ಇವರು ಚಳುವಳಿ ಹಿನ್ನೆಲೆಯಿಂದ ಬಂದವರು. ಹೋರಾಟವೇ ಇವರ ಬದುಕಾಗಿತ್ತು. ಹೀಗಿರುವಾಗ ನಿರೀಕ್ಷತವೋ, ಅನಿರೀಕ್ಷತವೋ ಮಾಧ್ಯಮ ಲೋಕ ಇವರನ್ನು ತನ್ನತ್ತ ಸೆಳೆಯಿತು. ನಿರೂಪಕಗಾಗಿ ವೃತ್ತಿ ಬದುಕು ಕಟ್ಟಿಕೊಂಡ ಇವರೀಗ ಜನಸೇವೆಗೆ ಮುಂದಾಗಿದ್ದಾರೆ.
ನಾವಿಂದು ಪರಿಚಯಿಸಿ ಕೊಡುತ್ತಿರುವ ಈ ನಿರೂಪಕ ಇನ್ಮುಂದೆ ಜನನಾಯಕ. ಟಿವಿ ಪರದೆಯಲ್ಲಿ ನಿರೂಪಕರಾಗಿ ಕಾಣುತ್ತಿದ್ದವರು ವಿಧಾನಸೌಧ ಪ್ರವೇಶಿಸಿ ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ..! ಇವರೇ ರಾಘವೇಂದ್ರ ಗಂಗಾವತಿ.
ಹೌದು, ನೀವು ಉದಯ ಟಿವಿಯ ಮಾಜಿ ನ್ಯೂಸ್ ರೀಡರ್ ರಾಘವೇಂದ್ರ ಗಂಗಾವತಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಿದ್ಧಾಪುರದಲ್ಲಿ ಹುಟ್ಟಿದ ಇವರು ಬೆಳೆದಿದ್ದು ಬೂದುಗುಂಪ ಎಂಬ ಗ್ರಾಮದಲ್ಲಿ. ತಂದೆ ವೇಣುಗೋಪಾಲ್ ಹಾಗೂ ತಾಯಿ ರಂಗೂಬಾಯಿ ಇಬ್ಬರೂ ವೃತ್ತಿಯಲ್ಲಿ ಶಿಕ್ಷಕರು. ಪತ್ನಿ ಪ್ರೀಯಾಂಕ. ಮದನ್ ಮತ್ತು ಮಧುಶ್ರೀ ಮುದ್ದಿನ ಮಕ್ಕಳು.
ರಾಘವೇಂದ್ರ ಗಂಗಾವತಿ ಅವರು ಸಿದ್ದಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಕಾರಟಗಿಯಲ್ಲಿ ಪ್ರೌಢಶಿಕ್ಷಣವನ್ನು ಪಡೆದರು. ನಂತರ ಶಾಪುರ್‍ದಲ್ಲಿ ಪಿಯುಸಿ ಮುಗಿಸಿದರು. ಈ ವೇಳೆಯಲ್ಲೇ ಅಂದರೆ, ಪಿಯುಸಿ ಓದುವಾಗಲೇ ಸದ್ದಿಲ್ಲದಂತೆ ಮಾಧ್ಯಮ ಕ್ಷೇತ್ರಕ್ಕೆ ಪ್ರವೇಶಿಸಿದ್ದರು…! ಉದಯ ಟಿವಿಯ ಕ್ರೈಂ ಸ್ಟೋರಿ ಕಾರ್ಯಕ್ರಮಕ್ಕೆ ಬಾಲಕೃಷ್ಣ ಕಾಕತ್ಕರ್ ಜೊತೆ ಕೆಲಸ ಮಾಡುತ್ತಾ ಮಾಧ್ಯಮದ ಅ, ಆ, ಇ, ಈ ಕಲಿಯಲಾರಂಭಿಸಿದ್ರು.
ನಂತರ ಕುವೆಂಪು ವಿವಿ ದೂರಶಿಕ್ಷಣದಲ್ಲಿ ಬಿಎ ಪದವಿ ಪಡೆದರು. ಈ ನಡುವೆ ಚಳುವಳಿಗಳಲ್ಲಿ ಭಾಗಹಿಸಿದ್ದರು. ಕಳಸಾ ಬಂಡೂರಿ, ಮಹಾದಾಯಿ ಹೋರಾಟ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ನಡೆದ ಹೋರಾಟ, ಹೈದರಾಬಾದ್ ಕರ್ನಾಟಕಕ್ಕಾಗಿ ಆರ್ಟಿಕಲ್ 371ಜಾರಿಯಾಗಬೇಕೆಂದು ಒತ್ತಾಯಿಸಿ ನಡೆಸಿದ ಹೋರಾಟ, ರೈಲ್ವೆಯಲ್ಲಿ ಕನ್ನಡಿಗರಿಗೆ ಕೆಲಸ ಸಿಗಬೇಕೆಂದು ಆಗ್ರಹಿಸಿ ನಡೆಸಿದ ಹೋರಾಟ, ಸರೋಜಿನಿ ಮಹಿಷಿ ವರದಿ ಯಥಾವತ್ತಾಗಿ ಜಾರಿಗೆ ಆಗ್ರಹ, ರಾಜ್ಯದಲ್ಲಿ ಲಾಟರಿ ನಿಷೇಧಕ್ಕೆ ಆಗ್ರಹ, ಕಾವೇರಿ ಹೋರಾಟ ಸೇರಿದಂತೆ ಅನೇಕ ಕನ್ನಡಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು.
ಭಾರತೀಯ ವಿದ್ಯಾಭವನದಲ್ಲಿ ಆ್ಯಂಕರ್ ಕೋರ್ಸ್ ಮುಗಿಸಿದ ಇವರಿಗೆ ಉದಯ ಟಿವಿಯ ಬಾಗಿಲು ತೆರೆಯಿತು. ಚಳುವಳಿ ಹಿನ್ನೆಲೆಯಿಂದ ಬಂದ ರಾಘವೇಂದ್ರ ಗಂಗಾವತಿ 2009ರಲ್ಲಿ ನ್ಯೂಸ್ ರೀಡರ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ರು.
8ವರ್ಷಗಳ ಕಾಲ ಉದಯ ಟಿವಿಯಲ್ಲಿ ಅನೇಕ ಪ್ಯಾನಲ್ ಡಿಸ್ಕಷನ್‍ಗಳನ್ನು ನಡೆಸಿಕೊಟ್ಟಿದ್ದಾರೆ. ಕ್ರೈಂ ಸ್ಟೋರಿ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ, ಇತರೆ ವಾಹಿನಿಗಳ ಕೆಲವೊಂದು ಕಾರ್ಯಕ್ರಮಗಳಿಗೆ ಕಂಠದಾನ ಮಾಡಿದ್ದಾರೆ…! ಉದಯ ಟಿವಿಯಲ್ಲಿ ತೆರೆಮರೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಕಟ್ಟಿಕೊಟ್ಟಿದ್ದರು. ನೂರಾರು ವೇದಿಕೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಕೆಲವೊಂದು ಸಿನಿಮಾಗಳಿಗೆ ನಿರೂಪಕನಾಗಿಯೇ ಬಣ್ಣಹಚ್ಚಿದ್ದಾರೆ.
ಭಾರತೀಯ ವಿದ್ಯಾಭವನ ಸೇರಿದಂತೆ ನಾನಾ ಕಾಲೇಜುಗಳಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಅತಿಥಿ ಉಪನ್ಯಾಸಕರಾಗಿ ನಿರೂಪಣೆ ತರಬೇತಿ ನೀಡಿದ್ದಾರೆ. 2006ರಲ್ಲಿ ಉತ್ತರ ಕರ್ನಾಟಕ ಭಾಗದ ಮಗುವಿನ ಮೇಲೆ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರ ಯತ್ನ ನಡೆದಾಗ ಆರೋಪಿಗಳಿಗೆ ಕಾನೂನು ಶಿಕ್ಷೆ ಆಗಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿ, ಶಿಕ್ಷೆ ಆಗುವಂತೆ ನೋಡಿಕೊಂಡಿದ್ದರು. ಭಿಕ್ಷೆ ಬೇಡುತ್ತಿದ್ದ ಅಂಧರಿಗೆ ಸ್ವಾಭಿಮಾನದಿಂದ ಬದುಕಲು ದಾರಿ ರೂಪಿಸಿಕೊಟ್ಟಿದ್ದಾರೆ. ವಿಶೇಷಚೇತನರಿಗೆ ಉಪಯುಕ್ತ ಸಲಕರಣೆಗಳನ್ನು ನೀಡಿರುವುದು ಸೇರಿದಂತೆ ವೃತ್ತಿ ಬದುಕಿನ ಮಧ್ಯೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ.
ಗಂಗಾವತಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಕೊಪ್ಪಳ ಉತ್ಸವ, ಗೋವ ಕನ್ನಡಿಗರ ಸಮ್ಮೇಳನ ಸೇರಿದಂತೆ ನಾನಾ ಕಡೆಗಳಲ್ಲಿ ಸನ್ಮಾನಿಸಲ್ಪಟ್ಟಿರದ್ದಾರೆ. ಕದಂಬ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇದೀಗ ಸಿನಿಮಾ ಹಾಗೂ ದೃಶ್ಯಮಾಧ್ಯಮದಿಂದ ಹೊರಬಂದು ರಾಜಕೀಯಕ್ಕೆ ಧುಮಿಕಿದ್ದಾರೆ.
ಅಂದಹಾಗೆ ಇವರು ರಾತ್ರಿ-ಬೆಳಗಾಗುವುದರಲ್ಲಿ ರಾಜಕೀಯ ರಂಗ ಪ್ರವೇಶಿಸಿದವರಲ್ಲ. ಈ ಕ್ಷೇತ್ರದಲ್ಲೂ ಸಾಕಷ್ಟು ಅನುಭವನ್ನು ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರಕ್ಕೆ ಬರುವ ಮುನ್ನ ಇಲ್ಲಿ ಪಳಗಿದ್ದಾರೆ..! 1999-2000ರ ಅವಧಿಯಲ್ಲಿ ಇವರಿಗೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಪರಿಚಯವಾಗುತ್ತೆ. ಅವತ್ತಿಂದಲೇ ರಾಘವೇಂದ್ರ ಗಂಗಾವತಿ ಗೌಡರ ಮನೆಮಗನಾಗಿದ್ದಾರೆ.
2002-03ರಲ್ಲಿ ಬೆಂಗಳೂರು ನಗರ ಜೆಡಿಎಸ್ ವಿದ್ಯಾರ್ಥಿ ಜನತಾ ದಳದ ಉಪಾಧ್ಯಕ್ಷರಾಗಿ, ನಂತರ ಹೆಬ್ಬಾಳ ವಾರ್ಡ್ ಅಧ್ಯಕ್ಷರಾಗಿ, ಅದಾದ ಮೇಲೆ ಬೆಂಗಳೂರು ನಗರ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದರಿಂದ ರಾಜಕಾರಣದಿಂದ ದೂರ ಉಳಿದಿದ್ದರು.ಇದೀಗ ಮತ್ತೆ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಜೆಡಿಎಸ್‍ನ ಗಂಗಾವತಿ ತಾಲೂಕು ಅಧ್ಯಕ್ಷರಾಗಿದ್ದು, ಸದ್ಯ ಸಂಘಟನೆಯಲ್ಲಿ ಬ್ಯುಸಿ ಆಗಿದ್ದಾರೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿ ಆಗಿರೋ ಇವರು, ಈ ಚುನಾವಣೆಯಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ.
–ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
10 ನವೆಂಬರ್ 2017 : ಈಶ್ವರ್ ದೈತೋಟ
11 ನವೆಂಬರ್ 2017 : ಭಾವನ
12 ನವೆಂಬರ್ 2017 : ಜಯಶ್ರೀ ಶೇಖರ್
13 ನವೆಂಬರ್ 2017 : ಶೇಷಕೃಷ್ಣ
14 ನವೆಂಬರ್ 2017 : ಶ್ರೀಧರ್ ಶರ್ಮಾ
15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
16 ನವೆಂಬರ್ 2017 : ಅರವಿಂದ ಸೇತುರಾವ್
17 ನವೆಂಬರ್ 2017 : ಲಿಖಿತಶ್ರೀ
18 ನವೆಂಬರ್ 2017 : ರಾಘವೇಂದ್ರ ಗಂಗಾವತಿ