ರಾಕ್ಷಸರನ್ನು ಸಂಹರಿಸಲು ಒಮ್ಮೊಮ್ಮೆ ದೇವರಿಗೆ ಕಷ್ಟವಾಗಿತ್ತಂತೆ. ಇನ್ನು ಜಗತ್ತಿನ ಎಲ್ಲಾ ಅಪರಾಧಗಳನ್ನು ತಡೆಯಲು ಪೊಲೀಸರಿಂದ ಆಗುತ್ತಾ..? ಇವತ್ತು ನಾವು ನೆಮ್ಮದಿಯಿಂದ, ಆರಾಮಾಗಿ ಬದುಕುತ್ತಿದ್ದೇವೆ ಅಂದರೇ ಅದಕ್ಕೆ ಕಾರಣ ಪೊಲೀಸರು. `ಬಿಡ್ರೀ.. ಅವರಿಗೆ ಸರ್ಕಾರ ಸಂಬಳ ಕೊಡುತ್ತೆ, ಅವರ ಡ್ಯೂಟಿ ಅವರು ಮಾಡ್ತಾರೆ’ ಎಂಬ ಉಢಾಫೆಯ ಮಾತುಗಳು, ಮನಃಸ್ಥಿತಿಗಳು ನಿಮ್ಮಲಿದ್ರೇ ಮೊದಲು ಅದನ್ನು ಬಿಟ್ಟುಬಿಡಿ. ಸಮಸ್ಯೆಗಳು ಅಂಡಿಗೆ ಬಂದು ತಾಕಿದಾಗಲೇ ಪೊಲೀಸರ ಬೆಲೆ ಗೊತ್ತಾಗಲು ಸಾಧ್ಯ..!? ಸರ್ಕಾರ ಸಂಬಳ ಕೊಡೋದು ಅವರ ಹೊಟ್ಟೆ, ಬಟ್ಟೆ, ಜೀವನಕ್ಕೆ- ಆದರೆ ಅವರು ಪ್ರಾಣ ಒತ್ತೆಯಿಟ್ಟು ನಮ್ಮ ರಕ್ಷಣೆಗೆ ನಿಲ್ಲುತ್ತಾರೆ. ದೇಶದ ಗಡಿ ಕಾಯುವ ಸೈನಿಕರಿಗೂ ಇವರಿಗೂ ಅಂತಹ ವ್ಯತ್ಯಾಸವೇನಿಲ್ಲ. ಅವರು ದೇಶದ ಗಡಿಯನ್ನು ಕಾಯುತ್ತಾರೆ. ಇವರು ದೇಶದ ಒಳಗಿನ ಜನರ ಸಮಸ್ಯೆಗಳಿಗೆ ಪರಿಹಾರವಾಗುತ್ತಾರೆ.
ಎಲ್ಲಾ ಪೊಲೀಸರು ಕೆಟ್ಟವರಲ್ಲ. ಎಲ್ಲಾ ರಾಜಕಾರಣಿಗಳು, ಪತ್ರಕರ್ತರು, ವಕೀಲರು, ಜನಸಾಮಾನ್ಯರು ಒಳ್ಳೆಯವರಲ್ಲ. ಮನುಷ್ಯರು ಅಂದಮೇಲೆ ದೌರ್ಬಲ್ಯ, ಅವಶ್ಯಕತೆಗಳು ಇರುತ್ತವೆ. ಯಾರೋ ಕೆಲ ಪೊಲೀಸರು ಲಂಚ ತೆಗೆದುಕೊಂಡರು, ಅಸಭ್ಯವಾಗಿ ವರ್ತಿಸಿದರು ಎಂದಕೂಡಲೇ ಇಡೀ ಪೊಲೀಸ್ ಇಲಾಖೆಯನ್ನು ಭ್ರಷ್ಟರು, ಹಾದಿಬಿಟ್ಟವರು ಎಂದು ಕರೆಯುವುದು ಸರಿಯಲ್ಲ. ಕಷ್ಟ ಎಂದವರಿಗೆ ತಮ್ಮ ಜೇಬಿನಿಂದ ಹಣ ಕೊಟ್ಟ ಪೊಲೀಸರೂ ಇದ್ದಾರೆ, ನ್ಯಾಯ ಕೇಳಲು ಹೋದವರ ಜೇಬಿಗೆ ಕತ್ತರಿಹಾಕಿದ ಪೊಲೀಸರೂ ಇದ್ದಾರೆ. ಮೊನ್ನೆ ನನ್ನ ಗೆಳೆಯನೊಬ್ಬನ ಬೇಕರಿಗೆ ಬಂದ ಕುಮಾರಸ್ವಾಮಿ ಲೇಔಟ್‍ನ ಕೆಲ ಪೊಲೀಸರು , `ನಿನ್ನ ಮೇಲೆ ಹುಡುಗನೊಬ್ಬ ಕಂಪ್ಲೆಂಟ್ ಮಾಡಿದ್ದಾನೆ. ನೀನು ಜೈಲಿಗೆ ಹೋಗೋದು ಗ್ಯಾರಂಟಿ. ಹೀಗೆಲ್ಲಾ ಆಗಬಾರದು ಎಂದರೇ ಹತ್ತು ಸಾವಿರ ಹಣ ಕೊಡು’ ಅಂತ ಹೆದರಿಸಿ ಕಡೆಗೆ ಐದು ಸಾವಿರ ರೂಪಾಯಿಗೆ ಸೆಟ್ಲ್‍ಮೆಂಟ್ ಮಾಡಿಕೊಂಡಿದ್ದರು. ಇನ್ನು ಆ ಹುಡುಗ ಯಾರು..? ಕೇಸು ಏನು..? ಅಂತ ನೋಡಿದರೇ ಆತ ಅದೇ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಅಲ್ಲೇ ಉತ್ತರಹಳ್ಳಿಯವನು. ಮನೇಲಿ ಹುಷಾರಿಲ್ಲ ಅಂತ ಅಡ್ವಾನ್ಸ್ ದುಡ್ಡು ತೆಗೆದುಕೊಂಡಿದ್ದ. ಆಮೇಲೆ ಪದೇಪದೇ ಚಕ್ಕರ್ ಹಾಕುತ್ತಿದ್ದ. ಅದನ್ನು ಕೇಳಿದ್ದಕ್ಕೆ, ಪೊಲೀಸ್ ಠಾಣೆಗೆ ಹೋಗಿದ್ದ. ಪೊಲೀಸರು ಐದು ಸಾವಿರ ತೆಗೆದುಕೊಂಡು ಹುಡುಗನನ್ನೇ ಆ ಹೆದರಿಸಿ ಕಳಿಸಿದ್ದರು. ಇಲ್ಲಿ ಎಲ್ಲಾ ಪೊಲೀಸರು ನುಂಗಣ್ಣಂದಿರಾಗಿರುವುದಿಲ್ಲ. ವಂತಿಗೆ ವಸೂಲಿಯಲ್ಲಿ ಎಲ್ಲರೂ ಪಾತ್ರಧಾರಿಗಳಲ್ಲ.
ಇತ್ತೀಚೆಗೆ ಪತ್ರಕರ್ತನೊಬ್ಬನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದ ಸುದ್ದಿಯಾಗಿತ್ತು. ಕೆಲವು ಪೊಲೀಸರಿಗೆ ಮಾಧ್ಯಮದವರನ್ನು ಕಂಡರೆ ಇರುವೆಬಿಟ್ಟುಕೊಳ್ಳುವ ಅಭ್ಯಾಸವಿದೆ. ಇರುವೆ ಅದೆಲ್ಲಿಯೋ ನುಗ್ಗಿ ಕಚ್ಚಿದಾಗ ಮಾಧ್ಯಮದವರ ಮೇಲೆ ಉರಿದುಬೀಳುತ್ತಾರೆ. ಅವತ್ತು ಪತ್ರಕರ್ತನ ಮೇಲೆ ಕೈಮಾಡಿದ ಪೊಲೀಸ್ ಅಧಿಕಾರಿಗೆ ಪ್ರತಿಭಟಿಸುತ್ತಿದ್ದ ಗಾರ್ಮೆಂಟ್ಸ್ ನೌಕರರನ್ನು ನಿಯಂತ್ರಿಸುವ ಪಡಿಪಾಟಿಲುಗಳಿದ್ದವು. ಒತ್ತಡಗಳಿದ್ದವು. ಆದರೆ ಅದನ್ನು ಅವರಷ್ಟೇ ಒದ್ದಾಟ ನಡೆಸುವ ಮಾಧ್ಯಮದವರ ಮೇಲೆ ತೋರಿಸಿದ್ದು ತಪ್ಪು. ಇಂತಹ ಸಣ್ಣಸಣ್ಣ ತಪ್ಪುಗಳಿಂದ ಅನಾವಶ್ಯಕವಾಗಿ ಕೋಟ್ಯಾಂತರ ಜನರ ಮುಂದೆ ವಿಲನ್‍ಗಳಾಗುತ್ತಾರೆ. ಆದರೆ ಎಲ್ಲಾ ಪೊಲೀಸರು ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಮಾಧ್ಯಮದವರು, ವಕೀಲರು, ಪೊಲೀಸರ- ಉದ್ದೇಶಗಳು ಒಂದೇ ಆಗಿರುವುದರಿಂದ ಇಲ್ಲಿ ಸ್ನೇಹವಲಯಗಳು ಸೃಷ್ಟಿಯಾಗಿರುತ್ತವೆ. ಅತ್ಯುತ್ತಮ ಸ್ನೇಹಸಂಬಂಧಗಳಿರುತ್ತವೆ.
ಈ ಪೊಲೀಸರ ಸಮಸ್ಯೆಗಳನ್ನೇ ತೆಗೆದುಕೊಳ್ಳಿ. ಕೊಳೆತುಹೋದ ಹೆಣವನ್ನು ಇವರೇ ಎತ್ತಬೇಕು, ಮೇಲಧಿಕಾರಿಗಳಿಗೆ ಕೇಳಿದಾಗೆಲ್ಲಾ ಟೀ ಕಾಫಿ ಸಪ್ಲೈ ಮಾಡಬೇಕು. ಬಿಡುವಿರದೆ ದುಡಿಯಬೇಕು, ವಾರಕ್ಕೊಂದು ರಜೆ ಪಡೆದುಕೊಳ್ಳಲು ಹೆಣಗಬೇಕು, ಸಣ್ಣಪುಟ್ಟ ತಪ್ಪಿಗೆ, ಬೇರೆ ಯಾರದ್ದೋ ತಪ್ಪಿಗೆ ಮೇಲಧಿಕಾರಿಗಳಿಂದ ಕಿರುಕುಳ ಅನುಭವಿಸಬೇಕು, ಕಳ್ಳ ಕಾಕರನ್ನು, ರೌಡಿಗಳನ್ನು ಹಿಡಿಯುವಾಗ ಪ್ರಾಣವನ್ನು ಒತ್ತೆಯಿಡಬೇಕು, ಆರೋಗ್ಯ ಕೆಟ್ಟರೂ, ಸಂಸಾರ ಹಾಳಾದರೂ- ಡ್ಯೂಟಿಗೆ ಹಾಜರಾಗಬೇಕು. ಇಷ್ಟೆಲ್ಲಾ ಮಾಡಿದರೂ ಸಿಗುವುದು ಬೆರಳೆಣಿಕೆಯ ಸಂಬಳ. ಬೀದಿಯಲ್ಲಿ ಬೀಡಾ ಅಂಗಡಿ ಇಟ್ಟುಕೊಂಡವರು ಇವತ್ತು ಏನಿಲ್ಲವೆಂದರೂ ದಿನಕ್ಕೆ ಸಾವಿರ ರೂಪಾಯಿ ದುಡಿಯುತ್ತಾರೆ. ತಿಂಗಳಿಗದು ಮೂವತ್ತು ಸಾವಿರವಾಗುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ ನೆಮ್ಮದಿಯಿಂದಿರುತ್ತಾರೆ. ಆದರೆ ಹೆಸರಿಗೆ ಮಾತ್ರ ಪೊಲೀಸ್ ಅಂತ ಕರೆಸಿಕೊಳ್ಳುವ, ಮನುಷ್ಯರೇ ಅಲ್ಲವೆಂಬಂತೆ ನೋಡಿಸಿಕೊಳ್ಳುವ ಆರಕ್ಷಕರು ಕಿಂಚಿತ್ತು ನೆಮ್ಮದಿಯಿಲ್ಲದೆ ಬಿಡಿಗಾಸಿಗೆ ಇಡೀ ಬದುಕನ್ನು ಮುಡಿಪಿಡುತ್ತಾರೆ. ಮನೆಯಿಂದ ಹೊರಗೆ ಕಾಲಿಟ್ಟಾಗಲೇ ವಾಪಾಸು ಮನೆ ಸೇರುತ್ತೇವೆ ಎಂಬ ಖಾತ್ರಿಯಿಲ್ಲ. ಆದರೂ ಜನರನ್ನು ರಕ್ಷಿಸಬೇಕು. ಒಳ್ಳೇ ಪೊಲೀಸ್ ಅನಿಸಿಕೊಳ್ಳಬೇಕು ಎಂದೆಲ್ಲಾ ಗಟ್ಟಿನಿರ್ಧಾರ ಮಾಡಿಬಿಡುತ್ತಾರೆ. ಮನೆಯಿಂದ ಹೊರಟಾಗ ಕಿಲಕಿಲ ನಕ್ಕ ಮಗುವಿನ ಅದೇ ಮುಖವನ್ನು ಮರಳಿ ನೋಡುವ ಭರವಸೆಯಿಲ್ಲದ ಅವರ ಬದುಕಿಗೆ ನಮ್ಮ ಸರ್ಕಾರವೇನು ಕೊಡುತ್ತಿದೆ ಹೇಳಿ..!?
ನಾವೂ ಮನುಷ್ಯರು. ನಮಗೂ ಬದುಕಿದೆ. ನಮಗೂ ಅಪ್ಪ, ಅಮ್ಮನನ್ನು ಸಾಕುವ ಜವಬ್ಧಾರಿಯಿದೆ, ಮದುವೆಗೆ ಬಂದ ಸೋದರಿಯರಿದ್ದಾರೆ. ಅಪಾರ ಆಸೆಗಳನ್ನು ಹೊತ್ತ ಅಂರ್ಧಾಂಗಿಯಿದ್ದಾಳೆ. ಅಪ್ಪನ ಜೊತೆ ಕಾಲ ಕಳೆಯಲು ಹಪಾಹಪಿಸುವ ಮಕ್ಕಳಿದ್ದಾರೆ. ನಮಗೂ ಹುಷಾರು ತಪ್ಪುತ್ತದೆ. ನಮಗೂ ಖಾಯಿಲೆಗಳು ಬರುತ್ತವೆ. ನಮಗೂ ಜವಬ್ಧಾರಿಯಿದೆ, ಪ್ರಾಣಪಾಯವಿದೆ, ನಮ್ಮನ್ನು ಯಕಃಶ್ಚಿತ್ ಮನುಷ್ಯರಂತೆ ನೋಡಿ. ನಮ್ಮ ಮೇಲೆಯೇ ದೌರ್ಜನ್ಯವಾಗುತ್ತದೆ. ನಮ್ಮನ್ನು ಹಿಂಡಿಹಾಕಲಾಗುತ್ತದೆ. ಹಗಲು ರಾತ್ರಿ ದುಡಿಸಿ ಶೋಷಣೆ ಮಾಡಲಾಗುತ್ತದೆ. ಯಾಕಾದರೂ ಈ ವೃತ್ತಿಗೆ ಬಂದೆವೋ..? ಅತ್ತ ದುಡಿಮೆಗೆ ತಕ್ಕ ಫಲವೂ ಇಲ್ಲ, ನೆಮ್ಮದಿಯೂ ಇಲ್ಲ. ಇಂತಹ ಕೆಟ್ಟ ಬದುಕಿನ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದೇ ಸರಿ’ ಎಂಬ ನಿರ್ಧಾರಕ್ಕೆ ಬರುವಷ್ಟರಮಟ್ಟಿಗೆ ಪೊಲೀಸರು ಹೈರಾಣಾಗಿದ್ದಾರೆ ಎಂದರೇ ಅವರ ಸಂಕಷ್ಟಗಳು ಸರ್ಕಾರದ ಕಣ್ಣು ತೆರಸಬೇಕಲ್ಲವೇ..!?, ಅವರ ಹೋರಾಟದ ಹಿಂದಿನ ನೋವುಗಳನ್ನು ಅರ್ಥಮಾಡಿಕೊಳ್ಳುವ ಬದಲು ಎಸ್ಮಾ ಜಾರಿ ಮಾಡುತ್ತೇವೆ..! ಪ್ರತಿಭಟಿಸಿದರೇ ಕೆಲಸದಿಂದ ಕಿತ್ತುಹಾಕುತ್ತೇವೆ ಎಂದೆಲ್ಲಾ ಹೆದರಿಸಿದ ಕೂಡಲೇ ಹೋರಾಟಗಳು ನಿಲ್ಲುತ್ತಾವಾ..? ಈ ದೇಶ ಸ್ವತಂತ್ರವಾಗಿದ್ದೇ ಹೋರಾಟದಿಂದ..! ಹೋರಾಟ ನಿರಂತರವಾಗಿರಬೇಕು. ಇದು ಅಂತಿಮವಾಗಿ ಪ್ರಜೆಗಳೇ ನಿರ್ಧರಿಸುವ ದೇಶ. ಪ್ರಜೆಗಳು ಧಂಗೆಯೆದ್ದರೇ ಯಾವ ಆಡಳಿತ, ಅಧಿಕಾರವೂ ಎದುರು ನಿಲ್ಲಲು ಸಾಧ್ಯವಿಲ್ಲ.
ಜನರ ಜೊತೆ ಸರ್ಕಾರವನ್ನು ಕಾಯುವ ಪೊಲೀಸರ ನೋವನ್ನು ಸರ್ಕಾರ ಅರ್ಥಮಾಡಿಕೊಂಡು, ಅವರ ಬೇಡಿಕೆಯನ್ನು ಈಡೇರಿಸಲಿ ಎಂಬುದು ನಮ್ಮ ಹಾರೈಕೆ. ದಿ ನ್ಯೂ ಇಂಡಿಯನ್ ಟೈಮ್ಸ್ ಬೆಂಬಲವೂ ಇದೆ. ಆರಕ್ಷಕರಿಗೆ ಭದ್ರತೆ, ರಕ್ಷಣೆ, ನೆಮ್ಮದಿಯಿಲ್ಲವೆಂದರೇ ಹೇಗೆ..!?
– ಮುಂದುವರಿಯುತ್ತದೆ….
POPULAR STORIES :
ದುಬಾರಿ ದುನಿಯಾ ಮತ್ತು ಅಚ್ಛೇದಿನ್ ಎಂಬ ಸುಳ್ಳು..!
ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?
ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!
ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!
ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?
ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?
ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?