ನರೇಂದ್ರ ಮೋದಿಯವರ ಅಚ್ಛೇದಿನ್ ಸರ್ಕಾರ ಬಡವರ, ಮಧ್ಯಮ ವರ್ಗದವರ ಪರವಲ್ಲ ಎನ್ನುವುದು ಮೇಲಿಂದ ಮೇಲೆ ಸಾಬೀತಾಗುತ್ತಿದೆ. ಕಾರ್ಪೋರೆಟ್ ವಲಯದತ್ತ ಹೆಚ್ಚಿನ ಆಸ್ಥೆವಹಿಸಿರುವ ಮೋದಿ ಟೀಂ, ಜನಸಾಮಾನ್ಯರ ಮೇಲೆ ಒತ್ತಡ ಹೆಚ್ಚಿಸುತ್ತಿದೆ. ಕಣ್ಣೊರೆಸುವ ತಂತ್ರಗಾರಿಕೆಯಲ್ಲಿ ಪಳಗಿರುವ ಸರ್ಕಾರದ ನಡೆ ಜನಸಾಮಾನ್ಯರಿಗೆ ನೇರವಾಗಿ ತಟ್ಟುತ್ತಿದೆ. ದುಡಿದ ಹಣದಲ್ಲಿ ಚಿಲ್ಲರೆ ಹಣವನ್ನು ಭವಿಷ್ಯನಿಧಿಯಲ್ಲಿ ಶೇಖರಿಸಿ, ಅದಕ್ಕೆ ಸ್ವಲ್ಪ ಬಡ್ಡಿ ಪಡೆದು ಕಷ್ಟಕ್ಕೆ ಬಳಸುತ್ತಿದ್ದ ಆ ಹಣದ ಮೇಲೂ ಕೇಂದ್ರ ಹಲವು ಪ್ರಯೋಗಗಳಿಗೆ ಮುಂದಾಗಿರುವುದು ನಿಜಕ್ಕೂ ಆತಂಕದ ಸಂಗತಿ. ಇದೀಗ ಈ ಬಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಪ್ರತಿಭಟನೆ ನಡೆಯುತ್ತಿದೆ.
ದೇಶದೊಳಗೆ ಸಮಸ್ಯೆಗಳು ರಾಶಿ ಬಿದ್ದಿರಲಿ, ಮೇಲೆ ಮಾತ್ರ ಚಂದದ ಬಣ್ಣ ಬಳಿಯುವುದರಲ್ಲಿ ನಿಷ್ಣಾತವಾಗಿದೆ ಮೋದಿ ಸರ್ಕಾರ. ಆರಂಭದಿಂದಲೂ ಬಂಡವಾಳಶಾಹಿಗಳ ಪರ ನಿಂತಿರುವ ಮೋದಿಗೆ ಜನಸಾಮಾನ್ಯರು, ಬಡವರು, ಮಧ್ಯಮವರ್ಗದವರೆಂದರೇ ಅಲರ್ಜಿ. ಹೈಫೈ ಸರ್ಕಾರ ಬಡವರಿಗಾಗಿ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತಾರದಿದ್ದರೂ ಪರ್ವಾಗಿಲ್ಲ; ಇರುವ ಯೋಜನೆಗಳನ್ನು ಕೆದಕುವ ಕೆಲಸ ಮಾಡುತ್ತಿದೆ. ಅದರ ಪರಿಣಾಮವೇ ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಬಡವರ ಭವಿಷ್ಯ ನಿಧಿಯ ಜೊತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ತಪ್ಪಿಗೆ ಲಾಠಿ ಏಟು ತಿನ್ನಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ಹಣ, ನಮ್ಮ ಹಕ್ಕು ಎಂದಿದ್ದಕ್ಕೆ ಒದೆ ತಿನ್ನಬೇಕಾದ ಪರಿಸ್ಥಿತಿಯಿದ್ದರೇ ಅದು ನಮ್ಮ ದೇಶದಲ್ಲಿ ಮಾತ್ರ.
ಕೇಂದ್ರ ಸರ್ಕಾರ ಜನರ ಜೀವನದ ಜೊತೆ ಹೇಗೆ ಆಟವಾಡುತ್ತಿದೆ ಎಂಬುದನ್ನು ಸೂಚ್ಯವಾಗಿ ಹೇಳುವುದಾದರೇ, ನಮ್ಮ ತಿಂಗಳ ಸಂಬಳದಲ್ಲಿ ಒಂದು ಸಾವಿರ ರೂಪಾಯಿ ಪಿಎಫ್ ಹಣ ಕಟ್ ಮಾಡಲಾಗುತ್ತದೆ ಎಂದಿಟ್ಟುಕೊಳ್ಳಿ. ಆ ಒಂದು ಸಾವಿರ ರೂಪಾಯಿಗೆ ಮತ್ತೊಂದು ಸಾವಿರ ರೂಪಾಯಿಯನ್ನು ನಾವು ಕೆಲಸ ಮಾಡುವ ಕಂಪನಿ ಸೇರಿಸಿ ಕಟ್ಟಬೇಕು. ಈ ಹಣ ಭವಿಷ್ಯನಿಧಿಯ ಅಕೌಂಟ್ನಲ್ಲಿ ಇರುವಷ್ಟು ಸಮಯದ ಮೇಲೆ ಒಂದಿಷ್ಟು ಬಡ್ಡಿಯನ್ನು ಸರ್ಕಾರ ಸೇರಿಸಿಕೊಡುತ್ತದೆ. ಇದೀಗ ಕೇಂದ್ರ ಸರ್ಕಾರ ಪಿಎಫ್ ನೀತಿಯಲ್ಲಿ ಬದಲಾವಣೆ ತಂದಿದೆ. ಆ ಬದಲಾವಣೆಯ ಪ್ರಕಾರ ನಮ್ಮ ಸಂಬಳದಲ್ಲಿ ಕಟ್ ಆಗುತ್ತಿದ್ದ ಒಂದು ಸಾವಿರ ರೂಪಾಯಿಯನ್ನು ನಾವು ಭವಿಷ್ಯ ನಿಧಿಯ ಹಣದಲ್ಲಿ ಪಡೆದುಕೊಳ್ಳಬಹುದು. ಆದರೆ ಕಂಪನಿ ಸೇರಿಸಿಕೊಡುತ್ತಿದ್ದ ಹಣವನ್ನು ಪಡೆಯುವಂತಿಲ್ಲ. ಆ ಹಣ ಪಡೆಯಬೇಕಾದರೇ ವಯಸ್ಸು ಐವತ್ತೆಂಟು ವರ್ಷ ಆಗಬೇಕು. ಅಲ್ಲಿವರೆಗೆ ಎಷ್ಟು ಜನ ಬದುಕಿರುತ್ತಾರೆ ಸ್ವಾಮಿ..!? ಕೇಂದ್ರ ಸರ್ಕಾರದ ಜನಸಾಮಾನ್ಯರ ವಿರುದ್ಧವಾದ ನಿಲುವಿನಿಂದ ಕಾರ್ಮಿಕರ ಪಿತ್ಥ ಕೆರಳದಿರುತ್ತಾ..?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಪಾತಳಕ್ಕಿಳಿದಿದ್ದರೂ ನಮ್ಮ ದೇಶದಲ್ಲಿ ಮಾತ್ರ ಅರವತ್ನಾಲ್ಕು ರೂಪಾಯಿಗೆ ಪೆಟ್ರೋಲ್, ನಲವತ್ತೆಂಟು ರೂಪಾಯಿಗೆ ಡೀಸೆಲ್ ಸಿಕ್ಕುತ್ತಿದೆ. ಲೆಕ್ಕಾಚಾರದ ಪ್ರಕಾರ ಹನ್ನೆರಡರಿಂದ ಇಪ್ಪತ್ತು ರೂಪಾಯಿ ಒಳಗೆ ಪೆಟ್ರೋಲ್ ಸಿಗಬೇಕು. ಆದರೆ ಕೇಂದ್ರ ಪೈಸೆಗಳ ಲೆಕ್ಕದಲ್ಲಿ ಬೆಲೆ ಕಡಿಮೆ ಮಾಡಿ, ಅದರ ಮೇಲೂ ಹೆಚ್ಚಿನ ತೆರಿಗೆ ಹಾಕಿ ಅಚ್ಚೇದಿನ್ ಮಂತ್ರ ಹೇಳುತ್ತಿದೆ. ನೂರ ಇಪ್ಪತ್ತು ಡಾಲರ್ ತೆತ್ತು ಬ್ಯಾರೆಲ್ ಪೆಟ್ರೋಲ್ ತರಿಸುತ್ತಿದ್ದ ಅವತ್ತಿನ ಮನಮೋಹನ ಸರ್ಕಾರ ಎಪ್ಪತ್ತೆಂಟರಿಂದ, ಎಂಬತ್ತು ರೂಪಾಯಿಗೆ ಪೆಟ್ರೋಲ್ ಕೊಡುತ್ತಿತ್ತು. ಅದೇ ಮೋದಿ ಸರ್ಕಾರ ಇಪ್ಪತ್ತೆಂಟು ಡಾಲರ್ ಕೊಟ್ಟು ಬ್ಯಾರೆಲ್ ಪೆಟ್ರೋಲ್ ತರಿಸಿ, ಅರವತ್ತು ರೂಪಾಯಿಗೆ ಮಾರಾಟ ಮಾಡುತ್ತಿದೆ. ಇದು ಜನಸಾಮಾನ್ಯರ ಮೇಲೆ ಇತ್ತಡ ಹೇರುವ ಉದ್ದೇಶವಾಗಿದ್ದರಿಂದ ಸರ್ಕಾರಕ್ಕೆ ದೊಡ್ಡ ಸಂಗತಿಯನಿಸುತ್ತಿಲ್ಲ. ಅವರಿಗೆ ಶ್ರೀಮಂತ ವರ್ಗವನ್ನು ತೃಪ್ತಿಪಡಿಸಬೇಕಾಗಿರುವುದರಲ್ಲೇ ತೃಪ್ತಿ..!. ಅಚ್ಛೇದಿನ್ ಸರ್ಕಾರ ಜನಸಾಮಾನ್ಯರ ವಿರೋಧವಾಗಿಯೇ ನಡೆದುಕೊಳ್ಳುತ್ತಿದೆ. ಇದೀಗ ಎಲ್ಲಾ ಬಿಟ್ಟು ಭಂಗಿನೆಟ್ಟ ಎನ್ನುವಂತೆ ಕಾರ್ಮಿಕರ ಭವಿಷ್ಯ ನಿಧಿಯ ಮೇಲೆ ಕಣ್ಣಿಟ್ಟಿದೆ. ಪಿಎಫ್ ಮೇಲೆ ತೆರಿಗೆ ವಿಧಿಸುವುದು, ಈಗಿರುವ ಜನಸಾಮಾನ್ಯ ಪರವಾದ ನಿಯಮಗಳನ್ನು ತಿದ್ದುಪಡಿ ಮಾಡುವುದು, ಬಡ್ಡಿ ದರ ಕಡಿಮೆಗೊಳಿಸುವುದು, ಕಾರ್ಮಿಕರಿಗೆ ಐವತ್ತೆಂಟು ವರ್ಷ ಕಳೆದ ನಂತರ ಪೂರ್ಣ ಪ್ರಮಾಣದಲ್ಲಿ ಪ್ರಾವಿಡೆಂಟ್ ಹಣ ಸಿಗುವಂತೆ ಮಾಡುವುದು, ಅದಕ್ಕೂ ಮುನ್ನ ಶೇಕಡಾ ಐವತ್ತರಷ್ಟು ಹಣವನ್ನು ಪಡೆದುಕೊಳ್ಳಿ ಎನ್ನುವುದು- ಹೀಗೆ ಜನಸಾಮಾನ್ಯರಿಗೆ ಹೇಗೆಲ್ಲಾ ತೊಂದರೆ ಕೊಡಬಹುದೋ ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ. ಸಿಗುವ ಒಂದಂಕಿ, ಎರಡಂಕಿ ಸಂಬಳದಲ್ಲಿ ಬದುಕು ನಡೆಸುವುದು ದುಸ್ತರ. ಹೊಟೆಬಟ್ಟೆ ಕಟ್ಟಿ ಹಣವನ್ನು ಉಳಿತಾಯ ಮಾಡುವುದು ಈಗಿನ ಕಾಲಘಟ್ಟದಲ್ಲಿ ಅಷ್ಟು ಸುಲಭವಲ್ಲ. ಹೀಗಿರುವಾಗ ಬಹುಪಾಲು ಮಧ್ಯಮವರ್ಗ, ಬಡ ಕಾರ್ಮಿಕರು ಭವಿಷ್ಯ ನಿಧಿಗೆ ಹೆಚ್ಚು ಅವಲಂಭಿತರಾಗುತ್ತಾರೆ. ಪಿಎಫ್ ಯೋಜನೆ ಎಷ್ಟೋ ಜನರ ಸಂಕಷ್ಟಗಳನ್ನು ತಣಿಸಿದೆ. ಕೆಲಸ ಮಾಡುವ ಸಂಸ್ಥೆ, ತಿಂಗಳ ಆದಾಯದಲ್ಲಿ ಇಂತಿಷ್ಟು ಹಣವನ್ನು ಪಿಎಫ್ಗೆ ಹಾಕಿ, ಆನಂತರ ಸರ್ಕಾರ ಅದಕ್ಕೊಂದಿಷ್ಟು ಬಡ್ಡಿ ಸೇರಿಸಿ ಕಾರ್ಮಿಕರ ಕೈಗೆ ತಲುಪಿಸುವಂತಹ ಪ್ರಕ್ರಿಯೆ ಇಲ್ಲಿವರೆಗೆ ಜಾರಿಯಲ್ಲಿತ್ತು. ಆದರೆ ಮೋದಿ ಸರ್ಕಾರದ ದೂರದೃಷ್ಠಿ ಚಿಂತನೆ, ಜನರ ದುರಾದೃಷ್ಟಕ್ಕೆ ಕನ್ನಡಿ ಹಿಡಿದಂತಾಗಿದೆ. ತಮ್ಮ ಉಳಿತಾಯದ ಹಣಕ್ಕೆ ಐವತ್ತೆಂಟು ವರ್ಷದವರೆಗೆ ಕಾಯಬೇಕು ಎನ್ನುವುದು ಯಾವ ನ್ಯಾಯವೋ ಗೊತ್ತಾಗುತ್ತಿಲ್ಲ. ಕಷ್ಟಕ್ಕಾಗದ ಹಣ, ಇಳಿ ವಯಸ್ಸಿಗೆ ಯಾಕೆ ಬೇಕು ಎನ್ನುವುದು ಜನಸಾಮಾನ್ಯರ ಅಳಲು. ಆನಂತರವಾದರೂ ಮಕ್ಕಳು, ಕುಟುಂಬದವರು ಫಲಾನುಭವಿಗಳಾಗುತ್ತಾರೆ ಎನ್ನುವುದೂ ಸುಳ್ಳು.
ಈ ಹಿಂದೆ ಕೇಂದ್ರ ಸರ್ಕಾರ ಷೇರುವಿನಂತ ವ್ಯವಹಾರಗಳಿಗೆ ಪ್ರಾವಿಡಂಟ್ ಹಣವನ್ನು ತೊಡಗಿಸುವುದಾಗಿ ಹೇಳಿಕೊಂಡಿತ್ತು. ಹಾಗೇ ಹಣತೊಡಗಿಸಿ ಅದರಿಂದ ಲಾಭ ಮಾಡಿಕೊಳ್ಳುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ತೊಡಗಿಸಿದ ಹಣವೇನಾದರೂ ನಷ್ಟವಾದರೇ ಅದನ್ನು ಹೊಂದಿಸಲು ಸಮಯವಕಾಶಬೇಕು. ಅದಕ್ಕೆ ನಿವೃತ್ತಿಯ ನಂತರ ಐವತ್ತರಷ್ಟು ಹಣ ಪಡೆದುಕೊಳ್ಳಿ ಎಂದು ಜಾಣನಡೆಯನ್ನು ಅನುಸರಿಸುತ್ತಿದೆ. ಅವತ್ತು ಈ ಸರ್ಕಾರ ಅಧಿಕಾರದಲ್ಲಿರುತ್ತೋ ಇಲ್ಲವೋ ಗೊತ್ತಿಲ್ಲ. ಬಿಜೆಪಿಯೇತರ ಸರ್ಕಾರಗಳು ಅಚ್ಛೇದಿನ್ ಸರ್ಕಾರದ ಪಿಎಫ್ ತಿದ್ದುಪಡಿಯನ್ನು ಮುಂದುವರಿಸುತ್ತದಾ ಎಂಬುದೂ ಖಾತ್ರಿಯಿಲ್ಲ. ಈ ಕ್ಷಣಕ್ಕೆ ಮೋದಿ ಸರ್ಕಾರಕ್ಕೆ ದೇಶದ ಅಭಿವೃದ್ಧಿಗೆ ಬಡವರ ಹಣ ಬೇಕು. ಅದಾನಿ, ಅಂಬಾನಿಯಂತವರ ಹಣಕ್ಕೆ ತೊಂದರೆಯಾಗಬಾರದು ಅಷ್ಟೇ..!. ಇವೆಲ್ಲವನ್ನು ನೋಡಿದರೇ ಜನಸಾಮಾನ್ಯರ ವಿರೋಧಿಗಳಾದ ವಿತ್ತ ಸಚಿವ ಅರುಣ್ ಜೇಟ್ಲಿ ಅಥವಾ ನರೇಂದ್ರ ಮೋದಿ- ಈ ಕ್ಷಣಕ್ಕೂ ಈ ದೇಶವನ್ನು ಏನೋ ಮಾಡಿಹಾಕ್ತೀವಿ ಎಂಬ ಭ್ರಮೆಯಿಂದ ಹೊರಬಂದಿಲ್ಲ ಎನ್ನುವುದೇ ದುರಂತ. ಕಪ್ಪು ಹಣದಂತ ಅಭಾಸಗಳನ್ನು ಹೊತ್ತು ತಂದು ದೇಶವನ್ನು ಕಟ್ಟುವ ಕೆಲಸ ಮಾಡುವ ಬದಲು ಸಾಮಾನ್ಯ ಜನರ ತಲೆಮೇಲೆ ಚಪ್ಪಡಿ ಎಳೆದು ದೇಶ ಕಟ್ಟಲು ಮುಂದಾಗಿದೆ. ಅದಾನಿ, ಅಂಬಾನಿಯಂತವರನ್ನು ಮೆಚ್ಚಿಸುವ ಭರದಲ್ಲಿ ಈ ದೇಶದ ಸಾಮಾನ್ಯ ನಾಗರಿಕರನ್ನು ಗೋಳು ಹೋಯ್ದುಕೊಳ್ಳುವುದರಲ್ಲಿ ವಿಕಟ ಸಂತಸವನ್ನು ಕಾಣುತ್ತಿದೆ.
ಭವಿಷ್ಯ ನಿಧಿಯ ಮೇಲೆ ಕೇಂದ್ರದ ಕಣ್ಣು ಒಂದೆರಡು ರೀತಿಯದ್ದಾಗಿರಲಿಲ್ಲ. ಕಾರ್ಮಿಕಕರ ಮತ್ತು ನೌಕರರ ನಿವೃತ್ತ ಜೀವನಕ್ಕೆ ಆಧಾರವಾಗಿರಲೆಂದು ಅವರ ಸಂಬಳಗಳಿಂದ ಮುರಿದು ಸಂಗ್ರಹಿಸುವ ಭವಿಷ್ಯ ನಿಧಿಯ ಹಣದಲ್ಲಿ ಶೇಕಡಾ ಐದರಿಂದ ಶೇಕಡಾ 15ರವರೆಗೆ ಷೇರು ಮಾರುಕಟ್ಟೆಯಲ್ಲಿ ತೊಡಗಿಸಬೇಕು, ಶೇಕಡಾ ಐದರಷ್ಟು ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್ಗಳು ಮತ್ತಿತರ ಹೂಡಿಕೆಗಳಲ್ಲಿ ಹಾಕಬೇಕು ಎಂದು ಮೋದಿ ಸರ್ಕಾರದ ಹಣಕಾಸು ಮಂತ್ರಾಲಯ ನೌಕರರ ಭವಿಷ್ಯ ನಿಧಿಯ ಕೇಂದ್ರಿಯ ಟ್ರಸ್ಟಿಗಳ ಮಂಡಳಿಗೆ ನಿರ್ದೇಶನ ಕೊಟ್ಟಿತ್ತು. ಆ ಮೂಲಕ ಕಾರ್ಮಿಕರ ಬೆವರ ಹಣವನ್ನು ಜೂಜಿನಲ್ಲಿ ತೊಡಗಿಸುವುದಕ್ಕೂ ಮೋದಿ ಸರ್ಕಾರ ಹಿಂಜರಿದಿಲ್ಲ. ಜೂಜುಕೋರ ಶೇರು ಮಾರುಕಟ್ಟೆಗಳಲ್ಲಿ ಕಾರ್ಮಿಕರು ಬೆವರು ಸುರಿಸಿ ತಮ್ಮ ಭವಿಷ್ಯಕ್ಕಾಗಿ ಉಳಿಸುವ ಹಣವನ್ನು ತೊಡಗಿಸುವುದಕ್ಕೆ ಕಾರ್ಮಿಕ ಸಂಘಟನೆಗಳು ಸದಾ ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ. ಅಮೆರಿಕಾದಲ್ಲಿ 2008ರಲ್ಲಿ ಹಣಕಾಸು ಬಿಕ್ಕಟ್ಟು ಬಂದೆರಗಿದಾಗ ಅಲ್ಲಿಯ ಕಾರ್ಮಿಕರ, ಜನಸಾಮಾನ್ಯರ ಉಳಿತಾಯದ ಅಪಾರ ಮೊತ್ತಗಳು ಇಂತಹ ಹೂಡಿಕೆಗಳಿಂದಾಗಿ ದಿನಬೆಳಗಾಗುವಷ್ಟರಲ್ಲಿ ಮಾಯವಾಗಿ ಅವರೆಲ್ಲ ಕಂಗಾಲಾಗಿದ್ದರು.
ಮೋದಿ ಸರ್ಕಾರ ತಾವು ಸಾಮಾಜಿಕ ಭದ್ರತೆಯ ಸ್ಕೀಮುಗಳ ಬಗ್ಗೆ ಬಹಳ ಗಂಭೀರವಾಗಿದ್ದೇವೆ ಎನ್ನುತ್ತಲೇ ಕಾರ್ಮಿಕರ ಉಳಿತಾಯಗಳನ್ನು ಈ ರೀತಿಯ ಅಭದ್ರ ಹೂಡಿಕೆಗಳಲ್ಲಿ ತೊಡಗಿಸುವ ಮೂಲಕ ತಮಗೆ ಕಾರ್ಮಿಕರ ಭದ್ರತೆಗಿಂತ ಜೂಜುಕೋರ ಷೇರು ಮಾರುಕಟ್ಟೆಗಳಿಗೆ ಹಣ ಹುಡುಕುವುದೇ ಮುಖ್ಯ ಎಂದು ತೋರಿಸಿ ಕೊಡುತ್ತಿದೆ. ಐವತ್ತೆಂಟಾದ ನಂತರ ಪೂರ್ತಿಹಣ ಕೈಗೆ ಸಿಗುತ್ತೆ ಎನ್ನುತ್ತಿರುವ ಸರ್ಕಾರದ ಅಜೆಂಡಾ ಏನನ್ನುವುದು ಇಲ್ಲಿ ಅತ್ಯಂತ ಸ್ಪಷ್ಟವಾಗುತ್ತದೆ. ದೊಡ್ಡ ಮೊತ್ತವನ್ನು ಹೂಡಿ ದೊಡ್ಡ ಲಾಭ ಪಡೆದುಕೊಂಡು ಅದರಲ್ಲಿ ಕೊಂಚ ದೇಶದ ಅಭಿವೃದ್ಧಿಗೆ, ಕೊಂಚ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಕೊಡುವ ಸುಳ್ಳು ಭರವಸೆಯ ಮೇಲೆ ಮಹಲನ್ನು ನಿರ್ಮಿಸುತ್ತಿರುವ ಸರ್ಕಾರಕ್ಕೆ, ಷೇರು ಏರುಪೇರಾದ್ರೇ ಅದರ ಎಫೆಕ್ಟ್ ಅನ್ನು ಜನಸಾಮಾನ್ಯರು ತಡೆದುಕೊಳ್ಳುವುದಿಲ್ಲ ಎಂಬ ಸಂಗತಿಯೂ ಗೊತ್ತಿದೆ. ಆದರೆ ಮೋದಿ ಸರ್ಕಾರಕ್ಕೆ ಬೇಕಿರೋದು ಜನಸಾಮಾನ್ಯರ ಸಂಕಷ್ಟಗಳಲ್ಲ. ಬಹುಶಃ ಆ ನಿಟ್ಟಿನಲ್ಲಿ ನಿಚ್ಚಳವಾಗುವುದಕ್ಕೇ ಪಿಎಫ್ನಲ್ಲಿ ಮಾರ್ಪಾಡು ತಂದಿರುವ ಸಾಧ್ಯತೆಯಿದೆ.
ಷೇರು ಮಾರುಕಟ್ಟೆಯಲ್ಲಿ, ಇನ್ನಿತರೆ ಚಟುವಟಿಕೆಯಲ್ಲಿ ಜೂಜಾಡಲು ಶೇಕಡಾ ಐವತ್ತರಷ್ಟು ಹಣವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಿರುವ ಸರ್ಕಾರ, ಮಿಕ್ಕ ಶೇಕಡಾ ಐವತ್ತರಷ್ಟು ಹಣವನ್ನು ಕಾರ್ಮಿಕರಿಗೆ, ನೌಕರರಿಗೆ ತಲುಪಿಸುವ ಉದ್ದೇಶ ಹೊಂದಿದೆ. ತಮ್ಮ ಬಿಸಿನೆಸ್ಗೆ ಬಳಸಿದ ಹಣಕ್ಕೆ ವ್ಯಾಲಿಡಿಟಿ ಅವಶ್ಯಕವಾಗಿರುವುದರಿಂದ ವಯಸ್ಸು ಐವತ್ತೆಂಟು ಕಳೆದ ನಂತರ ಪೂರ್ಣ ಪ್ರಮಾಣದಲ್ಲಿ ಸಿಗುವಂತೆ ಪ್ಲಾನ್ ಮಾಡಿರಬಹುದು. ಮೊದಲೇ ಹೇಳಿದಂತೆ ಇದು ಬಡ, ಮಧ್ಯಮ ವರ್ಗದ ಕಾರ್ಮಿಕರಿಗೆ ಭರಿಸಲಾಗದ ಸಂಕಷ್ಟಕ್ಕೀಡುಮಾಡುತ್ತದೆ. ಇಳಿ ವಯಸ್ಸಿನಲ್ಲಿ ಸಿಗುವ ಹಣದ ಪ್ರಯೋಜನ ಪಡೆದುಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯಾಗಿರುತ್ತದೆ. ಸೌಲಭ್ಯಕ್ಕೆ ಅರ್ಹವಾಗಿರುವ ಕಾರ್ಮಿಕರು ಆ ವಯಸ್ಸಿಗೂ ಮೊದಲೇ ಮರಣವನ್ನಪ್ಪಿದರೇ ಆ ಹಣವನ್ನು ಪಡೆದುಕೊಳ್ಳಲು ಹರಸಾಹಸಪಡಬೇಕಾಗುತ್ತದೆ. ಅಷ್ಟಕ್ಕೂ ಕಷ್ಟ ಕಾಲದಲ್ಲಿ ಉಪಯೋಗವಾಗದ ಹಣಕ್ಕೆ ಬೆಲೆಯಿಲ್ಲ. ಕೇಂದ್ರದ ನಡೆ ಕೆಂಗಣ್ಣಿಗೆ ಕಾರಣವಾಗಿದೆ. ಹಾಗೆಯೇ ಕೇಂದ್ರ ಸರ್ಕಾರಕ್ಕೆ ಭವಿಷ್ಯ ನಿಧಿಯ ಮೇಲೆ ಕಣ್ಣು ಬೀಳುವುದಕ್ಕೆ ಕಾರಣ; ಲಕ್ಷಾಂತರ ಕೋಟಿ ಹಣವೆಂದರೇ ತಪ್ಪಲ್ಲ. ಸೋರ್ಸ್ ಆಫ್ ಇನ್ಕಂ ಅಲ್ಲಿ ಹೆಚ್ಚಿರುವುದರಿಂದ, ಅದರ ಮೂಲಕ ದೊಡ್ಡ ಕನಸನ್ನು ಬೆನ್ನತ್ತಬಹುದು ಎಂಬ ಉದ್ದೇಶದಲ್ಲಿದೆ. 2013ರ ವೇಳೆಗೆ ಸರ್ಕಾರದ ಪ್ರಾವಿಡೆಂಟ್ ಫಂಡ್ನಲ್ಲಿದ್ದ ಹಣ ಐದು ಲಕ್ಷ ಕೋಟಿಗೂ ಅಧಿಕ. ಈ ವರ್ಷಕ್ಕೆ ಅಂದಾಜು ಎಂಟು ಕೋಟಿ ಕಾರ್ಮಿಕರಿಂದ ಹತ್ತು ಲಕ್ಷ ಕೋಟಿಗೂ ಅಧಿಕ ಹಣವಿದೆ. ಕಾಸು ಹುಟ್ಟುವ ಕಡೆ ಮೋದಿ ಚಿತ್ತ ಎಂಬಂತಾಗಿದೆ. ಆದರೆ ಶ್ರೀಮಂತವರ್ಗಕ್ಕೆ ಅವರಿಂದ ಭರಪೂರ್ತಿ ಲಾಭ ಸಿಗುತ್ತದೆ.
ಪಿಎಫ್ ಮೇಲಿನ ತೆರಿಗೆಯ ನಿರ್ಧಾರದಿಂದ ಭಾರೀ ಟೀಕೆಗೆ ಒಳಗಾಗಿದ್ದ ಕೇಂದ್ರ ಸರ್ಕಾರ, ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಯ ಈ ಸಂದರ್ಭದಲ್ಲಿ ಈ ವಿವಾದಕಾರಿ ಆದೇಶ ಪಕ್ಷದ ಇಮೇಜಿಗೆ ಹಾನಿ ತರುವ ಸಾಧ್ಯತೆಯೇ ಹೆಚ್ಚಾಗಿರುವುದರಿಂದ ವಾಪಸ್ ಪಡೆದುಕೊಂಡಿದ್ದು ಅಸಲಿಯತ್ತು. ಪ್ರಸ್ತುತ ನಡೆಯುತ್ತಿರುವ ಹೋರಾಟದಿಂದ ಬಿಜೆಪಿಗೆ ಹಿನ್ನಡೆಯಾಗುವುದು ಬಹುತೇಕ ನಿಶ್ಚಿತ. ಮೋದಿ ಸರ್ಕಾರದ ತಲೆಬಿಸಿಗಳು ಒಂದೆರಡಲ್ಲ. ಇಪಿಎಫ್ ಮೊತ್ತ ಹಾಗೂ ನಿವೃತ್ತಿ ಸಮಯದ ಇಪಿಎಫ್ ವಿಥ್ ಡ್ರಾ ಎಲ್ಲವೂ ತೆರಿಗೆ ಮುಕ್ತವಾಗಿತ್ತು. ಆದರೆ, ಏಪ್ರಿಲ್ 01, 2016ರಿಂದ ಇಪಿಎಫ್ನ ಅಸಲು ಧನ ತೆರಿಗೆ ಮುಕ್ತವಾಗಿರುತ್ತದೆ. ಇಪಿಎಫ್ಗೆ ನೀಡುವ ಮೊತ್ತದ ಶೇಕಡಾ 60ರಷ್ಟು ಬಡ್ಡಿ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ ಎಂದು ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ ಸಚಿವ ಅರುಣ್ ಜೇಟ್ಲಿ ಹೇಳಿದ್ದರು. ಇದು ಅನೇಕ ರೀತಿ ಗೊಂದಲಕ್ಕೆ ಕಾರಣವಾಗಿದ್ದರಿಂದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇಪಿಎಫ್ನಲ್ಲಿ 8.5 ಕೋಟಿಗೂ ಅಧಿಕ ಸದಸ್ಯರ 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತವಿದೆ. ಎನ್ಪಿಎಸ್ನಲ್ಲಿ 1.15 ಕೋಟಿಗೂ ಅಧಿಕ ಸದಸ್ಯರ 1.1 ಲಕ್ಷ ಕೋಟಿ ರೂಪಾಯಿ ಮೊತ್ತವಿದೆ. ಪಿಎಫ್ನಲ್ಲಿ ಮೂಲ ವೇತನ ಮತ್ತು ತುಟ್ಟಿಭತ್ಯೆ ಅಥವಾ ಡಿಎ ಒಟ್ಟು ಮೊತ್ತದ ಶೇಕಡಾ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇಕಡಾ 3.67ರಷ್ಟು ಪಿಎಫ್ಗೆ ಹಾಗೂ ಶೇಕಡಾ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ.
ಅಷ್ಟಕ್ಕೂ ಕೇಂದ್ರ ಭವಿಷ್ಯ ನಿಧಿಯ ಬುಡಕ್ಕೆ ಕೈ ಇಡುವ ಮೊದಲು ಅನೇಕ ಮಾರ್ಪಾಡುಗಳನ್ನು ತಂದು ಕಾರ್ಮಿಕರನ್ನು ತೃಪ್ತಿಪಡಿಸುವ ಪ್ರಯತ್ನ ಮಾಡಿತ್ತು. ಹತ್ತು ಅಥವಾ ಅದಕ್ಕಿಂತ ಹೆಚ್ಚು ನೌಕರರನ್ನು ಹೊಂದಿರುವ ಸಂಸ್ಥೆಗಳೂ ಪಿಎಫ್ ಸೌಲಭ್ಯ ನೀಡಬೇಕು ಎಂಬ ನಿಯಮ ಜಾರಿಗೆ ತಂದಿತ್ತು. ಈ ನಿಯಮ ಜಾರಿಯಾದರೆ 50 ಲಕ್ಷ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ. ಈಗಿರುವ ಕಾನೂನಿನ ಪ್ರಕಾರ ಇಪ್ಪತ್ತು ಹಾಗೂ ಅದಕ್ಕಿಂತ ಹೆಚ್ಚಿನ ನೌಕರರನ್ನು ಹೊಂದಿರುವ ಸಂಸ್ಥೆಗಳು ಮಾತ್ರ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಮೂಲಕ ಪಿಎಫ್ ಸೌಲಭ್ಯ ಸಿಗುತ್ತಿದೆ. ಇದರ ಜೊತೆಗೆ ಕಾರ್ಮಿಕ ಕಾಯ್ದೆಯಲ್ಲಿನ ಕೆಲ ಅಂಶಗಳಿಗೂ ತಿದ್ದುಪಡಿ ತರುವ ಕುರಿತೂ ಸರ್ಕಾರ ಚಿಂತನೆ ನಡೆಸಿತ್ತು. ಅಷ್ಟು ಮಾತ್ರವಲ್ಲದೇ ಪಿಎಫ್ ಹಣವನ್ನು ಆನ್ಲೈನ್ ಮೂಲಕ ಹಿಂಪಡೆಯುವ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಮೊಬೈಲ್ ನಲ್ಲಿಯೇ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವ ವ್ಯವಸ್ಥೆಯನ್ನು ಸಹ ನೀಡಲಾಗಿತ್ತು. ಹಣ ಪಾವತಿಗೆ ತಿಂಗಳು ಕಾಯಬೇಕಿಲ್ಲ. ಕೇವಲ 20 ದಿನದಲ್ಲಿ ಎಲ್ಲ ವ್ಯವಹಾರಗಳನ್ನು ಮುಗಿಸಿಕೊಡಲಾಗುತ್ತದೆ. ಕ್ಲೇಮ್ ಅವಧಿಯನ್ನು 30 ದಿನದಿಂದ 20 ದಿನಕ್ಕೆ ಇಳಿಕೆ ಮಾಡಿ, ಪಿಂಚಣಿ ಯೋಜನೆ, ವಿಮಾ ಠೇವಣಿಗೆ ಸಂಬಂಧಿಸಿದ ಯೋಜನೆಗಳಿಗೂ ನಿಯಮ ಅನ್ವಯವಾಗಲಿದೆ ಎಂದಿತ್ತು. ಹಾಗೆಯೇ ಕೇಂದ್ರ ಸರ್ಕಾರ ಪಿಎಫ್ಗೆ ಸಂಬಂಧಿಸಿದ ನಿಯಮಗಳಲ್ಲಿ ಸಾಕಷ್ಟು ತಿದ್ದುಪಡಿ ತಂದಿದ್ದರೂ ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸೆಟ್ಲ್ಮೆಂಟ್ ಅವಧಿಯನ್ನು ಇಳಿಕೆ ಮಾಡಿತ್ತು. ಹೀಗೆ ಕೇಂದ್ರ ಸರ್ಕಾರ ಕಾರ್ಮಿಕರ ಪರವಾದ ಅನೇಕ ನೀತಿಗಳ ಜಾರಿಗೆ ಮುಂದಾಗಿದ್ದು, ಅದರಲ್ಲಿ ದೊಡ್ಡದೊಂದು ಹುನ್ನಾರವಿದೆ ಎಂಬುದು ಈ ಕ್ಷಣಕ್ಕೆ ಸ್ಪಷ್ಟವಾಗಿದೆ. ಆದರೆ ಎಲ್ಲವೂ ಕೇಂದ್ರ ಭ್ರಮಿಸಿದಂತೆ ಸೋಬಿಯಾಗಿ ನಡೆಯುವುದಿಲ್ಲ ಎನ್ನುವುದಕ್ಕೆ ಈಗ ನಡೆಯುತ್ತಿರುವ ಕಾರ್ಮಿಕರ ಹೋರಾಟವೇ ಜ್ವಲಂತ ಸಾಕ್ಷಿ.
POPULAR STORIES :
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,
ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!
ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?
ನಿದ್ದೆಗೆಟ್ಟರೇ ಸಾಯೋದು ಗ್ಯಾರಂಟಿ..!! ನಿದ್ದೆ ಬರ್ತಿಲ್ಲಾ.. ಯಾಕೋ ನಿದ್ದೆ ಬರ್ತಿಲ್ಲಾ..!!
ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?
ಅವಳ `ಆತ್ಮ’ ಅತೃಪ್ತಿಯಿಂದ ನರಳುತ್ತಿದೆ..! ಭಾರತ ಚಿತ್ರರಂಗ ಕಂಡ ಅಪ್ಪಟ `ಸೌಂದರ್ಯ’
ಮೂರರ ಪೋರನ ಸಿಟ್ಟಿಗೆ ಪೊಲೀಸರೇ ಕಂಗಾಲು..! ಅಬ್ಬಾ..!! ಮಕ್ಕಳು ಹೀಗೂ ಇರ್ತಾರಾ..!?