ಬೀದಿ ನಾಯಿಗಳೆಂದರೆ ಯಾರೂ ಅಷ್ಟೊಂದು ಇಷ್ಟಪಡಲ್ಲ. ಹುಡ್ಗೀರಂತೂ ದೂರ ದೂರ ಓಡ್ತಾರೆ. ಬೀದಿ ನಾಯಿಗಳೆಂದ್ರೆ ಭಯ, ಅಸಹ್ಯ ಪಡೋರೇ ಹೆಚ್ಚು.
ಆದರೆ, ಇಲ್ಲೊರ್ವ ನಾಯಿ ಪ್ರೇಮಿ ಯುವತಿ ಇದ್ದಾಳೆ.
ಬಳ್ಳಾರಿಯ ಯುವತಿ ನಿಖಿತಾ ಅಯ್ಯರ್ ಅವರಿಗೆ ಬೀದಿ ನಾಯಿಗಳೆಂದರೆ ಎಲ್ಲಿಲ್ಲದ ಪ್ರೀತಿ, ಕಾಳಜಿ! ಕಷ್ಟದಲ್ಲಿರುವ ಸ್ಟ್ರೀಟ್ ಡಾಗ್ ಗಳ ನೆರವಿಗೆ ಸದಾ ಸಿದ್ಧರಿರ್ತಾರೆ.
ಇಂಜಿನಿಯರಿಂಗ್ ಪದವೀಧರೆ ಆಗಿರುವ ಇವರು ಬಳ್ಳಾರಿಯ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಜೊತೆ ಸೇರಿ ‘ಕೇರ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಸ್ಟ್ರೀಟ್ ಡಾಗ್ ಗಳ ರಕ್ಷಣೆ ಮಾಡುತ್ತಿದ್ದಾರೆ. ‘ಟ್ರೀಟ್ ದಿ ಸ್ಟ್ರೀಟ್’ ಎಂಬ ಘೋಷವಾಕ್ಯದಡಿ ಬೀದಿ ನಾಯಿಗಳನ್ನು ರಕ್ಷಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಮೂರು ವರ್ಷಗಳ ಹಿಂದೆ. ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಮಹಾನಗರ ಪಾಲಿಕ ಬೀದಿನಾಯಿಗಳನ್ನು ನಾಶ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದನ್ನು ನೋಡಿದ ನಿಖಿತಾ, ಆ ಬಗ್ಗೆ ಬಿಜೆಪಿಯ ಹಿರಿಯ ನಾಯಕಿ ಮೇನಕಾ ಗಾಂಧಿ ಅವರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ಅದಕ್ಕೆ ಸ್ಪಂದಿಸಿದ್ದ ಅವರು ಕಾನೂನಿನ ಪ್ರಕಾರ, ನಾಯಿಗಳ ಸಂಹಾರ ಮಾಡಲು ಆದೇಶ ನೀಡಿದ್ದ ಅಧಿಕಾರಿಗಳನ್ನು ಅಮಾನತು ಮಾಡಿಸಿದ್ದರು! ಅಂದಿನಿಂದ ಶುರುವಾದ ನಿಖಿತಾ ಕೆಲಸಕ್ಕೆ ಸ್ನೇಹಿತರು ಸಾಥ್ ನೀಡಿದ್ದಾರೆ. ಕಾಯಿಲೆಯಿಂದ ಬಳಲುತ್ತಿರುವ, ಅಪಘಾತದಿಂದ ಗಾಯಗೊಂಡಿರುವ ನಾಯಿಗಳಿಗೆ ಚಿಕಿತ್ಸೆ ಕೊಡಿಸಿ ಸಲಹುತ್ತಿದ್ದಾರೆ.