ಎಲ್ಲಾ ಪೊಲೀಸರನ್ನು ಕೆಟ್ಟವರು, ಅವರ ನಡವಳಿಕೆ ಸರಿಯಿರುವುದಿಲ್ಲ, ಜನಸಾಮಾನ್ಯರ ಮೇಲೆ ದೌರ್ಜನ್ಯ ಮಾಡುತ್ತಾರೆ, ಕಾಸಿದ್ದವರಿಗೆ ಮಣೆ ಹಾಕುತ್ತಾರೆ, ಅಮಾಯಕರನ್ನು ಸುಲಿದು ತಿನ್ನುತ್ತಾರೆ ಎನ್ನುವುದು ಕಷ್ಟ. ಅವರಲ್ಲೂ ಒಳ್ಳೆಯವರಿರುತ್ತಾರೆ. ಕೆಲವರಿಗೆ ಅಭ್ಯಾಸಬಲ, ದೌರ್ಬಲ್ಯ, ಅನಿವಾರ್ಯತೆಗಳು. ಹಾಗಂತ ಅವರನ್ನು ಸಾರಸಗಟಾಗಿ ದೂರವಿಡುವುದು ಕಷ್ಟ. ಏಕೆಂದರೇ ಆರಕ್ಷಕರಿಲ್ಲದೇ ಒಂದು ದಿನವೂ ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಿಲ್ಲ.
ನಮ್ಮ ರಾಜ್ಯದಲ್ಲಿ ಅಂದಾಜು ಅರವತ್ತೆಂಟು ಸಾವಿರ ಪೊಲೀಸರಿದ್ದಾರೆ. ಅವರಲ್ಲಿ ಹತ್ತಿರತ್ತಿರ ನಲವತ್ತೈದು ಸಾವಿರಕ್ಕೂ ಹೆಚ್ಚು ಮಂದಿ ಕೆಳಹಂತದ ಪೇದೆಗಳಿದ್ದಾರೆ. ನಮ್ಮ ರಾಜ್ಯದ ಜನಸಂಖ್ಯೆಗೆ ಹೋಲಿಸಿದರೇ ಒಂದು ಲಕ್ಷ ಜನಕ್ಕೆ ಸಲ್ಲುತ್ತಿರುವ ಪೊಲೀಸರ ಸಂಖ್ಯೆ ನೂರ ನಾಲ್ಕು ಮಾತ್ರ. ಒಂದು ಲಕ್ಷ ಜನರನ್ನು ಸಂಭಾಳಿಸುವ ಜವಬ್ಧಾರಿ ನೂರನಾಲ್ಕು ಮಂದಿಯದ್ದು ಎಂಬುದನ್ನೇ ಊಹಿಸಿನೋಡಿ. ಎಲ್ಲೋ ಒಂದು ಕಡೆ ಹಾಡಹಗಲೇ ಕೊಲೆಗಳಾಗುತ್ತವೆ. ಹೊತ್ತಲ್ಲದ ಹೊತ್ತಿನಲ್ಲಿ ಹೆಣ್ಣುಮಕ್ಕಳ ಅಪಹರಣವಾಗುತ್ತದೆ, ಅತ್ಯಾಚಾರಗಳು ಮೇಲಿಂದ ಮೇಲೆ ನಡೆಯುತ್ತದೆ, ಇದ್ದಕ್ಕಿದ್ದಂತೆ ಲಕ್ಷಾಂತರ ಜನರು ಬೀದಿಗಿಳಿದು ಪ್ರತಿಭಟಿಸುತ್ತಾರೆ. ಆಗ ಜನಸಾಮಾನ್ಯರು, ಮೀಡಿಯಾಗಳು ಒಂದೇ ಸಮನೆ ಅಬ್ಬರಿಸತೊಡಗುತ್ತಾರೆ, `ಇದು ದೊಡ್ಡ ಪೊಲೀಸ್ ವೈಫಲ್ಯ, ಪೊಲೀಸರೇ ನೀವೇನು ಮಾಡುತ್ತಿದ್ದೀರಿ, ಕೈಗೆ ಬಳೆ ತೊಟ್ಟುಕೊಳ್ಳಿ..’ ಎಂಬೆಲ್ಲಾ ಆರೋಪಗಳು ಕೇಳಿಬರುತ್ತವೆ. ಅಷ್ಟಕ್ಕೂ ಲಕ್ಷಾಂತರ ಜನರನ್ನು ನೂರಾರು ಪೊಲೀಸರು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಯೋಚಿಸಲು ಹೋಗುವುದಿಲ್ಲ.
ಪೊಲೀಸರ ಮೇಲೆ ಎಲ್ಲಾ ಮುಗಿದ ಮೇಲೆ ಬರುತ್ತಾರೆ ಎಂಬ ಆರೋಪವಿದೆ. ಘಟನೆ ನಡೆಯುವಾಗ ಸ್ಥಳದಲ್ಲಿ ಧಿಡೀರ್ ಪ್ರತ್ಯಕ್ಷವಾಗಲು ಪುರಾಣ ಕಥೆಗಳಲ್ಲಿ ಬರುವ ದೇವರುಗಳಾ… ಅವರು. ಅವರೂ ಮನುಷ್ಯರಲ್ವಾ..? ಎಲ್ಲಾ ಮುಗಿದ ಮೇಲೆ ಬರುತ್ತಾರೆ ಎಂದು ಆರೋಪಿಸುವ ಬದಲು, ಬಂದಮೇಲೆ ಏನೆಲ್ಲಾ ಮಾಡುತ್ತಾರೆ ಎಂಬುದನ್ನು ವಿವೇಚಿಸಿ ನೋಡಬೇಕು. ಉದಾಹರಣೆಗೆ ಎಲ್ಲೋ ಒಂದು ಕೊಲೆಯಾಗಿರುತ್ತದೆ. ಆಕ್ಸಿಡೆಂಟ್ ಆಗಿರುತ್ತದೆ. ದೇಹ ರಕ್ತಸಿಕ್ತವಾಗಿ ಛಿದ್ರವಾಗಿರುತ್ತದೆ. ಕೆಲವೊಂದು ಹೆಣ ಕೊಳೆತುಹೋದ ಸ್ಥಿತಿಯಲ್ಲಿರುತ್ತದೆ. ನಂಬಿಬಿಡಿ, ಅದನ್ನು ಅನಿವಾರ್ಯವಾಗಿ ಹೊರಬೇಕಾದವರು ಇದೇ ಪೊಲೀಸ್ರು, ಅರ್ಥಾತ್ ಕೆಳಹಂತದ ಪೊಲೀಸರು. ಆದರೂ ಅವರನ್ನು ಟೀಕಿಸುತ್ತೇವೆ. ಯಾರೋ ಒಂದಿಷ್ಟು ಮಂದಿ ತಲೆಕಟ್ಟವರ ನಡವಳಿಕೆಗೆ ಇಡೀ ಪೊಲೀಸ್ ವ್ಯವಸ್ಥೆಯನ್ನು ದೂಷಿಸುತ್ತೇವೆ. ಇದು ಯಥಾಪ್ರಕಾರದ ಪ್ರಕ್ರಿಯೆ.
ನಾವು ಮೊದಲು ಪೊಲೀಸರನ್ನು ಮನುಷ್ಯರ ಥರ ನೋಡಬೇಕು( ಮನುಷ್ಯತ್ವ ಇಲ್ಲದಂತೆ ವರ್ತಿಸಿದರ ಪರಿಣಾಮ ), ಅವರೇನು ಮೇಲಿಂದ ಇಳಿದುಬಂದವರಲ್ಲ. ಅವರಿಗೆ ಅಧಿಕಾರವಿದೆ. ಅವರು ಆಡಿದ್ದೇ ಆಟ ಎಂದು ಭಾವಿಸುವುದನ್ನು ಬಿಡಬೇಕು. ಅವರೇನೇ ಮಾಡಿದರೂ ಕಾನೂನಿನ ಚೌಕಟ್ಟನ್ನು ಮೀರುವುದು ಅಸಾಧ್ಯ. ಕಾನೂನು ಮೀರಿದರೇ ವಿಚಾರಣೆಗೊಳಪಡುತ್ತಾರೆ. ಹೆಚ್ಚುಕಮ್ಮಿಯಾದರೇ ಸಸ್ಪೆಂಡ್ ಆಗುತ್ತಾರೆ. ಕೆಲಸ ಹೋದರೂ ಹೋಗಬಹುದು. ಕೆಲವರು ಅಮಾಯಕರ ಮೇಲೆ ದೌರ್ಜನ್ಯವೆಸಗುವುದಿಲ್ಲ ಅಂತಲ್ಲ. ಕೆಲ ಅಮಾಯಕರಿಗೆ ಕಾನೂನಿನ ಅರಿವಿಲ್ಲ ಅಂತ ಸ್ವಲ್ಪ ಹೆಚ್ಚಾಗಿಯೇ ಆಡುತ್ತಾರಷ್ಟೆ. ಕೆಲವರು ವಿನಾಕಾರಣ ಮಾನಸಿಕ ಅಸ್ವಸ್ಥರಂತೆ ಆಡುವುದನ್ನು ನೋಡಿರುತ್ತೇವೆ. ಹೆಚ್ಚಾಗಿ ಹೆಗಲಮೇಲೆ ಸ್ಟಾರ್ ಇಲ್ಲದ ಪೇದೆಗಳದ್ದೇ ದೌರ್ಜನ್ಯ ಎಂದು ಮಾತಾಡಿಕೊಂಡಿರುತ್ತೇವೆ. ಅದಕ್ಕೆ ಕಾರಣ; ಇದೀಗ ಹೋರಾಟಕ್ಕೆ ಕಾರಣವಾದ ಅಂಶಗಳೇ ಆಗಿದೆ.
ಜೂನ್ ನಾಲ್ಕನೇ ತಾರೀಕು ಬೀದಿಗಿಳಿದು ಹೋರಾಟ ನಡೆಸಲು ನಿರ್ಧರಿಸಿರುವ ಪೊಲೀಸರಿಗೆ ತಾವು ಹೋರಾಟ ನಡೆಸುವಂತಿಲ್ಲ ಎಂಬ ಸುಪ್ರಿಂ ಕೋರ್ಟ್ ಆದೇಶದ ಅರಿವಿಲ್ಲ ಎಂದೇನಿಲ್ಲ. ಬೀದಿಗಿಳಿದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂಬ ಸತ್ಯವೂ ಅವರಿಗೆ ಗೊತ್ತಿದೆ. ಆದರೂ ಅವರು ಹೊರಾಟ ನಡೆಸಲು ಮುಂದಾಗುತ್ತಾರೆಂದರೇ ಈ ಇಲಾಖೆಯಿಂದ ಅವರೆಷ್ಟು ಹೈರಾಣಾಗಿರಬೇಡ ಯೋಚಿಸಿನೋಡಿ.
ಗಾಯದ ಮೇಲೆ ಗಾಯವಾಗುತ್ತಿದ್ದರೇ, ಆದ ಗಾಯದ ಮೇಲೆ ಉಪ್ಪುಕಾರ ಸುರಿಯುತ್ತಿದ್ದರೇ ಅವರು ತಾನೇ ಎಷ್ಟು ದಿನ ಅಂತ ಸಹಿಸಿಕೊಂಡಾರು..? ಜನರ ಹಿತಾಸಕ್ತಿಗಾಗಿ ಒಮ್ಮೊಮ್ಮೆ ಪ್ರಾಣ ಒತ್ತೆಯಿಡಲು ಹಿಂಜರಿಯದ ಆರಕ್ಷಕರು ತಮಗಾಗುತ್ತಿರುವ ದೌರ್ಜನ್ಯ, ಅನ್ಯಾಯಗಳಿಂದ ಕಣ್ಣೀರಿಡುತ್ತಾರೆ ಎಂದರೇ ಇದು ಒಪ್ಪತಕ್ಕ ವಿಚಾರವಲ್ಲ. ಪೊಲೀಸ್ ಅಧಿಕಾರಿಗಳು ಅಷ್ಟೋ ಇಷ್ಟೊ ದುಡ್ಡು ತೆತ್ತು ಪೀಠಸ್ಥರಾಗುತ್ತಾರೆ. ಅವರಿಗೆ ತಮ್ಮ ವ್ಯಾಪ್ತಿಯ ಆಗುಹೋಗುಗಳ ಬಗ್ಗೆ ಅರಿವಿರುವುದಿಲ್ಲ. ಕೆಲಸವೂ ಕಡಿಮೆ. ಯಾರ ಹಣೆಬರಹ ಹೇಗಿದೆ ಎಂಬುದನ್ನು ಅವರಿಗೆ ತಿಳಿಸಿಕೊಡುವವರು ಕೆಳಹಂತದ ಪೊಲೀಸರು, ಅಂದರೇ ಕಾನ್ಸ್‍ಟೇಬಲ್‍ಗಳು. ಗುಪ್ತಚರ ಕೆಲಸವನ್ನೂ ಅವರೇ ಮಾಡುತ್ತಾರೆ. ಆದರೂ ಅವರ ಮೇಲೆ ಮೇಲಾಧಿಕಾರಿಗಳ ದೌರ್ಜನ್ಯ ಮುಂದುವರಿಯುತ್ತದೆ. ಎಲ್ಲಾ ಅಧಿಕಾರಿಗಳು ಅನಾಗರೀಕರಂತೆ ವರ್ತಿಸುವುದಿಲ್ಲ. ಕೆಲವರದ್ದಂತೂ ಅತಿರೇಕದ ಪರಮಾವಧಿ.
ಕೆಳಹಂತದ ಪೊಲೀಸರನ್ನು ನಿಕೃಷ್ಟವಾಗಿ ಕಾಣುವ ಪರಿಪಾಟವನ್ನು ಶುರುಮಾಡಿದ್ದು ಬ್ರಿಟೀಷರು. ಅದನ್ನು ಇವತ್ತಿಗೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ಕರ್ನಾಟಕದಲ್ಲಿ ದೇವರಾಜ್ ಅರಸ್ ಸರ್ಕಾರವಿದ್ದಾಗ, ಕೆಳದರ್ಜೆಯ ಪೊಲೀಸರಿಗೆ ಚಡ್ಡಿ ಹಾಕಿಸುತ್ತಿದ್ದ ಹೀನಾ ಪ್ರವೃತ್ತಿಯನ್ನು ಕೊನೆಗಾಣಿಸಿದರು. ಪ್ಯಾಂಟ್ ಹಾಕಿಸಿ ತಾವು ಸಾಮಾನ್ಯರ ಪರ ಎಂಬುದನ್ನು ಸಾಬೀತುಪಡಿಸಿದ್ದರು. ಈಗ ಅದೇ ದೇವರಾಜ್ ಅರಸ್ ಅವರ ಆದರ್ಶಗಳನ್ನು ಅಳವಡಿಸಿಕೊಂಡಿದ್ದೇನೆ ಎನ್ನುತ್ತಿರುವ ಸಿದ್ದರಾಮಯ್ಯನವರು ಪ್ಯಾಂಟ್ ಇರಲಿ, ಚಡ್ಡಿಯೇ ಉದುರುತ್ತಿರುವ ಪರಿಸ್ಥಿತಿಯಲ್ಲಿರುವ ಪೊಲೀಸರ ಸಂಕಷ್ಟವನ್ನು ನಿವಾರಿಸಬೇಕು. ದೇವರಾಜ್ ಅರಸ್‍ರನ್ನು ನೆನೆಸಿಕೊಂಡಂತೆ ಖಾಕಿ ಕೊನೆಯವರೆಗೆ ಸಿದ್ದರಾಮಯ್ಯನವರಿಗೆ ಋಣಿಯಾಗಿರುತ್ತದೆ.
ಸಣ್ಣಪುಟ್ಟ ಪೊಲೀಸರು ಸಣ್ಣಪುಟ್ಟ ವಸೂಲಾತಿಗಳನ್ನು ಮಾಡುತ್ತಾರೆ. ಕೆಲವರು ಹಿರಿಯ ಅಧಿಕಾರಿಗಳಿಗೆ ವಸೂಲಿ ಮಾಡಿಕೊಡುತ್ತಾರೆ. ಸೆಟ್ಲ್‍ಮೆಂಟ್‍ಗಳನ್ನು ಮಾಡಿಸುತ್ತಾರೆ. ಕೆಲವು ಶಾಪ್‍ಗಳಿಂದ ದೈನಂದಿನ, ವಾರದ, ತಿಂಗಳ ವಸೂಲಾತಿಗಳು ನಡೆಯುತ್ತವೆ. ರಸ್ತೆಬದಿಯ ವ್ಯಾಪಾರಿಗಳಿಂದಲೂ ಸುಲಿಯಲಾಗುತ್ತದೆ. ಇಲ್ಲಿ ಸ್ವಲ್ಪ ಪ್ರಮಾಣದಲ್ಲಿ ಪೊಲೀಸರು ಅತಿರೇಕರೆನಿಸಿಕೊಂಡರೂ, ಆ ವಸೂಲಿಯ ಹಿಂದೆಯೂ ಕಥೆಗಳಿವೆ. ಪೊಲೀಸ್ ಠಾಣೆ ಸಂಭಾಳಿಸಲು, ಬಂಧಿತರನ್ನು ಸಾಕಲು, ವಾಹನದ ಪೆಟ್ರೋಲ್,-ಡಿಸೇಲ್‍ಗೆ ದುಡ್ಡು ಹೊಂದಿಸಲು ಇತ್ಯಾದಿಗಳಿಗಾಗಿ ವಸೂಲಿ ನಡೆಯುತ್ತದೆ. ವಸೂಲಿಯಲ್ಲಿ ಇಂತಿಷ್ಟು ಭಾಗವನ್ನು ಮೇಲಾಧಿಕಾರಿಗಳಿಗೆ ತಲುಪಿಸಿ ಬಂದ ಹಣದಲ್ಲಿ ಎಲ್ಲಾ ಅವಶ್ಯಕತೆ, ಅನಿವಾರ್ಯತೆಗಳನ್ನು ಪೂರೈಸಿಕೊಂಡು- ಕಡೆಗೆ ಉಳಿದ ಹಣವನ್ನು ಹಂಚಿಕೊಳ್ಳುತ್ತಾರೆ. ಇದು ಗುರುತರ ಅಪರಾಧವೆನ್ನುವುದಾದರೇ, ಅದಕ್ಕೆ ಪ್ರಮುಖ ಕಾರಣ ಸರ್ಕಾರವಾಗಿದೆ. ದೇಶದ ವಿಚಾರ ಬಿಡಿ, ರಾಜ್ಯದ ವಿಚಾರದ ಬಗ್ಗೆ ಮಾತ್ರ ಹೇಳುವುದಾದರೇ ಪಕ್ಕದ ಆಂಧ್ರದ ಪೊಲೀಸ್ ಕಾನ್ಸ್‍ಟೇಬಲ್ ಕಡಿಮೆಯೆಂದರೂ 28 ಸಾವಿರ ರೂಪಾಯಿ ಸಂಬಳ ಪಡೆಯುತ್ತಾನೆ. ಮುಖ್ಯ ಪೇದೆಗೆ 38 ರಿಂದ 48 ಸಾವಿರ ಸಂಬಳವಿರುತ್ತದೆ. ಆದರೆ ಇಲ್ಲಿ ಒಬ್ಬ ಕಾನ್ಸ್‍ಟೇಬಲ್‍ನ ಗರಿಷ್ಠ ಸಂಬಳ 18ರಿಂದ 22 ಸಾವಿರ ಮಾತ್ರ. ಒಂದು ಲೋಟ ನೀರು ಕೊಟ್ಟು ಇದರಲ್ಲಿ ಅಡುಗೆ ಮಾಡಿ, ಕುಡಿದು, ಉಳಿದ ನೀರಲ್ಲಿ ಸ್ನಾನ ಮಾಡಿ ಬಾ ಎಂದರೇ ಹೇಗಾಗುತ್ತೆ ಹೇಳಿ..!? ಭ್ರಷ್ಟಚಾರ ನಡೆಯದಿರುತ್ತಾ..?
ಪೊಲೀಸರಿಗೂ ಕುಟುಂಬಗಳಿವೆ. ಅವಶ್ಯಕತೆಗಳಿವೆ. ಮಕ್ಕಳ ಫೀಸ್ ಭರಿಸಬೇಕು. ಹೆಂಡತಿಯ ಇಚ್ಛೆ ಪೂರೈಸಬೇಕು. ಹೆತ್ತವರನ್ನು ನೋಡಿಕೊಳ್ಳಬೇಕು. ಮಕ್ಕಳು, ಸೋದರಿಯರ ಮದುವೆ ಮಾಡಬೇಕು, ಈ ವೃತ್ತಿಯಿಂದ ಬಲವಂತವಾಗಿ ತರಿಸಿಕೊಂಡ ಖಾಯಿಲೆಗಳಿಗೆ ಮದ್ದು ತೆಗೆದುಕೊಳ್ಳಬೇಕು, ಮೂರು ಹೊತ್ತು ಹೊಟ್ಟೆ ಹಸಿಯುತ್ತದೆ, ಊಟ ಮಾಡಲೇಬೇಕು. ಜೀವನದ ಅಷ್ಟೂ ಮಗ್ಗಲುಗಳಲ್ಲಿ ಹೊರಳಬೇಕು. ಸಮಯದ ಪರಿವೆಯಿಲ್ಲದೆ, ಜೀವದ ಹಂಗು ತೊರೆದು ದುಡಿದರೂ ಯಕಃಶ್ಚಿತ್ ತಮ್ಮ ಉದ್ದೇಶಗಳು ಈಡೇರುವುದಿಲ್ಲ. ಇದರ ಜೊತೆಗೆ ದೌರ್ಜನ್ಯಗಳನ್ನು ಸಹಿಸಿಕೊಳ್ಳಬೇಕು. ಇವೆಲ್ಲ ಒಂದು ತಿಂಗಳು, ಒಂದು ವರ್ಷದ ಸಮಾಚಾರವಾದರೇ ಹೇಗೋ ಸಹಿಸಿಕೊಳ್ಳಬಹುದಿತ್ತು. ಹಲವಾರು ದಶಕಗಳಿಂದಲೂ ನಿಲ್ಲದ ದೌರ್ಜನ್ಯ. ಇನ್ನೆಷ್ಟು ತಾನೇ ಸಹಿಸಿಕೊಳ್ಳಲು ಸಾಧ್ಯ..!? ಬೀದಿಗಿಳಿಯದೇ ವಿಧಿಯಿಲ್ಲ. ಆದರೆ ಪೊಲೀಸರು ಕರ್ತವ್ಯಕ್ಕೆ ಗೈರುಹಾಜರಾಗಿ ಬೀದಿಗಿಳಿಯಲು ನಮ್ಮ ಕಾನೂನಿನಲ್ಲಿ ಅವಕಾಶವಿಲ್ಲ. ಸರ್ಕಾರ ಎಸ್ಮಾ ಜಾರಿಮಾಡಿದೆ. ಪ್ರತಿಭಟಿಸುವವರನ್ನು ಕೆಲಸದಿಂದ ಕಿತ್ತುಹಾಕುವ ಬೆದರಿಕೆ ಹಾಕಲಾಗಿದೆ. ಪೊಲೀಸರ ಸಂಕಷ್ಟಗಳಿಗೆ ಧ್ವನಿಯಾದ ಎಕೆಪಿಎಂ ಅಧ್ಯಕ್ಷ ಶಶಿಧರ್‍ನನ್ನು ಬಂಧಿಸಲಾಗಿದೆ. ಆದರೂ ಪ್ರತಿಭಟನೆಯ ಆತಂಕವಂತೂ ಸರ್ಕಾರಕ್ಕಿದ್ದೇ ಇದೆ. ಈ ಬಾರಿ ಎಲ್ಲಾದರೂ ಸರ್ಕಾರಕ್ಕೆ ಹೆದರಿ ಸುಮ್ಮನಾದರೇ ಈ ಜನ್ಮದಲ್ಲಿ ಅವಿರಗಾಗುತ್ತಿರುವ ಅನ್ಯಾಯಕ್ಕೆ ನ್ಯಾಯ ಸಿಗಲು ಸಾಧ್ಯವಿಲ್ಲ. ಆಗಿದ್ದಾಗಲೀ- ಪ್ರತಿಭಟನೆ ನಡೆಸಿಯೇ ಸಿದ್ದ ಎಂದು ಪೊಲೀಸರು ಗಟ್ಟಿನಿರ್ಧಾರ ಮಾಡಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದೇ ಹೋರಾಟದಿಂದ. ಹೋರಾಟಕ್ಕೆ ಅಷ್ಟು ಶಕ್ತಿಯಿದೆ ಎಂದಮೇಲೆ ತಮ್ಮ ಸಮಸ್ಯೆಗಳು ಯಾವ ಲೆಕ್ಕ..! ಇದು ನೊಂದ, ಕಂಬನಿ ಮಿಡಿಯುತ್ತಿರುವ ಪೊಲೀಸರ ಶಪಥವಾಗಿದೆ.
ಪೊಲೀಸರು ಗುಲಾಮರಲ್ಲ. ಇದು ಬ್ರಿಟೀಷರ ಕಾಲವಧಿಯೂ ಅಲ್ಲ. ಎಲ್ಲಾ ಬದಲಾಗಿದೆ. ಅಚ್ಛೇದಿನ್ ಬಾವುಟ ಹಾರಿಸುವ ಪ್ರಯತ್ನವಾಗುತ್ತಿದೆ. ಎಂಥಾ ದುರಂತ ನೋಡಿ. ಜಗತ್ತು, ದೇಶ, ರಾಜ್ಯವನ್ನು ಕಾಯುವ ಪೊಲೀಸರೇ ನ್ಯಾಯ ಕೇಳುವ ಪರಿಸ್ಥಿತಿ ಬಂದಿದೆ. ಅದರಲ್ಲೂ ಕರ್ನಾಟಕದಲ್ಲಿ ಪೊಲೀಸರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಅಷ್ಟಕ್ಕೂ ಅವರು ಆಕಾಶದಲ್ಲಿರುವ ನಕ್ಷತ್ರ ತಂದು ಕೊಡಿ ಎಂದು ಕೇಳುತ್ತಿಲ್ಲ, ಬಂಗಲೆ ಕಟ್ಟಿಸಿಕೊಡಿ ಎನ್ನುತ್ತಿಲ್ಲ, ಓಡಾಡಲು ಆಡಿ ಕಾರು, ಹಾರ್ಲೆ ಡೇವಿಡ್‍ಸನ್ ಬೈಕ್ ಕೇಳುತ್ತಿಲ್ಲ, ಹೋಗ್ಲಿ ಲಕ್ಷಗಟ್ಟಲೆ ಸಂಬಳವನ್ನೂ ಕೇಳುತ್ತಿದ್ದಾರಾ..? ಅದೂ ಇಲ್ಲ. ಅವರ ಬೇಡಿಕೆಯಲ್ಲಿರುವುದು ಇಷ್ಟೇ- ಹಿರಿಯ ಅಧಿಕಾರಿಗಳ ದೌರ್ಜನ್ಯದಿಂದ ಮುಕ್ತಿ ಕೊಡಿ, ಗುಲಾಮಗಿರಿಯನ್ನು ಕೊನೆಗಾಣಿಸಿ, ಮಹಿಳಾ ಸಿಬ್ಬಂದಿಗೆ ಸಮರ್ಪಕ ಶೌಚಾಲಯದ ವ್ಯವಸ್ಥೆ ಮಾಡಿಕೊಡಿ, ಸರಿಸಮಾನಾದ ಮೂಲವೇತನ ಭತ್ಯೆ ನೀಡಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಿ ಒತ್ತಡವನ್ನು ನಿವಾರಿಸಿ, ಕಿತ್ತುಹೋಗಿರುವ ವಸತಿ ಗೃಹಗಳನ್ನು ಸರಿಪಡಿಸಿ, ವೈದ್ಯಕಿಯ ಸೌಲಭ್ಯ, ಗುಣಮಟ್ಟದ ಸಮವಸ್ತ್ರ, ಹೋಸವೇತನ ನೀತಿ ಜಾರಿಯಂತ ಸಣ್ಣಪುಟ್ಟ ಮೂವತ್ತೊಂದು ಬೇಡಿಕೆಗಳನ್ನಿಟ್ಟಿದ್ದಾರಷ್ಟೆ..!! . ಹೋಗ್ಲೀ- ಮೂವತ್ತೊಂದು ಬೇಡಿಕೆಗಳನ್ನು ಸರ್ಕಾರದ ಕೈಲಿ ಪೂರೈಸುವುದಕ್ಕೆ ಆಗುವುದಿಲ್ಲ ಎನ್ನುವುದಾದರೇ ಒಂದಿಪ್ಪತ್ತು ಬೇಡಿಕೆಗಳನ್ನಾದರೂ ಪೂರೈಸಬೇಕಲ್ಲವೇ..!? ಅದುಬಿಟ್ಟು ಎಸ್ಮಾ ಜಾರಿಗೊಳಿಸಿ ಕೆಲಸದಿಂದ ಕಿತ್ತು ಹಾಕ್ತೀವಿ ಅಂತೆಲ್ಲಾ ಹೇಳುವುದೆಲ್ಲಾ ಬೇಕಾಗಿದೆಯಾ..!?
ಇನ್ನು ಪೊಲೀಸರನ್ನು ಹೊಗಳುವುದು, ತೆಗಳುವುದು ಸಾಂದರ್ಭಿಕವಾಗಿ ಮಾಧ್ಯಮಗಳ ಹೊಣೆ. ಆದರೆ ಯಾವತ್ತಿಗೂ ಅವರ ಬದುಕಿನ ಆಳವನ್ನು ಹೊಕ್ಕಿ ನಾವು ನೋಡಲಿಲ್ಲ. ಹಾಗಾಗಿಯೇ ಹಲವು ಪೊಲೀಸರ ಕಣ್ಣ ಹನಿಗಳು ಆರಿಹೋಗುತ್ತಲೇ ಇರುತ್ತವೆ. ನಮ್ಮ ಕರ್ತವ್ಯವೂ ಬಹಳಷ್ಟಿದೆ. ಅದನ್ನು ನಾವು ಮಾಡಬೇಕು. ಆ ಕಾರಣಕ್ಕೆ ನಾವು ಇವತ್ತು ಪೊಲೀಸರ ಅಳಲಿಗೆ ಸಾಥ್ ಕೊಡುತ್ತಿದ್ದೇವೆ. ಅವರ ನೋವಿಗೆ ಧ್ವನಿಯಾಗುತ್ತಿದ್ದೇವೆ. ಮೊದಲೇ ಹೇಳಿದಂತೆ ಅವರು ಆರಕ್ಷಕರು. ನಮ್ಮ ರಕ್ಷಣೆಗೆ ನಿಂತವರು. ಹೈವೆಯಲ್ಲಿ ಧುತ್ತನೆ ಎದುರಾಗೋ ಹಂಪ್ಸ್‍ಗಳಂತೆ ಅವರೂ ತಪ್ಪುಗಳನ್ನು ಮಾಡುತ್ತಾರೆ. ಹಾಗಂತ ಅವರನ್ನು ಮನುಷ್ಯರಂತೆ ನೋಡದಿರುವುದು ಸರಿಯಲ್ಲ. ನಮ್ಮಂತೆ ಅವರಿಗೂ ಬದುಕಿದೆ, ಬದುಕುವ ಹಕ್ಕಿದೆ. ಅವರ ಪ್ರತಿಭಟನೆಗೆ ಸಾಥ್ ಕೊಟ್ಟು ಸರ್ಕಾರದ ಕಿವಿಹಿಂಡುವ ಕೆಲಸ ಮಾಡಬೇಕಿದೆ. ಸರ್ಕಾರ ಪ್ರಾಕ್ಟಿಕಲ್ ಆಗಿ ಯೋಚಿಸಬೇಕು. ರಾಜ್ಯವನ್ನು ನೆಮ್ಮದಿಯಿಂದಿಟ್ಟವರನ್ನು ನೆಮ್ಮದಿಯಿಂದಿಡಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.
ರಾಕ್ಷಸರನ್ನು ಸಂಹರಿಸಲು ಒಮ್ಮೊಮ್ಮೆ ದೇವರಿಗೆ ಕಷ್ಟವಾಗಿತ್ತಂತೆ. ಇನ್ನು ಜಗತ್ತಿನ ಎಲ್ಲಾ ಅಪರಾಧಗಳನ್ನು ತಡೆಯಲು ಪೊಲೀಸರಿಂದ ಆಗುತ್ತಾ..? ಇವತ್ತು ನಾವು ನೆಮ್ಮದಿಯಿಂದ, ಆರಾಮಾಗಿ ಬದುಕುತ್ತಿದ್ದೇವೆ ಅಂದರೇ ಅದಕ್ಕೆ ಕಾರಣ ಪೊಲೀಸರು. `ಬಿಡ್ರೀ.. ಅವರಿಗೆ ಸರ್ಕಾರ ಸಂಬಳ ಕೊಡುತ್ತೆ, ಅವರ ಡ್ಯೂಟಿ ಅವರು ಮಾಡ್ತಾರೆ’ ಎಂಬ ಉಢಾಫೆಯ ಮಾತುಗಳು, ಮನಃಸ್ಥಿತಿಗಳು ನಿಮ್ಮಲಿದ್ರೇ ಮೊದಲು ಅದನ್ನು ಬಿಟ್ಟುಬಿಡಿ. ಸಮಸ್ಯೆಗಳು ಆವರಿಸಿದಾಗಲೇ ಪೊಲೀಸರ ಬೆಲೆ ಗೊತ್ತಾಗಲು ಸಾಧ್ಯ..!? ಸರ್ಕಾರ ಸಂಬಳ ಕೊಡೋದು ಅವರ ಹೊಟ್ಟೆ, ಬಟ್ಟೆ, ಜೀವನಕ್ಕೆ- ಅದೂ ಸಾಲುತ್ತಿಲ್ಲ. ಹಾಗಿದ್ದೂ ಅವರು ಪ್ರಾಣ ಒತ್ತೆಯಿಟ್ಟು ನಮ್ಮ ರಕ್ಷಣೆಗೆ ನಿಲ್ಲುತ್ತಾರೆ. ದೇಶದ ಗಡಿ ಕಾಯುವ ಸೈನಿಕರಿಗೂ ಇವರಿಗೂ ಅಂತಹ ವ್ಯತ್ಯಾಸವೇನಿಲ್ಲ. ಅವರು ದೇಶದ ಗಡಿಯನ್ನು ಕಾಯುತ್ತಾರೆ. ಇವರು ದೇಶದ ಒಳಗಿನ ಜನರ ಸಮಸ್ಯೆಗಳಿಗೆ ಪರಿಹಾರವಾಗುತ್ತಾರೆ.
ಎಲ್ಲಾ ಪೊಲೀಸರು ಕೆಟ್ಟವರಲ್ಲ. ಎಲ್ಲಾ ರಾಜಕಾರಣಿಗಳು, ಪತ್ರಕರ್ತರು, ವಕೀಲರು, ಜನಸಾಮಾನ್ಯರು ಒಳ್ಳೆಯವರಲ್ಲ. ಮನುಷ್ಯರು ಅಂದಮೇಲೆ ದೌರ್ಬಲ್ಯ, ಅವಶ್ಯಕತೆಗಳು ಇರುತ್ತವೆ. ಯಾರೋ ಕೆಲ ಪೊಲೀಸರು ಲಂಚ ತೆಗೆದುಕೊಂಡರು, ಅಸಭ್ಯವಾಗಿ ವರ್ತಿಸಿದರು ಎಂದಕೂಡಲೇ ಇಡೀ ಪೊಲೀಸ್ ಇಲಾಖೆಯನ್ನು ಭ್ರಷ್ಟರು, ಹಾದಿಬಿಟ್ಟವರು ಎಂದು ಕರೆಯುವುದು, ಪರಮಪಾಪಿಗಳಂತೆ ನೋಡುವುದು ಸರಿಯಲ್ಲ. ಕಷ್ಟ ಎಂದವರಿಗೆ ತಮ್ಮ ಜೇಬಿನಿಂದ ಹಣ ಕೊಟ್ಟ ಪೊಲೀಸರೂ ಇದ್ದಾರೆ, ನ್ಯಾಯ ಕೇಳಲು ಹೋದವರ ಜೇಬಿಗೆ ಕತ್ತರಿಹಾಕಿದ ಪೊಲೀಸರೂ ಇದ್ದಾರೆ. ಒಟ್ಟಿನಲ್ಲಿ ನಮ್ಮನ್ನು ಕಾಯುವವರ ಕೂಗಿಗೆ ಜನಸಾಮಾನ್ಯರು ಧ್ವನಿಯಾಗಬೇಕು. ಮುಂದೊಂದು ದಿನ ಬೆಂಬಲಕ್ಕೆ ನಿಂತ ಜನಸಾಮಾನ್ಯರಿಗೆ ಈ ಪೊಲೀಸರು ಋಣಿಯಾಗಿರುತ್ತಾರೆ. ನಾಳೆ `ನಾವು ಅವತ್ತು ನಿಮ್ಮ ಬೆಂಬಲಕ್ಕೆ ನಿಂತಿದ್ದೆವು, ಈಗ ನಮ್ಮ ಕೆಲಸ ಮಾಡಿಕೊಡಿ’ ಎಂದು ಗಟ್ಟಿ ಧ್ವನಿಯಲ್ಲಿ ಕೇಳುವ ಅಧಿಕಾರ ನಮಗೆ ಬರುತ್ತದೆ.
POPULAR STORIES :
ಐದು ಕೋಟಿ ಡೀಲ್ ರಹಸ್ಯ..! ಬೆಕ್ಕು ಕಣ್ಣು ಬಿಟ್ಟು ಹಾಲು ಕುಡಿದಿದೆ..!?
ಚರ್ಚ್ ಮೆಟ್ಟಿಲಿನ ಮೇಲೆ ಸೆಕ್ಸ್ ಮಾಡುವಂತಿಲ್ಲ..! ನಾಯಿಯನ್ನು ತಮಾಷೆ ಮಾಡಿದ್ರೇ ಜೈಲೂಟ ಫ್ರೀ..!!
ಮದ್ವೆಯಾದವ್ರು ಒಂದು ಗ್ಲಾಸ್‍ಗಿಂತ ಹೆಚ್ಚು ವೈನ್ ಸೇವಿಸುವಂತಿಲ್ಲ..! ಬಬಲ್ ಗಮ್ ಅಗಿದರೇ ಶಿಕ್ಷೆ ಗ್ಯಾರಂಟಿ..!
ನಮ್ಮ ಕ್ರಿಕೆಟರ್ಸ್ ಎಷ್ಟು ಸಂಬಳ ಪಡಿತಾರೆ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ..
ತಮಾಷೆ ಮಾಡಲು ಹೋಗಿ ಗುಂಡಿಟ್ಟು ಕೊಂದೇಬಿಟ್ಟ..! ಸಿಸಿಟಿವಿಯಲ್ಲಿ ಸೆರೆಯಾಯ್ತು ಲೈವ್ ಮರ್ಡರ್..!
ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!