಬೆತ್ತಲಾದಳಲ್ಲ..!!

ಅಮ್ಮನಿಗೆ ಸೇಟು ದುಡ್ಡು ಕೊಟ್ಟಿದ್ದು ಯಾಕೆ..? ಫ್ರಾಕ್ ಹುಡ್ಗೀಯ ಚಾಕೊಲೇಟ್ ಸ್ಟೋರಿ..!

ಶಿವಣ್ಣನ ಜೊತೆಗೆ ಬಿಬಿಸಿ ರೇಡಿಯೋ ನಡೆಸಿದ ಸಂದರ್ಶನ ಇಲ್ಲಿದೆ.. ಕೇಳಿ..!

ನಿಯ್ಯತ್ತಿನ ಪ್ರಾಣಿ ನಾಯಿ ಮರಿಗಳನ್ನು ಕೊಂದಳು..! ನಿಯ್ಯತ್ತಿಲ್ಲದ ಹೆಂಗಸು..!?

ಭಾರತದಲ್ಲಿದ್ದಾರೆ ಮೂವತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರು..!? ಮೈ ಮಾರಾಟ ದಂಧೆ ಲೀಗಲೈಜ್ ಆಗುತ್ತಾ..?

ಹೆಂಗಿದ್ದ ಹೆಂಗಾದ ಗೊತ್ತಾ ಅಂಬಾನಿ ಪುತ್ರ..! ಐಪಿಎಲ್ ವೇಳೆ ಅಚ್ಚರಿಗೊಳ್ಳಲು ಸಿದ್ಧರಾಗಿ..!

ದ್ವಾರಕೆಯ ದೋಸೆ ಮತ್ತವಳ ನೆನಪು..!

ಪಾಕಿಸ್ತಾನಕ್ಕಾಗಿ ಖಂಡೀಲ್ ಬಲೋಚ್ ಬೆತ್ತಳಾಗುತ್ತಾಳಂತೆ..!? #Video

Share post:

Subscribe

spot_imgspot_img

Popular

More like this
Related

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...