1. ಜೈಶ್-ಇ-ಮೊಹಮ್ಮದ್ ಸಂಘಟನೆ ನಾಯಕರ ಬಂಧನ
ಪಠಾಣ್ ಕೋಟ್ ದಾಳಿಗೆ ಸಂಬಂಧಪಟ್ಟಂತೆ ಪಾಕ್ ಕೊನೆಗೂ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸೇರಿದ ಕೆಲವು ಉಗ್ರರನ್ನು ಬಂಧಿಸಿದೆ.
ಜನವರಿ 2ರಂದು ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಮೊಟ್ಟ ಮೊದಲ ಬಾರಿಗೆ ಭಯೋತ್ಪಾಧಕ ಸಂಘಟನೆಯ ವಿರುದ್ಧ ಕ್ರಮ ತೆಗೆದು ಕೊಂಡಿರುವ ಪಾಕಿಸ್ಥಾನ ಭಯೋತ್ಪಾಧಕರನ್ನು ಬಂಧಿಸುವುದರ ಜೊತೆಗೆ ಉಗ್ರ ಸಂಘಟನೆಯ ಕಚೇರಿಗಳನ್ನು ಕೂಡ ಇವತ್ತು ಸೀಲ್ ಮಾಡಿದೆ..!
ಭಾರತ ಪಠಾಣ್ಕೋಟ್ ದಾಳಿಯ ಹಿಂದೆ ಜೈಶ್-ಇ-ಮೊಹಮ್ಮದ್ ಸಂಘಟನೆಯ ಕೈವಾಡವಿದೆ ಎಂದು ಆರೋಪಿಸಿ, ಕೆಲವೊಂದು ಸಾಕ್ಷ್ಯಗಳನ್ನೂ ಕೂಡ ಪಾಕ್ಗೆ ನೀಡಿತ್ತು. ಈಗ ಪಾಕ್ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ವಿರುದ್ಧ ಕ್ರಮ ಕೈಗೊಂಡಿದ್ದು, ಹೆಚ್ಚಿನ ತನಿಖೆಗಾಗಿ ಪಾಕ್ ತನಿಖಾಧಿಕಾರಿಗಳು ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದೂ ವರದಿಯಾಗಿದೆ.
2. ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲೂ ಬಾಡಿದ ಕಮಲ..!
ಬಿಜೆಪಿ ಆಡಳಿತದ ಮಹಾರಾಷ್ಟ್ರ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲ್ಲುವ ಮೂಲಕ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಗೆಲುವಿನ ಅಭಿಯಾನ ಮುಂದುವರೆಸಿದೆ. ಮಹಾ ಸೋಲಿನೊಂದಿಗೆ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.
ಮಹಾರಾಷ್ಟ್ರದ ಮುನ್ಸಿಪಲ್ ಹಾಗೂ ನಗರ ಪಂಚಾಯತ್ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 105 ಸ್ಥಾನದೊಂದಿಗೆ ವಿಜಯಿ ಆಗಿದೆ. ಎರಡನೇ ಸ್ಥಾನಕ್ಕೆ 80 ಸ್ಥಾನಪಡೆದ ಎನ್.ಸಿ.ಪಿ ತೃಪ್ತಿಪಟ್ಟು ಕೊಂಡಿದೆ. ಶಿವಸೇನೆ ಮೂರನೇ ಸ್ಥಾನ ಪಡೆದಿದ್ದು, ಕೇವಲ 39 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದ ಬಿಜೆಪಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.
3. ಅಫ್ಘಾನ್ ಭಾರತೀಯ ರಾಯಭಾರಿ ಕಚೇರಿ ಸಮೀಪ ಆತ್ಮಾಹುತಿ ಬಾಂಬ್ ದಾಳಿ
ಅಫ್ಘಾನಿಸ್ತಾನದ ಜಲಾಲಾ ಬಾದ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಬಳಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ಸಂಭವಿಸಿದೆ. ಇಂದು ಬೆಳಿಗ್ಗೆ ಸಂಭವಿಸಿದ ಘಟನೆಯಲ್ಲಿ ಮೂವರು ಪೊಲೀಸರು ಮೃತಪಟ್ಟಿದ್ದಾರೆ. ಕಳೆದ 10 ದಿನಗಳಲ್ಲಿ ನಡೆದ ಮೂರನೇ ಆತ್ಮಾಹುತಿ ಬಾಂಬ್ ದಾಳಿ ಇದಾಗಿದೆ.
4. ಎಚ್.ಕೆ ಪಾಟೀಲ್ ಗೆ ಬೆಳಗಾವಿ ಗಡಿ ಉಸ್ತುವಾರಿ ಹೊಣೆ
ಮಹಾರಾಷ್ಟ್ರ ಸರ್ಕಾರವು ಬೆಳಗಾವಿ ಗಡಿ ವಿವಾದ ಉಸ್ತುವಾರಿಗಾಗಿ ಪ್ರತ್ಯೇಕ ಸಚಿವರನ್ನು ನೇಮಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ ಪಾಟೀಲರನ್ನು ಗಡಿ ವಿವಾದ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದೆ.
5. ಹೊಸ ಉಗ್ರ ಜಾಲಗಳಿಗೆ ಪಾಕ್ ಆಸರೆ : ಒಬಾಮಾ
ಪಾಕಿಸ್ಥಾನವು ಹೊಸ ಉಗ್ರ ಜಾಲಗಳಿಗೆ ಆಸರೆಯ ತಾಣವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಅಮೆರಿಕಾ ಅದ್ಯಕ್ಷ ಬರಾಕ್ ಒಬಾಮ ಎಚ್ಚರಿಸಿದ್ದಾರೆ.
ಅಮೆರಿಕಾ ರಾಜ್ಯಗಳ ಒಕ್ಕೂಟವನ್ನುದ್ದೇಶಿಸಿ ಎಂಟನೇ ಭಾಷಣ ಮಾಡಿದ ಒಬಾಮ “ಮುಂದಿನ ಕೆಲವು ದಶಕಗಳವರೆಗೆ ಪಾಕ್ ಮತ್ತು ಅಫ್ಘಾನ್ನಲ್ಲಿ ಅಸ್ಥಿರತೆ ಮುಂದುವರೆಯ ಬಹುದು. ಅಲ್ ಕಾಯಿದಾ ಹಾಗೂ ಐಸಿಸ್ ಉಗ್ರ ಸಂಘಟನೆಗಳು ವಿಶ್ವಕ್ಕೆ ಅದರಲ್ಲೂ ಅಮೆರಿಕಾಕ್ಕೆ ಬೆದರಿಕೆ ಒಡ್ಡಬಹುದೆಂದು ತಿಳಿಸಿದರು. ಆದರೆ ಅಮೆರಿಕಾವನ್ನು ಕೆಣಕುವ ಉಗ್ರ ಸಂಘನೆಗಳನ್ನು ಇನ್ನಿಲ್ಲದಂತೆ ಮಾಡುವ ಶಕ್ತಿ ಮತ್ತು ಸಂಕಲ್ಪ ಅಮೆರಿಕಾಕ್ಕೂ ಅದರ ಅಧ್ಯಕ್ಷನಾಗಿರುವ ನನಗೂ ಇದೆ ಎಂದು ಅಭಯ ನೀಡಿದರು.
6. ಭಾರತದ ಅಂಡರ್ 19 ಕ್ರಿಕೆಟ್ ತಂಡದ ನಾಯಕ `ಇಶಾನ್’ ಅರೆಸ್ಟ್..!
ಗಲಾಟೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭಾರತದ 19 ವಯಸ್ಸಿನ ವಯೋಮಿತಿಯ ಕ್ರಿಕೆಟ್ ತಂಡದ ನಾಯಕ ಇಶಾನ್ ಕಿಶನ್ರನ್ನು ಬಂಧಿಸಲಾಗಿದೆ.
ಮಂಗಳವಾರ ರಾತ್ರಿ ಪಾಟ್ನಾದಲ್ಲಿ ತಂದೆಯ ಕಾರನ್ನು ವೇಗವಾಗಿ ಚಲಾಯಸಿಕೊಂಡು ಹೋಗುವಾಗ ಇಶಾನ್ ಆಟೋ ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಆಟೋದಲ್ಲಿದ್ದ ಕೆಲವರಿಗೆ ಗಾಯಗಳಾಗಿವೆ.
ಡಿಕ್ಕಿ ಹೊಡೆಯುತ್ತಿದ್ದಂತೆ ಜನ ಜಮಾಯಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರೊಂದಿಗೆ ಇಶಾನ್ ವಾಗ್ಧಾಳಿ ನಡೆಸಿದಾಗ ಆಟೋದಲ್ಲಿದ್ದ ಕೆಲವರು ಕಿಶನ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಆದರೆ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಬಂದು ಕ್ರಿಕೆಟಿನ ಯುವತಾರೆಯನ್ನು ಬಂಧಿಸಿದ್ದಾರೆ. ಅಜಾಗರೂಕತೆ ವಾಹನ ಚಾಲನೆ, ಅಪರಿಚಿತರ ವಾಹನ ಹಾನಿ ಹಾಗೂ ಅನುಚಿತ ವರ್ತನೆ ಅಡಿಯಲ್ಲಿ ಪ್ರಕಣದಾಖಲಾಗಿದೆ.
7. ಮಿಮಿಕ್ರಿ ಮಾಡಿ ಬಂಧನಕ್ಕೊಳಗಾದ ಕಿಕೂ ಶಾರ್ದಾ..!
ಮನರಂಜನಾ ಕಾರ್ಯಕ್ರಮ `ಕಾಮಿಡಿ ನೈಟ್ಸ್ ವಿತ್ ಕಪಿಲ್’ ನ ಪ್ರಮುಖ ನಟ ಕಿಕೂ ಶಾರ್ದಾ ಅವರನ್ನು ಬಂಧಿಸಲಾಗಿದೆ.
ಸ್ವಯಂ ಘೋಷಿತ ಬಾಬಾ, ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ಗೆ ಸಂಬಂಧಿಸಿದಂತೆ ಮಿಮಿಕ್ರಿ ಮಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆಂಬ ದೂರಿನ ಮೇರೆಗೆ ಕಿಕೂರನ್ನು ಬಂಧಿಸಲಾಗಿದೆ.
ಗುರ್ಮೀತ್ ರಾಮ್ ರಹೀಮ್ ಸಿಂಗ್ರ ಶೈಲಿ, ಹಾವಾಭಾವವನ್ನು ಅನುಕರಿಸಿ ಕಿಕು ಶಾರ್ದಾ ಮಿಮಿಕ್ರಿ ಮಾಡಿದ್ದರು. ಈ ಕಾರ್ಯಕ್ರಮದ ಪ್ರಸಾರ ಡಿಸೆಂಬರ್ನಲ್ಲಿ ಪ್ರಸಾರ ವಾಗಿತ್ತು. ಇದರ ಬಳಿಕ ಗುರ್ಮೀತ್ ರಾಮ್ ರಹೀಮ್ ಸಿಂಗ್ರ ಅನುಯಾಯಿಗಳು ಕಿಕೂ ವಿರುದ್ಧ ದೂರು ದಾಖಲಿಸಿದ್ದರು.
https://www.youtube.com/watch?v=NYL-VcilXvM
8. ಸೆಮಿ-ಫೈನಲ್ ಗೆ ಲಗ್ಗೆ ಇಟ್ಟ ಸಾನಿಯಾ-ಹಿಂಗಿಸ್ ಜೋಡಿ
ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಝರ್ಲ್ಯಾಂಡಿನ ಮಾರ್ಟೀನಾ ಹಿಂಗಿಸ್ ಜೋಡಿ ಸಿಡ್ನಿ ಅಂತರಾಷ್ಟ್ರೀಯಾ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ಕ್ವಾಟರ್ಫೈನಲ್ನಲ್ಲಿ 6-2-,6-3 ನೇರ ಸೆಟ್ಗಳಿಂದ ಚೆನ್ ಲಿಯಾಂಗ್ ಮತ್ತು ಶ್ವೈ ಪೆಂಗ್ ಜೋಡಿಯನ್ನು ಸೋಲಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಸಾನಿಯಾ-ಹಿಂಗಿಸ್ 28ನೇ ಡಬಲ್ಸ್ ಪಂದ್ಯವನ್ನು ಗೆದ್ದಿದ್ದಾರೆ.
9. 1971 ಇಂಡೋ-ಪಾಕ್ ವಾರ್ ಹೀರೋ ಜನರಲ್ ಜಾಕೋಬ್ ವಿಧಿವಶ
1971ರ ಬಾಂಗ್ಲಾ ವಿಮೋಚನಾ ಹೋರಾಟದ ವೀರ ಯೋಧ ನಿವೃತ್ತ ಲೆಫ್ಟಿನೆಂಟ್ ಜನರಲ್ ಜೆಎಫ್ಆರ್ ಜಾಕೋಬ್ (92) ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.
1971ರಲ್ಲಿ ಇಂಡೋ-ಪಾಕ್ ಯುದ್ಧದಲ್ಲಿ ಪಾಕ್ ಪಡೆ ಶರಣಾಗುವಂತೆ ಸಂಧಾನ ನಡೆಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದ ಜಾಕೋಬ್ ಧೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
10. ಪಾಕ್ ಪ್ರೇಮಿಗಾಗಿ ಲಕ್ನೋದ ನರ್ತಕ ಹೆಣ್ಣಾದ..!
ಲಕ್ನೋದ ಕಥಕ್ ನರ್ತಕ ಗೌರವ್ ಈಗ ಮೀರಾ ಆಗಿದ್ದಾರೆ. ಹೆಸರು ಮಾತ್ರ ಬದಲಾಯಿಸಿಕೊಂಡಿಲ್ಲ..! ಬದಲಿಗೆ ಲಿಂಗವನ್ನೇ ಬದಲಾಯಿಸಿಕೊಂಡಿದ್ದಾರೆ..! ಅವರೀಗ ಗಂಡಲ್ಲ ಹೆಣ್ಣು..! ಗೌರವ್ ಅಲ್ಲ ಅವರೀಗ ಮೀರಾ..! ಅವರು ಹೆಣ್ಣಾಗಿ ಪರಿವರ್ತನೆಯಾಗಿದ್ದು ಪಾಕ್ ನ ಪ್ರೇಮಿಗಾಗಿ..!
ಹೌದು ಇದೊಂದು ವಿಚಿತ್ರ ಪ್ರೇಮ ಕಥೆ..! ಪಾಕಿಸ್ಥಾನದ ರಿಜ್ವಾನ್ ಮತ್ತು ಭಾರತದ ಗೌರವ್ ಗೂ ಫೇಸ್ ಬುಕ್ ನಲ್ಲಿ ಪರಿಚಯವಾಗಿದೆ. ಸೂಫಿ ಪಂಥದ ಬಗೆಗಿನ ಒಂದೇ ರೀತಿಯ ಅಭಿರುಚಿಯಿಂದ ಸ್ನೇಹವೂ ಬೆಳೆದು ಪ್ರೀತಿಯೂ ಹುಟ್ಟಿದೆ. ಐದು ವರ್ಷದಿಂದ ಇಲ್ಲಿತನಕ ಇಬ್ಬರೂ ಭೇಟಿ ಆಗಿಲ್ಲ. ಫೇಸ್ ಬುಕ್ ಮೊಬೈಲ್ನಲ್ಲೇ ಲವ್ವಿ ಡವ್ವಿ, ಪ್ರೇಮ ನಿವೇಧನೆ..! ರಿಜ್ವಾನ್ ಗೆ ಮನೆಯಲ್ಲಿ ಹುಡುಗಿಯನ್ನು ಹುಡುಕುತ್ತಿರೋದನ್ನು ತಿಳಿದ ಗೌರವ್ ತಾನೇ ಹೆಣ್ಣಾಗಿ ಪರಿವರ್ತನೆಯಾಗಿದ್ದಾರೆ. ಇಂಟರ್ನೆಟ್ ನಲ್ಲಿ ಲಿಂಗ ಪರಿವರ್ತನೆ ಬಗ್ಗೆ ಹುಡುಕಾಡಿ ಹುಡುಕಾಡಿ ಕೊನೆಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆಣ್ಣಾಗಿ ರೂಪುಗೊಂಡಿದ್ದಾರೆ. ಮಾರ್ಚ್ ನಲ್ಲಿ ಮೀರಾಳನ್ನು ಭೇಟಿ ಆಗಲು ಪಾಕ್ ನಿಂದ ರಿಜ್ವಾನ್ ಬರ್ತಾ ಇದ್ದಾರಂತೆ..!