9ರ ಪೋರನ ಕೃತಕ ಕಾಲು ಜೋಡಣೆಗೆ 1, 50, 000 ರೂ ನೀಡಿದ ಪೊಲೀಸ್…!

Date:

ಪೊಲೀಸರ ಮೇಲೆ ಒಳ್ಳೆಯ ಅಭಿಪ್ರಾಯವಿಲ್ಲ. ಪೊಲೀಸರೆಂದರೆ ದುರಾಂಹಕಾರಿಗಳು, ಭ್ರಷ್ಟರು ಎಂಬ ಅಭಿಪ್ರಾಯ ಜನಮಾನಸದಲ್ಲಿದೆ. ಕೆಲವೇ ಕೆಲವರಿಂದ ಇಡೀ ಪೊಲೀಸ್ ವ್ಯವಸ್ಥೆಗೆ ಕೆಟ್ಟ ಹೆಸರು ಬಂದಿದೆ. ಇಂತಹವರಿಂದಾಗಿ ದಕ್ಷ ಅಧಿಕಾರಿಗಳನ್ನು ಸಹ ಜನ ಸಂಶಯದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇವೆಲ್ಲವಗಳ ನಡುವೆ ಕೆಲ ಪೊಲೀಸ್ ಅಧಿಕಾರಿಗಳು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ಮೂಲಕ ಮಾದರಿಯಾಗಿದ್ದಾರೆ.


ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಅಂಗವಿಕಲ ಹುಡುಗನಿಗೆ ಕೃತಕ ಕಾಲು ಹಾಕಿಸಿಕೊಡುವ ಮೂಲಕ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. 9 ವರ್ಷದ ಶಿವ ಎನ್ನುವ ಹುಡುಗನಿಗೆ ಸ್ವಂತ ಖರ್ಚಿನಲ್ಲಿ ಕೃತಕ ಕಾಲು ಜೋಡಣೆ ಮಾಡಿಸುವ ಮೂಲಕ ಇನ್ಸ್ ಪೆಕ್ಟರ್ ಭೂಷಣ್ ತಿವಾರಿ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ.
ಮೂಲತಃ ಉತ್ತರ ಪ್ರದೇಶದ ಬಾಲಿ ಜಿಲ್ಲೆಯ ನರೇಕಾ ಹಳ್ಳಿಯವರಾದ ಭೂಷಣ್ ತಿವಾರಿಯವರು ಆಗಷ್ಟೆ ಉತ್ತರ ಪ್ರದೇಶದ ಶಕ್ತಿನಗರದಲ್ಲಿ ಪೊಲೀಸ್ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಒಮ್ಮೆ ಮಿಶ್ರಾ ಗ್ರಾಮದ ಬುಡಕಟ್ಟು ಜನ ಆಯೋಜಿಸಿದ್ದ ಈಜು ಮತ್ತು ದೋಣಿ ಓಡಿಸುವ ಸ್ಪರ್ಧೆಗೆ ಭೂಷಣ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಬಾಲಕ ಶಿವ ಭೂಷಣ್ ಅವರ ಕಾಲಿಗೆರಗಿ ನಮಸ್ಕರಿಸಿದ್ದಾನೆ. ಈ ವೇಳೆ ಶಿವನ ಸತ್ವ ಹೀನ ಕಾಲುಗಳನ್ನು ಭೂಷಣ್ ಗಮನಿಸಿದ್ದಾರೆ.


ಕೆಲವು ದಿನಗಳ ನಂತರ ಒಮ್ಮೆ ಹೀಗೆ ಕರ್ತವ್ಯದ ಮೇಲೆ ಮಿಶ್ರಾ ಗ್ರಾಮದಲ್ಲಿ ಸಂಚರಿಸುತ್ತಿದ್ದಾಗ ಭೂಷಣ್ ಮನೆಯ ಹೊರಗಡೆ ಕುಳಿತು ಓದುತ್ತಿದ್ದ ಶಿವನನ್ನು ನೋಡಿ ಮಾತನಾಡಿಸಿದ್ದಾರೆ. ಬಾಲಕ ಶಿವನ ಜೊತೆ ಮಾತನಾಡುತ್ತ ಹುಡುಗನಲ್ಲಿರುವ ಪ್ರತಿಭೆ ಮತ್ತು ಬುದ್ಧಿಶಕ್ತಿಯನ್ನು ಅವರು ಗಮನಿಸಿದ್ದಾರೆ. ಆತನ ಸ್ಥಿತಿ ಓದಿಗೆ ಅಡ್ಡಿಯಾಗಿರುವುದನ್ನು ಕಂಡು ಮನ ಕರಗಿದೆ.

ಶಾಲೆಯ ಎರಡನೇ ಮಹಡಿಯಲ್ಲಿ ತರಗತಿ ನಡೆಯುವುದರಿಂದ ಶಾಲೆಗೆ ಹೋಗಿ ಓದುವುದು ಸಾಧ್ಯವಾಗುತ್ತಿಲ್ಲ, ಹಾಗಾಗಿ ಮನೆಯಲ್ಲೆ ಓದಿಕೊಳ್ಳುತ್ತಿದ್ದೇನೆ ಎಂಬ ಬಾಲಕನ ಮಾತು ಭೂಷಣ್ ತಿವಾರಿಯರನ್ನು ಕಾಡಿತು. ಓದಿನ ಬಗ್ಗೆ ಆಸಕ್ತಿಯಿರುವ ಶಿವ ಶಿಕ್ಷಣದಿಂದ ವಂಚಿತನಾಗಬಾರದು ಎಂಬ ಉದ್ದೇಶದಿಂದ ಶಾಲೆಯ ಆಡಳಿತ ಮಂಡಳಿಗೆ ಹುಡಗನ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ. ಈತ ಶಿಕ್ಷಣದಿಂದ ವಂಚಿತನಾಗಬಾರದೆಂದು ತರಗತಿಯನ್ನು ಗ್ರೌಂಡ್ ಫ್ಲೋರ್ ಗೆ ಶಿಫ್ಟ್ ಮಾಡುವಂತೆ ಭೂಷಣೆ ಸಂಬಂಧಪಟ್ಟವರಲ್ಲಿ ಮನವಿ ಮಾಡಿದ್ದಾರೆ. ಶಾಲಾ ಆಡಳಿತ ಮಂಡಳಿ ಶಿವನಿಗೆ ಉಚಿತ ಶಿಕ್ಷಣನೀಡುವುದಾಗಿಯೂ ಭರವಸೆ ನೀಡಿದೆ.


ಕಳೆದ ಡಿಸೆಂಬರ್ ನಲ್ಲಿ ಭೂಷಣ್ ತಿವಾರಿಯವರಿಗೆ ರಾಬರ್ಟಗಂಜ್ ಠಾಣೆಗೆ ವರ್ಗವಾಯಿತು. ಶಿವನ ನೆನಪು ಮಾತ್ರ ಇವರನ್ನು ಕಾಡುತ್ತಲೇ ಇತ್ತು. ಈತನಿಗೆ ಚಿಕಿತ್ಸೆಕೊಡಿಸಲು ನಿರ್ಧರಿಸಿದ್ರು. ಬಿಹೆಚ್‍ಯು ಆಸ್ಪತ್ರೆಯಲ್ಲಿ ಆತನನ್ನು ತೋರಿಸಿದರು. ವೈದ್ಯರು ಬಾಲಕನನ್ನು ಪರೀಕ್ಷಿಸಿ ಈ ಹುಡುಗ ಸ್ವಂತ ಬಲದಿಂದ ನಡೆದಾಡುವುದು ಸಾಧ್ಯವಿದೆ ಎಂದು ಭರವಸೆ ನೀಡಿದ್ದಾರೆ. ಇದಾದಮೇಲೆ ತಡಮಾಡದೇ ಕೃತಕ ಕಾಲು ಜೋಡಿಸಲಾಯಿತು. ಚಿಕಿತ್ಸೆಗಾಗಿ ಭೂಷಣ್ 1, 50,000 ರೂ ಖರ್ಚು ಮಾಡಿದ್ದಾರೆ. ತಾನು ಖರ್ಚುಮಾಡಿದ ಹಣ ಹುಡುಗನ ಸಂತೋಷದ ಮುಂದೆ ದೊಡ್ಡ ಮೊತ್ತವಲ್ಲ ಎನ್ನುವುದು ಭೂಷಣ್ ಅವರ ಮನದಾಳದ ಮಾತು.


ಬಾಲಕ ಶಿವ ಎಲ್ಲ ಮಕ್ಕಳಂತೆ ಖುಷಿ ಖುಷಿಯಾಗಿ ಆಟವಾಡುತ್ತ ಕುಣಿದಾಡುತ್ತ ಇರುವುದನ್ನು ನೋಡಿ ನನ್ನ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ. ಶಿವು ಮುಖದಲ್ಲಿ ಮೂಡಿದ ಮಂದಹಾಸ ನನಗೆ ತೃಪ್ತಿಯನ್ನು ನೀಡಿದೆ ಎಂದು ಭೂಷಣ್ ತಿವಾರಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಶಿವು ತಂದೆತಾಯಿ ತೀರಾ ಬಡವರು.
‘ನನ್ನಿಂದ ನನ್ನ ಮಗನಿಗೆ ಚಿಕಿತ್ಸೆ ಕೊಡಿಸಲು ಜನ್ಮದಲ್ಲಿ ಸಾಧ್ಯವಿರಲಿಲ್ಲ, ನಿಮ್ಮ ಉಪಕಾರ ದೊಡ್ಡದು. ತನ್ನ ಮಗನಿಗೆ ಹೊಸ ಭವಿಷ್ಯ ನೀಡಿದ್ದಕ್ಕಾಗಿ ಧನ್ಯವಾದ’ ಎಂದು ಶಿವನ ತಂದೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಾನು ಮಾಡಿರುವುದು ಚಿಕ್ಕ ಕೆಲಸ. ಅದನ್ನು ಮಾಧ್ಯಮಗಳು ದೊಡ್ಡದಾಗಿ ಬಿಂಬಿಸಿ ನನ್ನನ್ನು ಹೀರೊ ಮಾಡಿವೆ. ನಿಜವಾಗಿ ಸಮಾಜಕ್ಕೆ ಏನನ್ನಾದರು ಕೊಡಲಿಕ್ಕೆ ನನಗೆ ಇದೊಂದು ಒಳ್ಳೆಯ ಅವಕಾಶವಾಗಿದೆ. ನನ್ನ ಸ್ನೇಹಿತರು ಮತ್ತು ಪರಿಚಿತರೆಲ್ಲ ನನ್ನ ಕೆಲಸವನ್ನು ಶ್ಲಾಘಿಸುತ್ತಿದ್ದಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ ನನ್ನ ಮಗಳು ನನ್ನ ಬಗ್ಗೆ ಹೆಮ್ಮೆ ಪಡುತ್ತಿರುದು ಖುಷಿಕೊಟ್ಟಿದೆ ಎನ್ನುತ್ತಾರೆ ಭೂಷಣ್.
ನನಗಿರುವುದು ಒಬ್ಬಳೆ ಮಗಳು. ಅವಳು ಅಪ್ಪಾ ನನ್ನ ಜೊತೆ ಆಟವಾಡಲಿಕ್ಕೆ ತಮ್ಮನೋ ತಂಗಿಯೋ ಬೇಕು ಎಂದು ಹಠಮಾಡುತ್ತಿದ್ದಳು. ಬಾಲಕ ಶಿವನ ಕುರಿತು ತಿಳಿದಾಗಿನಿಂದ ಅವಳು ತುಂಬ ಸಂತೋಷದಿಂದಿದ್ದಾಳೆ. ನನಗೆ ಒಬ್ಬ ಅಣ್ಣನನ್ನು ನೀಡಿದ್ದೀಯಾ ಅಪ್ಪಾ, ನಿನ್ನಂತ ಅಪ್ಪ ಸಿಕ್ಕಿದ್ದಕ್ಕೆ ನಾನು ಧನ್ಯ ಎಂದವಳು ಕರೆ ಮಾಡಿ ತಿಳಿಸಿದ್ದಾಳೆ ಎಂದು ಇನ್ಸಪೆಕ್ಟರ್ ಭೂಷಣ್ ತಿವಾರಿ ತಿಳಿಸಿದ್ದಾರೆ.
ಶಿಕ್ಷಣ ಮತ್ತು ಭವಿಷ್ಯ…


ಸದ್ಯ ಐದನೇ ತರಗತಿಯಲ್ಲಿ ಓದುತ್ತಿರುವ ಶಿವು ಭವಿಷ್ಯದ ಶಿಕ್ಷಣಕ್ಕೂ ನೆರವಾಗುವುದಾಗಿ ಭೂಷಣ್ ತಿವಾರಿ ಬಾಲಕನ ತಂದೆತಾಯಿಗೆ ಭರವಸೆ ನೀಡಿದ್ದಾರೆ. ಬಾಲಕನ ಕುಟುಂಬಕ್ಕೆ ಆರ್ಥಿಕ ಸಹಾಯವನ್ನೇನು ನಾನು ಮಾಡುವುದಿಲ್ಲ. ಆದರೆ ಆ ಕುಟುಂಬ ಮತ್ತು ಬಾಲಕ ಸ್ವಾವಲಂಬನೆಯಿಂದ ಬದುಕು ಸಾಗಿಸಲು ಏನೆಲ್ಲ ಬೇಕು ಅವೆಲ್ಲವನ್ನು ಮುಂದಿನ ದಿನಗಳಲ್ಲಿ ನಾನು ಮಾಡುತ್ತೇನೆ ಎಂದು ಭೂಷಣ್ ಸಿಂಗ್ ಹೇಳಿದ್ದಾರೆ.
ಪೊಲೀಸರೆಂದರೆ ಜನರಲ್ಲಿ ಭಯವಿದೆ. ತಮ್ಮ ಮಕ್ಕಳಲ್ಲೂ ಕೂಡ ಪಾಲಕರು ಪೊಲೀಸರ ಬಗ್ಗೆ ಭಯವನ್ನು ಹುಟ್ಟಿಸುತ್ತಾರೆ. ಆದರೆ ನಾವು ಪೊಲೀಸರು ಎಲ್ಲರಂತೆ ಮನುಷ್ಯರು. ನಮಗೂ ಭಾವನೆಗಳಿವೆ. ನಾವು ಸಮಾಜದೊಂದಿಗೆ ಸ್ನೇಹವನ್ನು ಬಯಸುತ್ತೇವೆ. ಆದರೆ, ಪೊಲೀಸ್ ವೃತ್ತಿಯ ನಡುವೆ ನಮ್ಮ ಭಾವನೆಗಳನ್ನು ತೋರಿಸಿಕೊಳ್ಳಲು ಸಮಯವಾಗಲಿ ಹೆಚ್ಚಿನ ಅವಕಾಶವಾಗಲಿ ಇರುವುದಿಲ್ಲ. ಕೆಟ್ಟದ್ದು ಮತ್ತು ಒಳ್ಳೆಯದರ ನಡುವೆ ತೆಳುವಾದ ಒಂದು ಗೆರೆಯಿದೆ. ಒಳ್ಳೆಯದಕ್ಕಾಗಿ ಪ್ರಯತ್ನಿಸಿದರೆ ಒಳ್ಳೆಯ ಬದಲಾವಣೆಗಳನ್ನು ತರಲು ಸಾಧ್ಯವಿದೆ ಎಂಬುದು ಭೂಷಣ್ ಸಿಂಗ್ ಅವರ ಅಭಿಪ್ರಾಯ..
ವೃತ್ತಿಯಿಂದ ಒಬ್ಬ ಪೊಲೀಸ್ ಅಧಿಕಾರಿಯಾಗಿ ಅಂಗವಿಕಲ ಹುಡುಗನಿಗೆ ಸಹಾಯಹಸ್ತ ಚಾಚಿದ ಭೂಷಣ್ ತಿವಾರಿ ಸಮಾಜಕ್ಕೆ ಮಾದರಿ. ಬಾಲಕ ಶಿವು ಪಾಲಿಗೆ ಭೂಷಣ್ ರವರೇ ನಿಜವಾದ ಹೀರೊ.. ಈ ಘಟನೆಯಿಂದ ಜನರ ಅಭಿಪ್ರಾಯದಲ್ಲಿ ಸ್ವಲ್ಪ ಬದಲಾವಣೆಯಾಗಬಹುದು.
-ರಾಜೇಶ್ ಹೆಬ್ಬಾರ್

(ಕೃಪೆ : ದಿ ಲಾಜಿಕಲ್ ಇಂಡಿಯನ್)

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...