ಪ್ರಜ್ಞಾ ಭಟ್, ನಮ್ ಕಡೆಯವರು…! ಆದ್ರೂ ನಾವಿಬ್ಬರೂ ಇಷ್ಟುದಿನ ಪರಿಚಿತರಾಗಿರ್ಲಿಲ್ಲ….! ಫೇಸ್ ಬುಕ್ ನಲ್ಲಿ ನಾವು ಯಾವಾಗ ಫ್ರೆಂಡ್ಸ್ ಆದ್ವಿ ಅನ್ನೋದು ಗೊತ್ತಿಲ್ಲ. ಯಾವತ್ತೋ ಫ್ರೆಂಡ್ಸ್ ಆಗಿದ್ದೀವಿ. ಆದ್ರೆ ಅವ್ರು ಏನ್ ಮಾಡ್ತಿದ್ದಾರೆ ಅಂತ ನಂಗೆ ಗೊತ್ತಿರ್ಲಿಲ್ಲ…! ನನ್ ಪರಿಚಯ ಅವರಿಗಿರ್ಲಿಲ್ಲ.
ಹೀಗೆ ನಿನ್ನೆ ಫೇಸ್ ಬುಕ್ ನೋಡ್ತೀರುವಾಗ ನಮ್ಮ ‘ಟ್ರೋಲ್ ತೀರ್ಥಹಳ್ಳಿ’ ಪೇಜಲ್ಲಿ ಒಂದು ಪೋಸ್ಟ್ ನೋಡ್ದೆ…
“ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿರುವ ಮಾಂಗಲ್ಯಂ ತಂತು ನಾನೇನ ಧಾರವಾಹಿಯಲ್ಲಿ ಅಭಿನಯಿಸುತ್ತಿರುವ ನಮ್ಮ ಮಲ್ನಾಡ್ ಪ್ರತಿಭೆ ಜಯಪುರದ ತೆಂಗಿನಮನೆಯ ‘ಪ್ರಜ್ಞಾಭಟ್’ ರವರಿಗೆ ಶುಭಾಶಯಗಳು!! ” ಅನ್ನೋ ಪೋಸ್ಟ್ ಅದಾಗಿತ್ತು…!
ಪ್ರಜ್ಞಾಭಟ್ ಎಂಬ ಹೆಸರಿನ ಮೇಲೆ ಕ್ಲಿಕ್ ಮಾಡಿದೆ. ಅವರ ಎಫ್ ಬಿ ಮುಖಪುಟ ತೆರೆದುಕೊಳ್ತು. ಹ್ಞೂಂ…ಓಹೋ ಫ್ರೆಂಡ್ಸ್ ಆಗಿದ್ದೀವಿ ಅನ್ಕೊಂಡು ಸುಮ್ಮನಾದೆ.
ಯಾರು ಏನೇ ಹೇಳಿದ್ರು, ಪ್ರತಿಯೊಬ್ಬರಿಗೂ ನಮ್ ಊರು, ನಮ್ ಊರವರು ಅಂದ್ರೆ ಏನೋ ಒಂಥರಾ ಖುಷಿ ಇರುತ್ತಲ್ಲ…ನಂಗೂ ನಮ್ ಟ್ರೋಲ್ ತೀರ್ಥಹಳ್ಳಿ ಪೇಜಲ್ಲಿ ನಮ್ ಬದಿಯ ಈ ಹುಡ್ಗಿ ಫೋಟೊ ನೋಡಿ ಹೆಮ್ಮೆ ಎನಿಸಿತು.
ಇವತ್ತು ಬೆಳಗ್ಗೆ ಪ್ರಜ್ಞಾಭಟ್ ಅವರನ್ನು ಕಾಂಟೆಕ್ಟ್ ಮಾಡಿದೆ. ಅವರ ಮಾತಲ್ಲಿ ಪಕ್ಕಾ ಮಲೆನಾಡ ಹೆಣ್ಣಿನ ನಯ, ವಿನಯ, ಮುಗ್ಧತೆ, ಪ್ರೀತಿ, ಸಂಕೋಚ ಎಲ್ಲವೂ ಇತ್ತು. ಒಬ್ರನ್ನೊಬ್ರು ಪರಿಚಯ ಮಾಡ್ಕೊಂಡ್ವಿ.
ಎಷ್ಟೋ ದಿನದಿಂದ ಅನ್ಕೊತ್ತಿದ್ದೀನಿ ಯುವ ಕಲಾವಿದರ ಕಿರುಪರಿಚಯವನ್ನು ಮಾಡಿಕೊಡೋಣ ಅಂತ. ಅದಕ್ಕೆ ಕಾಲ ಕೂಡಿ ಬಂದಿರ್ಲಿಲ್ಲ. ಕಿರುತೆರೆ, ಬೆಳ್ಳಿತೆರೆಗೆ ಕಾಲಿಟ್ಟಿರೋ ಯುವ ಕಲಾವಿದರ ಬಗ್ಗೆ, ಕಾಲಿಡಲು ತಯಾರಿ ನಡೆಸ್ತಿರೋರ ಬಗ್ಗೆ ಲೇಖನ ಬರೆಯೋಣ ಅಂತಿದ್ದೀನಿ…ನಿಮ್ಮಿಂದಲೇ ಈ ಸರಣಿ ಶುರು ಮಾಡ್ತೀನಿ ಅಂದೆ.
‘ನಂದಿನ್ನೂ ಫಸ್ಟ್ ಸೀರಿಯಲ್. ಇನ್ನೂ ಕಲೀತಾ ಇದ್ದೀನಿ. ಇಷ್ಟು ಬೇಗ ಏಕೆ ಎನ್ನುವ ಸಹಜ ಪ್ರಶ್ನೆ ಅವರಿಂದ ಬಂತಾದರೂ…ನಾನು ಬಿಡಬೇಕಲ್ಲ…!? ಅವರ ಬಗ್ಗೆ ಸಾಧ್ಯವಾದಷ್ಟು ತಿಳಿದುಕೊಂಡೆ.
ಸರಿ, ಪೀಠಿಕೆ ಜಾಸ್ತಿ ಆಯ್ತೇನೋ…? ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ…ಬೈಯ್ಕೋ ಬೇಡಿ…ಈಗ ಪ್ರಜ್ಞಾ ಅವರ ಬಗ್ಗೆ ಹೇಳ್ತೀನಿ ಕೇಳಿ….ಕ್ಷಮಿಸಿ ಓದಿ…
ಪ್ರಜ್ಞಾಭಟ್ , ಮಲ್ನಾಡ ಹುಡ್ಗಿ ಈಗ ಬಣ್ಣದ ಲೋಕದ ಬೆಡಗಿ..! ಮಲೆನಾಡಿನ ಸಾಕಷ್ಟು ಮಂದಿ ಬಣ್ಣದ ಲೋಕದಲ್ಲಿ ಛಾಪು ಮೂಡಿಸಿದ್ದಾರೆ, ಮೂಡಿಸುತ್ತಿದ್ದಾರೆ. ಅವರುಗಳ ಸಾಲಿಗೆ ಈಗ ಪ್ರಜ್ಞಾ ಸೇರಿದ್ದಾರೆ.
ಪ್ರಜ್ಞಾ ಅವರು ಕಲಾವಿದ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ತರಗತಿಗಳಿಗೆ ಹೋಗಿ ನಟನೆ ಕಲಿತವರಲ್ಲ…! ತನ್ನಷ್ಟಕ್ಕೆ ತಾನೇ ಅಭ್ಯಾಸ ಮಾಡಿಕೊಂಡು , ಕಿರುತೆರೆಗೆ ಪಾದಾರ್ಪಣೆ ಮಾಡುವಲ್ಲಿ ಗೆದ್ದಿರೋ ಚೆಲುವೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಬಳಿಯ ತೆಂಗಿನಮನೆ ಎಂಬ ಪುಟ್ಟ ಊರಿನ ಕುವರಿ ಪ್ರಜ್ಞಾ.
ಇವರ ತಂದೆ ಕಳಶೇಶ್ವರ ಭಟ್, ತಾಯಿ ಭಾಗ್ಯ ಜ್ಯೋತಿ. ಪ್ರತೀಕ್ ಭಟ್ ಪ್ರಜ್ಞಾ ಅವರ ಮುದ್ದಿನ ತಮ್ಮ. ಅಮ್ಮ ಭಾಗ್ಯ ಜ್ಯೋತಿ ಲೇಖಕಿ. ನಂದಾದೀಪ ಕಳಸಪುರಾ ಎಂಬ ಕಾವ್ಯನಾಮದೊಂದಿಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ.
ಜಯಪುರದಲ್ಲಿ ತಂದೆ ಕಳಶೇಶ್ವರ ಭಟ್ಟರು ನಡೆಸುತ್ತಿರೋ ಕ್ಯಾಂಟಿನ್ ಪ್ರಜ್ಞಾ ಅವರ ಕುಟುಂಬಕ್ಕೆ ಆಧಾರ. ಕೂಳೂರಿನ ಕ್ರಿಸ್ತಪ್ರಭ ಕಾನ್ವೆಂಟ್ ನಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಬಿಜಿಎಸ್ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರೌಢಶಿಕ್ಷಣವನ್ನು, ಬಾಳೆಹೊನ್ನೂರಿನ ಬಿಜಿಎಸ್ ಕಾಲೇಜಲ್ಲಿ ಪದವಿಪೂರ್ವ ಶಿಕ್ಷಣವನ್ನು, ಶೃಂಗೇರಿಯ ಜೆಸಿಸಿಬಿಎಂ ಕಾಲೇಜಲ್ಲಿ ಬಿಕಾಂಪದವಿ ಪೂರೈಸಿರೋ ಪ್ರಜ್ಞಾ ಅವರು ಈಗ ನಟನೆಯ ಜೊತೆ ಜೊತೆಗೇನೆ ಕುವೆಂಪು ವಿವಿಯಲ್ಲಿ ಎಂಕಾಂ ವ್ಯಾಸಂಗಮಾಡ್ತಿದ್ದಾರೆ.
ಚಿಕ್ಕಂದಿನಿಂದಲೂ ನಟನೆ, ನೃತ್ಯ, ಗಾಯನದಲ್ಲಿ ಇವರಿಗೆ ಸಿಕ್ಕಾಪಟ್ಟೆ ಆಸಕ್ತಿ. ಸಖತ್ತಾಗಿ ಡ್ಯಾನ್ಸ್ ಮಾಡ್ತಾರೆ, ಯಾವ ಡ್ಯಾನ್ಸ್ ಕ್ಲಾಸ್ ಗೆ ಹೋದವರಲ್ಲ…! ಫ್ಯಾಷನ್ ಶೋ ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಆದ್ರೆ ಸರಿಯಾಗಿ ಬ್ಯೂಟಿಪಾರ್ಲರ್ ಗೂ ಹೋದವರಲ್ಲ…!
ಅಭಿನಯವನ್ನು ಬದುಕಾಗಿಸಿಕೊಳ್ಳಬೇಕು ಎಂಬ ಆಸೆ ಮೊದಲಿನಿಂದಲೂ ಇವರಿಗಿತ್ತು. ಆದ್ರೆ, ಅಪ್ಪ-ಅಮ್ಮಗೆ ಒಬ್ಬಳೆ ಮಗಳನ್ನು ದೂರ ಕಳಿಸೋಕೆ ಭಯ. ಒಬ್ಳೆ ಹೇಗಿರ್ತಾಳೆ ಅನ್ನೋದು ಅವರ ಆತಂಕ.
ಡಿಗ್ರಿ ಮುಗಿದ ಮೇಲೆ ಬಾಳೆಹೊನ್ನೂರಲ್ಲಿ ಒಂದ್ ಕಡೆ ಅಕೌಂಟೆಂಟ್ ಆಗಿ ಕೆಲಸ ಮಾಡಲಾರಂಭಿಸಿದ್ರು. ಶನಿವಾರ ಸಂಜೆ ಬೆಂಗಳೂರು ಬಸ್ ಹತ್ತಿ ಭಾನುವಾರ ಆಡಿಶನ್ ನಲ್ಲಿ ಭಾಗವಹಿಸ್ತಿದ್ರು. ಹೀಗೆ ಅದೆಷ್ಟೋ ತಿಂಗಳು ಊರಿಗೂ ರಾಜಧಾನಿಗೂ ಅಲೆದಾಡಿದ್ರು.
ಉದಯ ಟಿವಿಯಲ್ಲಿ ದೇವಯಾನಿ ಮತ್ತು ಕಾನ್ವೆಂಟ್ ಎಂಬ ಧಾರವಾಹಿಗಳಲ್ಲಿ ನಟಿಸೋ ಅವಕಾಶ ಸ್ವಲ್ಪದರಲ್ಲೇ ಮಿಸ್ ಆಯ್ತು. ಕೊನೆಗೆ ಈಗ ಕಲರ್ಸ್ ಸೂಪರ್ ವಾಹಿನಿಯಲ್ಲಿ ‘ಮಾಂಗಲ್ಯಂ ತಂತುನಾನೇನ’ ಧಾರವಾಹಿಯಲ್ಲಿ ನಟಿಸುವ ಅವಕಾಶ ಪ್ರಜ್ಞಾ ಅವರದ್ದಾಗಿದೆ.
ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಪ್ರಸಾರವಾಗುವ ಈ ಧಾರವಾಹಿಯಲ್ಲಿ ನಾಯಕಿ ಶ್ರಾವಣಿಯ ತಂಗಿ ಪಾವನಿ ಪಾತ್ರದಲ್ಲಿ ಪ್ರಜ್ಞಾ ಕಾಣಿಸಿಕೊಳ್ತಿದ್ದಾರೆ.
ಡೈರೆಕ್ಟರ್ ರಘುಚರಣ್, ಸ್ಕ್ರೀನ್ ಪ್ಲೇ ಡೈರೆಕ್ಟರ್ ಯಶವಂತ್ ಪಾಂಡು ಸೇರಿದಂತೆ ಇಡೀ ತಂಡ ಒಳ್ಳೆಯ ಪ್ರೋತ್ಸಾಹ ನೀಡ್ತಿದ್ದಾರೆ ಅಂತಾರೆ ಪ್ರಜ್ಞಾ.
ಮಿಸ್ಟರ್ ಮಧುಮಗ, ಮರೆಯದೆ ಕ್ಷಮಿಸು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ.
ಅಪ್ಪ-ಅಮ್ಮ, ತಮ್ಮ ರಿಲೇಟೀವ್ಸ್ , ಫ್ರೆಂಡ್ಸ್ ಎಲ್ರಿಗೂ ಖುಷಿಯಾಗಿದೆ. ಮಾತಾಡ್ದೆ ಇದ್ದೋರೆಲ್ಲಾ ಈಗ ಮಾತಾಡಿಸ್ತಿದ್ದಾರೆ. ಜೆಸಿಬಿಎಂ ಕಾಲೇಜು ನಂಗೊಂದು ಒಳ್ಳೆಯ ವೇದಿಕೆ ಕಲ್ಪಿಸಿಕೊಟ್ಟಿತು ಎನ್ನುವ ಪ್ರಜ್ಞಾ ಅವರ ದನಿಯಲ್ಲಿ ಸಾರ್ಥಕತೆಯ ಭಾವವಿದೆ, ಬೆಳೆಯಬೇಕೆಂಬ ದೊಡ್ಡ ಕನಸಿದೆ, ಏನಾದರೂ ಸಾಧಿಸಿಯೇ ಸಾಧಿಸ್ತೀನಿ ಎನ್ನುವ ಛಲವಿದೆ.
ಕಾಯಿನ್ ಕಲೆಕ್ಷನ್, ಡ್ರಾಯಿಂಗ್, ಕಾಸ್ಟ್ಯೂಮ್ ಡಿಸೈನಿಂಗ್ ಇವರ ಹವ್ಯಾಸ. ಕರಾಟೆ ಕ್ವೀನ್ ಕೂಡ ಹೌದು…! ಕರಾಟೆಯಲ್ಲಿ ನಾನಾ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಟೇಕ್ವಾಂಡೋ ( Taekwondo) ದಲ್ಲಿ ಗ್ರೀನ್ ಬೆಲ್ಟ್. ಎನ್ ಸಿಸಿಯಲ್ಲಿ ಸಹ ಇದ್ದರು.
2016 ರಲ್ಲಿ ಮಿಸ್ ಕರ್ನಾಟಕ ಖ್ಯಾತಿ ಇವರದ್ದಾಗಿತ್ತು. ಮಲ್ನಾಡ್ ಸುಂದರಿ, ಮಿಸ್ ಕಾಫಿಸಿಟಿ ಎಂಬ ಕಿರೀಟ ಕೂಡ ಇವರ ಮುಡಿಗೇರಿದೆ. ಡ್ಯಾನ್ಸ್ ನಲ್ಲೂ ಸಾಕಷ್ಟು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಅಪ್ಪಟ ಮಲೆನಾಡಿನ ಪ್ರತಿಭೆ ಪ್ರಜ್ಞಾ ಅವರೇ ಹೇಳುವಂತೆ, ಕಾರ್ಯಕ್ರಮಗಳಿಗೆ, ಪರೀಕ್ಷೆಗೆ,ಸಂಬಂಧಿಕರ ಮನೆಗಂತ ಕೆಲವೊಮ್ಮೆ ಬೆಂಗಳೂರಿಗೆ ಬರ್ತಿದ್ದರಷ್ಟೇ. ಈಗ ಇವರಿಗೆ ಎಲ್ಲವೂ ಹೊಸತು ಎನಿಸುತಿದೆ.
ಪೋಷಕರ, ಸ್ನೇಹಿತರರ ಸಪೋರ್ಟ್ ನಿಂದ ಬಣ್ಣದ ಲೋಕದಲ್ಲಿ ಮಿಂಚುವ ಭರವಸೆಯೊಂದಿಗೆ ಅಭಿನಯ ಆರಂಭಿಸಿದ್ದಾರೆ. ಸ್ನೇಹಿತರಾದ ಲಕ್ಷ್ಮೀ, ಗೌರಿಪಾಂಡು, ರಶ್ಮಿ ಹಾಗೂ ಸ್ನೇಹ ಅವರು ಮಾಡಿದ ಸಪೋರ್ಟ್ ಯಾವತ್ತೂ ಮರೆಯಕ್ಕಾಗಲ್ಲ ಎನ್ನುತ್ತಾರೆ ಪ್ರಜ್ಞಾ.
ನಿನ್ನಿಂದ ಏನೂ ಆಗಲ್ಲ ಎಂದು ಹೇಳಿದವರು ಇವತ್ತು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ…!
ಪ್ರಜ್ಞಾ ಅವರು ಸಾಧಿಸಬೇಕಿರುವುದು ಬಹಳಾ ಇದೆ ನಿಜ. ಆದರೆ ಸಾಧಿಸಿಯೇ ಸಾಧಿಸುತ್ತಾರೆ. ಮುಂದೊಂದು ದಿನ ಬೆಳ್ಳಿತೆರೆಯಲ್ಲಿ ಮಿಂಚುತ್ತಾರೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಪ್ರಜ್ಞಾ ಅವರೇ ಶುಭವಾಗಲಿ…ಎತ್ತರಕ್ಕೆ ಬೆಳೀರಿ ಎಂದು ಹಾರೈಸೋಣ…
-ಶಶಿಧರ್ ಎಸ್ ದೋಣಿಹಕ್ಲು